ವಿಮೋಚನಕಾಂಡ
29 ಪುರೋಹಿತರಾಗಿ ನನ್ನ ಸೇವೆ ಮಾಡೋಕೆ ಅವರನ್ನ ಪ್ರತ್ಯೇಕಿಸೋಕೆ ನೀನು ಹೀಗೆ ಮಾಡಬೇಕು: ಒಂದು ಎಳೇ ಹೋರಿ, ಯಾವುದೇ ದೋಷ ಇಲ್ಲದ ಎರಡು ಟಗರುಗಳನ್ನ ನೀನು ತಗೊಳ್ಳಬೇಕು.+ 2 ಹುಳಿ ಇಲ್ಲದ ರೊಟ್ಟಿ, ಎಣ್ಣೆ ಬೆರೆಸಿ ಮಾಡಿದ ಬಳೆಯಾಕಾರದ ಹುಳಿ ಇಲ್ಲದ ರೊಟ್ಟಿಗಳು, ಎಣ್ಣೆ ಲೇಪಿಸಿದ ಹುಳಿ ಇಲ್ಲದ ತೆಳುವಾದ ರೊಟ್ಟಿಗಳನ್ನ ಸಹ ತಗೊಳ್ಳಬೇಕು.+ ರೊಟ್ಟಿಗಳನ್ನ ನುಣ್ಣಗಿನ ಗೋದಿ ಹಿಟ್ಟಿಂದ ಮಾಡಿ 3 ಒಂದು ಬುಟ್ಟಿಯಲ್ಲಿ ಹಾಕಬೇಕು. ಬುಟ್ಟಿಸಮೇತ+ ಅವುಗಳನ್ನ ಆ ಹೋರಿಯನ್ನ, ಎರಡು ಟಗರುಗಳನ್ನ ನನ್ನ ಮುಂದೆ ತರಬೇಕು.
4 ಆರೋನನನ್ನ, ಅವನ ಮಕ್ಕಳನ್ನ ನೀನು ದೇವದರ್ಶನ ಡೇರೆಯ ಬಾಗಿಲ ಹತ್ರ+ ಕರ್ಕೊಂಡು ಬಂದು ಅವರಿಗೆ ನೀರಿಂದ ಸ್ನಾನ ಮಾಡೋಕೆ ಹೇಳು.+ 5 ಆಮೇಲೆ ಬಟ್ಟೆಗಳನ್ನ+ ತಗೊಂಡು ಆರೋನನಿಗೆ ಹಾಕಬೇಕು. ನೀನು ಅವನಿಗೆ ಉದ್ದ ಅಂಗಿಯನ್ನ, ಏಫೋದಿನ ಒಳಗೆ ಹಾಕೋ ತೋಳಿಲ್ಲದ ಅಂಗಿಯನ್ನ, ಏಫೋದನ್ನ, ಎದೆಪದಕವನ್ನ ಹಾಕಬೇಕು. ಏಫೋದಿನ ಸೊಂಟಪಟ್ಟಿಯನ್ನ ಭದ್ರವಾಗಿ ಕಟ್ಟಬೇಕು.+ 6 ಅವನ ತಲೆ ಮೇಲೆ ವಿಶೇಷ ಪೇಟ, ಅದ್ರ ಮೇಲೆ ಪವಿತ್ರ ಚಿಹ್ನೆ* ಇಡಬೇಕು.+ 7 ಅಭಿಷೇಕ ತೈಲ+ ತಗೊಂಡು ಅವನ ತಲೆ ಮೇಲೆ ಹೊಯ್ದು ಅವನನ್ನ ಅಭಿಷೇಕಿಸಬೇಕು.+
