ಯಾಜಕಕಾಂಡ
13 ಮೋಶೆ ಮತ್ತು ಆರೋನನಿಗೆ ಯೆಹೋವ ಇನ್ನೂ ಹೇಳಿದ್ದೇನಂದ್ರೆ: 2 “ಒಬ್ಬನ ಚರ್ಮದ ಮೇಲೆ ಊತ, ಗಾಯದ ಮೇಲೆ ಗಟ್ಟಿ ಚರ್ಮ* ಅಥವಾ ಕಲೆ ಕಾಣಿಸ್ಕೊಂಡ್ರೆ, ಅದ್ರಲ್ಲಿ ಕುಷ್ಠರೋಗದ*+ ಲಕ್ಷಣಗಳು ಕಂಡುಬಂದ್ರೆ ಅವನನ್ನ ಪುರೋಹಿತರಾದ ಆರೋನನ ಹತ್ರ ಅಥವಾ ಅವನ ಮಕ್ಕಳಲ್ಲಿ ಒಬ್ಬನ ಹತ್ರ ಕರ್ಕೊಂಡು ಬರಬೇಕು.+ 3 ಪುರೋಹಿತ ಆ ವ್ಯಕ್ತಿ ಚರ್ಮದ ಮೇಲಿರೋ ಸೋಂಕನ್ನ ಪರೀಕ್ಷಿಸಬೇಕು. ಸೋಂಕು ಇರೋ ಚರ್ಮದ ಮೇಲಿನ ಕೂದಲು ಬೆಳ್ಳಗಾಗಿದ್ರೆ, ಆ ಸೋಂಕು ಚರ್ಮದ ಒಳಗೆ ಹೋಗಿದ್ರೆ ಅದು ಕುಷ್ಠರೋಗ. ಪುರೋಹಿತ ಅದನ್ನ ಪರೀಕ್ಷಿಸಿ, ಆಮೇಲೆ ಆ ವ್ಯಕ್ತಿಯನ್ನ ಅಶುದ್ಧ ಅಂತ ಎಲ್ರಿಗೂ ಹೇಳಬೇಕು. 4 ಒಂದುವೇಳೆ ಚರ್ಮದ ಮೇಲಿರೋ ಕಲೆ ಬೆಳ್ಳಗಿದ್ರೆ ಚರ್ಮದ ಒಳಭಾಗದ ತನಕ ಹೋಗಿಲ್ಲಾಂದ್ರೆ, ಆ ಕಲೆ ಮೇಲಿರೋ ಕೂದಲು ಬೆಳ್ಳಗೆ ಆಗಿಲ್ಲಾಂದ್ರೆ ಪುರೋಹಿತ ಅವನನ್ನ ಬೇರೆಯವರಿಂದ ಏಳು ದಿನ ದೂರ ಇಡಬೇಕು.+ 5 ಏಳನೇ ದಿನ ಪುರೋಹಿತ ಮತ್ತೆ ಪರೀಕ್ಷಿಸಬೇಕು. ಆ ಸೋಂಕು ಮೊದಲಿನ ತರಾನೇ ಇದೆ, ಚರ್ಮದಲ್ಲಿ ಹರಡಿಲ್ಲಾಂದ್ರೆ ಪುರೋಹಿತ ಅವನನ್ನ ಬೇರೆಯವರಿಂದ ಇನ್ನೂ ಏಳು ದಿನ ದೂರ ಇಡಬೇಕು.
