ಒಂದನೇ ಅರಸು
3 ಸೊಲೊಮೋನ ಈಜಿಪ್ಟ್ ರಾಜ ಫರೋಹನ ಮಗಳನ್ನ ಮದ್ವೆ ಮಾಡ್ಕೊಂಡು ಅವನ ಅಳಿಯನಾದ.+ ಅವನು ತನ್ನ ಹೆಂಡತಿನ ದಾವೀದಪಟ್ಟಣಕ್ಕೆ+ ಕರ್ಕೊಂಡು ಬಂದ. ತನ್ನ ಸ್ವಂತ ಮನೆ,+ ಯೆಹೋವನ ಆಲಯ+ ಮತ್ತು ಯೆರೂಸಲೇಮ್ ಸುತ್ತ ಗೋಡೆ+ ಕಟ್ಟಿ ಮುಗಿಸೋ ತನಕ ಅವಳಿಗೆ ಅಲ್ಲೇ ಇರೋಕೆ ಏರ್ಪಾಡು ಮಾಡಿದ. 2 ಯೆಹೋವನ ಹೆಸ್ರಿಗೆ ಗೌರವ ತರೋಕೆ ಇಲ್ಲಿ ತನಕ ಒಂದು ಆಲಯನೂ ಕಟ್ಟಿರಲಿಲ್ಲ.+ ಹಾಗಾಗಿ ಜನ್ರಿನ್ನೂ ಎತ್ರದ ಸ್ಥಳಗಳಲ್ಲೇ ಬಲಿಗಳನ್ನ ಕೊಡ್ತಿದ್ರು.+ 3 ಸೊಲೊಮೋನನೂ ಆರಾಧನೆ ಮಾಡೋಕೆ ಇರೋ ಎತ್ತರವಾದ ಸ್ಥಳಗಳಲ್ಲಿ ಬಲಿ ಕೊಟ್ಟು, ಅದ್ರ ಹೊಗೆ ಮೇಲೇರೋ ತರ ಮಾಡ್ತಿದ್ದ. ಇದನ್ನ ಬಿಟ್ಟು ಬೇರೆಲ್ಲ ವಿಷ್ಯಗಳನ್ನ ತನ್ನ ತಂದೆ ದಾವೀದ ಹೇಳಿರೋ ನಿಯಮಗಳ ತರಾನೇ ಮಾಡಿದ. ಹೀಗೆ ಅವನು ಯೆಹೋವನನ್ನ ಪ್ರೀತಿಸ್ತಿದ್ದ.+
4 ರಾಜ ಸೊಲೊಮೋನ ಗಿಬ್ಯೋನಿಗೆ ಹೋಗಿ ಬಲಿ ಕೊಟ್ಟ. ಯಾಕಂದ್ರೆ ಅಲ್ಲಿದ್ದ ಎತ್ತರ ಸ್ಥಳ ಬೇರೆಲ್ಲ ಎತ್ತರ ಸ್ಥಳಗಳಿಗಿಂತ ವಿಶೇಷವಾಗಿತ್ತು.+ ಅವನು ಅಲ್ಲಿದ್ದ ಯಜ್ಞವೇದಿ ಮೇಲೆ 1,000 ಸರ್ವಾಂಗಹೋಮ ಬಲಿಗಳನ್ನ ಕೊಟ್ಟ.+ 5 ಆ ರಾತ್ರಿ ಗಿಬ್ಯೋನಿನಲ್ಲಿ ಯೆಹೋವ ಸೊಲೊಮೋನನಿಗೆ ಕನಸಲ್ಲಿ ಕಾಣಿಸ್ಕೊಂಡು “ನಿನಗೇನು ಬೇಕೋ ಕೇಳು, ಕೊಡ್ತೀನಿ”+ ಅಂದನು. 6 ಅದಕ್ಕೆ ಸೊಲೊಮೋನ “ನಿನ್ನ ಸೇವಕನಾದ ನನ್ನ ಅಪ್ಪ ದಾವೀದ ನಿನಗೆ ನಂಬಿಗಸ್ತನಾಗಿ, ನೀತಿವಂತನಾಗಿ ಪ್ರಾಮಾಣಿಕ ಹೃದಯದಿಂದ ನಡ್ಕೊಂಡ. ಅದಕ್ಕೇ ನೀನು ಅವನಿಗೆ ಶಾಶ್ವತ ಪ್ರೀತಿ ತೋರಿಸಿದೆ. ಅವನ ಸಿಂಹಾಸನದಲ್ಲಿ ಕೂತ್ಕೊಳ್ಳೋಕೆ ಅವನಿಗೊಬ್ಬ ಮಗನನ್ನ ಕೊಟ್ಟು ಅವನಿಗೆ ನಿನ್ನ ಶಾಶ್ವತ ಪ್ರೀತಿನ ಇವತ್ತಿನ ತನಕ ತುಂಬ ತೋರಿಸ್ತಾ ಬಂದಿದ್ದೀಯ.