8 ಆಮೇಲೆ ಅವನ ಮಕ್ಕಳನ್ನ ಮುಂದೆ ಕರ್ಕೊಂಡು ಬಂದು ಅವರಿಗೆ ಉದ್ದ ಅಂಗಿಗಳನ್ನ ಹಾಕಬೇಕು.+ 9 ಆರೋನನಿಗೂ ಅವನ ಮಕ್ಕಳಿಗೂ ಸೊಂಟಪಟ್ಟಿಗಳನ್ನ ಸುತ್ತಬೇಕು. ಪೇಟಗಳನ್ನ ಹಾಕಬೇಕು. ಆ ಸಮಯದಿಂದ ಅವರೂ ಅವರ ವಂಶದವರೂ ಪುರೋಹಿತರಾಗಿ ಸೇವೆ ಮಾಡ್ತಾರೆ. ಇದು ಸದಾ ಇರೋ ನಿಯಮ.+ ಹೀಗೆ ಆರೋನ, ಅವನ ಮಕ್ಕಳನ್ನ ಪುರೋಹಿತರಾಗಿ ಸೇವೆ ಮಾಡೋಕೆ ನೀನು ನೇಮಿಸಬೇಕು.+
10 ಆಮೇಲೆ ನೀನು ಹೋರಿಯನ್ನ ದೇವದರ್ಶನ ಡೇರೆ ಮುಂದೆ ತರಬೇಕು. ಆರೋನ, ಅವನ ಮಕ್ಕಳು ತಮ್ಮ ಕೈಗಳನ್ನ ಆ ಹೋರಿ ತಲೆ ಮೇಲೆ ಇಡಬೇಕು.+ 11 ಆ ಹೋರಿಯನ್ನ ಯೆಹೋವನ ಮುಂದೆ, ದೇವದರ್ಶನ ಡೇರೆಯ ಬಾಗಿಲ ಹತ್ರ ಬಲಿ ಕೊಡಬೇಕು.+ 12 ಆ ಹೋರಿಯ ರಕ್ತದಲ್ಲಿ ಸ್ವಲ್ಪ ನಿನ್ನ ಬೆರಳಿಂದ ತಗೊಂಡು ಯಜ್ಞವೇದಿಯ ಕೊಂಬುಗಳ ಮೇಲೆ ಹಚ್ಚಬೇಕು.+ ಉಳಿದ ರಕ್ತವನ್ನೆಲ್ಲ ಯಜ್ಞವೇದಿಯ ಬುಡದಲ್ಲಿ ಸುರಿಬೇಕು.+ 13 ಕರುಳಿನ ಸುತ್ತ ಇರೋ ಎಲ್ಲ ಕೊಬ್ಬು,+ ಪಿತ್ತಜನಕಾಂಗದ ಮೇಲಿರೋ ಕೊಬ್ಬು, ಎರಡು ಮೂತ್ರಪಿಂಡಗಳನ್ನ, ಅವುಗಳ ಮೇಲಿರೋ ಕೊಬ್ಬನ್ನ ಯಜ್ಞವೇದಿ ಮೇಲೆ ಸುಡಬೇಕು. ಆಗ ಅದ್ರ ಹೊಗೆ ಯಜ್ಞವೇದಿಯಿಂದ ಮೇಲೆ ಹೋಗುತ್ತೆ.+ 14 ಆದ್ರೆ ಆ ಹೋರಿಯ ಮಾಂಸ, ಚರ್ಮ, ಸಗಣಿಯನ್ನ ಪಾಳೆಯದ ಹೊರಗೆ ಬೆಂಕಿಯಿಂದ ಸುಡಬೇಕು. ಇದು ಪಾಪಪರಿಹಾರಕ ಬಲಿ.
