ಇಬ್ರಿಯರಿಗೆ ಬರೆದ ಪತ್ರ
12 ಇಷ್ಟೊಂದು ಸಾಕ್ಷಿಗಳ ದೊಡ್ಡ ಗುಂಪು ಒಂದು ದೊಡ್ಡ ಮೋಡದ ಹಾಗೆ ನಮ್ಮ ಸುತ್ತ ಇದೆ. ಹಾಗಾಗಿ ನಾವೂ ಭಾರವಾದ ಎಲ್ಲವನ್ನ, ಸುಲಭವಾಗಿ ಬಲೆಗೆ ಬೀಳಿಸೋ ಪಾಪವನ್ನ ತೆಗೆದುಹಾಕೋಣ.+ ನಾವು ಓಡಬೇಕಾದ ಓಟವನ್ನ ತಾಳ್ಮೆಯಿಂದ ಓಡೋಣ.+ 2 ನಮ್ಮ ನಂಬಿಕೆಯ ಮುಖ್ಯ ಪ್ರತಿನಿಧಿ ಮತ್ತು ನಮ್ಮ ನಂಬಿಕೆಯನ್ನ ಪೂರ್ಣ ಮಾಡೋ ಯೇಸು ಮೇಲೆ ದೃಷ್ಟಿ ಇಡೋಣ.+ ಯಾಕಂದ್ರೆ ಆತನು ತನ್ನ ಮುಂದಿದ್ದ ಖುಷಿಗೋಸ್ಕರ ಹಿಂಸಾ ಕಂಬದ* ಮೇಲೆ ಸಾವನ್ನ ಸಹಿಸ್ಕೊಂಡ, ಅವಮಾನವನ್ನೂ ಲೆಕ್ಕಮಾಡಲಿಲ್ಲ. ಆತನೀಗ ದೇವರ ಸಿಂಹಾಸನದ ಬಲಗಡೆ ಕೂತಿದ್ದಾನೆ.+ 3 ಅವ್ರ ಮೇಲೆ ಅವ್ರೇ ಅಪಾಯ ತಂದ್ಕೊಂಡ ಪಾಪಿಗಳ ಕೆಟ್ಟ ಮಾತನ್ನ ಸಹಿಸ್ಕೊಂಡ ಆತನಿಗೆ ಪೂರ್ತಿ ಗಮನ ಕೊಡೋಣ.+ ಆಗ ನೀವು ಸುಸ್ತಾಗಿ ಸೋತು ಹೋಗಲ್ಲ.+
4 ಆ ಪಾಪದ ವಿರುದ್ಧ ನೀವು ಮಾಡ್ತಿರೋ ಹೋರಾಟದಲ್ಲಿ ಇಲ್ಲಿ ತನಕ ನೀವು ಸಾಯುವಷ್ಟರ ಮಟ್ಟಿಗೆ ಹೋರಾಡಿಲ್ಲ. 5 ಮಕ್ಕಳಾದ ನಿಮಗೆ ಹೇಳಿದ ಈ ಬುದ್ಧಿಮಾತನ್ನ ನೀವು ಪೂರ್ತಿ ಮರೆತುಬಿಟ್ಟಿದ್ದೀರ: “ನನ್ನ ಮಗನೇ, ಯೆಹೋವ* ಕೊಡೋ ಶಿಸ್ತನ್ನ ತಳ್ಳಿ ಹಾಕಬೇಡ. ಆತನು ನಿನ್ನನ್ನ ತಿದ್ದುವಾಗ ಬೇಜಾರು ಮಾಡ್ಕೊಬೇಡ. 6 ಯಾಕಂದ್ರೆ ಯೆಹೋವ* ಯಾರನ್ನ ಪ್ರೀತಿಸ್ತಾನೋ ಅವ್ರಿಗೇ ಶಿಸ್ತು ಕೊಡ್ತಾನೆ. ನಿಜ ಹೇಳಬೇಕಂದ್ರೆ ಆತನು ಯಾರನ್ನ ತನ್ನ ಮಗ ಅಂತ ಸ್ವೀಕರಿಸ್ತಾನೋ ಅವರಿಗೆಲ್ಲ ಶಿಕ್ಷೆ ಕೊಡ್ತಾನೆ.”*+
