ಯಾಜಕಕಾಂಡ
25 ಸಿನಾಯಿ ಬೆಟ್ಟದ ಮೇಲೆ ಮೋಶೆ ಜೊತೆ ಯೆಹೋವ ಇನ್ನೂ ಮಾತಾಡ್ತಾ ಹೇಳಿದ್ದು ಏನಂದ್ರೆ 2 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ನಾನು ನಿಮಗೆ ಕೊಡೋ ದೇಶಕ್ಕೆ+ ನೀವು ಹೋದ ಮೇಲೆ ಯೆಹೋವ ಆಜ್ಞೆ ಕೊಟ್ಟ ಹಾಗೆ ಸಬ್ಬತ್ ವರ್ಷವನ್ನ ಆಚರಿಸಬೇಕು. ಆ ವರ್ಷ ನೀವು ವ್ಯವಸಾಯ ಮಾಡಬಾರದು.+ 3 ಆರು ವರ್ಷ ಹೊಲದಲ್ಲಿ ಬೀಜ ಬಿತ್ತಿ, ದ್ರಾಕ್ಷಿಬಳ್ಳಿಯ ಕೊಂಬೆಗಳನ್ನ ಕತ್ತರಿಸಿ, ಹೊಲದ ಬೆಳೆನ ಕೂಡಿಸಿ.+ 4 ಆದ್ರೆ ಏಳನೇ ವರ್ಷ ಸಬ್ಬತ್ ವರ್ಷ. ನೀವು ಯೆಹೋವನಿಗೆ ಗೌರವ ಕೊಡೋಕೆ ಆ ಸಬ್ಬತ್ತನ್ನ ಆಚರಿಸಬೇಕು. ಆ ವರ್ಷ ಜಮೀನಿಗೆ ಪೂರ್ತಿ ವಿಶ್ರಾಂತಿ ಕೊಡಬೇಕು. ಬೀಜ ಬಿತ್ತಬಾರದು, ದ್ರಾಕ್ಷಿಬಳ್ಳಿ ಕೊಂಬೆಗಳನ್ನ ಕತ್ತರಿಸಬಾರದು. 5 ಕೊನೇ ಕೊಯ್ಲು ಮಾಡಿದ ಮೇಲೆ ಹೊಲದಲ್ಲಿ ಧಾನ್ಯ ಉಳಿದು ತನ್ನಷ್ಟಕ್ಕೆ ತಾನೇ ಬರೋ ಬೆಳೆನ ಕಟಾವು ಮಾಡಬಾರದು. ಕೊಂಬೆಗಳನ್ನ ಕತ್ತರಿಸದೆ ಹಾಗೇ ಬಿಟ್ಟ ದ್ರಾಕ್ಷಿಬಳ್ಳಿಯಲ್ಲಿ ಬೆಳೆಯೋ ದ್ರಾಕ್ಷಿನ ಕೂಡಿಸಬಾರದು. ಸಬ್ಬತ್ ವರ್ಷದಲ್ಲಿ ಜಮೀನಿಗೆ ಪೂರ್ತಿ ವಿಶ್ರಾಂತಿ ಕೊಡಬೇಕು. 6 ಆದ್ರೆ ಆ ವರ್ಷ ಜಮೀನಲ್ಲಿ ತನ್ನಷ್ಟಕ್ಕೆ ತಾನೇ ಬೆಳೆಯೋದನ್ನ ನಿಮ್ಮ ದಾಸ ದಾಸಿಯರು, ಕೂಲಿ ಕೆಲಸಗಾರರು, ನಿಮ್ಮ ದೇಶದಲ್ಲಿ ಇರೋ ವಿದೇಶಿಯರು ತಗೊಬಹುದು.* 7 ಸಾಕುಪ್ರಾಣಿ, ಕಾಡುಪ್ರಾಣಿಗಳೂ ಅದನ್ನ ತಿನ್ನಬಹುದು. ನಿಮ್ಮ ದೇಶದಲ್ಲಿ ಬೆಳಿಯೋ ಎಲ್ಲವನ್ನ ನೀವು ತಿನ್ನಬಹುದು.
