ಎರಡನೇ ಪೂರ್ವಕಾಲವೃತ್ತಾಂತ
7 ಸೊಲೊಮೋನ ಪ್ರಾರ್ಥಿಸಿದ ಮೇಲೆ+ ಆಕಾಶದಿಂದ ಬೆಂಕಿ ಬಂದು+ ಸರ್ವಾಂಗಹೋಮ ಬಲಿಗಳನ್ನ ಮತ್ತು ಬೇರೆ ಬಲಿಗಳನ್ನ ಸುಟ್ಟುಬಿಡ್ತು. ಯೆಹೋವನ ಮಹಿಮೆ ಆಲಯನ ತುಂಬಿಕೊಳ್ತು.+ 2 ಯೆಹೋವನ ಮಹಿಮೆ ಯೆಹೋವನ ಆಲಯವನ್ನ ತುಂಬಿಕೊಂಡಿದ್ರಿಂದ ಪುರೋಹಿತರಿಗೆ ಯೆಹೋವನ ಆಲಯದ ಒಳಗೆ ಹೋಗೋಕೆ ಆಗಲಿಲ್ಲ.+ 3 ಬೆಂಕಿ ಆಕಾಶದಿಂದ ಬಂದಿದ್ದನ್ನ ಮತ್ತು ಯೆಹೋವನ ಮಹಿಮೆ ಆಲಯನ ತುಂಬಿದ್ದನ್ನ ಎಲ್ಲ ಇಸ್ರಾಯೇಲ್ಯರು ನೋಡಿದ್ರು. ಆಗ ಅವರು ಮೊಣಕಾಲೂರಿ ನೆಲದ ತನಕ ಬಗ್ಗಿ ಯೆಹೋವನಿಗೆ ನಮಸ್ಕರಿಸಿದ್ರು. “ಯಾಕಂದ್ರೆ ಆತನು ಒಳ್ಳೆಯವನು. ಆತನ ಪ್ರೀತಿ ಶಾಶ್ವತ” ಅಂತ ಹೇಳಿ ಆತನಿಗೆ ಕೃತಜ್ಞತೆ ಹೇಳಿದ್ರು.
4 ಆಮೇಲೆ ರಾಜ ಮತ್ತು ಎಲ್ಲ ಜನ್ರು ಯೆಹೋವನ ಮುಂದೆ ಬಲಿಗಳನ್ನ ಕೊಟ್ರು.+ 5 ರಾಜ ಸೊಲೊಮೋನ 22,000 ಹೋರಿಗಳನ್ನ ಮತ್ತು 1,20,000 ಕುರಿಗಳನ್ನ ಬಲಿಯಾಗಿ ಕೊಟ್ಟ. ಹೀಗೆ ರಾಜ ಮತ್ತು ಜನ್ರೆಲ್ರೂ ಸತ್ಯ ದೇವರ ಆಲಯನ ಉದ್ಘಾಟನೆ ಮಾಡಿದ್ರು.+ 6 ಪುರೋಹಿತರು ತಮ್ಮನ್ನ ನೇಮಿಸಿದ್ದ ಸ್ಥಾನದಲ್ಲಿ ನಿಂತ್ಕೊಂಡಿದ್ರು. ಯೆಹೋವನಿಗಾಗಿ ಹಾಡುವಾಗ ಬಳಸೋ ಸಂಗೀತ ವಾದ್ಯಗಳನ್ನ ಹಿಡ್ಕೊಂಡು ಲೇವಿಯರೂ ಹಾಗೇ ನಿಂತಿದ್ರು.+ (ರಾಜ ದಾವೀದ “ಆತನ ಪ್ರೀತಿ ಶಾಶ್ವತ” ಅಂತ ಅವ್ರ ಜೊತೆ* ಹಾಡ್ತಾ ಯೆಹೋವನಿಗೆ ಧನ್ಯವಾದ ಹೇಳೋಕೆ ಈ ಸಂಗೀತ ವಾದ್ಯಗಳನ್ನ ತಯಾರಿಸಿದ್ದ.) ಅವ್ರ ಮುಂದೆ ಪುರೋಹಿತರು ಜೋರಾಗಿ ತುತ್ತೂರಿ ಊದುತ್ತಿದ್ರು.+ ಆಗ ಎಲ್ಲ ಇಸ್ರಾಯೇಲ್ಯರು ನಿಂತುಕೊಂಡಿದ್ರು.