15 ಆಮೇಲೆ ನೀನು ಒಂದು ಟಗರು ತಗೊಂಡು ಅದ್ರ ತಲೆ ಮೇಲೆ ಆರೋನ, ಅವನ ಮಕ್ಕಳು ತಮ್ಮ ಕೈಗಳನ್ನ ಇಡಬೇಕು.+ 16 ಆ ಟಗರನ್ನ ಕಡಿದು ಅದ್ರ ರಕ್ತ ತಗೊಂಡು ಯಜ್ಞವೇದಿಯ ಎಲ್ಲ ಬದಿಗಳಿಗೆ ಚಿಮಿಕಿಸಬೇಕು.+ 17 ಟಗರನ್ನ ತುಂಡುತುಂಡಾಗಿ ಕತ್ತರಿಸಿ ಅದ್ರ ಕರುಳು, ಕಾಲುಗಳನ್ನ ತೊಳಿಬೇಕು.+ ಅದ್ರ ತಲೆಯನ್ನ ಆ ತುಂಡುಗಳನ್ನ ಯಜ್ಞವೇದಿಯ ಮೇಲೆ ಜೋಡಿಸಬೇಕು. 18 ನೀನು ಆ ಇಡೀ ಟಗರನ್ನ ಸುಡಬೇಕು. ಇದು ಬೆಂಕಿ ಮೂಲಕ ಯೆಹೋವನಿಗೆ ಮಾಡಿದ ಅರ್ಪಣೆ. ಇದ್ರಿಂದ ಮೇಲೆ ಹೋಗೋ ಹೊಗೆಯ ಸುವಾಸನೆಯಿಂದ ಆತನಿಗೆ ಸಂತೋಷ* ಆಗುತ್ತೆ.+ ಇದು ಯೆಹೋವನಿಗೆ ಅರ್ಪಿಸೋ ಸರ್ವಾಂಗಹೋಮ ಬಲಿ.
19 ಆಮೇಲೆ ನೀನು ಇನ್ನೊಂದು ಟಗರು ತಗೊಂಡು ಅದ್ರ ತಲೆ ಮೇಲೆ ಆರೋನ, ಅವನ ಮಕ್ಕಳು ತಮ್ಮ ಕೈಗಳನ್ನ ಇಡಬೇಕು.+ 20 ಆ ಟಗರನ್ನ ಕಡಿದು ಅದ್ರ ರಕ್ತದಲ್ಲಿ ಸ್ವಲ್ಪ ತಗೊಂಡು ಅದನ್ನ ಆರೋನನ, ಅವನ ಮಕ್ಕಳ ಬಲ ಕಿವಿಯ ತುದಿಗೆ,* ಬಲಗೈಯ ಹೆಬ್ಬೆರಳಿಗೆ, ಬಲಗಾಲಿನ ಹೆಬ್ಬೆರಳಿಗೆ ಹಚ್ಚಬೇಕು. ಯಜ್ಞವೇದಿಯ ಎಲ್ಲ ಬದಿಗಳಿಗೂ ಆ ಟಗರಿನ ರಕ್ತ ಚಿಮಿಕಿಸಬೇಕು. 21 ಯಜ್ಞವೇದಿಯ ಮೇಲಿರೋ ರಕ್ತದಲ್ಲಿ ಸ್ವಲ್ಪ ಮತ್ತು ಅಭಿಷೇಕ ತೈಲದಲ್ಲಿ+ ಸ್ವಲ್ಪ ತಗೊಂಡು ಆರೋನನ ಮೇಲೆ, ಅವನ ಬಟ್ಟೆಗಳ ಮೇಲೆ, ಅವನ ಮಕ್ಕಳ ಮೇಲೆ, ಅವರ ಬಟ್ಟೆಗಳ ಮೇಲೆ ಚಿಮಿಕಿಸಬೇಕು. ಇದ್ರಿಂದ ಆರೋನ, ಅವನ ಬಟ್ಟೆಗಳು, ಅವನ ಮಕ್ಕಳು, ಅವರ ಬಟ್ಟೆಗಳು ಪವಿತ್ರ ಆಗುತ್ತೆ.+
