ಎರಡನೇ ಸಮುವೇಲ
15 ಈ ವಿಷ್ಯಗಳಾದ ಮೇಲೆ ಅಬ್ಷಾಲೋಮ ತನಗಾಗಿ ಒಂದು ರಥವನ್ನ, ಕುದುರೆಗಳನ್ನ ತಗೊಂಡ. ತನ್ನ ಮುಂದೆ ಓಡೋಕೆ 50 ಗಂಡಸ್ರನ್ನ ಇಟ್ಟ.+ 2 ಅಬ್ಷಾಲೋಮ ಬೆಳಿಗ್ಗೆ ಬೇಗ ಎದ್ದು ಪಟ್ಟಣದ ಬಾಗಿಲ ಹತ್ರ ಇದ್ದ ದಾರಿ ಬದಿಯಲ್ಲಿ ನಿಂತ್ಕೊಳ್ತಿದ್ದ.+ ಏನಾದ್ರೂ ಸಮಸ್ಯೆ ಇದ್ರೆ ನ್ಯಾಯವಿಚಾರಣೆಗಾಗಿ ರಾಜನ ಹತ್ರ ಒಬ್ಬ ವ್ಯಕ್ತಿ ಹೋಗ್ತಿದ್ರೆ+ ಅಬ್ಷಾಲೋಮ ಅವನನ್ನ ಕರೆದು “ನಿನ್ನ ಊರು ಯಾವುದು?” ಅಂತ ಕೇಳ್ತಿದ್ದ. ಆಗ ಆ ವ್ಯಕ್ತಿ ಇಸ್ರಾಯೇಲಿನ ಯಾವ ಕುಲಕ್ಕೆ ಸೇರಿದವನು ಅಂತ ಹೇಳ್ತಿದ್ದ. 3 ಆಗ ಅಬ್ಷಾಲೋಮ “ನೋಡು, ನಿನ್ನ ಬೇಡಿಕೆ ಸರಿಯಾಗಿದೆ, ನಿನಗೆ ನ್ಯಾಯ ಸಿಗಬೇಕು. ಆದ್ರೆ ನಿನ್ನ ಸಮಸ್ಯೆಯನ್ನ ಕೇಳಿಸ್ಕೊಳ್ಳೋಕೆ ರಾಜನ ಕಡೆಯಿಂದ ಯಾರೂ ಇಲ್ಲ” ಅಂತ ಹೇಳ್ತಿದ್ದ. 4 ಆಮೇಲೆ ಅಬ್ಷಾಲೋಮ ಹೀಗೆ ಹೇಳ್ತಿದ್ದ: “ಈ ದೇಶದ ನ್ಯಾಯಾಧೀಶನಾಗಿ ನನ್ನನ್ನ ನೇಮಿಸಿದ್ರೆ ಎಲ್ರೂ ನನ್ನ ಹತ್ರ ಬರಬಹುದಿತ್ತು. ನಾನು ಅವ್ರ ಸಮಸ್ಯೆ ಕೇಳಿ ವಿಚಾರಣೆ ಮಾಡಿ ನ್ಯಾಯ ಕೊಡಿಸ್ತಿದ್ದೆ.”
