ಎರಡನೇ ಅರಸು
4 ಪ್ರವಾದಿಗಳ ಗಂಡು ಮಕ್ಕಳಲ್ಲಿ+ ಒಬ್ಬನ ಹೆಂಡತಿ ಅಳ್ತಾ ಎಲೀಷನ ಹತ್ರ ಬಂದು “ನಿನ್ನ ಸೇವಕನಾಗಿದ್ದ ನನ್ನ ಗಂಡ ತೀರಿಹೋದ. ಅವನಿಗೆ ಯಾವಾಗ್ಲೂ ಯೆಹೋವನ ಮೇಲೆ ಭಯಭಕ್ತಿ ಇತ್ತು+ ಅಂತ ನಿನಗೆ ಚೆನ್ನಾಗಿ ಗೊತ್ತು. ಆದ್ರೆ ಅವನು ಒಬ್ಬನ ಹತ್ರ ಸಾಲಮಾಡಿದ್ದ. ಸಾಲ ಕೊಟ್ಟವನು ನನ್ನ ಇಬ್ರು ಮಕ್ಕಳನ್ನ ತನ್ನ ದಾಸರನ್ನಾಗಿ ಕರ್ಕೊಂಡು ಹೋಗೋಕೆ ಬಂದಿದ್ದಾನೆ” ಅಂದಳು. 2 ಅದಕ್ಕೆ ಎಲೀಷ “ನಾನು ನಿನಗೆ ಹೇಗೆ ಸಹಾಯ ಮಾಡಲಿ? ಹೇಳು, ನಿನ್ನ ಮನೆಯಲ್ಲಿ ಏನಿದೆ?” ಅಂತ ಕೇಳಿದ. ಅದಕ್ಕೆ ಅವಳು “ಈ ನಿನ್ನ ಸೇವಕಿ ಮನೆಯಲ್ಲಿ ಒಂದು ಜಾಡಿ ಎಣ್ಣೆ ಬಿಟ್ರೆ ಬೇರೆ ಏನೂ ಇಲ್ಲ”+ ಅಂದಳು. 3 ಆಗ ಎಲೀಷ ಅವಳಿಗೆ “ಹೋಗಿ ನಿನ್ನ ಅಕ್ಕಪಕ್ಕದ ಮನೆಯವರಿಂದ ಖಾಲಿ ಪಾತ್ರೆಗಳನ್ನ ಕೇಳು. ಎಷ್ಟು ಪಾತ್ರೆ ಸೇರಿಸೋಕೆ ಆಗುತ್ತೋ ಅಷ್ಟು ಪಾತ್ರೆಗಳನ್ನ ಸೇರಿಸು. 4 ಆಮೇಲೆ ನೀನು ಮತ್ತು ನಿನ್ನ ಗಂಡು ಮಕ್ಕಳು ಮನೆ ಒಳಗೆ ಹೋಗಿ ಬಾಗಿಲು ಮುಚ್ಕೊಳ್ಳಿ. ಎಲ್ಲ ಪಾತ್ರೆಯಲ್ಲೂ ಎಣ್ಣೆ ತುಂಬಿಸ್ತಾ ಹೋಗಿ. ತುಂಬಿದ ಪಾತ್ರೆಗಳನ್ನ ಒಂದುಕಡೆ ಇಡ್ತಾ ಬನ್ನಿ” ಅಂದ. 5 ಆಗ ಆ ಸ್ತ್ರೀ ಅಲ್ಲಿಂದ ಹೋದಳು.