6 ಏಳನೇ ದಿನ ಪುರೋಹಿತ ಮತ್ತೆ ಪರೀಕ್ಷಿಸಬೇಕು. ಆಗ ಆ ಸೋಂಕು ಕಮ್ಮಿ ಆಗಿದ್ರೆ, ಚರ್ಮದಲ್ಲಿ ಹರಡಿಲ್ಲಾಂದ್ರೆ ಆ ವ್ಯಕ್ತಿ ಶುದ್ಧ ಅಂತ ಪುರೋಹಿತ ಎಲ್ರಿಗೂ ಹೇಳಬೇಕು.+ ಯಾಕಂದ್ರೆ ಅದು ಕುಷ್ಠ ಅಲ್ಲ, ಬರೀ ಗಾಯದ ಮೇಲೆ ಇರೋ ಗಟ್ಟಿ ಚರ್ಮ ಅಷ್ಟೆ. ಆ ವ್ಯಕ್ತಿ ತನ್ನ ಬಟ್ಟೆ ಒಗೆದುಕೊಳ್ಳಬೇಕು. ಆಗ ಅವನು ಶುದ್ಧ ಆಗ್ತಾನೆ. 7 ಆದ್ರೆ ಅವನನ್ನ ಮೊದಲನೇ ಸಲ ಬೇರೆಯವರಿಂದ ದೂರ ಇಟ್ಟಾಗ ಆ ಏಳು ದಿನದಲ್ಲಿ ಚರ್ಮದ ಮೇಲಿದ್ದ ಸೋಂಕು ಬೇರೆ ಕಡೆಗೂ ಹರಡಿದ್ರೆ ಮತ್ತೆ ಪುರೋಹಿತನಿಗೆ ತೋರಿಸಬೇಕು. 8 ಆಗ ಪುರೋಹಿತ ಆ ಸೋಂಕು ಹರಡಿದ್ಯಾ ಅಂತ ನೋಡಬೇಕು. ಹರಡಿದ್ರೆ ಆ ವ್ಯಕ್ತಿ ಅಶುದ್ಧ ಅಂತ ಎಲ್ರಿಗೂ ಹೇಳಬೇಕು. ಯಾಕಂದ್ರೆ ಅದು ಕುಷ್ಠರೋಗ.+
9 ಒಬ್ಬ ವ್ಯಕ್ತಿಯಲ್ಲಿ ಕುಷ್ಠದ ಲಕ್ಷಣಗಳು ಕಾಣಿಸ್ಕೊಂಡ್ರೆ ಅವನನ್ನ ಪುರೋಹಿತನ ಹತ್ರ ಕರ್ಕೊಂಡು ಬರಬೇಕು. 10 ಪುರೋಹಿತ ಅವನನ್ನ ಪರೀಕ್ಷಿಸಬೇಕು.+ ಚರ್ಮ ಊದ್ಕೊಂಡು ಬೆಳ್ಳಗಾಗಿದ್ರೆ, ಅದ್ರ ಮೇಲಿರೋ ಕೂದಲು ಬೆಳ್ಳಗಾಗಿದ್ರೆ, ಊತದ ಮೇಲೆ ತೆರೆದ ಹುಣ್ಣಾಗಿದ್ರೆ+ 11 ಅದು ತುಂಬಾ ದಿನ ಇರೋ ಕುಷ್ಠರೋಗ. ಅವನು ಅಶುದ್ಧ ಅಂತ ಪುರೋಹಿತ ಎಲ್ರಿಗೂ ಹೇಳಬೇಕು. ಅವನು ಅಶುದ್ಧ ಆಗಿರೋದ್ರಿಂದ ಅವನನ್ನ ಪರೀಕ್ಷಿಸೋಕ್ಕಂತ ಮತ್ತೆ ದೂರ ಇಡಬೇಕಾಗಿಲ್ಲ.+ 12 ಆದ್ರೆ ಒಬ್ಬನ ದೇಹದ ಮೇಲೆಲ್ಲ ಕುಷ್ಠ ಹರಡ್ಕೊಂಡಿದ್ರೆ ಪುರೋಹಿತ ನೋಡಿದಾಗ ಅದು ತಲೆಯಿಂದ ಕಾಲಿನ ತನಕ 13 ಚರ್ಮದ ಮೇಲೆಲ್ಲ ಹರಡಿದೆ ಅಂತ ಗೊತ್ತಾದ್ರೆ ಆ ಕುಷ್ಠ ಬೇರೆಯವರಿಗೆ ಹರಡಲ್ಲ ಅಂತ* ಎಲ್ರಿಗೂ ಹೇಳಬೇಕು. ಅವನ ಚರ್ಮವೆಲ್ಲ ಬೆಳ್ಳಗಿದ್ರೂ ಅವನು ಅಶುದ್ಧನಲ್ಲ. 14 ಆದ್ರೆ ಹುಣ್ಣು ಕಾಣಿಸ್ಕೊಂಡ್ರೆ ಅವನು ಅಶುದ್ಧ. 15 ಪುರೋಹಿತ ಆ ಹುಣ್ಣನ್ನ ನೋಡಿದ ಮೇಲೆ ಅವನನ್ನ ಅಶುದ್ಧ ಅಂತ ಎಲ್ರಿಗೂ ಹೇಳಬೇಕು.+ ಆ ಹುಣ್ಣು ಅಶುದ್ಧ. ಯಾಕಂದ್ರೆ ಅದು ಕುಷ್ಠ.+ 16 ಒಂದುವೇಳೆ ಆ ಹುಣ್ಣು ವಾಸಿ ಆದ್ರೆ ಅವನು ಪುರೋಹಿತನ ಹತ್ರ ಬರಬೇಕು. 17 ಆಗ ಪುರೋಹಿತ ಅವನನ್ನ ಪರೀಕ್ಷಿಸಬೇಕು.+ ಆ ಸೋಂಕು ವಾಸಿ ಆಗಿದ್ರೆ ಅವನನ್ನ ಶುದ್ಧ ಅಂತ ಪುರೋಹಿತ ಎಲ್ರಿಗೂ ಹೇಳಬೇಕು.
