ಯೋಹಾನ ಬರೆದ ಮೊದಲನೇ ಪತ್ರ
1 ನಾವು ಯಾರ ಬಗ್ಗೆ ನಿಮಗೆ ಬರಿತಾ ಇದ್ದೀವೊ ಆತನು ಮೊದಲಿಂದಾನೇ ಇದ್ದನು. ಆತನು ಮಾತಾಡೋದನ್ನ ನಾವು ಕೇಳಿಸ್ಕೊಂಡಿದ್ದೀವಿ. ಆತನನ್ನ ಕಣ್ಣಾರೆ ನೋಡಿದ್ದೀವಿ. ಆತನನ್ನ ಗಮನ ಇಟ್ಟು ನೋಡಿದ್ದೀವಿ, ಮುಟ್ಟಿದ್ದೀವಿ. ಆತನು ಕೊಟ್ಟ ಜೀವದ ಸಂದೇಶದ+ ಬಗ್ಗೆ ನಾವು ಬರಿತಾ ಇದ್ದೀವಿ. 2 (ಶಾಶ್ವತ ಜೀವದ ಬಗ್ಗೆ ನಮಗೆ ಗೊತ್ತಾಯ್ತು. ನಾವು ಅದನ್ನ ನೋಡಿದ್ದೀವಿ. ಅದ್ರ ಬಗ್ಗೆ ಸಾಕ್ಷಿ ಹೇಳಿದ್ದೀವಿ.+ ನಿಮಗೆ ಅದ್ರ ಬಗ್ಗೆ ಹೇಳ್ತಾ ಇದ್ದೀವಿ. ಈ ಶಾಶ್ವತ ಜೀವ+ ತಂದೆಯಿಂದ ಸಿಗುತ್ತೆ. ಹೀಗೆ ನಮಗೆ ಶಾಶ್ವತ ಜೀವದ ಬಗ್ಗೆ ಗೊತ್ತಾಯ್ತು.) 3 ನಾವು ತಂದೆ ಮತ್ತೆ ಆತನ ಮಗ ಯೇಸು ಕ್ರಿಸ್ತನ ಜೊತೆ ಆಪ್ತರಾಗಿದ್ದೀವಿ.+ ಅದೇ ತರ ನೀವೂ ನಮ್ಮ ಜೊತೆ ಆಪ್ತರಾಗಿ ಇರಬೇಕು ಅಂತ ನಾವು ನೋಡಿದ್ದನ್ನ ಕೇಳಿದ್ದನ್ನ ನಿಮಗೆ ಹೇಳಿದ್ವಿ.+ 4 ನಾವು ತುಂಬ ಖುಷಿಯಾಗಿ ಇರಬೇಕಂತ ಈ ವಿಷ್ಯಗಳನ್ನ ಬರಿತಾ ಇದ್ದೀವಿ.
5 ಯೇಸು ನಮಗೆ ಹೇಳಿದ ವಿಷ್ಯಗಳನ್ನ ನಾವು ನಿಮಗೆ ಹೇಳ್ತೀವಿ. ಅದೇನಂದ್ರೆ, ದೇವರು ಬೆಳಕಿನ ಮೂಲ+ ಆಗಿದ್ದಾನೆ. ಆತನಲ್ಲಿ ಕತ್ತಲೆ ಇಲ್ಲ. 6 “ನಮಗೆ ದೇವರ ಜೊತೆ ಪಾಲಿದೆ” ಅಂತ ಹೇಳಿ ಕತ್ತಲೆಯಲ್ಲೇ ನಡಿತಿದ್ರೆ ನಾವು ಸುಳ್ಳು ಹೇಳುವವರು, ಸತ್ಯದ ಪ್ರಕಾರ ಜೀವನ ಮಾಡ್ದೆ ಇರುವವರು ಅಂತ ಆಗುತ್ತೆ.+ 7 ಆತನ ತರ ನಾವೂ ಬೆಳಕಲ್ಲಿ ನಡಿಯೋದಾದ್ರೆ ನಮ್ಮಿಬ್ರ ಮಧ್ಯ ಒಗ್ಗಟ್ಟು ಇದೆ ಅಂತರ್ಥ. ಆತನ ಮಗ ಯೇಸುವಿನ ರಕ್ತದಿಂದ ನಮ್ಮ ಪಾಪಗಳನ್ನೆಲ್ಲ ಕ್ಷಮಿಸ್ತಾನೆ.+
8 “ನಮ್ಮಲ್ಲಿ ಪಾಪ ಇಲ್ಲ” ಅಂತ ಹೇಳೋದಾದ್ರೆ ನಮಗೆ ನಾವೇ ಮೋಸ ಮಾಡ್ಕೊಳ್ತಾ ಇದ್ದೀವಿ+ ಮತ್ತು ಸತ್ಯ ಅನ್ನೋದು ನಮ್ಮಲ್ಲಿಲ್ಲ ಅಂತ ಆಗುತ್ತೆ. 9 ನಾವು ನಮ್ಮ ಪಾಪಗಳನ್ನ ಒಪ್ಕೊಳ್ಳೋದಾದ್ರೆ ಆತನು ಅವನ್ನ ಕ್ಷಮಿಸ್ತಾನೆ.+ ನಮ್ಮ ನೀತಿಗೆಟ್ಟ ನಡತೆಯನ್ನ ಸರಿ ಮಾಡ್ತಾನೆ. ಯಾಕಂದ್ರೆ ಆತನು ನಂಬಿಗಸ್ತ, ನೀತಿವಂತ. 10 “ನಾವು ಪಾಪಾನೇ ಮಾಡಿಲ್ಲ” ಅಂತ ಹೇಳೋದಾದ್ರೆ ದೇವರು ಸುಳ್ಳು ಹೇಳ್ತಾನೆ ಅಂತ ನಾವು ಹೇಳಿದ ಹಾಗೆ ಮತ್ತು ಆತನ ಸಂದೇಶ ನಮ್ಮ ಹೃದಯದಲ್ಲಿ ಇಲ್ಲ ಅಂತರ್ಥ.