+ 7 ಯೆಹೋವನೇ, ನನ್ನ ದೇವರೇ, ನಾನು ಯುವಕನಾಗಿದ್ರೂ* ನನಗೆ ಅಷ್ಟೇನೂ ಅನುಭವ ಇಲ್ಲದಿದ್ರೂ+ ನನ್ನ ಅಪ್ಪ ದಾವೀದನ ಸ್ಥಾನದಲ್ಲಿ ನನ್ನನ್ನ ರಾಜನಾಗಿ ಮಾಡಿದ್ದೀಯ. 8 ನೀನು ಆರಿಸ್ಕೊಂಡ ಜನ್ರ ಮೇಲೆ+ ಈ ನಿನ್ನ ಸೇವಕನನ್ನ ರಾಜನಾಗಿ ನೇಮಿಸಿದ್ದೀಯ. ಆ ಜನ್ರನ್ನ ಲೆಕ್ಕ ಮಾಡೋಕೆ ಆಗಲ್ಲ. 9 ಅಂಥ ದೊಡ್ಡ* ಜನಾಂಗವನ್ನ ಆಳೋದು ನಿಜಕ್ಕೂ ಒಂದು ದೊಡ್ಡ ಜವಾಬ್ದಾರಿ. ಹಾಗಾಗಿ ನಾನು ಮನಸಾರೆ ನಿನ್ನ ಮಾತು ಕೇಳೋಕೆ ನನಗೆ ಸಹಾಯ ಮಾಡು. ಇದ್ರಿಂದ ನಿನ್ನ ಜನ್ರಿಗೆ ನ್ಯಾಯವಾಗಿ ತೀರ್ಪು ಕೊಡೋಕೆ,+ ಯಾವುದು ಸರಿ ಯಾವುದು ತಪ್ಪು ಅಂತ ವಿವೇಚಿಸಿ ತಿಳ್ಕೊಳ್ಳೋಕೆ+ ಆಗುತ್ತೆ” ಅಂತ ಕೇಳ್ಕೊಂಡ.
10 ಸೊಲೊಮೋನನ ಈ ಕೋರಿಕೆ ಕೇಳಿ ಯೆಹೋವನಿಗೆ ತುಂಬ ಖುಷಿ ಆಯ್ತು.+ 11 ಆಗ ದೇವರು “ನೀನು ತುಂಬ ವರ್ಷ ಬದುಕಬೇಕು ಅಂತಾಗಲಿ, ಹಣ ಆಸ್ತಿ ಅಥವಾ ನಿನ್ನ ಶತ್ರುಗಳ ಪ್ರಾಣ ಆಗಲಿ ಕೇಳಲಿಲ್ಲ. ಅದ್ರ ಬದ್ಲು ನ್ಯಾಯವಾಗಿ ತೀರ್ಪು ಮಾಡೋಕೆ ವಿವೇಕ ಕೊಡು ಅಂತ ಬೇಡ್ಕೊಂಡೆ.+ 12 ನೀನು ಕೇಳಿದ್ದನ್ನ ಕೊಡ್ತೀನಿ.+ ನಿನಗೆ ವಿವೇಕದಿಂದ ತುಂಬಿರೋ, ಅರ್ಥ ಮಾಡ್ಕೊಳ್ಳೋಕೆ ಆಗೋ ಹೃದಯ ಕೊಡ್ತೀನಿ.+ ನಿನ್ನಂಥ ವ್ಯಕ್ತಿ ಹಿಂದೆ ಇರ್ಲೂ ಇಲ್ಲ, ಮುಂದೆ ಬರೋದೂ ಇಲ್ಲ.+ 13 ನೀನು ಕೇಳದಿದ್ರೂ ಹಣ-ಆಸ್ತಿ, ಗೌರವ+ ಸಿಗೋ ಹಾಗೇ ಮಾಡ್ತೀನಿ.+ ನಿನ್ನ ಜೀವಮಾನದಲ್ಲಿ ಬೇರೆ ಯಾವ ರಾಜನೂ ನಿನಗೆ ಸಮಾನನಾಗಿ ಇರಲ್ಲ.+ 14 ನಿನ್ನ ಅಪ್ಪ ದಾವೀದನ ತರ ನೀನೂ ನನ್ನ ನಿಯಮಗಳನ್ನ, ಆಜ್ಞೆಗಳನ್ನ ಪಾಲಿಸ್ತಾ ನನ್ನ ದಾರಿಯಲ್ಲಿ ನಡೆದ್ರೆ+ ನೀನು ಜಾಸ್ತಿ ವರ್ಷ ಬದುಕೋ ತರ ಮಾಡ್ತೀನಿ”+ ಅಂದನು.