18 ಒಬ್ಬನಿಗೆ ಚರ್ಮದ ಮೇಲೆ ಗುಳ್ಳೆ ಬಂದು ವಾಸಿಯಾದ್ರೂ 19 ಗುಳ್ಳೆ ಇದ್ದ ಜಾಗ ಊದ್ಕೊಂಡು ಚರ್ಮ ಬೆಳ್ಳಗಾದ್ರೆ ಅಥವಾ ಕೆಂಪು-ಬಿಳಿ ಮಿಶ್ರಿತ ಕಲೆ ಆದ್ರೆ ಅದನ್ನ ಪುರೋಹಿತನಿಗೆ ತೋರಿಸಬೇಕು. 20 ಪುರೋಹಿತ ಅದನ್ನ ಪರೀಕ್ಷೆ ಮಾಡಿದಾಗ+ ಅದು ಚರ್ಮದ ಒಳಗಡೆ ತನಕ ಹೋಗಿದ್ರೆ, ಅದ್ರ ಮೇಲಿನ ಕೂದಲು ಬೆಳ್ಳಗಾಗಿದ್ರೆ ಆ ವ್ಯಕ್ತಿ ಅಶುದ್ಧ ಅಂತ ಪುರೋಹಿತ ಎಲ್ರಿಗೂ ಹೇಳಬೇಕು. ಅದು ಗುಳ್ಳೆ ಇದ್ದ ಜಾಗದಿಂದ ಶುರುವಾದ ಕುಷ್ಠರೋಗ. 21 ಆ ಜಾಗದಲ್ಲಿ ಬಿಳಿ ಕೂದಲು ಇಲ್ಲಾಂದ್ರೆ ಆ ಕಲೆ ಚರ್ಮದ ಒಳಗೆ ಹೋಗಿಲ್ಲಾಂದ್ರೆ ಅದು ಮಾಸಿದ್ರೆ ಪುರೋಹಿತ ಆ ವ್ಯಕ್ತಿನ ಬೇರೆಯವರಿಂದ ಏಳು ದಿನ ದೂರ ಇಡಬೇಕು.+ 22 ಆ ಕಲೆ ಚರ್ಮದ ಮೇಲೆ ಹರಡಿರೋದು ಕಂಡ್ರೆ ಅವನು ಅಶುದ್ಧ ಅಂತ ಪುರೋಹಿತ ಎಲ್ರಿಗೂ ಹೇಳಬೇಕು. ಅದು ಕುಷ್ಠರೋಗ. 23 ಆದ್ರೆ ಆ ಕಲೆ ಇದ್ದಲ್ಲೇ ಇದ್ದು ಹರಡದೇ ಇದ್ರೆ ಅದು ಗುಳ್ಳೆಯಿಂದಾದ ಉರಿಯೂತ ಅಷ್ಟೆ. ಅದು ಕುಷ್ಠ ಅಲ್ಲ. ಹಾಗಾಗಿ ಆ ವ್ಯಕ್ತಿ ಶುದ್ಧ ಅಂತ ಪುರೋಹಿತ ಎಲ್ರಿಗೂ ಹೇಳಬೇಕು.+
