ವಿಮೋಚನಕಾಂಡ
26 ಪವಿತ್ರ ಡೇರೆನ+ ಹತ್ತು ಬಟ್ಟೆಗಳಿಂದ ಮಾಡಬೇಕು. ಆ ಬಟ್ಟೆಗಳನ್ನ ಹೊಸೆದ ಒಳ್ಳೇ ಗುಣಮಟ್ಟದ ನಾರು, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲಿಂದ ಮಾಡಬೇಕು. ಆ ಬಟ್ಟೆಗಳ ಮೇಲೆ ಕೆರೂಬಿಯರ+ ಚಿತ್ರಗಳನ್ನ ಕಸೂತಿ ಹಾಕಿಸಬೇಕು.+ 2 ಪ್ರತಿಯೊಂದು ಬಟ್ಟೆ 28 ಮೊಳ* ಉದ್ದ, 4 ಮೊಳ ಅಗಲ ಇರಬೇಕು. ಎಲ್ಲ ಬಟ್ಟೆಗಳ ಅಳತೆ ಒಂದೇ ಆಗಿರಬೇಕು.+ 3 ಅವುಗಳಲ್ಲಿ ಐದು ಬಟ್ಟೆಗಳನ್ನ ಒಂದಕ್ಕೊಂದು ಸೇರಿಸಿ ಹೊಲಿಬೇಕು. ಆಗ ಅದು ಒಂದು ದೊಡ್ಡ ಬಟ್ಟೆ ಆಗುತ್ತೆ. ಇದೇ ತರ ಎರಡು ದೊಡ್ಡ ಬಟ್ಟೆಗಳನ್ನ ಮಾಡಬೇಕು. 4 ಆ ಎರಡನ್ನೂ ಜೋಡಿಸೋಕೆ ಅವುಗಳಲ್ಲಿ ಪ್ರತಿಯೊಂದ್ರ ಕೊನೆಯಲ್ಲೂ ನೀಲಿ ದಾರದಿಂದ ಕುಣಿಕೆಗಳನ್ನ ಹೊಲಿಬೇಕು. 5 ಒಂದು ಬಟ್ಟೆ ಕೊನೆಯಲ್ಲಿ 50 ಕುಣಿಕೆಗಳನ್ನ, ಇನ್ನೊಂದು ಬಟ್ಟೆ ಕೊನೆಯಲ್ಲಿ 50 ಕುಣಿಕೆಗಳನ್ನ ಮಾಡಬೇಕು. ಆ ಎರಡು ಬಟ್ಟೆಗಳು ಜೋಡಣೆಯಾಗೋ ತರ ಅವುಗಳ ಕುಣಿಕೆಗಳನ್ನ ಎದುರುಬದುರಾಗಿ ಇಡಬೇಕು. 6 ಚಿನ್ನದ 50 ಕೊಂಡಿಗಳನ್ನ ಮಾಡಿ ಅವುಗಳಿಂದ ಆ ಎರಡು ದೊಡ್ಡ ಬಟ್ಟೆಗಳನ್ನ ಜೋಡಿಸಬೇಕು. ಆಗ ಪವಿತ್ರ ಡೇರೆಗೆ ಒಂದೇ ಬಟ್ಟೆ ಆಗುತ್ತೆ.+