15 ಸೊಲೊಮೋನನಿಗೆ ಎಚ್ಚರ ಆದಾಗ ಅದು ಒಂದು ಕನಸು ಅಂತ ಗೊತ್ತಾಯ್ತು. ಆಗ ಅವನು ಯೆರೂಸಲೇಮಿಗೆ ಹೋಗಿ ಯೆಹೋವನ ಒಪ್ಪಂದದ ಮಂಜೂಷದ ಮುಂದೆ ನಿಂತು ಸರ್ವಾಂಗಹೋಮ ಬಲಿಗಳನ್ನ, ಸಮಾಧಾನ ಬಲಿಗಳನ್ನ+ ಕೊಟ್ಟ. ತನ್ನೆಲ್ಲ ಸೇವಕರಿಗಾಗಿ ಒಂದು ಔತಣ ಮಾಡಿಸಿದ.
16 ಆಮೇಲೆ ಇಬ್ರು ವೇಶ್ಯೆಯರು ರಾಜನ ಮುಂದೆ ಬಂದು ನಿಂತ್ರು. 17 ಮೊದಲ್ನೇ ಸ್ತ್ರೀ ರಾಜಗೆ “ನನ್ನ ಒಡೆಯನೇ, ನಾನು ಮತ್ತು ಈ ಸ್ತ್ರೀ ಒಂದೇ ಮನೇಲಿ ಇದ್ದೀವಿ. ನನಗೊಂದು ಮಗು ಹುಟ್ತು. 18 ಇದಾದ ಮೂರೇ ದಿನಕ್ಕೆ ಇವಳಿಗೂ ಒಂದು ಮಗು ಆಯ್ತು. ಆ ಮನೇಲಿ ಇದ್ದವರು ನಾವಿಬ್ರೇ. ನಮ್ಮನ್ನ ಬಿಟ್ಟು ಬೇರೆ ಯಾರೂ ಇರ್ಲಿಲ್ಲ. 19 ರಾತ್ರಿ ಮಲಗಿದ್ದಾಗ ಅವಳು ತನ್ನ ಮಗು ಮೇಲೆ ಹೊರಳಿದ್ರಿಂದ ಅವಳ ಮಗು ಸತ್ತು ಹೋಯ್ತು. 20 ಹಾಗಾಗಿ ಅವಳು ಮಧ್ಯ ರಾತ್ರೀಲಿ ಎದ್ದು ನಾನು ನಿದ್ದೆ ಮಾಡ್ತಿದ್ದಾಗ ನನ್ನ ಮಗುನ ತಗೊಂಡು ಅವಳ ಪಕ್ಕದಲ್ಲಿ ಮಲಗಿಸ್ಕೊಂಡು, ಸತ್ತ ಮಗುನ ನನ್ನ ಪಕ್ಕದಲ್ಲಿ ಮಲಗಿಸಿದ್ದಾಳೆ. 21 ಬೆಳಿಗ್ಗೆ ನಾನು ಮಗುಗೆ ಹಾಲು ಕುಡಿಸೋಕೆ ಎದ್ದಾಗ ಅದು ಸತ್ತುಹೋಗಿತ್ತು. ಆದ್ರೆ ನಾನು ಚೆನ್ನಾಗಿ ನೋಡಿದಾಗ ಅದು ನನ್ನ ಮಗು ಅಲ್ಲ ಅಂತ ಗೊತ್ತಾಯ್ತು” ಅಂದಳು. 22 ಆದ್ರೆ ಎರಡನೆಯವಳು “ಇಲ್ಲ, ಬದುಕಿರೋ ಮಗು ನಂದು. ಸತ್ತಿರೋದು ನಿನ್ನ ಮಗುನೇ!” ಅಂದಳು. ಅದಕ್ಕೆ ಮೊದಲನೆಯವಳು “ಇಲ್ಲ, ಸತ್ತಿರೋ ಮಗು ನಿಂದು, ಬದುಕಿರೋದು ನಂದು!” ಅಂದಳು. ಹೀಗೆ ಅವರಿಬ್ರೂ ರಾಜನ ಮುಂದೆ ಕಿತ್ತಾಡ್ತಿದ್ರು.