ಅವಳು ತನ್ನ ಮಕ್ಕಳ ಜೊತೆ ಮನೆಯೊಳಗೆ ಹೋಗಿ ಬಾಗಿಲು ಹಾಕೊಂಡಳು. ಅವಳ ಮಕ್ಕಳು ಅವಳಿಗೆ ಪಾತ್ರೆಗಳನ್ನ ಕೊಡ್ತಾ ಬಂದ ಹಾಗೆ ಆ ಪಾತ್ರೆಗಳಲ್ಲಿ ಎಣ್ಣೆ ತುಂಬಿಸ್ತಾ ಹೋದಳು.+ 6 ಹೀಗೆ ಎಲ್ಲ ಪಾತ್ರೆಗಳಲ್ಲಿ ಎಣ್ಣೆ ತುಂಬಿಸಿದ ಮೇಲೆ ಅವಳು ತನ್ನ ಮಕ್ಕಳಲ್ಲಿ ಒಬ್ಬನಿಗೆ “ಇನ್ನೊಂದು ಪಾತ್ರೆ ತಂದಿಡು”+ ಅಂದಳು. ಅದಕ್ಕೆ ಅವನು “ಪಾತ್ರೆಗಳೆಲ್ಲ ಮುಗಿದು ಹೋದವು” ಅಂದ. ಆಗ ಜಾಡಿಯಿಂದ ಎಣ್ಣೆ ಬರೋದು ನಿಂತುಹೋಯ್ತು.+ 7 ಆಮೇಲೆ ಸತ್ಯ ದೇವರ ಮನುಷ್ಯನ ಹತ್ರ ಬಂದು ಆ ವಿಷ್ಯ ಹೇಳಿದಳು. ಅವನು ಅವಳಿಗೆ “ಹೋಗಿ ಆ ಎಣ್ಣೆ ಮಾರಿ ನಿನ್ನ ಸಾಲ ತೀರಿಸು. ಉಳಿದ ಹಣದಲ್ಲಿ ನೀನು ಮತ್ತು ನಿನ್ನ ಮಕ್ಕಳು ಜೀವನ ಮಾಡಿ” ಅಂದ.
8 ಒಂದಿನ ಎಲೀಷ ಶೂನೇಮಿಗೆ+ ಹೋಗಿದ್ದ. ಅಲ್ಲಿನ ಪ್ರಖ್ಯಾತ ಸ್ತ್ರೀಯೊಬ್ಬಳು ಅವನನ್ನ ತನ್ನ ಮನೆಗೆ ಊಟಕ್ಕೆ ಬರಬೇಕಂತ ಒತ್ತಾಯ ಮಾಡಿದಳು.+ ಇದಾದ್ಮೇಲೆ ಎಲೀಷ ಆ ಊರನ್ನ ಹಾದು ಹೋಗುವಾಗೆಲ್ಲ ಅವಳ ಮನೆಯಲ್ಲಿ ಊಟ ಮಾಡ್ಕೊಂಡು ಹೋಗ್ತಿದ್ದ. 9 ಒಂದು ಸಲ ಆ ಸ್ತ್ರೀ ತನ್ನ ಗಂಡನಿಗೆ “ದೇವರ ಆ ಪವಿತ್ರ ಮನುಷ್ಯ ಯಾವಾಗ್ಲೂ ನಮ್ಮ ಮನೆ ಮುಂದಿನಿಂದ ಹಾದುಹೋಗ್ತಾ ಇರ್ತಾನೆ. 10 ಹಾಗಾಗಿ ಯಾಕೆ ನಾವು ಅವನಿಗಾಗಿ ನಮ್ಮ ಮನೆ ಚಾವಣಿಯಲ್ಲಿ ಒಂದು ಕೋಣೆ+ ಮಾಡಬಾರದು? ಅಲ್ಲಿ ಅವನಿಗಾಗಿ ಒಂದು ಹಾಸಿಗೆ, ಮೇಜು, ಕುರ್ಚಿ ಮತ್ತು ದೀಪಸ್ತಂಭ ಇಡೋಣ. ಆಗ ಅವನು ನಮ್ಮ ಮನೆಗೆ ಬಂದಾಗೆಲ್ಲ ಉಳ್ಕೊಂಡು ಹೋಗಬಹುದು”+ ಅಂದಳು.