7 ಯೆಹೋವನ ಆಲಯದ ಮುಂದೆ ಇದ್ದ ಅಂಗಳದ ಮಧ್ಯ ಸರ್ವಾಂಗಹೋಮ ಬಲಿಗಳನ್ನ+ ಮತ್ತು ಸಮಾಧಾನ ಬಲಿಗಳ ಕೊಬ್ಬಿದ ಭಾಗಗಳನ್ನ ಕೊಡೋಕೆ ಸೊಲೊಮೋನ ಆ ಜಾಗನ ಪವಿತ್ರ ಮಾಡಿದ್ದ. ಯಾಕಂದ್ರೆ ಸೊಲೊಮೋನ ಮಾಡಿಸಿದ್ದ ತಾಮ್ರದ ಯಜ್ಞವೇದಿಯಲ್ಲಿ+ ಸರ್ವಾಂಗಹೋಮ ಬಲಿ, ಧಾನ್ಯ ಅರ್ಪಣೆ+ ಮತ್ತು ಕೊಬ್ಬಿದ ಭಾಗಗಳು+ ಹಿಡಿಸ್ತಿರಲಿಲ್ಲ. 8 ಸೊಲೊಮೋನ ಎಲ್ಲ ಇಸ್ರಾಯೇಲ್ಯರ ಜೊತೆ ಸೇರಿ ಏಳು ದಿನದ ತನಕ ಹಬ್ಬ ಮಾಡಿದ.+ ಲೆಬೊ-ಹಾಮಾತಿನಿಂದ* ಈಜಿಪ್ಟಿನ ನಾಲೆ*+ ತನಕ ಇದ್ದ ಎಲ್ಲ ಜನ್ರು ಅಲ್ಲಿದ್ರು. 9 ಅವರು ಯಜ್ಞವೇದಿಯ ಉದ್ಘಾಟನೆ ಮತ್ತು ಹಬ್ಬನ ಏಳು ದಿನದ ತನಕ ಮಾಡಿದ್ರಿಂದ ಎಂಟನೇ ದಿನದಲ್ಲಿ* ಒಂದು ಪವಿತ್ರ ಸಮ್ಮೇಳನ ಇಟ್ಕೊಂಡ್ರು.+ 10 ಆಮೇಲೆ ಏಳನೇ ತಿಂಗಳಿನ 23ನೇ ದಿನ ಸೊಲೊಮೋನ ಜನ್ರನ್ನ ತಮ್ಮತಮ್ಮ ಮನೆಗೆ ಕಳಿಸಿಕೊಟ್ಟ. ಯೆಹೋವ ದಾವೀದನಿಗೆ, ಸೊಲೊಮೋನನಿಗೆ ಮತ್ತು ತನ್ನ ಜನ್ರಾದ ಇಸ್ರಾಯೇಲ್ಯರ ಕಡೆ ತೋರಿಸಿದ ಒಳ್ಳೇತನ ನೋಡಿ ಅವರು ಸಂತೋಷಪಟ್ರು.+ ಅವ್ರೆಲ್ಲ ಖುಷಿಖುಷಿಯಾಗಿ ತಮ್ಮತಮ್ಮ ಮನೆಗೆ ವಾಪಸ್ ಹೋದ್ರು.+
11 ಹೀಗೆ ಸೊಲೊಮೋನ ಯೆಹೋವನ ಆಲಯವನ್ನ ಮತ್ತು ತನ್ನ ಅರಮನೆಯನ್ನ ಕಟ್ಟಿಮುಗಿಸಿದ.+ ಯೆಹೋವನ ಆಲಯಕ್ಕಾಗಿ ಮತ್ತು ತನ್ನ ಅರಮನೆಗಾಗಿ ಏನೆಲ್ಲ ಮಾಡಬೇಕು ಅಂದ್ಕೊಂಡಿದ್ದನೋ ಅದನ್ನೆಲ್ಲ ಸೊಲೊಮೋನ ಯಶಸ್ವಿಕರವಾಗಿ ಮಾಡಿಮುಗಿಸಿದ.