23 ಕೊನೆಗೆ ರಾಜ “ಇವಳು ನೋಡಿದ್ರೆ, ‘ಬದುಕಿರೋದು ನನ್ನ ಮಗು, ಸತ್ತಿರೋದು ನಿನ್ನ ಮಗು!’ ಅಂತಾಳೆ. ಅವಳು ನೋಡಿದ್ರೆ ‘ಇಲ್ಲ, ಸತ್ತಿರೋದು ನಿನ್ನ ಮಗು ಬದುಕಿರೋದು ನಂದು!’ ಅಂತ ಹೇಳ್ತಾಳೆ” ಅನ್ನುತ್ತಾ 24 ಅಲ್ಲಿದ್ದವ್ರಿಗೆ “ಒಂದು ಕತ್ತಿ ತಗೊಂಡು ಬನ್ನಿ” ಅಂದ. ಆಗ ಅವರು ರಾಜನಿಗೆ ಕತ್ತಿ ತಂದ್ಕೊಟ್ರು. 25 ಆಮೇಲೆ ರಾಜ “ಬದುಕಿರೋ ಮಗುನ ಎರಡು ಭಾಗ ಮಾಡಿ. ಅರ್ಧ ಇವಳಿಗೆ, ಇನ್ನರ್ಧ ಅವಳಿಗೆ ಕೊಡಿ” ಅಂದ. 26 ಬದುಕಿರೋ ಮಗುವಿನ ತಾಯಿಗೆ ತನ್ನ ಮಗು ಮೇಲೆ ಮಮಕಾರ ಉಕ್ಕಿ, ತಕ್ಷಣ ರಾಜನನ್ನ ಬೇಡ್ತಾ “ನನ್ನ ಒಡೆಯ, ಹಾಗೆ ಮಾಡಬೇಡ. ದಯವಿಟ್ಟು ಬದುಕಿರೋ ಮಗುನ ಅವಳಿಗೇ ಕೊಟ್ಟುಬಿಡು. ಅದನ್ನ ಯಾವುದೇ ಕಾರಣಕ್ಕೂ ಕೊಂದು ಹಾಕಬೇಡ” ಅಂದಳು. ಆದ್ರೆ ಇನ್ನೊಬ್ಬಳು “ಆ ಮಗು ನಂಗೂ ಬೇಡ, ನಿಂಗೂ ಬೇಡ! ಅವರು ಅದನ್ನ ಎರಡು ಭಾಗ ಮಾಡ್ಲಿ!” ಅಂತಿದ್ದಳು. 27 ಅದಕ್ಕೆ ರಾಜ “ಮಗುನ ಸಾಯಿಸಬೇಡಿ, ಅದನ್ನ ಈ ಮೊದಲ್ನೇ ಸ್ತ್ರೀಗೆ ಕೊಡಿ! ಅವಳೇ ಆ ಮಗುವಿನ ತಾಯಿ” ಅಂದ.
28 ರಾಜ ಕೊಟ್ಟ ಈ ತೀರ್ಪಿನ ಬಗ್ಗೆ ಇಡೀ ಇಸ್ರಾಯೇಲಿಗೆ ಗೊತ್ತಾಯ್ತು. ರಾಜನಿಗೆ ದೇವರು ವಿವೇಕ ಕೊಟ್ಟಿದ್ರಿಂದ ಅವನು ಹೀಗೆ ತೀರ್ಪು ಕೊಟ್ಟ ಅಂತ ಜನ್ರು ತಿಳ್ಕೊಂಡ್ರು.+ ಹಾಗಾಗಿ ಅವರು ರಾಜನಿಗೆ ತುಂಬ ಗೌರವ ಕೊಟ್ರು.*+