22 ಆಮೇಲೆ ಟಗರಿನ ಕೊಬ್ಬು ಅಂದ್ರೆ ಕೊಬ್ಬಿರೋ ಬಾಲ, ಕರುಳಿನ ಸುತ್ತಲಿರೋ ಕೊಬ್ಬು, ಪಿತ್ತಜನಕಾಂಗದ ಮೇಲಿರೋ ಕೊಬ್ಬು, ಎರಡು ಮೂತ್ರಪಿಂಡಗಳನ್ನ ಅವುಗಳ ಮೇಲಿರೋ ಕೊಬ್ಬು,+ ಬಲಗಾಲನ್ನ ತಗೊಳ್ಳಬೇಕು. ಯಾಕಂದ್ರೆ ಅವರನ್ನ ಪುರೋಹಿತ ಸೇವೆಗೆ ನೇಮಿಸುವಾಗ ಅರ್ಪಿಸಲಾದ ಟಗರು ಇದು.+ 23 ಯೆಹೋವನ ಮುಂದೆ ಬುಟ್ಟಿಯಲ್ಲಿ ಇಟ್ಟಿರೋ ಹುಳಿ ಇಲ್ಲದ ರೊಟ್ಟಿಗಳಲ್ಲಿ ಬಳೆಯಾಕಾರದ ಹುಳಿ ಇಲ್ಲದ ಒಂದು ರೊಟ್ಟಿಯನ್ನ, ಎಣ್ಣೆ ಬೆರೆಸಿ ಮಾಡಿದ ಬಳೆಯಾಕಾರದ ಒಂದು ರೊಟ್ಟಿಯನ್ನ, ಒಂದು ತೆಳುವಾದ ರೊಟ್ಟಿಯನ್ನ ಸಹ ತಗೊಳ್ಳಬೇಕು. 24 ನೀನು ಅದನ್ನೆಲ್ಲ ಆರೋನನ ಕೈಗಳಲ್ಲಿ, ಅವನ ಮಕ್ಕಳ ಕೈಗಳಲ್ಲಿ ಇಟ್ಟು ಅವುಗಳನ್ನ ಯೆಹೋವನ ಎದುರಲ್ಲಿ ಹಿಂದೆ ಮುಂದೆ ಆಡಿಸಬೇಕು. ಇದು ಓಲಾಡಿಸೋ ಅರ್ಪಣೆ. 25 ನೀನು ಅದನ್ನೆಲ್ಲ ಅವರ ಕೈಗಳಿಂದ ತಗೊಂಡು ಯಜ್ಞವೇದಿಯಲ್ಲಿ ಸರ್ವಾಂಗಹೋಮ ಬಲಿ ಜೊತೆ ಸುಡಬೇಕು. ಇದ್ರ ಸುವಾಸನೆಯಿಂದ ಯೆಹೋವನಿಗೆ ಸಂತೋಷ* ಆಗುತ್ತೆ. ಅದು ಯೆಹೋವನಿಗೆ ಬೆಂಕಿ ಮೂಲಕ ಮಾಡೋ ಅರ್ಪಣೆ.
26 ಆರೋನನನ್ನ ಪುರೋಹಿತ ಸೇವೆಗೆ ನೇಮಿಸುವಾಗ ಅವನ ಪರವಾಗಿ ಅರ್ಪಿಸಿದ ಟಗರಿನ ಎದೆಭಾಗವನ್ನ+ ನೀನು ತಗೊಂಡು ಓಲಾಡಿಸೋ ಅರ್ಪಣೆಯಾಗಿ ಯೆಹೋವನ ಎದುರಲ್ಲಿ ಹಿಂದೆ ಮುಂದೆ ಆಡಿಸಬೇಕು. ಆ ಭಾಗ ನಿನ್ನದಾಗುತ್ತೆ. 27 ಆರೋನನನ್ನ, ಅವನ ಮಕ್ಕಳನ್ನ ಪುರೋಹಿತ ಸೇವೆಗೆ ನೇಮಿಸುವಾಗ ಓಲಾಡಿಸೋ ಅರ್ಪಣೆಯ ಎದೆಭಾಗವನ್ನ, ಪವಿತ್ರ ಪಾಲಿನಲ್ಲಿರೋ ಕಾಲನ್ನ ನನಗಾಗಿ ಪವಿತ್ರ ಮಾಡಬೇಕು.