ವಿಮೋಚನಕಾಂಡ
4 ಆದ್ರೆ ಮೋಶೆ “ಅವರು ನನ್ನನ್ನ ನಂಬದೆ ನನ್ನ ಮಾತು ಕೇಳದಿದ್ರೆ ಏನು ಮಾಡೋದು?+ ‘ಯೆಹೋವ ನಿನಗೆ ಕಾಣಿಸ್ಕೊಂಡೇ ಇಲ್ಲ’ ಅಂತ ಹೇಳಿದ್ರೆ ಏನು ಮಾಡ್ಲಿ?” ಅಂದ. 2 ಅದಕ್ಕೆ ಯೆಹೋವ “ನಿನ್ನ ಕೈಯಲ್ಲೇನಿದೆ?” ಅಂತ ಕೇಳಿದಾಗ “ಕೋಲು” ಅಂದ. 3 ಆಗ ದೇವರು “ಅದನ್ನ ನೆಲದ ಮೇಲೆ ಬಿಸಾಕು” ಅಂದನು. ಮೋಶೆ ಆ ಕೋಲನ್ನ ನೆಲದ ಮೇಲೆ ಬಿಸಾಕಿದಾಗ ಅದು ಹಾವಾಯ್ತು!+ ಕೂಡ್ಲೇ ಮೋಶೆ ಅಲ್ಲಿಂದ ದೂರ ಓಡಿದ. 4 ಯೆಹೋವ ಮೋಶೆಗೆ “ನಿನ್ನ ಕೈಚಾಚಿ ಅದ್ರ ಬಾಲ ಹಿಡಿ” ಅಂದನು. ಅವನು ಹಿಡಿದಾಗ ಅದು ಮತ್ತೆ ಕೋಲಾಯ್ತು. 5 ಆಮೇಲೆ ದೇವರು “ಇದನ್ನೇ ಅವ್ರ ಮುಂದೆ ಮಾಡು. ಆಗ ಅವರ ಪೂರ್ವಜರ ದೇವರು, ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು+ ಆದ ಯೆಹೋವ ನಿನಗೆ ಕಾಣಿಸ್ಕೊಂಡಿದ್ದಾನೆ+ ಅಂತ ನಂಬ್ತಾರೆ” ಅಂದನು.
6 ಯೆಹೋವ ಮೋಶೆ ಜೊತೆ ಇನ್ನೂ ಮಾತಾಡ್ತಾ “ದಯವಿಟ್ಟು ನಿನ್ನ ಕೈಯನ್ನ ನಿನ್ನ ಅಂಗಿಯ ಮೇಲ್ಭಾಗದ ಮಡಿಕೆಯಲ್ಲಿ ಇಡು” ಅಂದನು. ಆಗ ಮೋಶೆ ಕೈಯನ್ನ ಅಲ್ಲಿಟ್ಟ. ಕೈಯನ್ನ ಹೊರಗೆ ತೆಗೆದಾಗ ಅದು ಕುಷ್ಠಹಿಡಿದು ಹಿಮದ ಹಾಗೆ ಬೆಳ್ಳಗಾಗಿತ್ತು!+ 7 ಆಮೇಲೆ ದೇವರು “ನಿನ್ನ ಕೈಯನ್ನ ಮತ್ತೆ ಅಂಗಿಯ ಮೇಲ್ಭಾಗದ ಮಡಿಕೆಯಲ್ಲಿ ಇಡು” ಅಂದನು. ಮೋಶೆ ಕೈಯನ್ನ ಅಲ್ಲಿಟ್ಟ. ಕೈ ಹೊರಗೆ ತೆಗೆದಾಗ ಅದು ದೇಹದ ಉಳಿದ ಚರ್ಮದ ಹಾಗೇ ಆಗಿತ್ತು! 8 ಆಗ ದೇವರು “ನೀನು ಮೊದಲನೇ ಅದ್ಭುತ ಮಾಡಿದಾಗ ಅವರು ನಿನ್ನನ್ನ ನಂಬದಿದ್ರೆ ಎರಡನೇ ಅದ್ಭುತ ನೋಡಿದ ಮೇಲೆ ಖಂಡಿತ ನಂಬ್ತಾರೆ.