11 ಒಂದಿನ ಎಲೀಷ ಆ ಸ್ತ್ರೀಯ ಮನೆಗೆ ಬಂದು ಮಲಗೋಕಂತ ಚಾವಣಿಯಲ್ಲಿದ್ದ ಕೋಣೆಗೆ ಹೋದ. 12 ಆಮೇಲೆ ಅವನು ತನ್ನ ಸೇವಕ ಗೇಹಜಿಗೆ+ “ಆ ಶೂನೇಮಿನ+ ಸ್ತ್ರೀಯನ್ನ ಕರಿ” ಅಂದ. ಆಗ ಗೇಹಜಿ ಅವಳನ್ನ ಕರೆದ. ಅವಳು ಬಂದು ಎಲೀಷನ ಮುಂದೆ ನಿಂತಳು. 13 ಎಲೀಷ ಗೇಹಜಿಗೆ “ದಯವಿಟ್ಟು ಆ ಸ್ತ್ರೀಗೆ, ‘ನೀನು ನಮಗಾಗಿ ಇಷ್ಟೆಲ್ಲ ತೊಂದ್ರೆ ತಗೊಂಡಿದ್ದೀಯ.+ ಅದ್ರ ಬದ್ಲಿಗೆ ನಿನಗೆ ನಾನೇನು ಮಾಡ್ಲಿ?+ ನಾನು ನಿನ್ನ ಪರವಾಗಿ ರಾಜನ ಹತ್ರ ಅಥವಾ ಸೇನಾಪತಿ ಹತ್ರ ಮಾತಾಡ್ಲಾ?’+ ಅಂತ ಕೇಳು” ಅಂದ. ಆದ್ರೆ ಆ ಸ್ತ್ರೀ “ಬೇಡ, ನಾನು ನನ್ನ ಜನ್ರ ಮಧ್ಯದಲ್ಲಿ ನೆಮ್ಮದಿಯಾಗಿ ಇದ್ದೀನಿ. ನನಗೇನೂ ತೊಂದ್ರೆ ಇಲ್ಲ” ಅಂದಳು. 14 ಆಗ ಎಲೀಷ “ಹಾಗಾದ್ರೆ ಅವಳಿಗಾಗಿ ಇನ್ನೇನು ಮಾಡೋಣ?” ಅಂತ ಗೇಹಜಿನ ಕೇಳಿದ. ಆಗ ಅವನು “ಅವಳಿಗೆ ಮಗನಿಲ್ಲ.+ ಅಷ್ಟೇ ಅಲ್ಲ ಅವಳ ಗಂಡನಿಗೆ ವಯಸ್ಸಾಗಿದೆ” ಅಂದ. 15 ತಕ್ಷಣ ಎಲೀಷ “ಅವಳನ್ನ ಕರಿ” ಅಂದ. ಆಗ ಗೇಹಜಿ ಅವಳನ್ನ ಕರೆದ. ಅವಳು ಬಂದು ಬಾಗಿಲ ಹತ್ರ ನಿಂತ್ಕೊಂಡಳು. 16 ಎಲೀಷ “ಮುಂದಿನ ವರ್ಷ ಈ ಸಮಯದಷ್ಟಕ್ಕೆ ನೀನು ಒಬ್ಬ ಮಗನನ್ನ ಅಪ್ಕೊಳ್ತೀಯ”+ ಅಂದ. ಅದಕ್ಕೆ ಅವಳು “ನನ್ನ ಒಡೆಯನೇ, ನೀನು ಸತ್ಯ ದೇವರ ಮನುಷ್ಯ. ನಿನ್ನ ಈ ಸೇವಕಿಗೆ ಸುಳ್ಳು ಹೇಳಬೇಡ” ಅಂದಳು.
17 ಎಲೀಷ ಆ ಸ್ತ್ರೀಗೆ ಹೇಳಿದ ಹಾಗೇ ಅವಳು ಗರ್ಭಿಣಿಯಾದಳು, ಮುಂದಿನ ವರ್ಷ ಅದೇ ಸಮಯಕ್ಕೆ ಒಂದು ಮಗು ಹುಟ್ತು. 18 ಆ ಮಗ ಬೆಳೆದು ದೊಡ್ಡವನಾದ. ಒಂದಿನ ಅವನು ತನ್ನ ತಂದೆ ಹತ್ರ ಹೋದ. ಅವನ ತಂದೆ ಕೊಯ್ಯುವವರ ಜೊತೆ ಹೊಲದಲ್ಲಿದ್ದ. 19 ಅವನು ತನ್ನ ತಂದೆಗೆ “ಅಯ್ಯೋ! ತಲೆ ನೋವು!” ಅಂತ ಹೇಳ್ತಿದ್ದ. ಆಗ ಅವನ ತಂದೆ ತನ್ನ ಸೇವಕನಿಗೆ “ಇವನನ್ನ ಇವನ ತಾಯಿ ಹತ್ರ ಎತ್ಕೊಂಡು ಹೋಗು” ಅಂದ. 20 ಆಗ ಆ ಸೇವಕ ಅವನನ್ನ ಅವನ ತಾಯಿ ಹತ್ರ ಎತ್ಕೊಂಡು ಹೋದ. ಮಧ್ಯಾಹ್ನದ ತನಕ ಅವನು ಅವಳ ಮಡಿಲಲ್ಲಿ ಕೂತಿದ್ದು ಆಮೇಲೆ ತೀರಿಹೋದ.