ವಿಮೋಚನಕಾಂಡ
28 ಪುರೋಹಿತರಾಗಿ* ಸೇವೆ ಮಾಡೋಕೆ ನಿನ್ನ ಅಣ್ಣ ಆರೋನನನ್ನ,+ ಅವನ ಮಕ್ಕಳಾದ+ ನಾದಾಬ್, ಅಬೀಹೂ,+ ಎಲ್ಲಾಜಾರ್, ಈತಾಮಾರನನ್ನ+ ನನ್ನ ಮುಂದೆ ಬರೋಕೆ ಹೇಳಬೇಕು.+ 2 ನೀನು ಆರೋನನಿಗಾಗಿ ಪವಿತ್ರ ಬಟ್ಟೆಗಳನ್ನ ಮಾಡಬೇಕು. ಆ ಬಟ್ಟೆಗಳು ಅವನಿಗೆ ಗೌರವ, ಸೌಂದರ್ಯ ನೀಡುತ್ತೆ.+ 3 ನಾನು ಯಾರಿಗೆಲ್ಲ ವಿವೇಕ ಕೊಟ್ಟಿದ್ದೀನೋ ಆ ಎಲ್ಲ ನಿಪುಣ ವ್ಯಕ್ತಿಗಳ ಜೊತೆ+ ಮಾತಾಡು, ಆರೋನನ ಬಟ್ಟೆಗಳನ್ನ ತಯಾರಿಸೋಕೆ ಅವರಿಗೆ ಹೇಳು. ಪುರೋಹಿತನಾಗಿ ನನ್ನ ಸೇವೆ ಮಾಡೋಕೆ ಆರೋನನನ್ನ ಪವಿತ್ರ ಮಾಡಲಾಗಿದೆ ಅಂತ ಆ ಬಟ್ಟೆಗಳು ತೋರಿಸುತ್ತೆ.
4 ಆ ನಿಪುಣ ಕೆಲಸಗಾರರು ಮಾಡಬೇಕಾದ ಬಟ್ಟೆಗಳು ಯಾವುದಂದ್ರೆ ಒಂದು ಎದೆಪದಕ,+ ಒಂದು ಏಫೋದ್,+ ತೋಳಿಲ್ಲದ ಒಂದು ಅಂಗಿ,+ ಚೌಕಗಳಿರೋ ಒಂದು ಉದ್ದ ಅಂಗಿ, ಒಂದು ವಿಶೇಷ ಪೇಟ,+ ಒಂದು ನಡುಪಟ್ಟಿ.+ ನಿನ್ನ ಅಣ್ಣ ಆರೋನ, ಅವನ ಮಕ್ಕಳು ಪುರೋಹಿತರಾಗಿ ನನ್ನ ಸೇವೆ ಮಾಡೋಕೆ ಅವರಿಗಾಗಿ ಈ ಪವಿತ್ರ ಬಟ್ಟೆಗಳನ್ನ ತಯಾರಿಸಬೇಕು. 5 ಇವುಗಳನ್ನ ನಿಪುಣ ಕೆಲಸಗಾರರು ಚಿನ್ನ, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲು, ಒಳ್ಳೇ ಗುಣಮಟ್ಟದ ನಾರುಬಟ್ಟೆಯಿಂದ ಮಾಡಬೇಕು.
6 ಅವರು ಏಫೋದನ್ನ ಚಿನ್ನ, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲು, ಹೊಸೆದ ಒಳ್ಳೇ ಗುಣಮಟ್ಟದ ನಾರುಬಟ್ಟೆಯಿಂದ ಮಾಡಬೇಕು. ಕಸೂತಿ ಹಾಕಿ ಅದನ್ನ ಮಾಡಬೇಕು.+ 7 ಏಫೋದಿನ ಎರಡು ಭಾಗಗಳ ಮೇಲಿನ ಅಂಚುಗಳನ್ನ ಹೆಗಲ ಮೇಲೆ ಜೋಡಿಸಬೇಕು. 8 ಏಫೋದನ್ನ ಭದ್ರವಾಗಿ ಕಟ್ಟೋಕೆ ಅದಕ್ಕೆ ಸೊಂಟಪಟ್ಟಿ*+ ಹೊಲಿಬೇಕು. ಆ ಪಟ್ಟಿನೂ ಚಿನ್ನ, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ನೂಲಿಂದ, ಹೊಸೆದ ಒಳ್ಳೇ ಗುಣಮಟ್ಟದ ನಾರುಬಟ್ಟೆಯಿಂದ ಮಾಡಬೇಕು.