24 ಒಬ್ಬ ವ್ಯಕ್ತಿಗೆ ಬೆಂಕಿ ತಾಗಿ ಗಾಯ ಆಗಿ ಆ ಹಸಿ ಗಾಯ ಮಾಸಿ ಕೆಂಪು-ಬಿಳಿ ಮಿಶ್ರಿತ ಕಲೆ ಅಥವಾ ಬಿಳಿ ಕಲೆಯಾದ್ರೆ 25 ಅದನ್ನ ಪುರೋಹಿತ ಪರೀಕ್ಷಿಸಬೇಕು. ಆ ಕಲೆ ಮೇಲೆ ಇರೋ ಕೂದಲು ಬೆಳ್ಳಗಾದ್ರೆ ಆ ಕಲೆ ಚರ್ಮದ ಒಳಗೆ ಹೋಗಿದ್ರೆ ಅದು ಸುಟ್ಟಗಾಯದಿಂದ ಶುರುವಾದ ಕುಷ್ಠ. ಪುರೋಹಿತ ಆ ವ್ಯಕ್ತಿನ ಅಶುದ್ಧ ಅಂತ ಎಲ್ರಿಗೂ ಹೇಳಬೇಕು. ಅದು ಕುಷ್ಠರೋಗ. 26 ಆದ್ರೆ ಪುರೋಹಿತ ಆ ಕಲೆಯನ್ನ ಪರೀಕ್ಷಿಸುವಾಗ ಅದ್ರ ಮೇಲೆ ಬಿಳಿ ಕೂದಲು ಇಲ್ಲಾಂದ್ರೆ ಆ ಕಲೆ ಚರ್ಮದ ಒಳಗೆ ಹೋಗಿಲ್ಲಾಂದ್ರೆ ಅದು ಮಾಸಿದ್ರೆ ಪುರೋಹಿತ ಅವನನ್ನ ಬೇರೆಯವರಿಂದ ಏಳು ದಿನ ದೂರ ಇಡಬೇಕು.+ 27 ಏಳನೇ ದಿನ ಪುರೋಹಿತ ಆ ವ್ಯಕ್ತಿನ ಪರೀಕ್ಷಿಸಬೇಕು. ಆಗ ಆ ಕಲೆ ಚರ್ಮದ ಮೇಲೆಲ್ಲ ಹರಡಿದ್ರೆ ಅವನು ಅಶುದ್ಧ ಅಂತ ಪುರೋಹಿತ ಎಲ್ರಿಗೂ ಹೇಳಬೇಕು. ಅದು ಕುಷ್ಠರೋಗ. 28 ಆದ್ರೆ ಆ ಕಲೆ ಇದ್ದಲ್ಲೇ ಇದೆ, ಚರ್ಮದಲ್ಲಿ ಎಲ್ಲೂ ಹರಡಿಲ್ಲ, ಮಾಸಿ ಹೋಗಿದ್ರೆ ಅದು ಕುಷ್ಠ ಅಲ್ಲ, ಸುಟ್ಟಗಾಯದಿಂದ ಆದ ಊತ ಅಷ್ಟೆ. ಹಾಗಾಗಿ ಆ ವ್ಯಕ್ತಿ ಶುದ್ಧ ಅಂತ ಪುರೋಹಿತ ಎಲ್ರಿಗೂ ಹೇಳಬೇಕು.