5 ಅಬ್ಷಾಲೋಮನ ಹತ್ರ ಬಂದು ಬಗ್ಗಿ ನಮಸ್ಕಾರ ಮಾಡೋಕೆ ಹೋದವ್ರನ್ನ ಕೂಡ್ಲೇ ಕೈಚಾಚಿ ಅವ್ರನ್ನ ಹಿಡಿದು ಮುತ್ತು ಕೊಡ್ತಿದ್ದ.+ 6 ನ್ಯಾಯವಿಚಾರಣೆಗಾಗಿ ರಾಜನ ಹತ್ರ ಬರ್ತಿದ್ದ ಎಲ್ಲ ಇಸ್ರಾಯೇಲ್ಯರಿಗೂ ಅಬ್ಷಾಲೋಮ ಇದನ್ನೇ ಮಾಡ್ತಿದ್ದ. ಹೀಗೆ ಅಬ್ಷಾಲೋಮ ಇಸ್ರಾಯೇಲಿನ ಗಂಡಸ್ರ ಹೃದಯ ಗೆಲ್ತಾ ಹೋದ.+
7 ನಾಲ್ಕನೇ ವರ್ಷದ* ಕೊನೆಯಲ್ಲಿ ಅಬ್ಷಾಲೋಮ ರಾಜನಿಗೆ “ಹೆಬ್ರೋನಿಗೆ+ ಹೋಗಿ ಯೆಹೋವನಿಗೆ ಹೊತ್ತ ಹರಕೆ ತೀರಿಸೋಕೆ ದಯವಿಟ್ಟು ನನಗೆ ಅನುಮತಿ ಕೊಡು.8 ಯಾಕಂದ್ರೆ ಅರಾಮ್ಯದ ಗೆಷೂರಲ್ಲಿ+ ನಿನ್ನ ಸೇವಕನಾದ ನಾನು ಇದ್ದಾಗ ‘ನನ್ನನ್ನ ಯೆಹೋವ ಯೆರೂಸಲೇಮಿಗೆ ವಾಪಸ್ ಕರ್ಕೊಂಡು ಬಂದ್ರೆ ಯೆಹೋವನಿಗೆ ಬಲಿ ಅರ್ಪಿಸ್ತೀನಿ’* ಅಂತ ಹರಕೆ ಮಾಡಿದ್ದೆ”+ ಅಂದ. 9 ಅದಕ್ಕೆ ರಾಜ “ಸಮಾಧಾನವಾಗಿ ಹೋಗಿ ಬಾ” ಅಂದ. ಆಗ ಅವನು ಹೆಬ್ರೋನಿಗೆ ಹೋದ.
10 ಅಬ್ಷಾಲೋಮ ಇಸ್ರಾಯೇಲಿನ ಎಲ್ಲ ಕುಲಗಳಿಗೆ ಗೂಢಚಾರರನ್ನ ಕಳಿಸಿ “ಕೊಂಬಿನ ಶಬ್ದ ಕೇಳಿದ ಕೂಡ್ಲೇ ‘ಅಬ್ಷಾಲೋಮ ಹೆಬ್ರೋನಲ್ಲಿ ರಾಜನಾಗಿದ್ದಾನೆ!’+ ಅಂತ ಎಲ್ರಿಗೂ ಹೇಳಿ” ಅಂತ ಹೇಳಿದ. 11 ಯೆರೂಸಲೇಮಿಂದ 200 ಗಂಡಸ್ರು ಅಬ್ಷಾಲೋಮನ ಜೊತೆ ಅಲ್ಲಿಗೆ ಹೋಗಿದ್ರು. ಅಬ್ಷಾಲೋಮ ಅವ್ರನ್ನ ಕರ್ಕೊಂಡು ಹೋಗಿದ್ದ. ಅವ್ರೆಲ್ಲ ಸಂಶಯಪಡದೆ ಹೋಗಿದ್ರು. ಏನು ನಡಿತಿದೆ ಅಂತ ಅವ್ರಿಗೆ ಗೊತ್ತಿರಲಿಲ್ಲ. 12 ಆಮೇಲೆ ಅಬ್ಷಾಲೋಮ ಬಲಿಗಳನ್ನ ಅರ್ಪಿಸ್ತಿದ್ದಾಗ ಗೀಲೋದವನಾದ ಅಹೀತೋಫೆಲನನ್ನ+ ಅವನ ಪಟ್ಟಣವಾದ ಗೀಲೋನಿಂದ+ ಬರೋಕೆ ಹೇಳಿದ. ಅಹೀತೋಫೆಲ ದಾವೀದನ ಸಲಹೆಗಾರ.