9 ನೀನು ಎರಡು ಗೋಮೇದಕ ರತ್ನಗಳನ್ನ+ ತಗೊಂಡು ಅವುಗಳ ಮೇಲೆ ಇಸ್ರಾಯೇಲನ ಗಂಡುಮಕ್ಕಳ ಹೆಸರುಗಳನ್ನ ಕೆತ್ತಬೇಕು.+ 10 ಒಂದು ರತ್ನದ ಮೇಲೆ ಆರು ಜನ್ರ ಹೆಸರುಗಳನ್ನ, ಇನ್ನೊಂದು ರತ್ನದ ಮೇಲೆ ಇನ್ನು ಆರು ಜನ್ರ ಹೆಸರುಗಳನ್ನ ಅವರವರ ಜನನ ಕ್ರಮದ ಪ್ರಕಾರ ಕೆತ್ತಬೇಕು. 11 ಕಲ್ಲು ಕೆತ್ತನೆಗಾರ ಮುದ್ರೆಯನ್ನ ಕೆತ್ತೋ ತರ ಇಸ್ರಾಯೇಲನ ಗಂಡುಮಕ್ಕಳ ಹೆಸರುಗಳನ್ನ ಆ ಎರಡು ರತ್ನಗಳ ಮೇಲೆ ಕೆತ್ತಬೇಕು.+ ಆ ರತ್ನಗಳನ್ನ ಚಿನ್ನದ ಕುಂದಣಗಳಲ್ಲಿ ಕೂರಿಸಬೇಕು. 12 ಆ ಎರಡು ರತ್ನಗಳನ್ನ ಏಫೋದಿನ ಹೆಗಲಪಟ್ಟಿಗಳ ಮೇಲೆ ಇಡಬೇಕು. ಅವು ಇಸ್ರಾಯೇಲನ ಗಂಡುಮಕ್ಕಳಿಗೆ ಸ್ಮಾರಕ ರತ್ನಗಳಾಗಿ ಇರುತ್ತೆ.+ ಆರೋನ ಯೆಹೋವನ ಮುಂದೆ ಬರುವಾಗ ಆ ಏಫೋದನ್ನ ಹಾಕಬೇಕು. ಯಾಕಂದ್ರೆ ಎರಡು ಹೆಗಲಪಟ್ಟಿಗಳ ಮೇಲಿರೋ ಆ ಹೆಸರುಗಳು ದೇವರ ಮುಂದೆ ನೆನಪಿಗಾಗಿ ಇರುತ್ತೆ. 13 ನೀನು ಶುದ್ಧ ಚಿನ್ನದಿಂದ ಕುಂದಣಗಳನ್ನ ಮಾಡಬೇಕು. 14 ಹಗ್ಗದ ತರ ನೇಯ್ದಿರೋ ಎರಡು ಸರಪಣಿಗಳನ್ನ ಶುದ್ಧ ಚಿನ್ನದಿಂದ ಮಾಡಬೇಕು.+ ಆ ಸರಪಣಿಗಳನ್ನ ಕುಂದಣಗಳಿಗೆ ಕೂಡಿಸಬೇಕು.+
15 ನೀನು ಕಸೂತಿ ಕೆಲಸಗಾರನಿಂದ ದೇವನಿರ್ಣಯದ ಎದೆಪದಕ*+ ಮಾಡಿಸಬೇಕು. ಇದನ್ನ ಏಫೋದಿನ ತರಾನೇ ಚಿನ್ನ, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲು, ಹೊಸೆದ ಒಳ್ಳೇ ಗುಣಮಟ್ಟದ ನಾರುಬಟ್ಟೆಯಿಂದ ಮಾಡಬೇಕು.+ 16 ಎದೆಪದಕ ಮಧ್ಯದಲ್ಲಿ ಮಡಚಿದಾಗ ಚೌಕಾಕಾರ ಆಗಿರಬೇಕು. ಅದು ಒಂದು ಗೇಣು* ಉದ್ದ, ಒಂದು ಗೇಣು ಅಗಲ ಇರಬೇಕು. 17 ನೀನು ಅದ್ರಲ್ಲಿ ರತ್ನಗಳನ್ನ ನಾಲ್ಕು ಸಾಲಾಗಿ ಕೂರಿಸಬೇಕು. ಮೊದಲನೇ ಸಾಲಲ್ಲಿ ಮಾಣಿಕ್ಯ, ಪುಷ್ಯರಾಗ, ಪಚ್ಚೆ, 18 ಎರಡನೇ ಸಾಲಲ್ಲಿ ವೈಢೂರ್ಯ, ನೀಲಮಣಿ, ಸೂರ್ಯಕಾಂತ ಶಿಲೆ, 19 ಮೂರನೇ ಸಾಲಲ್ಲಿ ಲೆಷೆಮ್ ರತ್ನ,* ಅಗೇಟು, ಪದ್ಮರಾಗ, 20 ನಾಲ್ಕನೇ ಸಾಲಲ್ಲಿ ಕ್ರಿಸಲೈಟ್ ರತ್ನ, ಗೋಮೇದಕ ರತ್ನ, ಜೇಡ್ ರತ್ನ ಇರಬೇಕು. ಅವುಗಳನ್ನ ಚಿನ್ನದ ಕುಂದಣಗಳಲ್ಲಿ ಕೂರಿಸಬೇಕು. 21 ಹೀಗೆ ಇಸ್ರಾಯೇಲನ 12 ಗಂಡುಮಕ್ಕಳಿಗೆ ಸರಿಯಾಗಿ 12 ರತ್ನ ಇರುತ್ತೆ. ಪ್ರತಿಯೊಂದು ರತ್ನದ ಮೇಲೆ ಒಬ್ಬೊಬ್ಬನ ಹೆಸ್ರನ್ನ ಮುದ್ರೆ ಕೆತ್ತಬೇಕು. ಒಬ್ಬೊಬ್ಬನ ಹೆಸ್ರು 12 ಕುಲಗಳಲ್ಲಿ ಒಂದೊಂದು ಕುಲವನ್ನ ಸೂಚಿಸುತ್ತೆ.
