ಯೋಹಾನ
12 ಪಸ್ಕ ಹಬ್ಬಕ್ಕೆ ಆರು ದಿನ ಇರುವಾಗ ಯೇಸು ಬೇಥಾನ್ಯಕ್ಕೆ ಬಂದನು. ಯೇಸು ಅದ್ಭುತ ಮಾಡಿ ಜೀವ ಕೊಟ್ಟಿದ್ದ ಲಾಜರನೂ+ ಅಲ್ಲಿದ್ದ. 2 ಕೆಲವರು ಯೇಸುವನ್ನ ಊಟಕ್ಕೆ ಕರೆದ್ರು. ಮಾರ್ಥ ಊಟ ಬಡಿಸ್ತಾ ಇದ್ದಳು.+ ಯೇಸು ಜೊತೆ ಊಟಕ್ಕೆ ಕೂತವರಲ್ಲಿ ಲಾಜರನೂ ಇದ್ದ. 3 ಆಗ ಮರಿಯ ಸುಮಾರು ಅರ್ಧ ಲೀಟರಿನಷ್ಟು ಸುಗಂಧ ತೈಲ ತಂದಳು. ಅದು ಶುದ್ಧ ತೈಲ, ತುಂಬ ದುಬಾರಿ ಆಗಿತ್ತು. ಅವಳು ಅದನ್ನ ಯೇಸುವಿನ ಪಾದಗಳ ಮೇಲೆ ಸುರಿದು ತನ್ನ ತಲೆ ಕೂದಲಿಂದ ಒರೆಸಿದಳು. ಆಗ ಇಡೀ ಮನೆ ಸುಗಂಧ ತೈಲದಿಂದ ಗಮಗಮಾ ಅಂತಿತ್ತು.+ 4 ಆದ್ರೆ ಶಿಷ್ಯರಲ್ಲಿ ಒಬ್ಬ ಅಂದ್ರೆ ಆತನನ್ನ ಮೋಸದಿಂದ ಹಿಡ್ಕೊಡಬೇಕಂತ ಇದ್ದ ಇಸ್ಕರಿಯೂತ ಯೂದ+ 5 “ಈ ಸುಗಂಧ ತೈಲವನ್ನ 300 ದಿನಾರಿಗೆ* ಮಾರಿ ಬಂದ ಹಣನ ಬಡವರಿಗೆ ಕೊಡ್ಬಹುದಿತ್ತಲ್ಲಾ?” ಅಂದ. 6 ಆದ್ರೆ ಅವನು ಈ ಮಾತನ್ನ ಬಡವರ ಮೇಲೆ ಅಯ್ಯೋ ಪಾಪ ಅನಿಸಿ ಹೇಳಿರ್ಲಿಲ್ಲ. ಬದಲಿಗೆ ಅವನೊಬ್ಬ ಕಳ್ಳನಾಗಿದ್ದ. ಅವನ ಹತ್ರ ಹಣದ ಪೆಟ್ಟಿಗೆ ಇರ್ತಿತ್ತು, ಅದ್ರಿಂದ ಹಣ ಕದಿತಿದ್ದ. 7 ಅದಕ್ಕೆ ಯೇಸು “ಸುಮ್ಮನಿರು. ನನ್ನನ್ನ ಸಮಾಧಿ ಮಾಡೋ ದಿನಕ್ಕಾಗಿ ಅವಳು ನನ್ನನ್ನ ಈಗಲೇ ತಯಾರಿ ಮಾಡ್ತಿದ್ದಾಳೆ.+ 8 ಬಡವರು ಯಾವಾಗ್ಲೂ ನಿಮ್ಮ ಹತ್ರ ಇರ್ತಾರೆ.+ ಆದ್ರೆ ನಾನು ಯಾವಾಗ್ಲೂ ನಿಮ್ಮ ಹತ್ರ ಇರಲ್ಲ”+ ಅಂದನು.
