ಯೋನ
3 ಯೆಹೋವ ಎರಡ್ನೇ ಸಲ ಯೋನನಿಗೆ+ 2 “ನೀನು ದೊಡ್ಡ ಪಟ್ಟಣವಾದ ನಿನೆವೆಗೆ+ ಹೋಗು, ನಾನು ಹೇಳೋ ಸಂದೇಶವನ್ನ ಜನ್ರಿಗೆ ಸಾರು” ಅಂದನು.
3 ಯೋನ ಯೆಹೋವನ ಮಾತಿಗೆ ಬೆಲೆಕೊಟ್ಟು ನಿನೆವೆಗೆ+ ಹೋದ.+ ನಿನೆವೆ ಎಷ್ಟು ದೊಡ್ಡ ಪಟ್ಟಣ ಆಗಿತ್ತಂದ್ರೆ ನಡ್ಕೊಂಡು ಆ ಪಟ್ಟಣದಲ್ಲೆಲ್ಲ ನೋಡೋಕೆ ಮೂರು ದಿನ ಹಿಡಿತಿತ್ತು. 4 ಯೋನ ಪಟ್ಟಣದೊಳಗೆ ಹೋದ. ಅವನು ಒಂದು ದಿನ ಪೂರ್ತಿ ನಡಿತಾ “ಇನ್ನು ಕೇವಲ 40 ದಿನಗಳಲ್ಲಿ ನಿನೆವೆ ನಾಶ ಆಗುತ್ತೆ” ಅಂತ ಸಾರಿದ.
5 ಆಗ ನಿನೆವೆ ಜನ ದೇವರ ಮೇಲೆ ನಂಬಿಕೆ ಇಟ್ರು.+ ಅಷ್ಟೇ ಅಲ್ಲ ಉಪವಾಸ ಮಾಡ್ತಾ ಶ್ರೀಮಂತರು, ಬಡವರು, ದೊಡ್ಡವರು, ಚಿಕ್ಕವರು ಎಲ್ರೂ ಗೋಣಿ ಬಟ್ಟೆ ಹಾಕೊಂಡ್ರು. 6 ಯೋನ ಸಾರಿದ ಸಂದೇಶ ನಿನೆವೆಯ ರಾಜನಿಗೆ ಮುಟ್ತು. ಆಗ ಅವನು ಸಿಂಹಾಸನದಿಂದ ಎದ್ದು ರಾಜವಸ್ತ್ರಗಳನ್ನ ತೆಗೆದಿಟ್ಟು ಗೋಣಿ ಬಟ್ಟೆ ಹಾಕಿ ಬೂದಿಯಲ್ಲಿ ಕೂತ. 7 ಅಷ್ಟೇ ಅಲ್ಲ ಅವನು ನಿನೆವೆ ಪಟ್ಟಣದಲ್ಲೆಲ್ಲಾ,
“ರಾಜನೂ ಅವನ ಅಧಿಕಾರಿಗಳೂ ಆಜ್ಞೆ ಕೊಡೋದು ಏನಂದ್ರೆ, ಮನುಷ್ಯನಾಗಲಿ ಪ್ರಾಣಿಯಾಗಲಿ ದನಕುರಿಗಳಾಗಲಿ ಏನೂ ತಿನ್ನಬಾರದು, ಒಂದು ತೊಟ್ಟು ನೀರೂ ಕುಡಿಬಾರದು. 8 ಎಲ್ಲ ಜನ ಗೋಣಿ ಬಟ್ಟೆ ಹಾಕೊಳ್ಳಬೇಕು, ಪ್ರಾಣಿಗಳಿಗೂ ಗೋಣಿ ಹೊದಿಸಬೇಕು. ಎಲ್ರೂ ದೇವರಿಗೆ ಬಿಡದೆ ಪ್ರಾರ್ಥಿಸಬೇಕು. ತಮ್ಮ ಕೆಟ್ಟ ನಡತೆಯನ್ನೂ ಹಿಂಸಾಚಾರವನ್ನೂ ಬಿಟ್ಟುಬಿಡಬೇಕು. 9 ಆಗ ಸತ್ಯ ದೇವರು ತನ್ನ ತೀರ್ಮಾನ ಬದಲಾಯಿಸಿ* ನಮ್ಮ ಮೇಲೆ ತನ್ನ ಕೋಪಾಗ್ನಿಯನ್ನ ಸುರಿಸದೇ ಇರಬಹುದು. ಆಗ ನಾವು ಬದುಕಿ ಉಳಿಬಹುದು” ಅಂದ.
10 ನಿನೆವೆಯ ಜನ ಮಾಡಿದ್ದನ್ನ ಮತ್ತು ಅವರು ತಮ್ಮ ಕೆಟ್ಟ ನಡತೆ ಬಿಟ್ಟುಬಿಟ್ಟಿದ್ದನ್ನ+ ಸತ್ಯ ದೇವರು ನೋಡಿದಾಗ ಆತನು ತನ್ನ ತೀರ್ಮಾನ ಬದಲಾಯಿಸಿದನು, ಅವ್ರ ಮೇಲೆ ತರ್ತಿನಿ ಅಂತ ಹೇಳಿದ ಕಷ್ಟವನ್ನ ತರಲಿಲ್ಲ.+