8 ಏಳು ಸಬ್ಬತ್ ವರ್ಷಗಳನ್ನ ಅಂದ್ರೆ ಏಳು ವರ್ಷಗಳನ್ನ ಏಳು ಸಲ ಲೆಕ್ಕಿಸಬೇಕು. ಆಗ ಒಟ್ಟು 49 ವರ್ಷ ಆಗುತ್ತೆ. 9 50ನೇ ವರ್ಷದ ಏಳನೇ ತಿಂಗಳಿನ ಹತ್ತನೇ ದಿನ ಅಂದ್ರೆ ಪ್ರಾಯಶ್ಚಿತ್ತ ದಿನ+ ದೇಶದವರಿಗೆಲ್ಲ ಕೇಳಿಸೋ ಹಾಗೆ ಗಟ್ಟಿಯಾಗಿ ಕೊಂಬು ಊದಬೇಕು. 10 50ನೇ ವರ್ಷವನ್ನ ಪವಿತ್ರ ವರ್ಷ ಅಂತ ಹೇಳಬೇಕು. ದೇಶದವರಿಗೆಲ್ಲ ಬಿಡುಗಡೆಯನ್ನ ಘೋಷಿಸಬೇಕು.+ ಇದು ನಿಮಗೆ ಬಿಡುಗಡೆಯ ವರ್ಷ* ಆಗಿರುತ್ತೆ. ಯಾರಾದ್ರೂ ತಮ್ಮ ಜಮೀನನ್ನ ಮಾರಿದ್ರೆ ಆ ವರ್ಷ ಅವರಿಗೆ ಅದು ವಾಪಸ್ ಸಿಗಬೇಕು. ದಾಸನಾಗಿ ಬಂದಿದ್ದ ವ್ಯಕ್ತಿ ಆ ವರ್ಷ ಅವನ ಮನೆಗೆ ವಾಪಸ್ ಹೋಗಬೇಕು.+ 11 ಆ 50ನೇ ವರ್ಷ ನಿಮಗೆ ಬಿಡುಗಡೆ ವರ್ಷ ಆಗಿರುತ್ತೆ. ಆ ವರ್ಷ ನೀವು ಹೊಲದಲ್ಲಿ ಬೀಜ ಬಿತ್ತಬಾರದು. ಹೊಲದಲ್ಲಿ ಉಳಿದ ಧಾನ್ಯದಿಂದ ತಾನಾಗಿ ಬೆಳೆಯೋ ಬೆಳೆನ ಕಟಾವು ಮಾಡಬಾರದು. ಕೊಂಬೆಗಳನ್ನ ಕತ್ತರಿಸದೆ ಹಾಗೇ ಬಿಟ್ಟ ದ್ರಾಕ್ಷಿಬಳ್ಳಿಯಲ್ಲಿ ಬೆಳೆಯೋ ದ್ರಾಕ್ಷಿನ ಕೂಡಿಸಬಾರದು.+ 12 ಯಾಕಂದ್ರೆ ಅದು ಬಿಡುಗಡೆ ವರ್ಷ. ಅದು ನಿಮಗೆ ಪವಿತ್ರ ಆಗಿರಬೇಕು. ಹೊಲದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನ ಮಾತ್ರ ಆ ವರ್ಷ ನೀವು ಆಹಾರಕ್ಕಾಗಿ ಬಳಸಬಹುದು.*+
13 ಯಾರಾದ್ರೂ ತಮ್ಮ ಜಮೀನನ್ನ ಮಾರಿದ್ರೆ ಬಿಡುಗಡೆ ವರ್ಷದಲ್ಲಿ ಅವ್ರಿಗೆ ವಾಪಸ್ ಸಿಗಬೇಕು.+ 14 ನೀವು ಏನಾದ್ರೂ ಮಾರೋವಾಗ ತಗೊಳ್ಳುವಾಗ ಲಾಭಕ್ಕಾಗಿ ಇನ್ನೊಬ್ರಿಗೆ ಮೋಸ ಮಾಡಬೇಡಿ.