9 ಯೇಸು ಬೇಥಾನ್ಯದಲ್ಲಿರೋ ವಿಷ್ಯ ಯೆಹೂದ್ಯರಿಗೆ ಗೊತ್ತಾಯ್ತು. ಅವರು ಯೇಸುವನ್ನ, ಅದ್ಭುತ ಮಾಡಿ ಜೀವ ಕೊಟ್ಟಿದ್ದ ಲಾಜರನನ್ನ ನೋಡೋಕೆ ಒಂದು ದೊಡ್ಡ ಗುಂಪು ಕಟ್ಕೊಂಡು ಬಂದ್ರು.+ 10 ಮುಖ್ಯ ಪುರೋಹಿತರು ಲಾಜರನನ್ನೂ ಕೊಲ್ಲಬೇಕು ಅಂತಿದ್ರು. 11 ಯಾಕಂದ್ರೆ ಲಾಜರನಿಗೆ ಆಗಿದ್ದನ್ನ ನೋಡಿನೇ ತುಂಬ ಯೆಹೂದ್ಯರು ಯೇಸು ಮೇಲೆ ನಂಬಿಕೆ ಇಡ್ತಾ ಇದ್ರು.+
12 ಹಬ್ಬಕ್ಕೆ ಬಂದಿದ್ದ ಜನ್ರಿಗೆ, ಯೇಸು ಯೆರೂಸಲೇಮಿಗೆ ಬರೋ ವಿಷ್ಯ ಮಾರನೇ ದಿನ ಗೊತ್ತಾಯ್ತು. 13 ಅವರು ಖರ್ಜೂರ ಮರದ ಗರಿಗಳನ್ನ ತಗೊಂಡು ದಾರಿಯಲ್ಲಿ ಯೇಸುವನ್ನ ನೋಡೋಕೆ ಹೋದ್ರು. ಅವರು ಜೋರಾಗಿ “ದೇವರೇ, ಇವನಿಗೆ ಜಯವಾಗಲಿ! ಇಸ್ರಾಯೇಲ್ಯರ ರಾಜನಾದ+ ಯೆಹೋವನ* ಹೆಸ್ರಲ್ಲಿ ಬರುವವನಿಗೆ ಆಶೀರ್ವಾದ ಸಿಗಲಿ!”+ ಅಂತ ಕೂಗ್ತಿದ್ರು. 14 ಆಗ ಯೇಸುಗೆ ಒಂದು ಕತ್ತೆ ಮರಿ ಸಿಕ್ತು. ಅದ್ರ ಮೇಲೆ ಕೂತನು.+ ಇದ್ರ ಬಗ್ಗೆನೇ ಪವಿತ್ರ ಗ್ರಂಥದಲ್ಲಿ 15 “ಚೀಯೋನ್ ಪಟ್ಟಣವೇ, ಭಯಪಡಬೇಡ. ನೋಡು! ನಿನ್ನ ರಾಜ ಕತ್ತೆ ಮರಿ ಮೇಲೆ ಕೂತ್ಕೊಂಡು ಬರ್ತಿದ್ದಾನೆ”+ ಅಂತ ಹೇಳಿತ್ತು. ಅದು ನಿಜ ಆಯ್ತು. 16 ಆ ಮಾತುಗಳ ಅರ್ಥ ಏನಂತ ಶಿಷ್ಯರಿಗೆ ಆಗ ಗೊತ್ತಾಗಲಿಲ್ಲ. ಆದ್ರೆ ಯೇಸುಗೆ ಉನ್ನತ ಸ್ಥಾನ ಸಿಕ್ಕಿದಾಗ ಆ ಮಾತುಗಳೆಲ್ಲ ಆತನ ಬಗ್ಗೆನೇ ಬರೆದಿತ್ತು+ ಅಂತ ಮತ್ತು ಆ ವಿಷ್ಯಗಳನ್ನ ನಾವು ಮಾಡಿದ್ವಿ ಅಂತ ಅವರು ನೆನಪಿಸ್ಕೊಂಡ್ರು.+
17 ಯೇಸು ಲಾಜರನನ್ನ ಸಮಾಧಿಯಿಂದ+ ಹೊರಗೆ ಬಾ ಅಂತ ಕರೆದಿದ್ದನ್ನ, ಅವನಿಗೆ ಮತ್ತೆ ಜೀವ ಕೊಟ್ಟಿದ್ದನ್ನ ನೋಡಿದ ಜನ್ರೆಲ್ಲ ಅದನ್ನ ಎಲ್ರಿಗೆ ಹೇಳ್ತಾ ಇದ್ರು.+ 18 ಈ ಅದ್ಭುತದ ಬಗ್ಗೆ ಕೇಳಿಸ್ಕೊಂಡು ತುಂಬ ಜನ ಯೇಸುನ ಭೇಟಿಮಾಡೋಕೆ ಹೋಗ್ತಿದ್ರು. 19 ಹಾಗಾಗಿ ಫರಿಸಾಯರು “ನೋಡಿದ್ರಾ, ಇಡೀ ಲೋಕ ಅವನ ಹಿಂದೆ ಹೋಗ್ತಾ ಇದೆ. ನಮ್ಮಿಂದ ಏನೂ ಮಾಡೋಕಾಗ್ತಾ ಇಲ್ಲ”+ ಅಂತ ಮಾತಾಡ್ಕೊಂಡ್ರು.