+ 9 ಒಂದುವೇಳೆ ಈ ಎರಡು ಅದ್ಭುತ ನೋಡಿದ ಮೇಲೂ ಅವರು ನಂಬದಿದ್ರೆ, ನಿನ್ನ ಮಾತು ಕೇಳದಿದ್ರೆ ಆಗ ನೀನು ನೈಲ್ ನದಿಯಿಂದ ಸ್ವಲ್ಪ ನೀರು ತಗೊಂಡು ನೆಲದ ಮೇಲೆ ಸುರಿ. ಅದು ರಕ್ತ ಆಗುತ್ತೆ” ಅಂದನು.+
10 ಆದ್ರೆ ಮೋಶೆ ಯೆಹೋವನಿಗೆ “ನನ್ನನ್ನ ಕ್ಷಮಿಸು ಯೆಹೋವ. ನನಗೆ ಚೆನ್ನಾಗಿ ಮಾತಾಡೋಕೆ ಬರಲ್ಲ. ನಾನು ಮುಂಚೆನೂ ಸ್ಪಷ್ಟವಾಗಿ ಮಾತಾಡ್ತಾ ಇರಲಿಲ್ಲ. ನೀನು ನನ್ನ ಜೊತೆ ಮಾತಾಡೋಕೆ ಶುರುಮಾಡಿದ ಮೇಲೂ ಚೆನ್ನಾಗಿ ಮಾತಾಡೋಕೆ ಕಲ್ತಿಲ್ಲ”* ಅಂದ.+ 11 ಅದಕ್ಕೆ ಯೆಹೋವ “ಮನುಷ್ಯನಿಗೆ ಬಾಯಿ ಕೊಟ್ಟಿದ್ದು ಯಾರು? ಅವರನ್ನ ಮೂಕರಾಗಿ, ಕಿವುಡರಾಗಿ, ಕುರುಡರಾಗಿ ಮಾಡಿದ್ದು ಯಾರು? ಕಣ್ಣು ಕಾಣೋ ತರ ಮಾಡಿದವನು* ಯಾರು? ಯೆಹೋವನಾದ ನಾನೇ ಅಲ್ವಾ? 12 ನೀನು ಹೋಗು. ಮಾತಾಡೋಕೆ ನಾನು ಸಹಾಯ ಮಾಡ್ತೀನಿ.* ಏನು ಹೇಳಬೇಕಂತ ನಿನಗೆ ಕಲಿಸ್ಕೊಡ್ತೀನಿ” ಅಂದನು.+ 13 ಆದ್ರೆ ಅವನು “ಯೆಹೋವ, ನನ್ನನ್ನ ಕ್ಷಮಿಸು, ದಯವಿಟ್ಟು ಈ ಕೆಲಸಕ್ಕೆ ಬೇರೆ ಯಾರನ್ನಾದ್ರೂ ಕಳಿಸು” ಅಂದ. 14 ಆಗ ಯೆಹೋವನಿಗೆ ತುಂಬ ಕೋಪ ಬಂತು. ಆಮೇಲೆ ಆತನು “ಲೇವಿಯನಾದ ನಿನ್ನ ಅಣ್ಣ ಆರೋನ+ ತುಂಬ ಚೆನ್ನಾಗಿ ಮಾತಾಡ್ತಾನೆ. ನಿನ್ನನ್ನ ನೋಡೋಕೆ ಅವನು ಬರ್ತಿದ್ದಾನೆ. ನಿನ್ನನ್ನ ನೋಡಿದಾಗ ಅವನಿಗೆ ತುಂಬ ಖುಷಿ ಆಗುತ್ತೆ.+ 15 ನಾನು ನಿನಗೆ ಹೇಳಿದ್ದನ್ನೆಲ್ಲ ಅವನಿಗೆ ಹೇಳು.+ ನೀವಿಬ್ರು ಮಾತಾಡುವಾಗ ನಾನು ನಿಮ್ಮ ಜೊತೆ ಇರ್ತಿನಿ.