*+ ಅಬ್ಷಾಲೋಮನ ಸಂಚಿನ ಪ್ರಕಾರನೇ ಎಲ್ಲ ನಡಿತಾ ಹೋಯ್ತು. ಅವನನ್ನ ಬೆಂಬಲಿಸ್ತಿದ್ದ ಜನ್ರೂ ಜಾಸ್ತಿ ಆದ್ರು.+
13 ಸ್ವಲ್ಪ ಸಮಯ ಆದ್ಮೇಲೆ ಒಬ್ಬ ಸಂದೇಶವಾಹಕ ದಾವೀದನ ಹತ್ರ ಬಂದು “ಇಸ್ರಾಯೇಲ್ ಗಂಡಸ್ರೆಲ್ಲ ಅಬ್ಷಾಲೋಮನ ಕಡೆ ಹೋಗಿಬಿಟ್ರು” ಅಂದ. 14 ಕೂಡ್ಲೇ ದಾವೀದ ಯೆರೂಸಲೇಮಲ್ಲಿ ತನ್ನ ಜೊತೆ ಇದ್ದ ಎಲ್ಲ ಸೇವಕರಿಗೆ “ನಮ್ಮಲ್ಲಿ ಯಾರೂ ಅಬ್ಷಾಲೋಮನ ಕೈಯಿಂದ ತಪ್ಪಿಸಿಕೊಳ್ಳೋಕೆ ಆಗಲ್ಲ. ಇಲ್ಲಿಂದ ಓಡಿಹೋಗೋಣ!+ ಅವನು ತಕ್ಷಣ ನಮ್ಮನ್ನ ಅಟ್ಟಿಸ್ಕೊಂಡು ಬಂದು ನಮಗೇನಾದ್ರೂ ಮಾಡಬಹುದು, ಇಡೀ ಪಟ್ಟಣದ ಜನ್ರನ್ನ ಕತ್ತಿಯಿಂದ ಕೊಲ್ಲಬಹುದು.+ ಬೇಗಬೇಗ ಹೋಗಿ!” ಅಂದ. 15 ಆಗ ರಾಜನ ಸೇವಕರು “ನಮ್ಮ ಒಡೆಯನಾದ ರಾಜ ಯಾವ ತೀರ್ಮಾನ ತಗೊಂಡ್ರೂ ಅದನ್ನ ಮಾಡೋಕೆ ನಿನ್ನ ಸೇವಕರು ತಯಾರಿದ್ದಾರೆ”+ ಅಂದ್ರು. 16 ಹಾಗಾಗಿ ರಾಜ ತನ್ನ ಕುಟುಂಬದ ಎಲ್ಲ ಸದಸ್ಯರನ್ನ ಕರ್ಕೊಂಡು ಹೋದ. ಆದ್ರೆ ಅರಮನೆ ನೋಡ್ಕೊಳ್ಳೋಕೆ 10 ಉಪಪತ್ನಿಯರನ್ನ ಬಿಟ್ಟುಹೋದ.+ 17 ರಾಜ ಮುಂದೆ ಹೋಗ್ತಿದ್ದ, ಜನ್ರೆಲ್ಲ ಅವನ ಹಿಂದೆ ಬರ್ತಾ ಇದ್ರು. ಅವರು ಬೇತ್-ಮೆರಾಕಿಗೆ ಬಂದು ಅಲ್ಲಿ ನಿಂತ್ರು.