20 ಆರಾಧನೆ ಮಾಡೋಕೆ ಹಬ್ಬಕ್ಕೆ ಬಂದಿದ್ದ ಜನ್ರಲ್ಲಿ ಸ್ವಲ್ಪ ಜನ ಗ್ರೀಕರೂ ಇದ್ರು. 21 ಇವರು ಗಲಿಲಾಯದ ಬೇತ್ಸಾಯಿದ ಊರಿನ ಫಿಲಿಪ್ಪನಿಗೆ+ “ಪ್ರಭು, ನಾವು ಯೇಸುನ ನೋಡಬೇಕು” ಅಂತ ಬೇಡ್ಕೊಂಡ್ರು. 22 ಫಿಲಿಪ್ಪ ಅಂದ್ರೆಯನಿಗೆ ಈ ವಿಷ್ಯ ಹೇಳಿದ. ಅಂದ್ರೆಯ ಮತ್ತು ಫಿಲಿಪ್ಪ ಬಂದು ಯೇಸುಗೆ ಹೇಳಿದ್ರು.
23 ಆದ್ರೆ ಯೇಸು ಅವ್ರಿಗೆ “ಮನುಷ್ಯಕುಮಾರನಿಗೆ ಗೌರವ ಸಿಗೋ ಸಮಯ ಹತ್ರ ಆಗಿದೆ.+ 24 ನಿಜ ಹೇಳ್ತೀನಿ, ಗೋದಿಯ ಒಂದು ಕಾಳು ಮಣ್ಣಿಗೆ ಬಿದ್ದು ಸಾಯದಿದ್ರೆ ಅದು ಕಾಳಾಗಿಯೇ ಉಳಿದುಬಿಡುತ್ತೆ. ಆದ್ರೆ ಸತ್ರೆ+ ಜಾಸ್ತಿ ತೆನೆಗಳನ್ನ ಕೊಡುತ್ತೆ. 25 ಪ್ರಾಣದ ಮೇಲೆ ಆಸೆ ಇಡೋನು ಅದನ್ನ ಕಳ್ಕೊಳ್ತಾನೆ.*+ ಆದ್ರೆ ಈ ಲೋಕದಲ್ಲಿ ಪ್ರಾಣದ ಮೇಲೆ ಆಸೆ ಇಲ್ಲದವನು ಅದನ್ನ ಕಾಪಾಡ್ಕೊಂಡು ಶಾಶ್ವತ ಜೀವ ಪಡ್ಕೊಳ್ತಾನೆ.+ 26 ನನ್ನ ಸೇವೆಮಾಡೋಕೆ ಇಷ್ಟ ಇರೋನು ನನ್ನ ಶಿಷ್ಯನಾಗಲಿ. ನಾನು ಎಲ್ಲಿ ಇರ್ತಿನೋ ನನ್ನ ಸೇವಕನೂ ಅಲ್ಲೇ ಇರ್ತಾನೆ.+ ನನ್ನ ಸೇವಕನಾಗೋಕೆ ಇಷ್ಟಪಡೋ ವ್ಯಕ್ತಿಯನ್ನ ನನ್ನ ಅಪ್ಪ ಆಶೀರ್ವದಿಸ್ತಾನೆ. 27 ನನಗೀಗ ತುಂಬ ಸಂಕಟ ಆಗ್ತಾ ಇದೆ.+ ನಾನೇನು ಹೇಳಲಿ? ಅಪ್ಪಾ, ಈ ಪರಿಸ್ಥಿತಿಯಿಂದ* ನನ್ನನ್ನ ಕಾಪಾಡು.+ ಆದ್ರೆ ಇದಕ್ಕಾಗಿನೇ ನಾನು ಬಂದಿದ್ದೀನಿ. 28 ಅಪ್ಪಾ, ಎಲ್ಲ ಜನ್ರಿಗೂ ನಿನ್ನ ಹೆಸ್ರು ಗೊತ್ತಾಗಲಿ, ಅವರು ಅದಕ್ಕೆ ಗೌರವ ಕೊಡಲಿ” ಅಂದನು. ಆಗ “ಅದಕ್ಕೆ ಗೌರವ ಬರೋ ತರ ಮಾಡಿದ್ದೀನಿ. ಇನ್ಮುಂದೆನೂ ಮಾಡ್ತೀನಿ”+ ಅನ್ನೋ ಧ್ವನಿ+ ಸ್ವರ್ಗದಿಂದ ಬಂತು.