+ 21 ಅವಳು ಅವನನ್ನ ಸತ್ಯ ದೇವರ ಮನುಷ್ಯನ+ ಹಾಸಿಗೆ ಮೇಲೆ ಮಲಗಿಸಿ ಬಾಗಿಲು ಮುಚ್ಚಿ ಹೊರಗೆ ಹೋದಳು. 22 ಅವಳು ತನ್ನ ಗಂಡನನ್ನ ಕರೆಸಿ “ನಾನು ಈಗಲೇ ಸತ್ಯ ದೇವರ ಮನುಷ್ಯನ ಹತ್ರ ಹೋಗಬೇಕು. ದಯವಿಟ್ಟು ನನ್ನ ಜೊತೆ ಒಬ್ಬ ಸೇವಕನನ್ನ ಕಳಿಸು. ಪ್ರಯಾಣ ಮಾಡೋಕೆ ಒಂದು ಕತ್ತೆ ಕೊಡು. ನಾನು ಬೇಗ ಹೋಗಿ ಬರ್ತಿನಿ” ಅಂದಳು. 23 ಆದ್ರೆ ಅವಳ ಗಂಡ “ನೀನ್ಯಾಕೆ ಅವನ ಹತ್ರ ಹೋಗಬೇಕು? ಇವತ್ತು ಅಮಾವಾಸ್ಯೆನೂ+ ಅಲ್ಲ ಸಬ್ಬತ್ತೂ ಅಲ್ಲ” ಅಂದನು. ಆಗ ಅವಳು “ಹೆದರಬೇಡ, ಏನೂ ತೊಂದರೆ ಇಲ್ಲ” ಅಂದಳು. 24 ಅವಳು ಕತ್ತೆಗೆ ತಡಿಹಾಕಿಸಿ ತನ್ನ ಸೇವಕನಿಗೆ “ಬೇಗ ಹೋಗು, ತಡಮಾಡಬೇಡ. ನಾನು ಹೇಳೋ ತನಕ ನಿಲ್ಲಿಸಬೇಡ” ಅಂದಳು.
25 ಹೀಗೆ ಅವಳು ಸತ್ಯ ದೇವರ ಮನುಷ್ಯನನ್ನ ಭೇಟಿ ಮಾಡೋಕೆ ಕರ್ಮೆಲ್ ಬೆಟ್ಟಕ್ಕೆ ಹೋದಳು. ದೂರದಿಂದಲೇ ಸತ್ಯ ದೇವರ ಮನುಷ್ಯ ಅವಳನ್ನ ನೋಡಿದ. ತಕ್ಷಣ ತನ್ನ ಸೇವಕ ಗೇಹಜಿಗೆ “ಅಲ್ಲಿ ನೋಡು! ಶೂನೇಮಿನ ಸ್ತ್ರೀ ಬರ್ತಿದ್ದಾಳೆ. 26 ದಯವಿಟ್ಟು ನೀನು ಅವಳ ಹತ್ರ ಓಡಿ ಹೋಗಿ ‘ನೀನು, ನಿನ್ನ ಗಂಡ ಮತ್ತು ನಿನ್ನ ಮಗ ಹೇಗೆ ಇದ್ದೀರಾ?’ ಅಂತ ಕೇಳು” ಅಂದ. ಗೇಹಜಿ ಹೀಗೆ ಕೇಳಿದಾಗ ಅವಳು “ಎಲ್ರೂ ಚೆನ್ನಾಗಿ ಇದ್ದಾರೆ” ಅಂದಳು. 27 ಅವಳು, ಬೆಟ್ಟದ ಹತ್ರ ಇದ್ದ ಸತ್ಯ ದೇವರ ಮನುಷ್ಯನ ಹತ್ರ ಬಂದು ತಕ್ಷಣ ಅವನ ಪಾದಗಳನ್ನ ಹಿಡ್ಕೊಂಡಳು.+ ಆಗ ಗೇಹಜಿ ಅವಳನ್ನ ನೂಕೋಕೆ ಅವಳ ಹತ್ರ ಬಂದ. ಆದ್ರೆ ಸತ್ಯ ದೇವರ ಮನುಷ್ಯ ಅವನಿಗೆ “ಅವಳನ್ನ ಬಿಡು. ಯಾಕಂದ್ರೆ ಅವಳು ತುಂಬ ದುಃಖದಲ್ಲಿದ್ದಾಳೆ. ವಿಷ್ಯ ಏನಂತ ಯೆಹೋವ ನನಗೆ ಹೇಳಲಿಲ್ಲ. ನನ್ನಿಂದ ಮುಚ್ಚಿಟ್ಟಿದ್ದಾನೆ” ಅಂದ. 28 ಆಗ ಅವಳು ಎಲೀಷನಿಗೆ “ನನ್ನ ಒಡೆಯನೇ, ನನಗೊಬ್ಬ ಮಗ ಬೇಕಂತ ನಾನು ನಿನಗೆ ಕೇಳಿದ್ನಾ? ‘ನೀನು ನನಗೆ ಸುಳ್ಳು ನಿರೀಕ್ಷೆ ಕೊಡಬಾರದು’ ಅಂತ ನಾನು ನಿನಗೆ ಹೇಳಿರಲಿಲ್ವಾ?”+ ಅಂದಳು.