29 ಒಬ್ಬ ಗಂಡಸು ಅಥವಾ ಹೆಂಗಸಿಗೆ ತಲೆ ಮೇಲೋ ಗಲ್ಲದ ಮೇಲೋ ಸೋಂಕಾದ್ರೆ 30 ಪುರೋಹಿತ ಅದನ್ನ ಪರೀಕ್ಷಿಸಬೇಕು.+ ಆ ಸೋಂಕು ಚರ್ಮದ ಒಳಗೆ ಹೋಗಿದ್ರೆ ಅಥವಾ ಅದ್ರ ಮೇಲೆ ಹಳದಿ ಬಣ್ಣದ ತೆಳುವಾದ ಕೂದಲಿದ್ರೆ ಆ ವ್ಯಕ್ತಿ ಅಶುದ್ಧ ಅಂತ ಪುರೋಹಿತ ಎಲ್ರಿಗೂ ಹೇಳಬೇಕು. ಅದು ತಲೆಯ ಚರ್ಮದಲ್ಲಿ ಅಥವಾ ಗಡ್ಡದಲ್ಲಿ ಆಗೋ ಸೋಂಕು. ಅದು ತಲೆ ಅಥವಾ ಗಲ್ಲದ ಮೇಲೆ ಬರೋ ಕುಷ್ಠ. 31 ಆದ್ರೆ ಪುರೋಹಿತ ನೋಡಿದಾಗ ಸೋಂಕು ಚರ್ಮದ ಒಳಗೆ ಹೋಗಿಲ್ಲಾಂದ್ರೂ ಅದ್ರಲ್ಲಿ ಕಪ್ಪು ಕೂದಲು ಇಲ್ಲಾಂದ್ರೂ ಪುರೋಹಿತ ಆ ವ್ಯಕ್ತಿನ ಬೇರೆಯವರಿಂದ ಏಳು ದಿನ ದೂರ ಇಡಬೇಕು.+ 32 ಏಳನೇ ದಿನ ಪುರೋಹಿತ ಮತ್ತೆ ಆ ಸೋಂಕನ್ನ ಪರೀಕ್ಷಿಸಬೇಕು. ಅದು ಹರಡಿಲ್ಲಾಂದ್ರೆ ಅದ್ರಲ್ಲಿ ಹಳದಿ ಕೂದಲು ಬೆಳೆದಿಲ್ಲಾಂದ್ರೆ ಆ ಸೋಂಕು ಚರ್ಮದ ಒಳಗೆ ಹೋಗಿಲ್ಲಾಂದ್ರೆ 33 ಆ ವ್ಯಕ್ತಿ ತನ್ನ ತಲೆಕೂದಲು, ಗಡ್ಡ ತೆಗಿಬೇಕು. ಆದ್ರೆ ಸೋಂಕು ಇರೋ ಜಾಗದಲ್ಲಿ ಕೂದಲು ತೆಗಿಬಾರದು. ಆಮೇಲೆ ಪುರೋಹಿತ ಆ ವ್ಯಕ್ತಿನ ಪರೀಕ್ಷಿಸೋಕೆ ಬೇರೆಯವರಿಂದ ಏಳು ದಿನ ದೂರ ಇಡಬೇಕು.
34 ಏಳನೇ ದಿನ ಪುರೋಹಿತ ಆ ಸೋಂಕನ್ನ ಮತ್ತೆ ಪರೀಕ್ಷಿಸಬೇಕು. ತಲೆಬುರುಡೆ, ಗಡ್ಡದಲ್ಲಿದ್ದ ಸೋಂಕು ಚರ್ಮದ ಮೇಲೆ ಹರಡಿಲ್ಲಾಂದ್ರೆ, ಚರ್ಮದ ಒಳಗೆ ಹೋಗಿಲ್ಲಾಂದ್ರೆ ಆ ವ್ಯಕ್ತಿ ಶುದ್ಧ ಅಂತ ಪುರೋಹಿತ ಎಲ್ರಿಗೂ ಹೇಳಬೇಕು. ಆ ವ್ಯಕ್ತಿ ತನ್ನ ಬಟ್ಟೆಗಳನ್ನ ಒಗೆದುಕೊಳ್ಳಬೇಕು. ಆಗ ಅವನು ಶುದ್ಧ ಆಗ್ತಾನೆ. 