+ 15 ನೀವು ಜಮೀನನ್ನ ತಗೊಳ್ಳುವಾಗ ಮುಂದಿನ ಬಿಡುಗಡೆ ವರ್ಷಕ್ಕೆ ಇನ್ನೆಷ್ಟು ವರ್ಷ ಬಾಕಿ ಇದೆ ಅಂತ ನೋಡಬೇಕು. ಜಮೀನನ್ನ ಮಾರೋನು ಬಿಡುಗಡೆ ವರ್ಷಕ್ಕೆ ಮುಂಚೆ ಅದ್ರಿಂದ ಇನ್ನೆಷ್ಟು ಬೆಳೆ ಸಿಗುತ್ತೆ ಅಂತ ಲೆಕ್ಕಹಾಕಿ ಆ ಜಮೀನಿಗೆ ಬೆಲೆ ಹೇಳಬೇಕು.+ 16 ಬಿಡುಗಡೆ ವರ್ಷ ಬರೋದಕ್ಕೆ ಇನ್ನೂ ತುಂಬ ವರ್ಷ ಇರೋದಾದ್ರೆ ಅವನು ಜಮೀನಿಗೆ ಜಾಸ್ತಿ ಬೆಲೆ ಹೇಳಬಹುದು. ಒಂದುವೇಳೆ ಸ್ವಲ್ಪ ವರ್ಷ ಇದ್ರೆ ಕಡಿಮೆ ಬೆಲೆ ಹೇಳಬೇಕು. ಯಾಕಂದ್ರೆ ಅವನು ನಿಮಗೆ ಕೊಡ್ತಾ ಇರೋದು ಆ ಜಮೀನಿನ ಬೆಳೆಗಳನ್ನಷ್ಟೇ. 17 ನಿಮ್ಮಲ್ಲಿ ಯಾರೂ ಸ್ವಂತ ಲಾಭಕ್ಕಾಗಿ ಇನ್ನೊಬ್ಬನಿಗೆ ಮೋಸ ಮಾಡಬಾರದು.+ ನೀವು ದೇವರಿಗೆ ಭಯಪಡಬೇಕು.+ ಯಾಕಂದ್ರೆ ನಾನು ನಿಮ್ಮ ದೇವರಾದ ಯೆಹೋವ.+ 18 ನನ್ನ ನಿಯಮಗಳನ್ನ, ತೀರ್ಪುಗಳನ್ನ ಕೇಳಿ ಅದೇ ತರ ನಡೆದ್ರೆ ನಾನು ನಿಮಗೆ ಕೊಡೋ ದೇಶದಲ್ಲಿ ಸುರಕ್ಷಿತವಾಗಿ ಇರ್ತಿರ.+ 19 ಆ ದೇಶದಲ್ಲಿ ಬೆಳೆನೂ ಚೆನ್ನಾಗಿ ಬರುತ್ತೆ,+ ನಿಮಗೆ ಬೇಕಾದಷ್ಟು ಆಹಾರ ಇರುತ್ತೆ. ನೀವು ಸುರಕ್ಷಿತವಾಗಿ ಇರ್ತಿರ.+
20 ಆದ್ರೆ “ಏಳನೇ ವರ್ಷ ಬೀಜ ಬಿತ್ತದಿದ್ರೆ, ಬೆಳೆ ಕೊಯ್ಯದಿದ್ರೆ ಊಟಕ್ಕೇನು ಮಾಡೋದು?”+ ಅಂತ ನೀವು ಯೋಚಿಸಬಹುದು. 21 ಚಿಂತೆ ಮಾಡಬೇಡಿ. ಆರನೇ ವರ್ಷ ಚೆನ್ನಾಗಿ ಬೆಳೆ ಆಗೋ ತರ ಆಶೀರ್ವಾದ ಮಾಡ್ತೀನಿ. ಆ ಬೆಳೆ ಎಷ್ಟು ಜಾಸ್ತಿ ಇರುತ್ತೆ ಅಂದ್ರೆ ನಿಮಗೆ ಮೂರು ವರ್ಷಕ್ಕೆ ಬೇಕಾಗುವಷ್ಟು ಆಹಾರ ಸಿಗುತ್ತೆ.+ 22 ಎಂಟನೇ ವರ್ಷ ನೀವು ಬೀಜ ಬಿತ್ತಿ ಅದ್ರ ಬೆಳೆ ಕೊಯ್ಯೋ ತನಕ ಅಂದ್ರೆ ಒಂಬತ್ತನೇ ವರ್ಷದ ತನಕ ಆ ಬೆಳೆಯನ್ನೇ ನೀವು ತಿಂತೀರ.