18 ಅವನ ಜೊತೆ ಅವನ ಎಲ್ಲ ಸೇವಕರು, ಎಲ್ಲ ಕೆರೇತ್ಯರು, ಪೆಲೇತ್ಯರು,+ ಗತ್+ ಊರಿಂದ ಅವನ ಜೊತೆ ಬಂದಿದ್ದ 600 ಗಿತ್ತೀಯರು+ ಇದ್ರು.* ಅವ್ರೆಲ್ಲ ರಾಜನ ಮುಂದೆ ಹೋಗ್ತಿದ್ದಾಗ ಎಲ್ರೂ ಇದ್ದಾರಾ ಇಲ್ವಾ ಅಂತ ರಾಜ ಪರೀಕ್ಷಿಸಿದ್ದ. 19 ಆಗ ರಾಜ ಗಿತ್ತೀಯನಾದ ಇತೈಗೆ+ “ನೀನ್ಯಾಕೆ ನಮ್ಮ ಜೊತೆ ಬರ್ತಾ ಇದ್ದೀಯಾ? ನೀನು ದೇಶ ಬಿಟ್ಟುಬಂದಿರೋ ವಿದೇಶಿ. ವಾಪಸ್ ಹೋಗಿ ಹೊಸ ರಾಜನ ಹತ್ರಾನೇ ಇರು. 20 ನಿನ್ನೆ ತಾನೇ ನೀನು ಬಂದೆ. ನಾನು ಯಾವಾಗ ಎಲ್ಲಿಗೆ ಹೋಗ್ತೀನಿ ಅಂತ ನನಗೇ ಗೊತ್ತಿಲ್ಲ. ಹಾಗಿರುವಾಗ ನೀನೂ ನನ್ನ ಜೊತೆ ಬಾ ಅಂತ ಹೇಗೆ ಒತ್ತಾಯ ಮಾಡ್ಲಿ? ನಿನ್ನ ಸಹೋದರರನ್ನ ನಿನ್ನ ಜೊತೆ ಕರ್ಕೊಂಡು ವಾಪಸ್ ಹೋಗು. ಯೆಹೋವ ನಿನಗೆ ಶಾಶ್ವತ ಪ್ರೀತಿ ತೋರಿಸ್ಲಿ, ನಿನಗೆ ನಂಬಿಗಸ್ತನಾಗಿರಲಿ!”+ ಅಂದ. 21 ಆದ್ರೆ ಇತೈ ರಾಜನಿಗೆ “ಜೀವ ಇರೋ ಯೆಹೋವನ ಆಣೆ, ನನ್ನ ಒಡೆಯನಾದ ರಾಜನ ಆಣೆ, ನನ್ನ ಒಡೆಯನಾದ ರಾಜ ಎಲ್ಲಿ ಹೋದ್ರೂ ನಿನ್ನ ಈ ಸೇವಕ ನಿನ್ನನ್ನ ಬಿಟ್ಟು ಹೋಗಲ್ಲ. ನನ್ನ ಜೀವ ಕಳ್ಕೊಂಡ್ರೂ ಪರ್ವಾಗಿಲ್ಲ” ಅಂದ.+ 22 ಅದಕ್ಕೆ ದಾವೀದ “ಸರಿ, ನೀನೂ ನನ್ನ ಜೊತೆ ಬಾ” ಅಂದ. ಆಗ ಗಿತ್ತೀಯನಾದ ಇತೈ+ ತನ್ನೆಲ್ಲ ಗಂಡಸ್ರ ಜೊತೆ, ಅವ್ರ ಕುಟುಂಬ ಜೊತೆ ಕಣಿವೆ ದಾಟಿದ.