+ ನೀವೇನು ಮಾಡಬೇಕು ಅಂತ ಕಲಿಸ್ತೀನಿ. 16 ಅವನು ನಿನ್ನ ಪ್ರತಿನಿಧಿಯಾಗಿ ನಿನಗೋಸ್ಕರ ಜನ್ರ ಹತ್ರ ಮಾತಾಡ್ತಾನೆ. ನೀನು ಅವನಿಗೆ ದೇವರ ತರ ಇರ್ತಿಯ.*+ 17 ಈ ಕೋಲನ್ನ ನೀನು ಕೈಯಲ್ಲಿ ಹಿಡ್ಕೊಂಡು ಹೋಗಿ ಅದ್ರಿಂದ ಅದ್ಭುತಗಳನ್ನ ಮಾಡ್ತಿಯ” ಅಂದನು.+
18 ಆಮೇಲೆ ಮೋಶೆ ತನ್ನ ಮಾವ ಇತ್ರೋ+ ಹತ್ರ ಬಂದು “ಈಜಿಪ್ಟಲ್ಲಿ ಇರೋ ನನ್ನ ಸಹೋದರರ ಹತ್ರ ಹೋಗಿ ಅವರು ಹೇಗಿದ್ದಾರಂತ ನಾನು ನೋಡಬೇಕು. ದಯವಿಟ್ಟು ನನಗೆ ಹೋಗೋಕೆ ಅನುಮತಿ ಕೊಡು” ಅಂದ. ಆಗ ಇತ್ರೋ “ಹೋಗು, ನಿನಗೆ ಒಳ್ಳೇದಾಗ್ಲಿ” ಅಂದ. 19 ಮೋಶೆ ಇನ್ನೂ ಮಿದ್ಯಾನಲ್ಲಿ ಇದ್ದಾಗ ಯೆಹೋವ ಅವನಿಗೆ “ನೀನು ಈಜಿಪ್ಟಿಗೆ ಹೋಗು. ಯಾಕಂದ್ರೆ ನಿನ್ನನ್ನ ಕೊಲ್ಲಬೇಕಂತ ಇದ್ದ ಎಲ್ರೂ ಸತ್ತು ಹೋಗಿದ್ದಾರೆ” ಅಂದನು.+
20 ಆಮೇಲೆ ಮೋಶೆ ತನ್ನ ಹೆಂಡತಿ, ಗಂಡುಮಕ್ಕಳನ್ನ ಕತ್ತೆ ಮೇಲೆ ಹತ್ತಿಸಿ ಈಜಿಪ್ಟಿಗೆ ಹೊರಟ. ಜೊತೆಗೆ ಸತ್ಯ ದೇವರು ಹೇಳಿದ್ದ ಕೋಲನ್ನೂ ತಗೊಂಡ. 21 ಆಮೇಲೆ ಯೆಹೋವ ಮೋಶೆಗೆ ಹೀಗಂದನು: “ಅದ್ಭುತ ಮಾಡೋಕೆ ನಿನಗೆ ಶಕ್ತಿ ಕೊಟ್ಟಿದ್ದೀನಿ. ನೀನು ಈಜಿಪ್ಟಿಗೆ ಹೋದ್ಮೇಲೆ ಫರೋಹನ ಮುಂದೆ ಆ ಎಲ್ಲ ಅದ್ಭುತ ಮಾಡು.+ ಆದ್ರೂ ಅವನು ನನ್ನ ಜನ್ರನ್ನ ಬಿಡಲ್ಲ.+ ಯಾಕಂದ್ರೆ ಅವನ ಹೃದಯ ಕಲ್ಲಾಗೋಕೆ ಬಿಡ್ತೀನಿ.+ 22 ನೀನು ಫರೋಹನಿಗೆ ‘ಯೆಹೋವ ಹೇಳೋದು ಏನಂದ್ರೆ “ಇಸ್ರಾಯೇಲ್ ನನ್ನ ಮಗ, ನನ್ನ ಮೊದಲನೇ ಮಗ.+ 23 ನನ್ನ ಮಗನನ್ನ ಕಳಿಸು. ಅವನು ನನ್ನ ಆರಾಧನೆ ಮಾಡಬೇಕು. ನೀನು ಅವನನ್ನ ಕಳಿಸೋಕೆ ಒಪ್ಪದಿದ್ರೆ ನಿನ್ನ ಮಗನನ್ನ, ನಿನ್ನ ಮೊದಲನೇ ಮಗನನ್ನ ಸಾಯಿಸ್ತೀನಿ”’ ಅಂತ ಹೇಳಬೇಕು.”+