29 ತಕ್ಷಣ ಎಲೀಷ ಗೇಹಜಿಗೆ “ನಿನ್ನ ಬಟ್ಟೆಯನ್ನ ನಿನ್ನ ಸೊಂಟಕ್ಕೆ ಸುತ್ಕೊ+ ಮತ್ತು ನನ್ನ ಕೋಲನ್ನ ಕೈಯಲ್ಲಿ ಹಿಡ್ಕೊಂಡು ಬೇಗಬೇಗ ಈ ಸ್ತ್ರೀ ಮನೆಗೆ ಹೋಗು. ದಾರಿಯಲ್ಲಿ ಯಾರಾದ್ರೂ ನಿನಗೆ ಸಿಕ್ಕಿದ್ರೆ ಅವ್ರಿಗೆ ವಂದಿಸಬೇಡ. ಯಾರಾದ್ರೂ ನಿನಗೆ ವಂದಿಸಿದ್ರೆ ಅವ್ರಿಗೆ ಉತ್ರ ಕೊಡಬೇಡ. ಹೋಗಿ ನನ್ನ ಕೋಲನ್ನ ಆ ಹುಡುಗನ ಮುಖದ ಮೇಲೆ ಇಡು” ಅಂದ. 30 ಅದಕ್ಕೆ ಆ ಹುಡುಗನ ತಾಯಿ ಎಲೀಷನಿಗೆ “ಜೀವ ಇರೋ ಯೆಹೋವನ ಆಣೆ ಮತ್ತು ನಿನ್ನಾಣೆ ನೀನು ನನ್ನ ಜೊತೆ ಬರದಿದ್ರೆ ನಾನು ನಿನ್ನನ್ನ ಬಿಡಲ್ಲ”+ ಅಂದಳು. ಹಾಗಾಗಿ ಎಲೀಷ ಆ ಸ್ತ್ರೀ ಜೊತೆ ಹೊರಟ. 31 ಗೇಹಜಿ ಅವರಿಬ್ಬರಿಗಿಂತ ಮೊದಲೇ ಹೋಗಿ ಕೋಲನ್ನ ಆ ಹುಡುಗನ ಮುಖದ ಮೇಲೆ ಇಟ್ಟ. ಆದ್ರೆ ಆ ಹುಡುಗ ಅಲ್ಲಾಡಲಿಲ್ಲ, ಅವನಿಂದ ಯಾವ ಶಬ್ದನೂ ಬರಲಿಲ್ಲ.+ ಹಾಗಾಗಿ ಅವನು ವಾಪಸ್ ಹೋಗಿ ಎಲೀಷನನ್ನ ಭೇಟಿಮಾಡಿ “ಹುಡುಗ ಎದ್ದೇಳಲಿಲ್ಲ!” ಅಂದ.