23 ನಿಮ್ಮ ಜಮೀನನ್ನ ಶಾಶ್ವತವಾಗಿ ಮಾರಬಾರದು.+ ಯಾಕಂದ್ರೆ ಆ ಜಮೀನು ನಂದು.+ ನೀವು ನನ್ನ ದೃಷ್ಟಿಯಲ್ಲಿ ವಿದೇಶಿಯರು, ಪ್ರವಾಸಿಗರು ಆಗಿದ್ದೀರ.+ 24 ನೀವು ಆಸ್ತಿಯಾಗಿ ಪಡ್ಕೊಳ್ಳೋ ಆ ದೇಶದಲ್ಲಿ ಜಮೀನನ್ನ ಮಾರಿದ್ರೆ ಅದನ್ನ ವಾಪಸ್ ಪಡ್ಕೊಳ್ಳೋ ಹಕ್ಕು ನಿಮಗಿರುತ್ತೆ.
25 ನಿಮ್ಮ ಒಬ್ಬ ಬಡ ಸಹೋದರ ತನ್ನ ಜಮೀನಲ್ಲಿ ಸ್ವಲ್ಪ ಭಾಗನ ಮಾರಿದ್ರೆ ಅವನ ಹತ್ರದ ಸಂಬಂಧಿಗೆ ಆ ಜಮೀನನ್ನ ಬಿಡಿಸ್ಕೊಳ್ಳೋ ಹಕ್ಕಿದೆ. ಹಾಗಾಗಿ ಅವನು ಬಂದು ಆ ಜಮೀನನ್ನ ಮತ್ತೆ ಖರೀದಿಸಬೇಕು.+ 26 ಆ ಜಮೀನನ್ನ ಮಾರಿದವನಿಗೆ ಅದನ್ನ ಬಿಡಿಸ್ಕೊಳ್ಳೋ ಹಕ್ಕಿರೋ ಹತ್ರದ ಸಂಬಂಧಿ ಇಲ್ಲದಿದ್ರೆ ಮತ್ತು ಮಾರಿದವನೇ ಮುಂದೆ ಅದನ್ನ ಖರೀದಿಸೋ ಪರಿಸ್ಥಿತಿಗೆ ಬಂದ್ರೆ 27 ಅವನೇ ಅದನ್ನ ತಗೋಬಹುದು. ಆಗ ಅವನು ಜಮೀನನ್ನ ಮಾರಿದ ಸಮಯದಿಂದ ಎಷ್ಟು ವರ್ಷ ಫಸಲು ಕೊಯ್ತಿದ್ದಾರೆ ಅಂತ ಲೆಕ್ಕ ಮಾಡಬೇಕು. ಅವನು ಜಮೀನನ್ನ ಎಷ್ಟು ಬೆಲೆಗೆ ಮಾರಿದ್ದನೋ ಅದ್ರಲ್ಲಿ ಆ ಫಸಲಿನ ಬೆಲೆಯನ್ನ ಕಳೆದು ಉಳಿದ ಹಣವನ್ನ ಕೊಟ್ಟು ತನ್ನ ಜಮೀನನ್ನ ವಾಪಸ್ ತಗೋಬೇಕು.+
28 ಅವನಿಗೆ ಜಮೀನನ್ನ ವಾಪಸ್ ತಗೊಳ್ಳೋಕ್ಕೆ ಆಗದಿದ್ರೆ ಆ ಜಮೀನು ಬಿಡುಗಡೆ ವರ್ಷದ ತನಕ ಖರೀದಿಸಿದವನ ಹತ್ರಾನೇ ಇರುತ್ತೆ.+ ಆದ್ರೆ ಮಾರಿದವನಿಗೆ ಆ ಜಮೀನು ಬಿಡುಗಡೆ ವರ್ಷದಲ್ಲಿ ವಾಪಸ್ ಸಿಗುತ್ತೆ. ಅದು ಮತ್ತೆ ಅವನ ಆಸ್ತಿ ಆಗುತ್ತೆ.+