24 ಮೋಶೆ ದಾರಿಯಲ್ಲಿ ಒಂದು ಛತ್ರದಲ್ಲಿದ್ದಾಗ ಯೆಹೋವ+ ಅವನಿಗೆ ಕಾಣಿಸ್ಕೊಂಡು ಅವನನ್ನ* ಸಾಯಿಸೋಕೆ+ ನೋಡ್ತಿದ್ದನು. 25 ಆಗ ಚಿಪ್ಪೋರ+ ಚೂಪಾದ ಕಲ್ಲು* ತಗೊಂಡು ತನ್ನ ಮಗನಿಗೆ ಸುನ್ನತಿ* ಮಾಡಿದಳು. ಅವನ ಮುಂದೊಗಲನ್ನ* ಅವನ* ಕಾಲಿಗೆ ಮುಟ್ಟಿಸಿ “ನೀನು ನನಗೆ ರಕ್ತದ ಮದುಮಗ” ಅಂದಳು. 26 ಹಾಗಾಗಿ ದೇವರು ಅವನನ್ನ ಬಿಟ್ಟುಬಿಟ್ಟನು. ಸುನ್ನತಿಯ ಕಾರಣದಿಂದಾನೇ ಆಗ ಅವಳು “ರಕ್ತದ ಮದುಮಗ” ಅಂದಿದ್ದಳು.
27 ಆಮೇಲೆ ಯೆಹೋವ ಆರೋನನಿಗೆ “ನೀನು ಕಾಡಿಗೆ ಹೋಗಿ ಮೋಶೆಯನ್ನ ನೋಡು” ಅಂದನು.+ ಆರೋನ ಹೋಗಿ ಸತ್ಯ ದೇವರ ಬೆಟ್ಟದಲ್ಲಿ+ ಮೋಶೆಯನ್ನ ಭೇಟಿಮಾಡಿ ಮುತ್ತು ಕೊಟ್ಟು ವಂದಿಸಿದ. 28 ಯೆಹೋವ ಹೇಳಿದ ಮಾತನ್ನೆಲ್ಲ ಮೋಶೆ ಆರೋನನಿಗೆ ಹೇಳಿದ.+ ಯಾವ ಅದ್ಭುತ ಮಾಡಬೇಕು ಅಂತ ದೇವರು ಆಜ್ಞೆ ಕೊಟ್ನೋ ಅದನ್ನೆಲ್ಲ ಹೇಳಿದ.+ 29 ಆಮೇಲೆ ಮೋಶೆ ಆರೋನ ಹೋಗಿ ಇಸ್ರಾಯೇಲ್ಯರ ಹಿರಿಯರನ್ನೆಲ್ಲ ಸೇರಿಸಿದ್ರು.+ 30 ಯೆಹೋವ ಮೋಶೆಗೆ ಹೇಳಿದ್ದ ಮಾತನ್ನೆಲ್ಲ ಆರೋನ ಅವರಿಗೆ ಹೇಳಿದ. ಮೋಶೆ ಜನ್ರ ಕಣ್ಮುಂದೆನೇ ಆ ಅದ್ಭುತಗಳನ್ನ+ ಮಾಡಿದ. 31 ಆಗ ಜನ್ರು ಮೋಶೆಯನ್ನ ನಂಬಿದ್ರು.+ ಯೆಹೋವ ಇಸ್ರಾಯೇಲ್ಯರನ್ನ+ ಗಮನಿಸಿದ್ದಾನೆ, ಅವರ ಕಷ್ಟ ನೋವನ್ನ ನೋಡಿದ್ದಾನೆ+ ಅಂತ ಕೇಳಿಸ್ಕೊಂಡಾಗ ಅವರು ದೇವರಿಗೆ ಅಡ್ಡಬಿದ್ರು.