7 ಪವಿತ್ರ ಡೇರೆಯ ಮೇಲೆ ಹೊದಿಸೋಕೆ ಆಡುಕೂದಲಿನ+ 11 ಬಟ್ಟೆಗಳನ್ನೂ ಮಾಡಬೇಕು.+ 8 ಪ್ರತಿಯೊಂದು ಬಟ್ಟೆ 30 ಮೊಳ ಉದ್ದ, 4 ಮೊಳ ಅಗಲ ಇರಬೇಕು. 11 ಬಟ್ಟೆಗಳ ಅಳತೆ ಒಂದೇ ಆಗಿರಬೇಕು. 9 ಅವುಗಳಲ್ಲಿ ಐದು ಬಟ್ಟೆಗಳನ್ನ ಒಂದಕ್ಕೊಂದು ಸೇರಿಸಿ ಹೊಲಿಬೇಕು. ಉಳಿದ ಆರು ಬಟ್ಟೆಗಳನ್ನ ಒಂದಕ್ಕೊಂದು ಸೇರಿಸಿ ಹೊಲಿಬೇಕು. ಆರನೇ ಬಟ್ಟೆಯನ್ನ ಡೇರೆಯ ಮುಂಭಾಗದಲ್ಲಿ ಮಡಚಬೇಕು. 10 ಒಂದು ದೊಡ್ಡ ಬಟ್ಟೆಯ ಕೊನೆಯಲ್ಲಿ 50 ಕುಣಿಕೆಗಳನ್ನ ಮಾಡಬೇಕು. ಇನ್ನೊಂದು ದೊಡ್ಡ ಬಟ್ಟೆಗೆ, ಅದು ಮೊದಲನೇ ದೊಡ್ಡ ಬಟ್ಟೆ ಜೊತೆ ಜೋಡಣೆಯಾಗೋ ಅಂಚಿನಲ್ಲಿ 50 ಕುಣಿಕೆಗಳನ್ನ ಮಾಡಬೇಕು. 11 ತಾಮ್ರದ 50 ಕೊಂಡಿಗಳನ್ನ ಮಾಡಿಸಿ ಆ ಕೊಂಡಿಗಳನ್ನ ಕುಣಿಕೆಗಳಲ್ಲಿ ಸಿಕ್ಕಿಸಿ ಎರಡು ದೊಡ್ಡ ಬಟ್ಟೆಗಳನ್ನ ಕೂಡಿಸಬೇಕು. ಆಗ ಪವಿತ್ರ ಡೇರೆಗೆ ಒಂದೇ ಬಟ್ಟೆ ಆಗುತ್ತೆ. 12 ಹೆಚ್ಚಿರೋ ಬಟ್ಟೆನ ತೂಗಿಬಿಡಬೇಕು. ಪವಿತ್ರ ಡೇರೆಯ ಹಿಂಭಾಗದಲ್ಲಿ ಬಟ್ಟೆ 2 ಮೊಳ ಜಾಸ್ತಿ ಉದ್ದ ಇರುತ್ತೆ. ಅದನ್ನ ತೂಗಿಬಿಡಬೇಕು. 13 ಪವಿತ್ರ ಡೇರೆಯ ಎರಡು ಕಡೆಯಲ್ಲಿ ಬಟ್ಟೆ ಒಂದೊಂದು ಮೊಳ ಜಾಸ್ತಿ ಉದ್ದ ಇರುತ್ತೆ. ಅದನ್ನ ತೂಗಿಬಿಡಬೇಕು. ಇದ್ರಿಂದ ಎರಡೂ ಕಡೆ ಮುಚ್ಚೋಕಾಗುತ್ತೆ.