35 ಚರ್ಮದ ಮೇಲೆ ಸೋಂಕು ಮತ್ತೆ ಕಾಣಿಸ್ಕೊಂಡ್ರೆ 36 ಪುರೋಹಿತ ಅವನನ್ನ ಪರೀಕ್ಷಿಸಬೇಕು. ಸೋಂಕು ಅವನ ಚರ್ಮದ ಮೇಲೆ ಹರಡಿದ್ರೆ ಅದ್ರ ಮೇಲೆ ಹಳದಿ ಕೂದಲು ಇದ್ಯಾ ಇಲ್ವಾ ಅಂತ ನೋಡಬೇಕಾಗಿಲ್ಲ. ಅವನು ಅಶುದ್ಧನೇ. 37 ಆದ್ರೆ ಅವನನ್ನ ಪರೀಕ್ಷಿಸಿದಾಗ ಸೋಂಕು ಹರಡಿಲ್ಲಾಂದ್ರೆ, ಅದ್ರ ಮೇಲೆ ಕಪ್ಪು ಕೂದಲು ಬೆಳೆದಿದ್ರೆ ಸೋಂಕು ವಾಸಿ ಆಗಿದೆ ಅಂತರ್ಥ. ಅವನು ಶುದ್ಧ ಆಗಿದ್ದಾನೆ. ಅವನು ಶುದ್ಧ ಅಂತ ಪುರೋಹಿತ ಎಲ್ರಿಗೂ ಹೇಳಬೇಕು.+
38 ಒಬ್ಬ ಗಂಡಸು ಅಥವಾ ಹೆಂಗಸಿಗೆ ಚರ್ಮದ ಮೇಲೆ ಬಿಳಿ ಕಲೆಗಳಾದ್ರೆ 39 ಪುರೋಹಿತ ಪರೀಕ್ಷಿಸಬೇಕು.+ ಅದು ನಸು ಬಿಳಿ ಬಣ್ಣದ ಕಲೆಗಳಾಗಿದ್ರೆ ಅದ್ರಿಂದ ಅಪಾಯ ಇಲ್ಲ. ಅದು ಚರ್ಮದ ಮೇಲೆ ಇರೋ ಗುಳ್ಳೆ ಅಷ್ಟೇ. ಆ ವ್ಯಕ್ತಿ ಶುದ್ಧ.
40 ಒಬ್ಬನಿಗೆ ಕೂದಲು ಉದುರಿ ತಲೆ ಬೋಳಾದ್ರೆ ಅವನು ಅಶುದ್ಧ ಅಲ್ಲ, ಶುದ್ಧ. 41 ಅವನ ತಲೆಯ ಮುಂಭಾಗದಲ್ಲಿ ಕೂದಲು ಉದುರಿ ಬೋಳಾದ್ರೆ ಅಶುದ್ಧನಲ್ಲ, ಶುದ್ಧ. 42 ಆದ್ರೆ ಬೋಳಾದ ಜಾಗದಲ್ಲಿ ಅಥವಾ ಹಣೆ ಮೇಲೆ ಕೆಂಪು-ಬಿಳಿ ಮಿಶ್ರಿತ ಬಣ್ಣದ ಹುಣ್ಣಾದ್ರೆ ಅದು ತಲೆಬುರುಡೆ ಅಥವಾ ಹಣೆ ಮೇಲೆ ಬಂದಿರೋ ಕುಷ್ಠ. 43 ಪುರೋಹಿತ ಅವನನ್ನ ಪರೀಕ್ಷಿಸಬೇಕು. ಬೋಳಾದ ಜಾಗದ ಮೇಲೆ ಅಥವಾ ಹಣೆ ಮೇಲೆ ಸೋಂಕಿನಿಂದಾಗಿ ಕೆಂಪು-ಬಿಳಿ ಮಿಶ್ರಿತ ಬಣ್ಣದ ಊತ ಇದ್ರೆ, ಅದು ಚರ್ಮದ ಮೇಲೆ ಕುಷ್ಠದ ಹಾಗೆ ಕಾಣಿಸಿದ್ರೆ 44 ಅವನು ಕುಷ್ಠರೋಗಿ. ಅವನು ಅಶುದ್ಧ. ಹಣೆ ಮೇಲೆ ಕುಷ್ಠ ಇರೋದ್ರಿಂದ ಅವನು ಅಶುದ್ಧ ಅಂತ ಪುರೋಹಿತ ಎಲ್ರಿಗೂ ಹೇಳಬೇಕು. 