7 ನಿಮ್ಮನ್ನ ತಿದ್ದೋಕೇ ದೇವರು ನಿಮಗೆ ಶಿಸ್ತು ಕೊಡ್ತಿದ್ದಾನೆ ಅಂತ ಅರ್ಥ ಮಾಡ್ಕೊಂಡು ಸಹಿಸ್ಕೊಳ್ಳಿ. ಆತನು ತನ್ನ ಮಕ್ಕಳ ಜೊತೆ ನಡ್ಕೊಳ್ಳೋದು ಹೀಗೆನೇ.+ ಅಪ್ಪನಿಂದ ಶಿಸ್ತು ಪಡಿಯದೇ ಇರೋ ಮಗ ಇದ್ದಾನಾ?+ 8 ದೇವರು ಬೇರೆಯವ್ರಿಗೆ ಶಿಸ್ತು ಕೊಡೋ ಹಾಗೆ ನಿಮಗೆ ಶಿಸ್ತು ಕೊಡಲಿಲ್ಲಾಂದ್ರೆ ನೀವು ನಿಜವಾಗ್ಲೂ ಆತನ ಮಕ್ಕಳಲ್ಲ, ವ್ಯಭಿಚಾರದಿಂದ ಹುಟ್ಟಿದವರು ಅಂತ ಅರ್ಥ. 9 ಅಷ್ಟೇ ಅಲ್ಲ ನಮ್ಮ ಅಪ್ಪಂದಿರು ನಮಗೆ ಶಿಸ್ತು ಕೊಡ್ತಿದ್ರು, ನಾವು ಅವ್ರಿಗೆ ಗೌರವ ಕೊಡ್ತಿದ್ವಿ. ಹಾಗಿದ್ದ ಮೇಲೆ ಪವಿತ್ರಶಕ್ತಿಯಿಂದ ನಮ್ಮ ಜೀವನವನ್ನ ಮಾರ್ಗದರ್ಶಿಸ್ತಿರೋ ಆ ಅಪ್ಪಗೆ ಅದಕ್ಕಿಂತ ಜಾಸ್ತಿ ಗೌರವ ಕೊಡಬೇಕಲ್ವಾ? ಗೌರವ ಕೊಟ್ರೆ ನಾವು ಜೀವ ಪಡಿತೀವಿ.+ 10 ನಮ್ಮ ಅಪ್ಪಅಮ್ಮ ಅವ್ರಿಗೆ ಸರಿ ಅನಿಸಿದ ಹಾಗೆ ಸ್ವಲ್ಪ ಸಮಯ ಶಿಸ್ತು ಕೊಡ್ತಿದ್ರು. ಆದ್ರೆ ನಮ್ಮ ತಂದೆಯಾದ ದೇವರು ಆತನ ತರ ನಾವು ಪವಿತ್ರರಾಗೋಕೆ ಯಾವಾಗ್ಲೂ ನಮ್ಮ ಒಳ್ಳೇದಕ್ಕೇ ಶಿಸ್ತು ಕೊಡ್ತಾನೆ.+ 11 ಶಿಸ್ತು ಸಿಕ್ಕಾಗ ನಮಗ್ಯಾರಿಗೂ ಖುಷಿ ಆಗಲ್ಲ, ನೋವಾಗುತ್ತೆ.* ಆದ್ರೆ ಶಿಸ್ತು ಸಿಕ್ಕವ್ರಿಗೆ ಮುಂದೆ ಅದ್ರಿಂದ ಪ್ರಯೋಜನ ಇದೆ. ಅವರು ಒಳ್ಳೇ ದಾರೀಲಿ ನಡಿತಾ ಶಾಂತಿಯಿಂದ ಇರೋಕೆ ಆಗುತ್ತೆ.
12 ಹಾಗಾಗಿ ಬಲ ಇಲ್ಲದ ಕೈಗಳನ್ನ ಮಂಡಿಗಳನ್ನ ಬಲಪಡಿಸಿ.+ 13 ನೀವು ಹೆಜ್ಜೆ ಇಡೋ ದಾರಿಯನ್ನ ನೇರ ಮಾಡ್ತಾ ಇರಿ.+ ಆಗ ಗಾಯ ಆಗಿರೋ ಭಾಗ ಇನ್ನೂ ಹಾಳಾಗಲ್ಲ. ವಾಸಿ ಆಗುತ್ತೆ. 14 ಎಲ್ರ ಜೊತೆ ಶಾಂತಿಯಿಂದ ಇರೋಕೆ+ ಮತ್ತು ಪವಿತ್ರ ಜೀವನ ನಡಿಸೋಕೆ ಶ್ರಮಪಡಿ.+ ಪವಿತ್ರರಾಗಿ ಇಲ್ಲಾಂದ್ರೆ ಪ್ರಭುನ ನೋಡೋಕೆ ಆಗಲ್ಲ. 15 ನೀವ್ಯಾರು ದೇವರ ಅಪಾರ ಕೃಪೆಯನ್ನ ಕಳ್ಕೊಳ್ಳದ ಹಾಗೆ ಹುಷಾರಾಗಿರಿ. ಯಾವ ವಿಷದ ಬೇರೂ ನಿಮ್ಮಲ್ಲಿ ಚಿಗುರಿ ತೊಂದ್ರೆ ಮಾಡದ ಹಾಗೆ, ಆ ಬೇರಿಂದ ತುಂಬ ಜನಕ್ಕೆ ವಿಷ ಏರದ* ಹಾಗೆ ನೋಡ್ಕೊಳ್ಳಿ.