14 ಪವಿತ್ರ ಡೇರೆ ಮೇಲೆ ಹೊದಿಸೋಕೆ ನೀನು ಟಗರಿನ ಚರ್ಮದಿಂದ ಇನ್ನೊಂದು ಹೊದಿಕೆ ಮಾಡಬೇಕು. ಅದಕ್ಕೆ ಕೆಂಪು ಬಣ್ಣ ಹಾಕಿರಬೇಕು. ಆ ಕೆಂಪು ಬಟ್ಟೆ ಮೇಲೆ ಹಾಕೋಕೆ ಸೀಲ್ ಪ್ರಾಣಿ* ಚರ್ಮದ ಮತ್ತೊಂದು ಹೊದಿಕೆ ಮಾಡಬೇಕು.+
15 ನೀನು ಪವಿತ್ರ ಡೇರೆಗಾಗಿ ಅಕೇಶಿಯ ಮರದಿಂದ* ಚೌಕಟ್ಟುಗಳನ್ನ+ ಮಾಡಿ ನೆಟ್ಟಗೆ ನಿಲ್ಲಿಸಬೇಕು.+ 16 ಪ್ರತಿಯೊಂದು ಚೌಕಟ್ಟು ಹತ್ತು ಮೊಳ ಉದ್ದ, ಒಂದೂವರೆ ಮೊಳ ಅಗಲ ಇರಬೇಕು. 17 ಪ್ರತಿಯೊಂದು ಚೌಕಟ್ಟಿಗೆ ಎರಡೆರಡು ಕೂರಂಚುಗಳು* ಇರಬೇಕು. ಎಲ್ಲ ಕೂರಂಚುಗಳು ಒಂದೇ ಸಮ ಇರಬೇಕು. ನೀನು ಪವಿತ್ರ ಡೇರೆಯ ಎಲ್ಲ ಚೌಕಟ್ಟುಗಳನ್ನ ಹೀಗೇ ಮಾಡಬೇಕು. 18 ಪವಿತ್ರ ಡೇರೆಯ ದಕ್ಷಿಣ ಭಾಗಕ್ಕೆ 20 ಚೌಕಟ್ಟುಗಳನ್ನ ಮಾಡಬೇಕು.
19 ಆ 20 ಚೌಕಟ್ಟುಗಳ ಕೆಳಗೆ ಇಡೋಕೆ ಬೆಳ್ಳಿಯ 40 ಅಡಿಗಲ್ಲುಗಳನ್ನ+ ಮಾಡಬೇಕು. ಒಂದು ಚೌಕಟ್ಟಿನ ಕೆಳಗಿರೋ ಎರಡು ಕೂರಂಚುಗಳಿಗೆ ಎರಡು ಅಡಿಗಲ್ಲುಗಳು ಇರಬೇಕು. ನಂತ್ರ ಇರೋ ಪ್ರತಿಯೊಂದು ಚೌಕಟ್ಟಿನ ಎರಡೆರಡು ಕೂರಂಚುಗಳಿಗೂ ಎರಡೆರಡು ಅಡಿಗಲ್ಲು ಇರಬೇಕು.+ 20 ಪವಿತ್ರ ಡೇರೆಯ ಇನ್ನೊಂದು ಕಡೆಗೆ ಅಂದ್ರೆ ಉತ್ತರ ಭಾಗಕ್ಕೆ 20 ಚೌಕಟ್ಟುಗಳನ್ನ ಮಾಡಬೇಕು. 21 ಅವುಗಳಿಗಾಗಿ ಬೆಳ್ಳಿಯ 40 ಅಡಿಗಲ್ಲು ಮಾಡಬೇಕು. ಪ್ರತಿ ಚೌಕಟ್ಟಿನ ಕೆಳಗೆ ಎರಡೆರಡು ಅಡಿಗಲ್ಲು ಇರಬೇಕು. 22 ಪವಿತ್ರ ಡೇರೆಯ ಹಿಂಭಾಗಕ್ಕೆ ಅಂದ್ರೆ ಪಶ್ಚಿಮ ಭಾಗಕ್ಕೆ ಆರು ಚೌಕಟ್ಟುಗಳನ್ನ ಮಾಡಬೇಕು.+ 23 ಪವಿತ್ರ ಡೇರೆಯ ಹಿಂಭಾಗದ ಎರಡು ಮೂಲೆಗಳಲ್ಲಿ ಆಧಾರಕ್ಕಾಗಿ ಎರಡು ಚೌಕಟ್ಟುಗಳನ್ನ ಮಾಡಬೇಕು. 24 ಈ ಎರಡು ಚೌಕಟ್ಟುಗಳಲ್ಲಿ ಪ್ರತಿಯೊಂದಕ್ಕೂ ಕೆಳಗಿಂದ ಮೇಲಕ್ಕೆ ಎರಡು ಭಾಗ ಇರಬೇಕು. ಆ ಎರಡು ಭಾಗಗಳು ಮೊದಲ ಬಳೆ ಇರೋ ಕಡೆ ಕೂಡಬೇಕು. ಎರಡೂ ಚೌಕಟ್ಟುಗಳು ಹೀಗೇ ಇರಬೇಕು. ಅವು ಎರಡೂ ಮೂಲೆಗಳಿಗೆ ಆಧಾರವಾಗಿ ಇರುತ್ತೆ. 25 ಹೀಗೆ ಹಿಂಭಾಗದಲ್ಲಿ ಎಂಟು ಚೌಕಟ್ಟುಗಳು, ಅವುಗಳಿಗೆ ಬೆಳ್ಳಿಯ 16 ಅಡಿಗಲ್ಲು ಇರಬೇಕು. ಪ್ರತಿಯೊಂದು ಚೌಕಟ್ಟಿನ ಕೆಳಗೂ ಎರಡೆರಡು ಅಡಿಗಲ್ಲು ಇರಬೇಕು.