+ 28 ಇದು ಪವಿತ್ರ ಪಾಲು ಆಗಿರೋದ್ರಿಂದ ಆರೋನನಿಗೆ, ಅವನ ಮಕ್ಕಳಿಗೆ ಸೇರಬೇಕು. ಇದು ಇಸ್ರಾಯೇಲ್ಯರು ಸದಾ ಪಾಲಿಸಬೇಕಾದ ನಿಯಮ. ಇದು ಇಸ್ರಾಯೇಲ್ಯರು ಕೊಡಬೇಕಾದ ಪವಿತ್ರ ಪಾಲು.+ ಇದು ಅವರ ಸಮಾಧಾನ ಬಲಿಗಳಿಂದ ಅವರು ಯೆಹೋವನಿಗಾಗಿ ಕೊಡಬೇಕಾದ ಪವಿತ್ರ ಪಾಲು.+
29 ಆರೋನನ ಪವಿತ್ರ ಬಟ್ಟೆಗಳನ್ನ+ ಅವನ ನಂತ್ರ ಅವನ ಮಕ್ಕಳು ಉಪಯೋಗಿಸ್ತಾರೆ.+ ಅವರನ್ನ ಅಭಿಷೇಕಿಸಿ ಪುರೋಹಿತರಾಗಿ ನೇಮಿಸಿದಾಗ ಅವುಗಳನ್ನ ಬಳಸ್ತಾರೆ. 30 ಆರೋನನ ಮಕ್ಕಳಲ್ಲಿ ಅವನ ನಂತ್ರ ಅವನ ಸ್ಥಾನಕ್ಕೆ ಮತ್ತು ಆರಾಧನಾ ಸ್ಥಳದಲ್ಲಿ ಸೇವೆ ಮಾಡೋಕೆ ದೇವದರ್ಶನ ಡೇರೆಯೊಳಗೆ ಬರೋ ಪುರೋಹಿತ ಏಳು ದಿನ ತನಕ ಆ ಬಟ್ಟೆಗಳನ್ನ ಹಾಕೋಬೇಕು.+
31 ಪುರೋಹಿತ ಸೇವೆಗೆ ಅವರನ್ನ ನೇಮಿಸುವಾಗ ಅರ್ಪಿಸೋ ಟಗರಿನ ಉಳಿದ ಮಾಂಸವನ್ನ ನೀನು ತಗೊಂಡು ಒಂದು ಪವಿತ್ರ ಜಾಗದಲ್ಲಿ* ಬೇಯಿಸಬೇಕು.+ 32 ಆರೋನ, ಅವನ ಮಕ್ಕಳು ಆ ಟಗರಿನ ಮಾಂಸವನ್ನ, ಬುಟ್ಟಿಯಲ್ಲಿರೋ ರೊಟ್ಟಿಯನ್ನ, ದೇವದರ್ಶನ ಡೇರೆಯ ಬಾಗಿಲ ಹತ್ರ ತಿನ್ನಬೇಕು.+ 33 ಅವರನ್ನ ಪುರೋಹಿತರಾಗಿ ನೇಮಿಸೋಕೆ, ಆ ಸೇವೆಗಾಗಿ ಪ್ರತ್ಯೇಕಿಸೋಕೆ ಪ್ರಾಯಶ್ಚಿತ್ತವಾಗಿ ಅರ್ಪಿಸಿದ ಅವುಗಳನ್ನ ಅವರು ತಿನ್ನಬೇಕು. ಆದ್ರೆ ಪುರೋಹಿತನಲ್ಲದವನು* ಅವುಗಳನ್ನ ತಿನ್ನಬಾರದು. ಯಾಕಂದ್ರೆ ಅವು ಪವಿತ್ರ.+ 34 ಬಲಿಯಾಗಿ ಅರ್ಪಿಸಿದ ಆ ಟಗರಿನ ಮಾಂಸದಲ್ಲಿ, ರೊಟ್ಟಿಯಲ್ಲಿ ಏನಾದ್ರೂ ಬೆಳಿಗ್ಗೆ ತನಕ ಉಳಿದ್ರೆ ಅದನ್ನ ಬೆಂಕಿಯಲ್ಲಿ ಸುಟ್ಟುಬಿಡಬೇಕು.+ ಅದನ್ನ ತಿನ್ನಬಾರದು. ಯಾಕಂದ್ರೆ ಅದು ಪವಿತ್ರ.
