ಯಾಜಕಕಾಂಡ
12 ಯೆಹೋವ ಮೋಶೆಗೆ ಇನ್ನೂ ಹೇಳಿದ್ದೇನಂದ್ರೆ 2 “ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ಒಬ್ಬ ಸ್ತ್ರೀಗೆ ಗಂಡು ಮಗು ಹುಟ್ಟಿದ್ರೆ ಅವಳು ಏಳು ದಿನ ಅಶುದ್ಧ. ತಿಂಗಳ ಮುಟ್ಟಿಂದ ಅಶುದ್ಧ ಆಗಿರೋ ತರಾನೇ ಈ ಸಮಯದಲ್ಲೂ ಅಶುದ್ಧ.+ 3 ಎಂಟನೇ ದಿನದಲ್ಲಿ ಆ ಮಗುಗೆ ಸುನ್ನತಿ* ಮಾಡಿಸಬೇಕು.+ 4 ಅವಳಿಗೆ ರಕ್ತಸ್ರಾವ ಆಗೋದ್ರಿಂದ ಶುದ್ಧ ಆಗೋಕೆ ಇನ್ನೂ 33 ದಿನ ಹಿಡಿಯುತ್ತೆ. ಅವಳು ಶುದ್ಧ ಆಗೋ ತನಕ ಅವಳು ಪವಿತ್ರವಾದ ಯಾವುದನ್ನೂ ಮುಟ್ಟಬಾರದು, ಆರಾಧನಾ ಸ್ಥಳದ ಒಳಗೆ ಬರಬಾರದು.
5 ಅವಳಿಗೆ ಹೆಣ್ಣು ಮಗು ಹುಟ್ಟಿದ್ರೆ 14 ದಿನ ಅಶುದ್ಧ. ತಿಂಗಳ ಮುಟ್ಟಿಂದ ಅಶುದ್ಧ ಆಗಿರೋ ತರಾನೇ ಈ ಸಮಯದಲ್ಲೂ ಅಶುದ್ಧ. ಅವಳಿಗೆ ರಕ್ತಸ್ರಾವ ಆಗೋದ್ರಿಂದ ಅವಳು ಶುದ್ಧ ಆಗೋಕೆ ಇನ್ನೂ 66 ದಿನ ಹಿಡಿಯುತ್ತೆ. 6 ಅವಳಿಗೆ ಗಂಡು ಮಗು ಹುಟ್ಟಿದ್ರೂ ಹೆಣ್ಣು ಮಗು ಹುಟ್ಟಿದ್ರೂ ಅವಳು ಅಶುದ್ಧ ಆಗಿದ್ದ ದಿನಗಳು ಮುಗಿದ ಮೇಲೆ ಸರ್ವಾಂಗಹೋಮ ಬಲಿಗಾಗಿ ಒಂದು ವರ್ಷದೊಳಗಿನ ಟಗರು,+ ಪಾಪಪರಿಹಾರಕ ಬಲಿಗಾಗಿ ಒಂದು ಪಾರಿವಾಳ ಮರಿ ಅಥವಾ ಒಂದು ಕಾಡುಪಾರಿವಾಳ ತರಬೇಕು. ಅವುಗಳನ್ನ ದೇವದರ್ಶನ ಡೇರೆಯ ಬಾಗಿಲ ಹತ್ರ ತಂದು ಪುರೋಹಿತನಿಗೆ ಕೊಡಬೇಕು. 7 ಪುರೋಹಿತ ಅದನ್ನ ಯೆಹೋವನ ಮುಂದೆ ಅರ್ಪಿಸಬೇಕು, ಅವಳಿಗಾಗಿ ಪ್ರಾಯಶ್ಚಿತ್ತ ಮಾಡಬೇಕು. ಇದ್ರಿಂದ ರಕ್ತಸ್ರಾವದಿಂದಾದ ಅಶುದ್ಧತೆ ಹೋಗಿ ಅವಳು ಶುದ್ಧ ಆಗ್ತಾಳೆ. ಸ್ತ್ರೀಗೆ ಒಂದು ಮಗು ಹುಟ್ಟಿದಾಗ ಪಾಲಿಸಬೇಕಾದ ನಿಯಮ ಇದೇ. 8 ಅವಳಿಗೆ ಟಗರು ಕೊಡೋಕೆ ಆಗದಿದ್ರೆ ಎರಡು ಕಾಡುಪಾರಿವಾಳ ಅಥವಾ ಎರಡು ಪಾರಿವಾಳ ಮರಿ ಕೊಡಬೇಕು.+ ಅವುಗಳಲ್ಲಿ ಒಂದನ್ನ ಸರ್ವಾಂಗಹೋಮ ಬಲಿಗಾಗಿ, ಇನ್ನೊಂದನ್ನ ಪಾಪಪರಿಹಾರಕ ಬಲಿಗಾಗಿ ಕೊಡಬೇಕು. ಪುರೋಹಿತ ಅವಳಿಗಾಗಿ ಪ್ರಾಯಶ್ಚಿತ್ತ ಮಾಡಬೇಕು. ಆಗ ಅವಳು ಶುದ್ಧ ಆಗ್ತಾಳೆ.’”