26 ಅಕೇಶಿಯ ಮರದಿಂದ ಕೋಲುಗಳನ್ನ ಮಾಡಬೇಕು. ಪವಿತ್ರ ಡೇರೆಯ ಒಂದು ಕಡೆಯಲ್ಲಿರೋ ಚೌಕಟ್ಟುಗಳನ್ನ ಒಂದಕ್ಕೊಂದು ಜೋಡಿಸೋಕೆ+ ಐದು ಕೋಲು 27 ಮತ್ತು ಪವಿತ್ರ ಡೇರೆಯ ಇನ್ನೊಂದು ಕಡೆಯಲ್ಲಿರೋ ಚೌಕಟ್ಟುಗಳನ್ನ ಒಂದಕ್ಕೊಂದು ಜೋಡಿಸೋಕೆ ಐದು ಕೋಲು ಇರಬೇಕು. ಅಷ್ಟೇ ಅಲ್ಲ ಪವಿತ್ರ ಡೇರೆಯ ಪಶ್ಚಿಮ ಭಾಗದಲ್ಲಿ ಅಂದ್ರೆ ಹಿಂಭಾಗದಲ್ಲಿ ಇರೋ ಚೌಕಟ್ಟುಗಳನ್ನ ಒಂದಕ್ಕೊಂದು ಜೋಡಿಸೋಕೆ ಐದು ಕೋಲು ಇರಬೇಕು. 28 ಚೌಕಟ್ಟುಗಳ ಮಧ್ಯದಲ್ಲಿರೋ ಕೋಲು ಒಂದು ಕೊನೆಯಿಂದ ಇನ್ನೊಂದು ಕೊನೆ ತನಕ ಇರಬೇಕು.
29 ನೀನು ಚೌಕಟ್ಟುಗಳಿಗೆ ಚಿನ್ನದ ತಗಡುಗಳನ್ನ ಹೊದಿಸಬೇಕು.+ ಚೌಕಟ್ಟುಗಳಲ್ಲಿ ಚಿನ್ನದ ಬಳೆಗಳನ್ನ ಮಾಡಬೇಕು. ಆ ಬಳೆಗಳು ಕೋಲುಗಳಿಗೆ ಹಿಡಿಗಳಾಗಿ ಇರುತ್ತೆ. ಕೋಲುಗಳಿಗೂ ಚಿನ್ನದ ತಗಡುಗಳನ್ನ ಹೊದಿಸಬೇಕು. 30 ನಾನು ನಿನಗೆ ಬೆಟ್ಟದಲ್ಲಿ ತೋರಿಸಿದ ತರಾನೇ ನೀನು ಪವಿತ್ರ ಡೇರೆಯನ್ನ ಮಾಡಬೇಕು.+
31 ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲು, ಹೊಸೆದ ಒಳ್ಳೇ ಗುಣಮಟ್ಟದ ನಾರಿನಿಂದ ಒಂದು ಪರದೆ+ ಮಾಡಬೇಕು. ಅದ್ರ ಮೇಲೆ ಕೆರೂಬಿಯರ ಚಿತ್ರಗಳನ್ನ ಕಸೂತಿ ಹಾಕಿಸಬೇಕು. 