29 ಸುತ್ತ ಗೋಡೆ ಇರೋ ಪಟ್ಟಣದಲ್ಲಿ ಒಬ್ಬ ಮನೆಯನ್ನ ಮಾರಿದ್ರೆ ಅವನಿಗೆ ಅದನ್ನ ವಾಪಸ್ ಖರೀದಿಸೋ ಹಕ್ಕು+ ಒಂದು ವರ್ಷದ ತನಕ ಇರುತ್ತೆ. ಆ ಮನೆಯನ್ನ ಮಾರಿದ ಸಮಯದಿಂದ ಒಂದು ವರ್ಷದ ಒಳಗೆ ಅವನು ಅದನ್ನ ವಾಪಸ್ ಖರೀದಿಸಬೇಕು. 30 ಒಂದು ವರ್ಷದೊಳಗೆ ಖರೀದಿಸದಿದ್ರೆ ಸುತ್ತ ಗೋಡೆ ಇರೋ ಪಟ್ಟಣದ ಆ ಮನೆ ಖರೀದಿಸಿದವನಿಗೇ ಸೇರುತ್ತೆ. ಅವನ ನಂತ್ರ ಅವನ ವಂಶದವರಿಗೆ ಸೇರುತ್ತೆ. ಬಿಡುಗಡೆ ವರ್ಷದಲ್ಲಿ ಆ ಮನೆಯನ್ನ ಅವರು ವಾಪಸ್ ಕೊಡಬಾರದು. 31 ಆದ್ರೆ ಸುತ್ತ ಗೋಡೆ ಇಲ್ಲದಿರೋ ಪಟ್ಟಣದ ಮನೆಯನ್ನ ಒಬ್ಬನು ಮಾರಿದ್ರೆ ಅದನ್ನ ವಾಪಸ್ ಖರೀದಿಸೋ ಹಕ್ಕು ಅವನಿಗೆ ಯಾವಾಗ್ಲೂ ಇರುತ್ತೆ. ಯಾಕಂದ್ರೆ ಅಂಥ ಮನೆ ಹಳ್ಳಿ ಪ್ರದೇಶದಲ್ಲಿರೋ ಹೊಲದ ಭಾಗ ಆಗಿದೆ. ಆ ಮನೆನ ಖರೀದಿಸಿದವನು ಬಿಡುಗಡೆ ವರ್ಷದಲ್ಲಿ ಅದನ್ನ ವಾಪಸ್ ಕೊಡಬೇಕು.
32 ಲೇವಿಯರು ತಮ್ಮ ಪಟ್ಟಣದಲ್ಲಿರೋ+ ಮನೆಗಳನ್ನ ಮಾರಿದ್ರೆ ಅವುಗಳನ್ನ ವಾಪಸ್ ಖರೀದಿಸೋ ಹಕ್ಕು ಅವರಿಗೆ ಯಾವಾಗ್ಲೂ ಇರುತ್ತೆ. 33 ಲೇವಿಯರಲ್ಲಿ ಒಬ್ಬ ತನ್ನ ಮನೆನ ವಾಪಸ್ ತಗೊಳ್ಳದಿದ್ರೆ ಆ ಮನೆ ತಗೊಂಡವನು ಬಿಡುಗಡೆ ವರ್ಷ ಅದನ್ನ ವಾಪಸ್ ಕೊಡಬೇಕು.+ ಯಾಕಂದ್ರೆ ಇಸ್ರಾಯೇಲ್ಯರ ದೇಶದಲ್ಲಿ ಲೇವಿಯರ ಪಟ್ಟಣದಲ್ಲಿರೋ ಮನೆಗಳು ಲೇವಿಯರ ಆಸ್ತಿ.+ 34 ಆದ್ರೆ ಅವರು ಪಟ್ಟಣಗಳ ಸುತ್ತ ಇರೋ ಹುಲ್ಲುಗಾವಲಿನ ಪ್ರದೇಶವನ್ನ+ ಮಾರಬಾರದು. ಯಾಕಂದ್ರೆ ಅದು ಅವರ ಶಾಶ್ವತ ಆಸ್ತಿ.