29 ಅಲ್ಲಿ ನಿಂತಿದ್ದ ಜನ ಈ ಧ್ವನಿ ಕೇಳಿಸ್ಕೊಂಡು ‘ಗುಡುಗು ಬಂತು’ ಅಂದ್ರು. ಇನ್ನು ಕೆಲವರು “ಯೇಸು ಜೊತೆ ಒಬ್ಬ ದೇವದೂತ ಮಾತಾಡಿದ” ಅಂದ್ರು. 30 ಅದಕ್ಕೆ ಯೇಸು “ಈ ಧ್ವನಿ ಬಂದಿದ್ದು ನನಗೋಸ್ಕರ ಅಲ್ಲ, ನಿಮಗೋಸ್ಕರ. 31 ದೇವರು ಈಗ ಈ ಲೋಕಕ್ಕೆ ತೀರ್ಪು ಮಾಡಿ ಈ ಲೋಕದ ನಾಯಕನನ್ನ+ ಹೊರಗೆ ಹಾಕ್ತಾನೆ.+ 32 ಆದ್ರೆ ಜನ ನನ್ನನ್ನ ಕಂಬಕ್ಕೆ ಏರಿಸಿದ್ರೆ*+ ಎಲ್ಲ ತರದ ಜನ್ರನ್ನ ನನ್ನ ಕಡೆ ಸೆಳಿತೀನಿ” ಅಂದನು. 33 ಯಾವ ರೀತಿ ಸಾಯ್ತೀನಿ+ ಅಂತ ಹೇಳೋಕೆ ಯೇಸು ಇದನ್ನ ಹೇಳಿದ. 34 ಆಗ ಜನ “ನಿಯಮ ಪುಸ್ತಕದಲ್ಲಿ ಓದುವಾಗ, ಕ್ರಿಸ್ತ ಸದಾಕಾಲಕ್ಕೂ ಇರ್ತಾನೆ+ ಅಂತ ಹೇಳೋದನ್ನ ಕೇಳಿಸ್ಕೊಂಡಿದ್ದೀವಿ. ಹಾಗಿದ್ರೆ ಮನುಷ್ಯಕುಮಾರನನ್ನ ಕಂಬಕ್ಕೆ ಏರಿಸ್ತಾರೆ+ ಅಂತ ನೀನು ಹೇಗೆ ಹೇಳ್ತೀಯಾ? ಆ ಮನುಷ್ಯಕುಮಾರ ಯಾರು?” ಅಂತ ಕೇಳಿದ್ರು. 35 ಅದಕ್ಕೆ ಯೇಸು “ಇನ್ನು ಸ್ವಲ್ಪ ಸಮಯ ಮಾತ್ರ ಬೆಳಕು ನಿಮ್ಮ ಮಧ್ಯ ಇರುತ್ತೆ. ಕತ್ತಲು ನಿಮ್ಮನ್ನ ಮುಚ್ಚಬಾರದು ಅಂತಿದ್ರೆ ಬೆಳಕು ಇರುವಾಗ್ಲೇ ನಡಿರಿ. ಕತ್ತಲಲ್ಲಿ ನಡಿಯೋ ವ್ಯಕ್ತಿಗೆ ಎಲ್ಲಿಗೆ ಹೋಗ್ತಿದ್ದಾನೆ ಅಂತ ಅವನಿಗೇ ಗೊತ್ತಿರಲ್ಲ.+ 36 ಬೆಳಕು ಇರುವಾಗಲೇ ಬೆಳಕಿನ ಮೇಲೆ ನಂಬಿಕೆ ಇಡಿ. ಆಗ ನೀವು ಬೆಳಕಿನ ಮಕ್ಕಳಾಗ್ತೀರ”+ ಅಂದನು.