45 ಆ ಕುಷ್ಠರೋಗಿ ಹರಿದಿರೋ ಬಟ್ಟೆ ಹಾಕೊಳ್ಳಬೇಕು, ತಲೆ ಬಾಚಬಾರದು. ಬಟ್ಟೆಯಿಂದ ಬಾಯಿ* ಮುಚ್ಕೊಳ್ಳಬೇಕು. ‘ನಾನು ಅಶುದ್ಧ, ನಾನು ಅಶುದ್ಧ’ ಅಂತ ಕೂಗಿಕೊಳ್ಳಬೇಕು. 46 ಆ ರೋಗ ಇರೋ ತನಕ ಅವನು ಅಶುದ್ಧನೇ. ಹಾಗಾಗಿ ಜನ್ರಿಂದ ದೂರ ಅಂದ್ರೆ ಪಾಳೆಯದ ಹೊರಗೆ ಅವನು ವಾಸ ಮಾಡಬೇಕು.+
47 ಕುಷ್ಠರೋಗ ಉಣ್ಣೆ ಬಟ್ಟೆಯಲ್ಲಿ ನಾರಿನ ಬಟ್ಟೆಯಲ್ಲಿ 48 ಉಣ್ಣೆ ಬಟ್ಟೆ ಅಥವಾ ನಾರಿನ ಬಟ್ಟೆಯ ನೇಯ್ಗೆಯಲ್ಲಿ ನೂಲಿನಲ್ಲಿ ಚರ್ಮದಲ್ಲಿ ಚರ್ಮದಿಂದ ಮಾಡಿದ ವಸ್ತು ಮೇಲೆ ಕಾಣಿಸ್ಕೊಂಡ್ರೆ 49 ಮತ್ತು ಬಟ್ಟೆ, ಚರ್ಮ, ನೇಯ್ಗೆ, ನೂಲು ಅಥವಾ ಚರ್ಮದ ವಸ್ತುವಿನಲ್ಲಿ ಆ ರೋಗದಿಂದ ಹಳದಿ-ಹಸಿರು ಅಥವಾ ನಸುಗೆಂಪು ಬಣ್ಣದ ಕಲೆ ಇದ್ರೆ ಅದಕ್ಕೆ ಕುಷ್ಠ ಬಂದಿದೆ ಅಂತರ್ಥ. ಹಾಗಾಗಿ ಆ ವಸ್ತುವನ್ನ ಪುರೋಹಿತನಿಗೆ ತಂದು ತೋರಿಸಬೇಕು. 50 ಪುರೋಹಿತ ಆ ಕುಷ್ಠವನ್ನ ಪರೀಕ್ಷಿಸಬೇಕು, ಆ ವಸ್ತುವನ್ನ ಏಳು ದಿನ ದೂರ ಇಡಬೇಕು.+ 51 ಏಳನೇ ದಿನ ಆ ಬಟ್ಟೆ, ನೇಯ್ಗೆ, ನೂಲು ಅಥವಾ ಚರ್ಮವನ್ನ (ಆ ಚರ್ಮವನ್ನ ಯಾವುದಕ್ಕೇ ಬಳಸ್ತಾ ಇರಲಿ ಅದನ್ನ) ಪರೀಕ್ಷಿಸಿದಾಗ ಅದ್ರ ಮೇಲೆ ರೋಗ ಹರಡಿದೆ ಅಂತ ಗೊತ್ತಾದ್ರೆ ಅದು ಅಪಾಯಕರ ಕುಷ್ಠ. ಅದು ಅಶುದ್ಧ.+ 52 ಆಗ ಅವನು ಕುಷ್ಠ ಇರೋ ಉಣ್ಣೆ ಬಟ್ಟೆ ಅಥವಾ ನಾರಿನ ಬಟ್ಟೆ, ಅವುಗಳ ನೇಯ್ಗೆ, ನೂಲು, ಚರ್ಮದ ಯಾವುದೇ ವಸ್ತುವನ್ನ ಸುಟ್ಟುಬಿಡಬೇಕು. ಯಾಕಂದ್ರೆ ಅದು ಅಪಾಯಕಾರಿ ಕುಷ್ಠ. ಅದನ್ನ ಬೆಂಕಿಯಲ್ಲಿ ಸುಡಬೇಕು.