35 ನಿಮ್ಮ ಅಕ್ಕಪಕ್ಕದಲ್ಲಿ ಇರೋ ಒಬ್ಬ ಬಡ ಇಸ್ರಾಯೇಲ್ಯ ಸಹೋದರ ಹೊಟ್ಟೆಬಟ್ಟೆಗೆ ಏನೂ ಇಲ್ಲದ ಸ್ಥಿತಿಗೆ ಬಂದ್ರೆ ನಿಮ್ಮ ಮಧ್ಯ ವಾಸಿಸೋ ವಿದೇಶಿಯರಿಗೆ, ಪ್ರವಾಸಿಗರಿಗೆ ಸಹಾಯ ಮಾಡೋ ತರ ಅವನಿಗೂ ಸಹಾಯ ಮಾಡಬೇಕು.+ ಆಗ ಅವನು ಬದುಕಿ ಉಳಿತಾನೆ. 36 ನೀವು ಅವನಿಂದ ಬಡ್ಡಿ ತಗೊಳ್ಳಬಾರದು, ಅವನಿಂದ ಲಾಭ* ಪಡಿಯೋಕೆ ಪ್ರಯತ್ನಿಸಬಾರದು.+ ನೀವು ದೇವರಿಗೆ ಭಯಪಡಬೇಕು.+ ಹೀಗೆ ಮಾಡಿದ್ರೆ ಆ ನಿಮ್ಮ ಸಹೋದರ ಬದುಕಿ ಉಳಿತಾನೆ. 37 ನೀವು ಅವನಿಗೆ ಕೊಟ್ಟ ಸಾಲಕ್ಕೆ ಬಡ್ಡಿ ಕೇಳಬಾರದು.+ ಅವನಿಗೆ ಊಟ ಕೊಟ್ರೆ ಅದ್ರಿಂದ ಲಾಭ ಪಡೀಬಾರದು. 38 ನಾನು ನಿಮ್ಮ ದೇವರಾದ ಯೆಹೋವ. ನಿಮಗೆ ಕಾನಾನ್ ದೇಶ ಕೊಡೋಕೆ, ನಾನು ನಿಮ್ಮ ದೇವರು ಅಂತ ತೋರಿಸೋಕೆ+ ನಿಮ್ಮನ್ನ ಈಜಿಪ್ಟಿಂದ ಬಿಡಿಸ್ಕೊಂಡು ಬಂದ+ ದೇವರು ನಾನೇ.
39 ಅಕ್ಕಪಕ್ಕ ವಾಸಿಸೋ ಇಸ್ರಾಯೇಲ್ಯ ಸಹೋದರರಲ್ಲಿ ಒಬ್ಬ ಬಡವನಾಗಿ ತನ್ನನ್ನೇ ನಿಮಗೆ ಮಾರಿಕೊಂಡ್ರೆ+ ಅವನನ್ನ ಗುಲಾಮನ ತರ ದುಡಿಸ್ಕೊಳ್ಳಬಾರದು.+ 40 ಅವನು ನಿಮ್ಮ ಹತ್ರ ಕೂಲಿ ಕೆಲಸಗಾರ+ ಅಥವಾ ಪ್ರವಾಸಿಗನ ತರ ಇರಬೇಕು. ಬಿಡುಗಡೆ ವರ್ಷದ ತನಕ ಅವನು ನಿಮ್ಮ ಹತ್ರ ಕೆಲಸ ಮಾಡಬೇಕು. 41 ಆಮೇಲೆ ಅವನು ತನ್ನ ಮಕ್ಕಳನ್ನ ಕರ್ಕೊಂಡು ಅವನ ಸಂಬಂಧಿಕರ ಹತ್ರ ವಾಪಸ್ ಹೋಗಬೇಕು. ಅವನ ಪೂರ್ವಜರ ಆಸ್ತಿ ಅವನಿಗೆ ವಾಪಸ್ ಸಿಗಬೇಕು.+ 42 ಇಸ್ರಾಯೇಲ್ಯರು ನನ್ನ ದಾಸರು. ನಾನು ಅವರನ್ನ ಈಜಿಪ್ಟಿಂದ ಕರ್ಕೊಂಡು ಬಂದಿದ್ದೀನಿ.