23 ಜನ್ರು ಕಣಿವೆ ದಾಟುವಾಗ ಯೆರೂಸಲೇಮಿನ, ಅದ್ರ ಸುತ್ತ ಇರೋ ಪ್ರದೇಶದ ಎಲ್ಲ ಜನ್ರು ಜೋರಾಗಿ ಅಳ್ತಾ ಇದ್ರು. ರಾಜ ಕಿದ್ರೋನ್ ಕಣಿವೆ+ ಪಕ್ಕದಲ್ಲಿ ನಿಂತಿದ್ದ. ಕಣಿವೆ ದಾಟ್ತಿದ್ದ ಜನ್ರೆಲ್ಲ ಕಾಡಿಗೆ ಹೋಗೋ ದಾರಿ ಹಿಡಿದ್ರು. 24 ಚಾದೋಕ+ ಕೂಡ ಅಲ್ಲಿದ್ದ, ಅವನ ಜೊತೆ ಸತ್ಯ ದೇವರ ಒಪ್ಪಂದದ ಮಂಜೂಷ+ ಹೊತ್ಕೊಂಡಿದ್ದ+ ಎಲ್ಲ ಲೇವಿಯರೂ+ ಇದ್ರು. ಜನ್ರೆಲ್ಲ ಪಟ್ಟಣ ಬಿಟ್ಟು ಕಣಿವೆ ದಾಟಿಹೋಗುವಾಗ ಅವರು ಸತ್ಯ ದೇವರ ಮಂಜೂಷವನ್ನ ಕೆಳಗೆ ಇಳಿಸಿದ್ರು. ಎಬ್ಯಾತಾರನೂ+ ಅಲ್ಲಿದ್ದ. 25 ಆದ್ರೆ ರಾಜ ಚಾದೋಕನಿಗೆ “ಸತ್ಯ ದೇವರ ಮಂಜೂಷವನ್ನ ತಿರುಗಿ ಪಟ್ಟಣಕ್ಕೆ ತಗೊಂಡು ಹೋಗು.+ ನನಗೆ ಯೆಹೋವನ ದಯೆ ಸಿಕ್ಕಿದ್ರೆ ಆತನು ನನ್ನನ್ನ ವಾಪಸ್ ಕರ್ಕೊಂಡು ಬರ್ತಾನೆ. ಮಂಜೂಷವನ್ನ, ಅದನ್ನ ಇಟ್ಟ ಜಾಗವನ್ನ ನೋಡೋ ಹಾಗೆ ಮಾಡ್ತಾನೆ.+ 26 ದೇವರ ದಯೆ ಸಿಗದಿದ್ರೆ ಆತನು ನನಗೆ ಏನೇ ಮಾಡಿದ್ರೂ ಅದನ್ನ ಒಪ್ಕೊಳ್ತೀನಿ” ಅಂದ. 27 ರಾಜ ಚಾದೋಕನಿಗೆ “ನೀನೊಬ್ಬ ದಿವ್ಯದೃಷ್ಟಿ ಇರೋನಲ್ವಾ?+ ನೀನು, ಎಬ್ಯಾತಾರ ಇಬ್ರೂ ಪಟ್ಟಣಕ್ಕೆ ಸಮಾಧಾನವಾಗಿ ವಾಪಸ್ ಹೋಗಿ. ನಿನ್ನ ಮಗ ಅಹೀಮಾಚನನ್ನ, ಎಬ್ಯಾತಾರನ ಮಗ ಯೋನಾತಾನನನ್ನ+ ನಿಮ್ಮ ಜೊತೆ ಕರ್ಕೊಂಡು ಹೋಗಿ. 28 ನೋಡಿ, ನಿಮ್ಮಿಂದ ಸುದ್ದಿ ಬರೋ ತನಕ ನಾನು ಕಾಡಿನ ನದಿದಾಟೋ ಜಾಗಗಳ ಹತ್ರ ಇರ್ತಿನಿ”+ ಅಂದ. 29 ಚಾದೋಕ, ಎಬ್ಯಾತಾರ ಸತ್ಯ ದೇವರ ಮಂಜೂಷ ತಗೊಂಡು ಯೆರೂಸಲೇಮಿಗೆ ವಾಪಸ್ ಹೋಗಿ ಅಲ್ಲೇ ಇದ್ರು.
30 ದಾವೀದ ಅಳ್ತಾ ತಲೆಯನ್ನ ಬಟ್ಟೆಯಿಂದ ಮುಚ್ಕೊಂಡು ಬರೀಗಾಲಲ್ಲಿ ಆಲೀವ್ ಮರಗಳ ಗುಡ್ಡ+ ಹತ್ತುತ್ತಿದ್ದ. ಅವನ ಜೊತೆ ಇದ್ದ ಎಲ್ಲ ಜನ್ರು ಸಹ ತಮ್ಮ ತಲೆಗಳನ್ನ ಬಟ್ಟೆಯಿಂದ ಮುಚ್ಕೊಂಡು ಅಳ್ತಾ ಹತ್ತುತಿದ್ರು. 31 ದಾವೀದನಿಗೆ “ಅಬ್ಷಾಲೋಮನ+ ಜೊತೆ ಸೇರಿ ಸಂಚು ಹೂಡಿದವ್ರಲ್ಲಿ+ ಅಹೀತೋಫೆಲ ಒಬ್ಬ” ಅಂತ ಯಾರೋ ಹೇಳಿದ್ರು. ಅದಕ್ಕೆ ದಾವೀದ “ಯೆಹೋವ,+ ದಯವಿಟ್ಟು ಅಹೀತೋಫೆಲನ ಸಲಹೆಯನ್ನ ಮೂರ್ಖರ ಸಲಹೆ ತರ ಮಾಡು!”+ ಅಂದ.