53 ಆದ್ರೆ ಪುರೋಹಿತ ಬಟ್ಟೆ, ನೇಯ್ಗೆ, ನೂಲು, ಚರ್ಮದ ವಸ್ತು ಪರೀಕ್ಷಿಸಿದಾಗ ಅದ್ರಲ್ಲಿ ಕುಷ್ಠ ಹರಡದೇ ಇದ್ರೆ 54 ಸೋಂಕು ಇರೋ ಆ ವಸ್ತುನ ತೊಳಿಬೇಕು ಅಂತ ಪುರೋಹಿತ ಹೇಳಬೇಕು. ಆಮೇಲೆ ಆ ವಸ್ತುವನ್ನ ಇನ್ನೂ ಏಳು ದಿನ ದೂರ ಇಡಬೇಕು. 55 ಸೋಂಕು ಇರೋ ಆ ವಸ್ತುನ ಚೆನ್ನಾಗಿ ತೊಳೆದ ಮೇಲೆ ಪುರೋಹಿತ ಪರೀಕ್ಷಿಸಬೇಕು. ಸೋಂಕು ಹರಡದೇ ಇದ್ರೂ ಮುಂಚಿನ ತರಾನೇ ಇದ್ರೆ ವಸ್ತುವಿನ ಒಳಭಾಗವನ್ನ ಅಥವಾ ಹೊರಭಾಗವನ್ನ ಕುಷ್ಠ ತಿಂದುಹಾಕಿದೆ ಅಂತರ್ಥ. ಹಾಗಾಗಿ ಅದು ಅಶುದ್ಧ. ನೀವು ಆ ವಸ್ತುನ ಸುಟ್ಟುಬಿಡಬೇಕು.
56 ಆದ್ರೆ ಆ ಬಟ್ಟೆ, ಚರ್ಮ, ನೇಯ್ಗೆ ಅಥವಾ ನೂಲುಗಳನ್ನ ಚೆನ್ನಾಗಿ ತೊಳೆದ ಮೇಲೆ ಪುರೋಹಿತ ಅದನ್ನ ಪರೀಕ್ಷಿಸಿದಾಗ ಸೋಂಕು ಇರೋ ಭಾಗ ಮಾಸಿದೆ ಅಂತ ಗೊತ್ತಾದ್ರೆ ಆ ಭಾಗವನ್ನ ಅವನು ಹರಿದು ತೆಗಿಬೇಕು. 57 ಆದ್ರೂ ಆ ಬಟ್ಟೆ, ನೇಯ್ಗೆ, ನೂಲು ಅಥವಾ ಚರ್ಮದ ವಸ್ತುವಿನ ಬೇರೆ ಭಾಗದಲ್ಲಿ ಆ ಸೋಂಕು ಬಂದ್ರೆ ಕುಷ್ಠ ಹರಡ್ತಿದೆ ಅಂತ ತಿಳ್ಕೊಳ್ಳಬೇಕು. ಅಂಥ ವಸ್ತುವನ್ನ ಬೆಂಕಿಯಲ್ಲಿ ಸುಡಬೇಕು.+ 58 ಒಂದುವೇಳೆ ಬಟ್ಟೆ, ನೇಯ್ಗೆ, ನೂಲನ್ನ ಅಥವಾ ಚರ್ಮದ ವಸ್ತುವನ್ನ ತೊಳೆದ ಮೇಲೆ ಸೋಂಕು ಪೂರ್ತಿಯಾಗಿ ಹೋದ್ರೆ ಅದನ್ನ ಇನ್ನೊಂದು ಸಲ ತೊಳಿಬೇಕು. ಆಗ ಅದು ಶುದ್ಧ ಆಗುತ್ತೆ.
59 ಉಣ್ಣೆ ಅಥವಾ ನಾರಿನ ಬಟ್ಟೆಯಲ್ಲಿ, ಅವುಗಳ ನೇಯ್ಗೆ ಅಥವಾ ನೂಲಲ್ಲಿ, ಚರ್ಮದ ವಸ್ತು ಮೇಲೆ ಕುಷ್ಠ ಕಾಣಿಸ್ಕೊಂಡಾಗ ಪಾಲಿಸಬೇಕಾದ ನಿಯಮಗಳು ಇವೇ. ಆ ವಸ್ತು ಶುದ್ಧನಾ ಅಶುದ್ಧನಾ ಅಂತ ಪುರೋಹಿತ ತೀರ್ಮಾನ ಮಾಡೋಕೆ ಈ ನಿಯಮಗಳಿವೆ.”