+ ಹಾಗಾಗಿ ಅವರು ತಮ್ಮನ್ನ ಬೇರೆಯವರಿಗೆ ದಾಸರಾಗಿ ಮಾರಿಕೊಳ್ಳಬಾರದು. 43 ಆ ನಿಮ್ಮ ಸಹೋದರನ ಜೊತೆ ಕ್ರೂರವಾಗಿ ನಡ್ಕೊಬಾರದು,+ ದೇವರಿಗೆ ಭಯಪಡಬೇಕು.+ 44 ನಿಮ್ಮ ಸುತ್ತಮುತ್ತ ಇರೋ ದೇಶಗಳ ಜನ್ರು ಮಾತ್ರ ನಿಮಗೆ ಗುಲಾಮರಾಗಿ ಇರಬೇಕು. ಅವರನ್ನ ಗುಲಾಮರಾಗಿ ಖರೀದಿ ಮಾಡ್ಕೊಬಹುದು. 45 ನಿಮ್ಮ ಮಧ್ಯ ಇರೋ ವಿದೇಶಿಯರನ್ನ,+ ನಿಮ್ಮ ದೇಶದಲ್ಲಿ ಅವರಿಗೆ ಹುಟ್ಟಿದ ಮಕ್ಕಳನ್ನ ಗುಲಾಮರಾಗಿ ಖರೀದಿ ಮಾಡ್ಕೊಬಹುದು. ಅವರು ನಿಮ್ಮ ಆಸ್ತಿ ಆಗ್ತಾರೆ. 46 ನೀವು ಸತ್ತಮೇಲೆ ಆ ಗುಲಾಮರು ನಿಮ್ಮ ಮಕ್ಕಳ ಆಸ್ತಿ ಆಗಬಹುದು. ಅವರು ಶಾಶ್ವತವಾಗಿ ನಿಮ್ಮ ಹತ್ರ ದಾಸರಾಗಿ ಇರಬಹುದು. ಆದ್ರೆ ನಿಮ್ಮ ಇಸ್ರಾಯೇಲ್ಯ ಸಹೋದರರ ಜೊತೆ ನೀವು ಕ್ರೂರವಾಗಿ ನಡ್ಕೊಬಾರದು.+
47 ನಿಮ್ಮ ಮಧ್ಯ ಇರೋ ವಿದೇಶಿ ಅಥವಾ ಪ್ರವಾಸಿಗ ಶ್ರೀಮಂತನಾದ್ರೆ ಮತ್ತು ಅವನ ಅಕ್ಕಪಕ್ಕ ಇರೋ ನಿಮ್ಮ ಇಸ್ರಾಯೇಲ್ಯ ಸಹೋದರ ಬಡವನಾಗಿ ತನ್ನನ್ನ ಆ ವಿದೇಶಿಗೋ ಅವನ ಕುಟುಂಬದಲ್ಲಿ ಒಬ್ಬನಿಗೋ ಅಥವಾ ಪ್ರವಾಸಿಗನಿಗೋ ಮಾರಿಕೊಂಡ್ರೆ 48 ಅವನನ್ನ ಬಿಡಿಸ್ಕೊಳ್ಳೋ ಹಕ್ಕು ಅವನಿಗೆ ಯಾವಾಗ್ಲೂ ಇರುತ್ತೆ. ಅವನ ಅಣ್ಣ ಅಥವಾ ತಮ್ಮ ಅವನನ್ನ ವಾಪಸ್ ಖರೀದಿಸಬಹುದು.+ 49 ಅವನ ದೊಡ್ಡಪ್ಪ, ಚಿಕ್ಕಪ್ಪನಿಗೆ ಅಥವಾ ಅವರ ಮಕ್ಕಳಿಗೆ ಅಥವಾ ಅವನ ಹತ್ರದ ಸಂಬಂಧಿಕರಿಗೆ* ಅವನನ್ನ ವಾಪಸ್ ಖರೀದಿಸೋ ಹಕ್ಕಿದೆ.