32 ಎಲೀಷ ಆ ಸ್ತ್ರೀಯ ಮನೆಗೆ ಬಂದಾಗ ತನ್ನ ಹಾಸಿಗೆ ಮೇಲೆ ಸತ್ತ ಹುಡುಗನ ಶವ ಇರೋದನ್ನ ನೋಡಿದ.+ 33 ಅವನು ಒಳಗೆ ಹೋಗಿ ಬಾಗಿಲು ಮುಚ್ಕೊಂಡ. ಆ ಕೋಣೆಯಲ್ಲಿ ಅವರಿಬ್ರನ್ನ ಬಿಟ್ರೆ ಬೇರೆ ಯಾರೂ ಇರಲಿಲ್ಲ. ಆಮೇಲೆ ಎಲೀಷ ಯೆಹೋವನಿಗೆ ಪ್ರಾರ್ಥಿಸೋಕೆ ಶುರು ಮಾಡ್ದ.+ 34 ಅವನು ಹಾಸಿಗೆ ಹತ್ತಿ ಹುಡುಗನ ಮೇಲೆ ಮಲಗಿ ಆ ಹುಡುಗನ ಬಾಯಿಗೆ ತನ್ನ ಬಾಯನ್ನ, ಅವನ ಕಣ್ಣುಗಳಿಗೆ ತನ್ನ ಕಣ್ಣುಗಳನ್ನ, ಅವನ ಅಂಗೈಗಳಿಗೆ ತನ್ನ ಅಂಗೈಗಳನ್ನ ಇಟ್ಟ. ಇದೇ ತರ ಎಲೀಷ ಆ ಹುಡುಗನ ಮೇಲೆ ಸ್ವಲ್ಪ ಹೊತ್ತು ಮಲಗಿದ್ದ. ಆಗ ಹುಡುಗನ ಶರೀರ ಬೆಚ್ಚಗಾಗೋಕೆ ಶುರುವಾಯ್ತು.+ 35 ಎಲೀಷ ಎದ್ದು ಕೋಣೆಯಲ್ಲಿ ಅತ್ತಿತ್ತ ಓಡಾಡಿ ಹಾಸಿಗೆ ಹತ್ತಿ ಹುಡುಗನ ಮೇಲೆ ಮತ್ತೆ ಬಂದು ಮಲಗಿದ. ಹುಡುಗ ಏಳು ಸಲ ಸೀನಿದ. ಆಮೇಲೆ ಕಣ್ಣು ತೆರೆದ.+ 36 ಆಗ ಎಲೀಷ ಗೇಹಜಿಯನ್ನ ಕರೆದು “ಆ ಶೂನೇಮಿನ ಸ್ತ್ರೀಯನ್ನ ಕರಿ” ಅಂದ. ಅವನು ಹೋಗಿ ಕರೆದಾಗ ಅವಳು ಎಲೀಷನ ಹತ್ರ ಬಂದಳು. ಎಲೀಷ ಅವಳಿಗೆ “ನಿನ್ನ ಮಗನನ್ನ ಎತ್ಕೊ”+ ಅಂದ. 37 ಆಗ ಅವಳು ಎಲೀಷನ ಕಾಲಿಗೆ ಬಿದ್ದು ನೆಲಕ್ಕೆ ಬಗ್ಗಿ ನಮಸ್ಕರಿಸಿದಳು. ತನ್ನ ಮಗನನ್ನ ಎತ್ಕೊಂಡು ಹೋದಳು.
38 ಎಲೀಷ ಗಿಲ್ಗಾಲಿಗೆ ವಾಪಸ್ ಬಂದಾಗ ಆ ದೇಶದಲ್ಲಿ ಬರ ಇತ್ತು.+ ಪ್ರವಾದಿಗಳ ಗಂಡು ಮಕ್ಕಳು+ ಅವನ ಮುಂದೆ ಬಂದು ಕೂತಾಗ ಅವನು ತನ್ನ ಸೇವಕನಿಗೆ+ “ಒಲೆ ಮೇಲೆ ದೊಡ್ಡ ಪಾತ್ರೆ ಇಟ್ಟು ಪ್ರವಾದಿಗಳ ಗಂಡು ಮಕ್ಕಳಿಗಾಗಿ ಅಡುಗೆ ಮಾಡು” ಅಂದ. 39 ಅವ್ರಲ್ಲಿ ಒಬ್ಬ ತರಕಾರಿ ತರೋಕೆ ಹೊಲಕ್ಕೆ ಹೋದ. ಅಲ್ಲಿ ಅವನಿಗೆ ಒಂದು ಕಾಡು ಬಳ್ಳಿ ಕಾಣಿಸ್ತು. ಅವನು