ಯೇಸು ಇದನ್ನೆಲ್ಲ ಹೇಳಿದ ಮೇಲೆ ಅಲ್ಲಿಂದ ಹೋಗಿ ಅಡಗಿಕೊಂಡನು. 37 ಆತನು ಅವ್ರ ಮುಂದೆ ಅಷ್ಟೊಂದು ಅದ್ಭುತಗಳನ್ನ ಮಾಡಿದ್ರೂ ಅವರು ಆತನ ಮೇಲೆ ನಂಬಿಕೆ ಇಡಲಿಲ್ಲ. 38 ಹೀಗೆ ಪ್ರವಾದಿ ಯೆಶಾಯ ಹೇಳಿದ ಈ ಮಾತು ನಿಜ ಆಯ್ತು “ಯೆಹೋವನೇ,* ನಮ್ಮಿಂದ ಕೇಳಿಸ್ಕೊಂಡ ವಿಷ್ಯಗಳ ಮೇಲೆ ಯಾರು ನಂಬಿಕೆ ಇಟ್ಟಿದ್ದಾರೆ?+ ತನ್ನ ಶಕ್ತಿಯನ್ನ ಯೆಹೋವ* ಯಾರಿಗೆ ತೋರಿಸಿದ್ದಾನೆ?”+ 39 ಅವರು ಯಾಕೆ ನಂಬ್ತಾ ಇಲ್ಲ ಅನ್ನೋದಕ್ಕೂ ಯೆಶಾಯ ಈ ಕಾರಣ ಕೊಡ್ತಾನೆ 40 “ಆತನು ಅವ್ರ ಕಣ್ಣನ್ನ ಕುರುಡು ಮಾಡಿದ್ದಾನೆ. ಹೃದಯವನ್ನ ಕಲ್ಲು ಮಾಡಿದ್ದಾನೆ. ಅವರು ಕಣ್ಣಿಂದ ನೋಡಬಾರದು, ಹೃದಯದಿಂದ ಅರ್ಥ ಮಾಡ್ಕೊಳ್ಳಬಾರದು, ತಿರುಗಿ ಬರಬಾರದು, ರಕ್ಷಣೆ ಪಡಿಬಾರದು ಅಂತ ಹೀಗೆ ಮಾಡಿದ್ದಾನೆ.”+ 41 ಕ್ರಿಸ್ತನ ಬಗ್ಗೆ ಈ ಮಾತುಗಳನ್ನ ಯೆಶಾಯ ಯಾಕೆ ಹೇಳಿದನಂದ್ರೆ ಕ್ರಿಸ್ತ ಉನ್ನತ ಸ್ಥಾನಕ್ಕೆ ಹೋಗೋದನ್ನ ಯೆಶಾಯ ನೋಡಿದ್ದ.+ 42 ಆ ಸಮಯದಲ್ಲಿದ್ದ ತುಂಬ ಯೆಹೂದಿ ನಾಯಕರು ಸಹ ಯೇಸು ಮೇಲೆ ನಂಬಿಕೆ ಇಟ್ಟಿದ್ರು.+ ಆದ್ರೆ ಎಲ್ಲಿ ಫರಿಸಾಯರು ಸಭಾಮಂದಿರದಿಂದ ಬಹಿಷ್ಕಾರ ಮಾಡಿಬಿಡ್ತಾರೋ ಅಂತ ಹೆದ್ರಿ ಅದನ್ನ ತೋರಿಸ್ಕೊಳ್ತಾ ಇರ್ಲಿಲ್ಲ.+ 43 ಯಾಕಂದ್ರೆ ಅವರು ದೇವರ ಮೆಚ್ಚುಗೆಗಿಂತ ಮನುಷ್ಯರ ಮೆಚ್ಚುಗೆಯನ್ನ ಇಷ್ಟಪಟ್ರು.+