35 ನಾನು ಆಜ್ಞಾಪಿಸಿದ ಹಾಗೇ ನೀನು ಎಲ್ಲಾನೂ ಆರೋನನಿಗೂ ಅವನ ಮಕ್ಕಳಿಗೂ ಮಾಡಬೇಕು. ಅವರನ್ನ ಪುರೋಹಿತರನ್ನಾಗಿ ನೇಮಿಸೋಕೆ ಏಳು ದಿನ ತಗೊಳ್ಳಬೇಕು.+ 36 ಅವ್ರ ಪ್ರಾಯಶ್ಚಿತ್ತಕ್ಕಾಗಿ ನೀನು ಪ್ರತಿದಿನ ಹೋರಿಯನ್ನ ಪಾಪಪರಿಹಾರಕ ಬಲಿಯಾಗಿ ಅರ್ಪಿಸಬೇಕು. ಯಜ್ಞವೇದಿಗಾಗಿ ಪ್ರಾಯಶ್ಚಿತ್ತ ಮಾಡಿ ಅದನ್ನ ಪರಿಶುದ್ಧ ಮಾಡಬೇಕು. ಅದನ್ನ ಅಭಿಷೇಕಿಸಿ ನನ್ನ ಆರಾಧನೆಗಾಗಿ ಪ್ರತ್ಯೇಕವಾಗಿ ಇಡಬೇಕು ಅಂತ ತೋರಿಸು.+ 37 ನೀನು ಏಳು ದಿನ ಯಜ್ಞವೇದಿಗಾಗಿ ಪ್ರಾಯಶ್ಚಿತ್ತ ಮಾಡಬೇಕು. ನೀನು ಯಜ್ಞವೇದಿಯನ್ನ ನನ್ನ ಆರಾಧನೆಗಾಗಿ ಪ್ರತ್ಯೇಕಿಸಬೇಕು. ಆಗ ಅದು ಅತಿ ಪವಿತ್ರ ಯಜ್ಞವೇದಿ ಆಗುತ್ತೆ.+ ಆ ಯಜ್ಞವೇದಿಯನ್ನ ಮುಟ್ಟೋನು ಪವಿತ್ರನಾಗಿರಬೇಕು.
38 ನೀನು ಪ್ರತಿ ದಿನ ಒಂದು ವರ್ಷದ ಎರಡು ಟಗರುಗಳನ್ನ ಯಜ್ಞವೇದಿ ಮೇಲೆ ಅರ್ಪಿಸಬೇಕು. ಇದನ್ನ ನೀನು ತಪ್ಪದೆ ಅರ್ಪಿಸಬೇಕು.+ 39 ಅವುಗಳಲ್ಲಿ ಒಂದು ಟಗರನ್ನ ಬೆಳಿಗ್ಗೆ ಇನ್ನೊಂದು ಟಗರನ್ನ ಸೂರ್ಯ ಮುಳುಗಿದ ಮೇಲೆ*+ ಅರ್ಪಿಸಬೇಕು. 40 ಮೊದಲ ಟಗರನ್ನ ಅರ್ಪಿಸುವಾಗ ಅದ್ರ ಜೊತೆ ಶುದ್ಧ ಆಲಿವ್ ಎಣ್ಣೆ ಬೆರೆಸಿದ ನುಣ್ಣಗಿನ ಹಿಟ್ಟನ್ನ, ಪಾನ ಅರ್ಪಣೆಯಾಗಿ ದ್ರಾಕ್ಷಾಮದ್ಯವನ್ನ ಅರ್ಪಿಸಬೇಕು. ಶುದ್ಧ ಆಲಿವ್ ಎಣ್ಣೆ ಒಂದು ಹಿನ್* ಅಳತೆಯ ನಾಲ್ಕನೇ ಒಂದು ಭಾಗದಷ್ಟು ಇರಬೇಕು, ನುಣ್ಣಗಿನ ಹಿಟ್ಟು ಒಂದು ಏಫಾ* ಅಳತೆಯ ಹತ್ತನೇ ಒಂದು ಭಾಗದಷ್ಟು ಇರಬೇಕು. ದ್ರಾಕ್ಷಾಮದ್ಯ ಒಂದು ಹಿನ್ ಅಳತೆಯ ನಾಲ್ಕನೇ ಒಂದು ಭಾಗದಷ್ಟು ಇರಬೇಕು. 