+ 12 ರಾತ್ರಿಹೊತ್ತಲ್ಲಿ ಯೆಹೋವ ಸೊಲೊಮೋನನಿಗೆ ಕಾಣಿಸ್ಕೊಂಡು+ ಹೀಗಂದನು “ನಾನು ನಿನ್ನ ಪ್ರಾರ್ಥನೆ ಕೇಳಿಸ್ಕೊಂಡೆ. ನಾನು ಈ ಜಾಗನ ನನಗೋಸ್ಕರ ಬಲಿ ಅರ್ಪಿಸೋ ಆಲಯವನ್ನಾಗಿ ಆರಿಸ್ಕೊಂಡಿದ್ದೀನಿ.+ 13 ನಾನು ಆಕಾಶವನ್ನು ಮುಚ್ಚಿ ಮಳೆಯಾಗದ ಹಾಗೆ ಮಾಡಿದಾಗ, ದೇಶನ ಹಾಳುಮಾಡೋಕೆ ಮಿಡತೆಗಳಿಗೆ ಆಜ್ಞೆ ಕೊಟ್ಟಾಗ ಮತ್ತು ನನ್ನ ಜನ್ರಿಗೆ ಅಂಟುರೋಗ ಬರೋ ಹಾಗೆ ಮಾಡಿದಾಗ, 14 ಒಂದುವೇಳೆ ನನ್ನ ಹೆಸ್ರಿರೋ ಜನ್ರು+ ತಮ್ಮನ್ನ ತಗ್ಗಿಸಿಕೊಂಡ್ರೆ,+ ಪ್ರಾರ್ಥಿಸಿ ನನ್ನನ್ನ ಹುಡುಕಿದ್ರೆ ಮತ್ತು ಕೆಟ್ಟ ದಾರಿನ ಬಿಟ್ಟು ತಿರುಗಿಕೊಂಡ್ರೆ+ ನಾನು ಸ್ವರ್ಗದಿಂದ ಅವ್ರ ಪ್ರಾರ್ಥನೆನ ಕೇಳಿಸಿಕೊಂಡು ಅವ್ರ ಪಾಪಗಳನ್ನ ಕ್ಷಮಿಸ್ತೀನಿ, ಅವ್ರ ದೇಶನ ಉದ್ಧಾರ ಮಾಡ್ತೀನಿ.+ 15 ಇವತ್ತಿಂದ ಈ ಜಾಗಕ್ಕೆ ಬಂದು ಯಾರು ಪ್ರಾರ್ಥಿಸ್ತಾರೋ ಅವ್ರ ಪ್ರಾರ್ಥನೆನ ನಾನು ಗಮನಕೊಟ್ಟು ಕೇಳಿಸಿಕೊಳ್ತೀನಿ ಮತ್ತು ಅವ್ರನ್ನ ನೋಡ್ತೀನಿ.+ 16 ನನ್ನ ಹೆಸ್ರು ಈ ಆಲಯದಲ್ಲಿ ಶಾಶ್ವತವಾಗಿ ಇರೋಕೆ ನಾನು ಇದನ್ನ ಆರಿಸಿಕೊಂಡಿದ್ದೀನಿ+ ಮತ್ತು ಪವಿತ್ರ ಮಾಡಿದ್ದೀನಿ. ನಾನು ಈ ಆಲಯವನ್ನ ಯಾವಾಗ್ಲೂ ನೋಡ್ಕೊಳ್ತೀನಿ ಮತ್ತು ಜೋಪಾನ ಮಾಡ್ತೀನಿ.+
17 ನಾನು ನಿನಗೆ ಕೊಟ್ಟ ಎಲ್ಲ ಆಜ್ಞೆನ ಪಾಲಿಸ್ತಾ, ನನ್ನ ನಿಯಮಗಳನ್ನ ಮತ್ತು ನನ್ನ ತೀರ್ಪುಗಳನ್ನ ಕೇಳಿ ನಿನ್ನ ಅಪ್ಪ ದಾವೀದನ ತರ ನಡಕೊಂಡ್ರೆ,+ 18 ನಾನು ನಿನ್ನ ರಾಜ ಸಿಂಹಾಸನನ ಯಾವಾಗ್ಲೂ ಇರೋ ತರ ಮಾಡ್ತೀನಿ.