ಅದ್ರ ಹಣ್ಣುಗಳನ್ನ ಕಿತ್ತು ತನ್ನ ಬಟ್ಟೆಯಲ್ಲಿ ತುಂಬ್ಕೊಂಡು ಬಂದ ಮತ್ತು ಅವುಗಳನ್ನ ತುಂಡುತುಂಡು ಮಾಡಿ ಪಾತ್ರೆಯೊಳಗೆ ಹಾಕಿದ. ಆದ್ರೆ ಅವನಿಗೆ ಅದು ಎಂಥ ಹಣ್ಣಂತ ಗೊತ್ತಿರಲಿಲ್ಲ. 40 ಆಮೇಲೆ ಆಹಾರವನ್ನ ಪ್ರವಾದಿಗಳ ಗಂಡು ಮಕ್ಕಳಿಗೆ ಬಡಿಸಲಾಯ್ತು. ಆದ್ರೆ ಅವರು ತಮ್ಮ ಬಾಯಿಗೆ ಆ ಆಹಾರ ಇಟ್ಟ ತಕ್ಷಣ “ಇದು ವಿಷ, ಸತ್ಯ ದೇವರ ಮನುಷ್ಯನೇ ಇದು ವಿಷ” ಅಂತ ಜೋರಾಗಿ ಕೂಗಿದ್ರು. ಅವ್ರಿಗೆ ಅದನ್ನ ತಿನ್ನೋಕೆ ಆಗಲಿಲ್ಲ. 41 ತಕ್ಷಣ ಎಲೀಷ “ಸ್ವಲ್ಪ ಹಿಟ್ಟು ತನ್ನಿ” ಅಂದ. ಅವನು ಆ ಹಿಟ್ಟನ್ನ ಪಾತ್ರೆಯೊಳಗೆ ಹಾಕಿ “ಈಗ ಇದನ್ನ ಜನ್ರಿಗೆ ಬಡಿಸಿ” ಅಂದ. ಆಗ ಪಾತ್ರೆಯಲ್ಲಿದ್ದ ಆಹಾರದಲ್ಲಿ ಯಾವುದೇ ವಿಷ ಇರ್ಲಿಲ್ಲ.+
42 ಒಂದಿನ ಬಾಳ್-ಷಾಲಿಷಾ+ ಅನ್ನೋ ಊರಿಂದ ಒಬ್ಬ ವ್ಯಕ್ತಿ ಬಂದು ಸತ್ಯ ದೇವರ ಮನುಷ್ಯನಿಗೆ ಜವೆಗೋದಿಯ 20 ರೊಟ್ಟಿಗಳನ್ನ ಕೊಟ್ಟ.+ ಈ ರೊಟ್ಟಿಗಳನ್ನ ಮೊದಲ ಬೆಳೆಯಿಂದ ಮಾಡಲಾಗಿತ್ತು. ಜೊತೆಗೆ ಅವನು ಒಂದು ಚೀಲ ತುಂಬ ಹೊಸ ಧಾನ್ಯ ಕೊಟ್ಟ.+ ಆಗ ಎಲೀಷ ಅವನಿಗೆ “ಇದನ್ನ ಜನ್ರಿಗೆ ಕೊಡು. ಅವರು ಅದನ್ನ ತಿನ್ನಲಿ” ಅಂದ. 43 ಅದಕ್ಕೆ ಅವನ ಸೇವಕ “ನಾನು ಇದನ್ನ 100 ಗಂಡಸರಿಗೆ ಹೇಗೆ ಹಂಚಲಿ?”+ ಅಂತ ಕೇಳಿದ. ಅದಕ್ಕೆ ಎಲೀಷ “ನೀನು ಇದನ್ನ ಜನ್ರಿಗೆ ತಿನ್ನೋಕೆ ಕೊಡು. ಯಾಕಂದ್ರೆ ‘ಇದು ಎಲ್ರಿಗೂ ಸಾಕಾಗುತ್ತೆ. ಅಷ್ಟೇ ಅಲ್ಲ ಎಲ್ರೂ ತಿಂದ ಮೇಲೂ ಉಳಿಯುತ್ತೆ’+ ಅಂತ ಯೆಹೋವ ಹೇಳಿದ್ದಾನೆ” ಅಂದ. 44 ಆಗ ಅವನು ಅದನ್ನ ಜನ್ರಿಗೆ ಬಡಿಸಿದ. ಯೆಹೋವ ಹೇಳಿದ ಹಾಗೇ ಅವ್ರೆಲ್ಲ ಅದನ್ನ ತಿಂದ್ರು. ಅವರು ತಿಂದ ಮೇಲೂ ಆಹಾರ ಉಳಿತು.+