+ 16 ಲೈಂಗಿಕ ಅನೈತಿಕತೆ* ನಡಿಸೋ ಮತ್ತು ಏಸಾವನ ತರ ಪವಿತ್ರ ವಿಷ್ಯಗಳಿಗೆ ಗೌರವ ಕೊಡದೆ ಇರೋ ಯಾರೂ ನಿಮ್ಮ ಜೊತೆ ಇರದ ಹಾಗೆ ಹುಷಾರಾಗಿರಿ. ಅವನು ಜ್ಯೇಷ್ಠ ಪುತ್ರನಾಗಿ ತನಗಿದ್ದ ಹಕ್ಕನ್ನ ಒಂದೇ ಹೊತ್ತಿನ ಊಟಕ್ಕಾಗಿ ಮಾರಿಬಿಟ್ಟ.+ 17 ಆಮೇಲೆ ಏನಾಯ್ತು ಅಂತ ನಿಮಗೇ ಗೊತ್ತು. ಅವನು ಆಶೀರ್ವಾದ ಪಡಿಯೋಕೆ ಬಯಸಿದ್ರೂ ಅದು ಅವನಿಗೆ ಸಿಗಲಿಲ್ಲ. ಅವನು ಅತ್ತು ಗೋಳಾಡಿ ಅಪ್ಪನ ಮನಸ್ಸನ್ನ ಬದಲಾಯಿಸೋಕೆ ಎಷ್ಟು ಪ್ರಯತ್ನ ಮಾಡಿದ್ರೂ+ ಅದು ಆಗಲಿಲ್ಲ.
18 ನೀವು ಬಂದಿರೋದು ಮುಟ್ಟಿ ನೋಡೋಕೆ ಆಗುವಂಥ ಬೆಟ್ಟ ಹತ್ರ ಅಲ್ಲ.+ ಆ ಬೆಟ್ಟದಲ್ಲಿ ಬೆಂಕಿ ಹೊತ್ತಿ ಉರೀತು,+ ದೊಡ್ಡ ಮೋಡ ಕವಿದು ಕತ್ತಲಾಯ್ತು, ಬಿರುಗಾಳಿ ಬೀಸಿತು,+ 19 ತುತ್ತೂರಿ ಶಬ್ದ,+ ಸ್ವರ್ಗದಿಂದ ಧ್ವನಿ ಕೇಳಿಸ್ತು.+ ಜನ ಅದನ್ನ ಕೇಳಿ ಆಮೇಲೆ ಒಂದು ಮಾತನ್ನೂ ಕೇಳೋಕೆ ನಮ್ಮಿಂದ ಆಗಲ್ಲ ಅಂತ ಬೇಡ್ಕೊಂಡ್ರು.+ 20 ಯಾಕಂದ್ರೆ “ಆ ಬೆಟ್ಟ ಮುಟ್ಟೋ ಪ್ರಾಣಿಯನ್ನೂ ಕಲ್ಲು ಹೊಡಿದು ಸಾಯಿಸಬೇಕು” ಅನ್ನೋ ಆಜ್ಞೆಗೆ ಅವರು ತುಂಬ ಹೆದರಿಬಿಟ್ಟಿದ್ರು.+ 21 ಅಷ್ಟೇ ಅಲ್ಲ ಅವರು ನೋಡಿದ ವಿಷ್ಯ ಎಷ್ಟು ಭಯಂಕರವಾಗಿ ಇತ್ತಂದ್ರೆ ಮೋಶೆ “ನಾನು ಹೆದರಿ ನಡುಗ್ತಿದ್ದೀನಿ” ಅಂದ.+ 22 ಆದ್ರೆ ನೀವು ಚೀಯೋನ್ ಬೆಟ್ಟ+ ಮತ್ತು ಜೀವ ಇರೋ ದೇವರ ಪಟ್ಟಣದ ಹತ್ರ ಅಂದ್ರೆ ಸ್ವರ್ಗದ ಯೆರೂಸಲೇಮಿನ,+ ಸಭೆ ಸೇರಿರೋ ಲಕ್ಷಗಟ್ಟಲೆ ದೇವದೂತರ ಹತ್ರ ಬಂದಿದ್ದೀರ. 23 ಸ್ವರ್ಗದಲ್ಲಿ ಹೆಸ್ರು ಬರೆದಿರೋ ಮೊದ್ಲು ಹುಟ್ಟಿದ ಮಕ್ಕಳ ಸಭೆಗೆ,+ ಎಲ್ರ ನ್ಯಾಯಾಧೀಶನಾದ ದೇವರ ಹತ್ರ,+ ಪವಿತ್ರಶಕ್ತಿಗೆ ತಕ್ಕ ಹಾಗೆ ಜೀವಿಸೋ+ ಮತ್ತು ಪರಿಪೂರ್ಣವಾಗಿ ಇರೋ ನೀತಿವಂತರ ಹತ್ರ ಬಂದಿದ್ದೀರ.