32 ಅಕೇಶಿಯ ಮರದಿಂದ ನಾಲ್ಕು ಕಂಬ ಮಾಡಿ ಅದಕ್ಕೆ ಆ ಪರದೆ ತೂಗುಹಾಕಬೇಕು. ಕಂಬಗಳಿಗೆ ಚಿನ್ನದ ತಗಡನ್ನ ಹೊದಿಸಿ ಅವುಗಳಿಗೆ ಚಿನ್ನದ ಕೊಕ್ಕೆಗಳನ್ನ ಮಾಡಬೇಕು. ನಾಲ್ಕು ಕಂಬಗಳನ್ನ ಬೆಳ್ಳಿಯ ನಾಲ್ಕು ಅಡಿಗಲ್ಲುಗಳ ಮೇಲೆ ನಿಲ್ಲಿಸಬೇಕು. 33 ಡೇರೆಗೆ ಹೊದಿಸಲಾದ ಬಟ್ಟೆಗಳ ಕೊಂಡಿಗಳ ಕೆಳಗೆ ಆ ಪರದೆ ತೂಗುಹಾಕಬೇಕು. ಆ ಪರದೆ ಪವಿತ್ರ+ ಸ್ಥಳವನ್ನ ಮತ್ತು ಅತಿ ಪವಿತ್ರ+ ಸ್ಥಳವನ್ನ ಬೇರೆ ಬೇರೆ ಮಾಡುತ್ತೆ. ಸಾಕ್ಷಿ ಮಂಜೂಷವನ್ನ+ ಪರದೆಯೊಳಗೆ ತರಬೇಕು. 34 ಅತಿ ಪವಿತ್ರ ಸ್ಥಳದಲ್ಲಿರೋ ಸಾಕ್ಷಿ ಮಂಜೂಷದ ಮೇಲೆ ಮುಚ್ಚಳವನ್ನ ಇಡಬೇಕು.
35 ಪರದೆ ಹೊರಗೆ ಅಂದ್ರೆ ಪವಿತ್ರ ಡೇರೆಯ ಉತ್ತರ ಭಾಗಕ್ಕೆ ಮೇಜನ್ನ ಇಡಬೇಕು. ಅದ್ರ ಮುಂದೆ ಅಂದ್ರೆ ಪವಿತ್ರ ಡೇರೆಯ ದಕ್ಷಿಣ ಭಾಗಕ್ಕೆ ದೀಪಸ್ತಂಭ+ ಇಡಬೇಕು. 36 ಡೇರೆಯ ಬಾಗಿಲಿಗೆ ಹಾಕೋಕೆ ಒಂದು ಪರದೆ ಮಾಡಬೇಕು. ಈ ಪರದೆಯನ್ನ ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲು, ಹೊಸೆದ ಒಳ್ಳೇ ಗುಣಮಟ್ಟದ ನಾರು ಇದನ್ನೆಲ್ಲ ಒಟ್ಟಿಗೆ ನೇಯ್ದು ಮಾಡಬೇಕು.+ 37 ಆ ಪರದೆಯನ್ನ ತೂಗುಹಾಕೋಕೆ ಅಕೇಶಿಯ ಮರದಿಂದ ಐದು ಕಂಬ ಮಾಡಬೇಕು. ಆ ಕಂಬಗಳಿಗೆ ಚಿನ್ನದ ತಗಡನ್ನ ಹೊದಿಸಿ ಅವುಗಳಿಗೆ ಚಿನ್ನದ ಕೊಕ್ಕೆ ಮಾಡಬೇಕು. ಆ ಕಂಬಗಳನ್ನ ನಿಲ್ಲಿಸೋಕೆ ಅಚ್ಚಲ್ಲಿ ತಾಮ್ರ ಹೊಯ್ದು ಐದು ಅಡಿಗಲ್ಲುಗಳನ್ನ ಮಾಡಬೇಕು.