32 ಜನ್ರು ದೇವರಿಗೆ ಅಡ್ಡಬೀಳ್ತಿದ್ದ ಬೆಟ್ಟದ ತುದಿಗೆ ದಾವೀದ ತಲುಪಿದ. ಅಲ್ಲಿಗೆ ಅರ್ಕೀಯನಾದ+ ಹೂಷೈ+ ತನ್ನ ನಿಲುವಂಗಿಯನ್ನ ಹರ್ಕೊಂಡು ತಲೆ ಮೇಲೆ ಮಣ್ಣು ಹಾಕೊಂಡು ರಾಜನನ್ನ ನೋಡೋಕೆ ಬಂದಿದ್ದ. 33 ಹಾಗಿದ್ರೂ ದಾವೀದ ಅವನಿಗೆ “ನೀನು ನನ್ನ ಜೊತೆ ಬಂದ್ರೆ ನೀನು ನನಗೆ ಸಹಾಯ ಮಾಡಕ್ಕಾಗಲ್ಲ. 34 ಪಟ್ಟಣಕ್ಕೆ ವಾಪಸ್ ಹೋಗಿ ಅಬ್ಷಾಲೋಮನಿಗೆ ‘ರಾಜ, ನಾನು ನಿನ್ನ ಸೇವಕ. ಮುಂಚೆ ನಾನು ನಿನ್ನ ತಂದೆಗೆ ಸೇವಕನಾಗಿದ್ದೆ. ಆದ್ರೆ ಈಗ ನಾನು ನಿನ್ನ ಸೇವಕ’+ ಅಂತೇಳು. ಆಗ ನೀನು ಅಹೀತೋಫೆಲನ ಸಲಹೆಯನ್ನ ಕೆಡಿಸೋಕೆ ಆಗುತ್ತೆ.+ 35 ಅಲ್ಲಿ ನಿನ್ನ ಜೊತೆ ಪುರೋಹಿತರಾದ ಚಾದೋಕ, ಎಬ್ಯಾತಾರ ಇರ್ತಾರೆ. ರಾಜನ ಮನೆಯಿಂದ ಕೇಳಿಸ್ಕೊಳ್ಳೋ ಪ್ರತಿಯೊಂದು ಮಾತನ್ನ ನೀನು ಅವ್ರಿಗೆ ಹೇಳಬೇಕು.+ 36 ಅಲ್ಲಿ ಅವ್ರ ಜೊತೆ ಚಾದೋಕನ ಮಗ ಅಹೀಮಾಚ,+ ಎಬ್ಯಾತಾರನ ಮಗ ಯೋನಾತಾನ+ ಇಬ್ರೂ ಇದ್ದಾರೆ. ನೀನು ಕೇಳಿಸ್ಕೊಳ್ಳೋ ಎಲ್ಲ ವಿಷ್ಯಗಳನ್ನ ಅವ್ರ ಮೂಲಕ ನನಗೆ ತಿಳಿಸು” ಅಂದ. 37 ಹಾಗಾಗಿ ದಾವೀದನ ಆಪ್ತ ಸ್ನೇಹಿತ ಹೂಷೈ+ ಅಬ್ಷಾಲೋಮ ಯೆರೂಸಲೇಮಿಗೆ ಬರೋ ಮುಂಚೆನೇ ಪಟ್ಟಣಕ್ಕೆ ಹೋದ.