44 ಯೇಸು ಜೋರಾಗಿ “ನನ್ನ ಮೇಲೆ ನಂಬಿಕೆ ಇಡೋರು ನನ್ನ ಮೇಲಷ್ಟೇ ಅಲ್ಲ ನನ್ನನ್ನ ಕಳಿಸಿದ ದೇವರ ಮೇಲೂ ನಂಬಿಕೆ ಇಡ್ತಾರೆ.+ 45 ನನ್ನನ್ನ ನೋಡೋರು ನನ್ನನ್ನ ಕಳಿಸಿದ ದೇವರನ್ನೂ ನೋಡ್ತಾರೆ.+ 46 ನನ್ನ ಮೇಲೆ ನಂಬಿಕೆ ಇಡೋ ಯಾರೂ ಕತ್ತಲೆಯಲ್ಲಿ ಇರಬಾರದು+ ಅಂತ ಲೋಕಕ್ಕೆ ಬೆಳಕಾಗಿ+ ಬಂದೆ. 47 ನನ್ನ ಮಾತು ಕೇಳಿಸ್ಕೊಂಡು ಅದನ್ನ ಮಾಡದೆ ಇರೋರಿಗೆ ನಾನು ತೀರ್ಪು ಮಾಡಲ್ಲ. ಯಾಕಂದ್ರೆ ನಾನು ಲೋಕಕ್ಕೆ ತೀರ್ಪು ಮಾಡೋಕೆ ಬರ್ಲಿಲ್ಲ, ಲೋಕವನ್ನ ರಕ್ಷಿಸೋಕೆ ಬಂದೆ.+ 48 ನನಗೆ ಗೌರವ ಕೊಡದಿರೋ, ನನ್ನ ಮಾತು ಕೇಳದಿರೋ ಜನ್ರಿಗೆ ತೀರ್ಪು ಮಾಡುವಂಥ ಒಂದು ವಿಷ್ಯ ಇದೆ. ಅದು ನಾನು ಆಡಿರೋ ಮಾತೇ. ಅದೇ ಅವ್ರಿಗೆ ಕೊನೆ ದಿನದಲ್ಲಿ ತೀರ್ಪು ಮಾಡುತ್ತೆ. 49 ಯಾಕಂದ್ರೆ ನಾನು ನನಗೆ ಇಷ್ಟ ಬಂದಿದ್ದನ್ನ ಮಾತಾಡಲಿಲ್ಲ. ನನ್ನನ್ನ ಕಳಿಸಿದ ನನ್ನ ಅಪ್ಪ ನಾನೇನು ಹೇಳಬೇಕು, ಏನು ಕಲಿಸಬೇಕು ಅಂತ ಆಜ್ಞೆ ಕೊಟ್ಟಿದ್ದಾನೆ.+ 50 ಆತನ ಆಜ್ಞೆ ಪಾಲಿಸಿದ್ರೆ ಶಾಶ್ವತ ಜೀವ ಸಿಗುತ್ತೆ ಅಂತ ನಂಗೊತ್ತು.+ ಹಾಗಾಗಿ ಅಪ್ಪ ಹೇಳ್ಕೊಟ್ಟಿರೋ ವಿಷ್ಯಗಳನ್ನೇ ಮಾತಾಡ್ತೀನಿ” ಅಂದನು.+