+ 24 ಹೊಸ ಒಪ್ಪಂದದ+ ಮಧ್ಯಸ್ಥನಾಗಿರೋ ಯೇಸು ಹತ್ರ,+ ಚಿಮಿಕಿಸಿದ ರಕ್ತದ ಹತ್ರ ಬಂದಿದ್ದೀರ. ಈ ರಕ್ತ ಹೇಬೆಲನ ರಕ್ತಕ್ಕಿಂತ ಚೆನ್ನಾಗಿ ಮಾತಾಡುತ್ತೆ.+
25 ಹಾಗಾಗಿ ನಿಮ್ಮ ಬಗ್ಗೆ ಜಾಗ್ರತೆ ವಹಿಸಿ. ದೇವರು ಮಾತಾಡುವಾಗ ಕೇಳಿಸ್ಕೊಳ್ಳದೇ ಇರಬೇಡಿ.* ಹಿಂದೆ ಭೂಮಿ ಮೇಲೆ ದೇವರು ಮಾತಾಡಿದಾಗ ಯಾರೆಲ್ಲ ಕೇಳಿಸ್ಕೊಂಡಿಲ್ವೋ ಅವ್ರಿಗೆಲ್ಲ ಶಿಕ್ಷೆ ಸಿಕ್ತು. ಅದಕ್ಕೇ ಸ್ವರ್ಗದಿಂದ ಮಾತಾಡೋ ದೇವರ ಮಾತನ್ನ ನಾವು ಕೇಳಿಸ್ಕೊಳ್ಳದಿದ್ರೆ ಇನ್ನೂ ಜಾಸ್ತಿ ಶಿಕ್ಷೆ ಸಿಗುತ್ತಲ್ವಾ!+ 26 ಆ ಕಾಲದಲ್ಲಿ ಆತನ ಧ್ವನಿ ಭೂಮಿಯನ್ನ ಅಲುಗಾಡಿಸ್ತು.+ ಆದ್ರೆ ಈಗ ಆತನು “ನಾನು ಇನ್ನೊಂದು ಸಲ ಭೂಮಿಯನ್ನ ಅಷ್ಟೇ ಅಲ್ಲ ಆಕಾಶವನ್ನೂ ಅಲುಗಾಡಿಸ್ತೀನಿ”+ ಅಂತ ಮಾತು ಕೊಟ್ಟಿದ್ದಾನೆ. 27 “ಇನ್ನೊಂದು ಸಲ” ಅನ್ನೋ ಮಾತು ಅಲುಗಾಡಿಸೋಕೆ ಆಗುವಂಥ ವಿಷ್ಯಗಳು ಅಂದ್ರೆ ದೇವರು ಮಾಡಿರದ ವಿಷ್ಯಗಳು ನಾಶ ಆಗುತ್ತೆ ಅನ್ನೋದನ್ನ ಸೂಚಿಸುತ್ತೆ. ಅಲುಗಾಡಿಸೋಕೆ ಆಗದ ವಿಷ್ಯಗಳು ಯಾವಾಗ್ಲೂ ಇರಬೇಕು ಅಂತಾನೇ ಅವು ನಾಶ ಆಗುತ್ತೆ. 28 ಯಾರೂ ಅಲುಗಾಡಿಸೋಕೆ ಆಗದ ಆಳ್ವಿಕೆಯಲ್ಲಿ ನಾವು ಇರ್ತಿವಿ. ಹಾಗಾಗಿ ದೇವರ ಅಪಾರ ಕೃಪೆಯನ್ನ ಪಡೀತಾ ಇರೋಣ. ಭಯಭಕ್ತಿಯಿಂದ ದೇವರು ಮೆಚ್ಚೋ ಹಾಗೆ ಪವಿತ್ರ ಸೇವೆ ಮಾಡ್ತಾ ಇರೋಣ. 29 ಯಾಕಂದ್ರೆ ನಮ್ಮ ದೇವರು ಸುಟ್ಟು ಬೂದಿ ಮಾಡೋ ಬೆಂಕಿ ಆಗಿದ್ದಾನೆ.+