41 ಎರಡನೇ ಟಗರನ್ನ ಸೂರ್ಯ ಮುಳುಗಿದ ಮೇಲೆ* ಅರ್ಪಿಸಬೇಕು. ಅದರ ಜೊತೆ ಬೆಳಿಗ್ಗೆ ಅರ್ಪಿಸಿದ ಹಾಗೇ ಧಾನ್ಯ ಮತ್ತು ಪಾನ ಅರ್ಪಣೆಗಳನ್ನ ಅರ್ಪಿಸಬೇಕು. ಇದು ಬೆಂಕಿ ಮೂಲಕ ಯೆಹೋವನಿಗೆ ಮಾಡಿದ ಅರ್ಪಣೆ. ಇದ್ರಿಂದ ಬರೋ ಸುವಾಸನೆಯಿಂದ ಆತನಿಗೆ ಸಂತೋಷ* ಆಗುತ್ತೆ. 42 ನಾನು ನಿನಗೆ ಕಾಣಿಸ್ಕೊಂಡು ನಿನ್ನ ಜೊತೆ ಮಾತಾಡೋ ಸ್ಥಳದಲ್ಲಿ ಅಂದ್ರೆ ದೇವದರ್ಶನ ಡೇರೆಯ ಬಾಗಿಲ ಹತ್ರ ಯೆಹೋವನಾದ ನನ್ನ ಮುಂದೆ ಇದನ್ನ ಸರ್ವಾಂಗಹೋಮ ಬಲಿಯಾಗಿ ಅರ್ಪಿಸಬೇಕು. ಇದನ್ನ ನೀವು ತಲೆಮಾರುಗಳ ತನಕ ತಪ್ಪದೆ ಅರ್ಪಿಸಬೇಕು.+
43 ನಾನು ಅಲ್ಲಿ ಇಸ್ರಾಯೇಲ್ಯರಿಗೆ ಕಾಣಿಸ್ಕೊಳ್ತೀನಿ. ಹಾಗಾಗಿ ಆ ಸ್ಥಳ ನನ್ನ ಮಹಿಮೆಯಿಂದ ಪವಿತ್ರ ಆಗುತ್ತೆ.+ 44 ನಾನು ದೇವದರ್ಶನ ಡೇರೆಯನ್ನ, ಯಜ್ಞವೇದಿಯನ್ನ ನನ್ನ ಆರಾಧನೆಗಾಗಿ ಪ್ರತ್ಯೇಕಿಸ್ತೀನಿ. ಆರೋನನನ್ನ, ಅವನ ಮಕ್ಕಳನ್ನ+ ಪುರೋಹಿತರಾಗಿ ನನ್ನ ಸೇವೆ ಮಾಡೋಕೆ ಪ್ರತ್ಯೇಕಿಸ್ತೀನಿ. 45 ನಾನು ಇಸ್ರಾಯೇಲ್ಯರ ಮಧ್ಯ ವಾಸಿಸ್ತೀನಿ, ನಾನು ಅವ್ರ ದೇವರಾಗಿ ಇರ್ತಿನಿ.+ 46 ಅವ್ರ ಮಧ್ಯ ವಾಸಿಸೋಕೆ ಈಜಿಪ್ಟ್ ದೇಶದಿಂದ ಹೊರಗೆ ಕರ್ಕೊಂಡು ಬಂದ ಅವ್ರ ದೇವರಾದ ಯೆಹೋವ ನಾನೇ ಅಂತ ಅವರಿಗೆ ಖಂಡಿತ ಗೊತ್ತಾಗುತ್ತೆ.+ ನಾನು ಅವ್ರ ದೇವರಾದ ಯೆಹೋವ.