ತನ್ನನ್ನು ಮಾರಿಕೊಂಡವನ ಪರಿಸ್ಥಿತಿ ಮುಂದೆ ಚೆನ್ನಾಗಾದ್ರೆ ಅವನೇ ತನ್ನನ್ನ ಬಿಡಿಸ್ಕೊಬಹುದು.+ 50 ಅವನು ತನ್ನನ್ನ ಮಾರಿಕೊಂಡ ವರ್ಷದಿಂದ ಬಿಡುಗಡೆ ವರ್ಷದ+ ತನಕ ಎಷ್ಟು ವರ್ಷ ಆಗುತ್ತೆ ಅಂತ ತನ್ನನ್ನ ಖರೀದಿಸಿದವನ ಜೊತೆ ಸೇರಿ ಲೆಕ್ಕ ಮಾಡಬೇಕು. ಅವನು ತನ್ನನ್ನ ಮಾರಿಕೊಂಡಿರೋ ಬೆಲೆ ಆ ವರ್ಷಗಳಲ್ಲಿ ಅವನಿಗೆ ಸಿಗೋ ಕೂಲಿಗೆ ಸಮ.+ ಆ ಎಲ್ಲ ಸಮಯದಲ್ಲಿ ಅವನು ಮಾಡೋ ಕೆಲಸ ಕೂಲಿ ಕೆಲಸದವನ ತರ ಇರುತ್ತೆ.+ 51 ಅವನು ತನ್ನನ್ನ ಬಿಡಿಸ್ಕೊಳ್ಳುವಾಗ ಬಿಡುಗಡೆ ವರ್ಷಕ್ಕೆ ಇನ್ನೂ ಎಷ್ಟು ವರ್ಷ ಇದೆ ಅಂತ ಲೆಕ್ಕ ಮಾಡಬೇಕು. ತುಂಬ ವರ್ಷ ಇರೋದಾದ್ರೆ ಅವನು ಆ ವರ್ಷಗಳ ಹಣವನ್ನ ವಾಪಸ್ ಕೊಟ್ಟು ತನ್ನನ್ನ ಬಿಡಿಸ್ಕೊಬೇಕು. 52 ಸ್ವಲ್ಪ ವರ್ಷಾನೇ ಇರೋದಾದ್ರೆ ಆ ಸ್ವಲ್ಪ ವರ್ಷಗಳ ಹಣನ ವಾಪಸ್ ಕೊಟ್ಟು ಅವನು ತನ್ನನ್ನ ಬಿಡಿಸ್ಕೊಬೇಕು. 53 ಅವನು ತನ್ನನ್ನ ಖರೀದಿಸಿದವನ ಹತ್ರ ಇರೋಷ್ಟು ಕಾಲ ಕೂಲಿಯವನ ತರ ಕೆಲಸ ಮಾಡಬೇಕು. ಆದ್ರೆ ಯಜಮಾನ ಅವನ ಜೊತೆ ಕ್ರೂರವಾಗಿ ನಡ್ಕೊಳ್ಳದ ಹಾಗೆ ನೀವು ನೋಡ್ಕೊಬೇಕು.+ 54 ಒಂದುವೇಳೆ ಒಬ್ಬ ಇಸ್ರಾಯೇಲ್ಯ ವ್ಯಕ್ತಿಗೆ ಹೀಗೆ ತನ್ನನ್ನ ಬಿಡಿಸ್ಕೊಳ್ಳೋಕೆ ಆಗದಿದ್ರೆ ಬಿಡುಗಡೆ ವರ್ಷದಲ್ಲಿ+ ಅವನಿಗೆ ಅವನ ಮಕ್ಕಳಿಗೆ ಬಿಡುಗಡೆ ಆಗಬೇಕು.
55 ಯಾಕಂದ್ರೆ ಇಸ್ರಾಯೇಲ್ಯರು ನನ್ನ ದಾಸರು, ಈಜಿಪ್ಟ್ ದೇಶದಿಂದ ನಾನು ಬಿಡಿಸ್ಕೊಂಡು ಬಂದ ನನ್ನ ದಾಸರು.+ ನಾನು ನಿಮ್ಮ ದೇವರಾದ ಯೆಹೋವ.