+ ನಾನು ನಿನ್ನ ಅಪ್ಪ ದಾವೀದಗೆ ‘ಇಸ್ರಾಯೇಲಿನ ಸಿಂಹಾಸನದ ಮೇಲೆ ಕೂತ್ಕೊಳ್ಳೋಕೆ ನಿನ್ನ ವಂಶದವ್ರಲ್ಲಿ ಯಾವಾಗ್ಲೂ ಒಬ್ಬ ಇದ್ದೇ ಇರ್ತಾನೆ’+ ಅಂತ ಮಾತುಕೊಟ್ಟಿದ್ದೆ. ಅದನ್ನ ನಿಜ ಮಾಡ್ತೀನಿ.+ 19 ಒಂದುವೇಳೆ ನೀನು ನನ್ನನ್ನ ಹಿಂಬಾಲಿಸದೆ, ನಾನು ನಿನಗೆ ಕೊಟ್ಟಿರೋ ನಿಯಮಗಳನ್ನ, ಆಜ್ಞೆಗಳನ್ನ ಪಾಲಿಸದೆ ಬೇರೆ ದೇವರುಗಳನ್ನ ಆರಾಧಿಸಿ ಅಡ್ಡಬಿದ್ರೆ,+ 20 ನಾನು ಇಸ್ರಾಯೇಲ್ಯರಿಗೆ ಕೊಟ್ಟ ನನ್ನ ದೇಶದಿಂದ ಅವ್ರನ್ನ ಅಳಿಸಿಹಾಕ್ತೀನಿ.+ ನನ್ನ ಹೆಸ್ರಿಗಾಗಿ ನಾನು ಪವಿತ್ರ ಮಾಡಿದ ಆಲಯನ ನನ್ನ ಕಣ್ಮುಂದಿನಿಂದ ದೂರ ತಳ್ಳಿಬಿಡ್ತೀನಿ. ಆಗ ಬೇರೆ ಜನ್ರು ಇಸ್ರಾಯೇಲ್ಯರನ್ನ ನೋಡಿ ತಮಾಷೆ ಮಾಡ್ತಾರೆ, ಅವರು ನಾಶ ಆಗೋದನ್ನ ನೋಡಿ ನಗ್ತಾರೆ.+ 21 ಈ ಆಲಯ ಹಾಳು ಕುಪ್ಪೆ ಆಗುತ್ತೆ. ಇದ್ರ ಮುಂದೆ ಹಾದು ಹೋಗೋರೆಲ್ಲ ಇದನ್ನ ಆಶ್ಚರ್ಯದಿಂದ ನೋಡಿ+ ‘ಯೆಹೋವ ಈ ದೇಶಕ್ಕೂ ಈ ಆಲಯಕ್ಕೂ ಎಂಥ ಗತಿ ಬರೋ ತರ ಮಾಡಿದ್ದಾನೆ’ ಅಂತ ಅಣಕಿಸ್ತಾರೆ.+ 22 ಆಮೇಲೆ ಅವರು ‘ಈ ಇಸ್ರಾಯೇಲ್ಯರು ಈಜಿಪ್ಟಿಂದ ತಮ್ಮನ್ನ ಬಿಡಿಸಿದ+ ತಮ್ಮ ಪೂರ್ವಜರ ದೇವರಾದ ಯೆಹೋವನನ್ನ ಬಿಟ್ಟು+ ಬೇರೆ ದೇವರುಗಳನ್ನ ತಮ್ಮ ದೇವರುಗಳನ್ನಾಗಿ ಮಾಡ್ಕೊಂಡ್ರು, ಅವುಗಳಿಗೆ ಅಡ್ಡಬಿದ್ರು, ಅವುಗಳನ್ನ ಆರಾಧಿಸಿದ್ರು.+ ಹಾಗಾಗಿ ಆತನು ಅವ್ರ ಮೇಲೆ ಈ ಕಷ್ಟವನ್ನ ತಂದನು’”+ ಅಂತಾರೆ.