22 ಹಗ್ಗದ ತರ ನೇಯ್ದಿರೋ ಸರಪಣಿಗಳನ್ನ ನೀನು ಶುದ್ಧ ಚಿನ್ನದಿಂದ ಮಾಡಿ ಎದೆಪದಕಕ್ಕೆ ಜೋಡಿಸಬೇಕು.+ 23 ಚಿನ್ನದ ಎರಡು ಉಂಗುರಗಳನ್ನ ಮಾಡಿ ಎದೆಪದಕದ ಮೇಲ್ಭಾಗದ ಎರಡು ಮೂಲೆಗಳಿಗೆ ಜೋಡಿಸಬೇಕು. 24 ಚಿನ್ನದ ಎರಡು ಹಗ್ಗಗಳನ್ನ ಎದೆಪದಕದ ಮೇಲ್ಭಾಗದ ಮೂಲೆಗಳಲ್ಲಿರೋ ಎರಡು ಉಂಗುರಗಳಿಗೆ ಸಿಕ್ಕಿಸಬೇಕು. 25 ನೀನು ಆ ಎರಡು ಹಗ್ಗಗಳ ಎರಡು ತುದಿಗಳನ್ನ ಎರಡು ಕುಂದಣಗಳಿಗೆ ಸಿಕ್ಕಿಸಬೇಕು, ಅವುಗಳನ್ನ ಏಫೋದಿನ ಹೆಗಲಪಟ್ಟಿಗಳಿಗೆ ಮುಂಭಾಗದಲ್ಲಿ ಜೋಡಿಸಬೇಕು. 26 ನೀನು ಚಿನ್ನದ ಎರಡು ಉಂಗುರಗಳನ್ನ ಮಾಡಿ ಎದೆಪದಕದ ಒಳಭಾಗದ ಅಂದ್ರೆ ಏಫೋದಿಗೆ ತಾಗಿರೋ ಭಾಗದ ಕೆಳಗಿನ ಎರಡು ಮೂಲೆಗಳಲ್ಲಿ ಹಾಕಬೇಕು.+ 27 ಇನ್ನು ಎರಡು ಚಿನ್ನದ ಉಂಗುರಗಳನ್ನ ಮಾಡಬೇಕು. ಅವುಗಳನ್ನ ಏಫೋದಿನ ಮುಂದೆ ಅಂದ್ರೆ ಎರಡು ಹೆಗಲಪಟ್ಟಿಗಳ ಕೆಳಗೆ, ಸೊಂಟಪಟ್ಟಿ* ಮೇಲೆ, ಅದು ಏಫೋದಿಗೆ ಸೇರೋ ಸ್ಥಳದ ಹತ್ರ ಹಾಕಬೇಕು.+ 28 ಎದೆಪದಕದ ಒಳಭಾಗದ ಉಂಗುರಗಳಿಗೆ ನೀಲಿ ಹಗ್ಗವನ್ನ ಹಾಕಿ ಏಫೋದಿನ ಉಂಗುರಗಳಿಗೆ ಕಟ್ಟಬೇಕು. ಇದ್ರಿಂದ ಎದೆಪದಕ ಏಫೋದಿನ ಮೇಲೆ, ಸೊಂಟಪಟ್ಟಿಯ* ಮೇಲ್ಭಾಗದಲ್ಲಿ ಬಿಗಿಯಾಗಿ ಇರುತ್ತೆ.
29 ಆರೋನ ಪವಿತ್ರ ಸ್ಥಳಕ್ಕೆ ಬರುವಾಗೆಲ್ಲ ಇಸ್ರಾಯೇಲನ ಗಂಡುಮಕ್ಕಳ ಹೆಸರುಗಳು ಬರೆದಿರೋ ದೇವನಿರ್ಣಯದ ಎದೆಪದಕವನ್ನ ತನ್ನ ಎದೆಯ* ಮೇಲೆ ಹಾಕೊಂಡು ಬರಬೇಕು. ಈ ಪದಕ ಯೆಹೋವನ ಮುಂದೆ ಯಾವಾಗ್ಲೂ ನೆನಪಿಗಾಗಿ ಇರುತ್ತೆ. 30 ನೀನು ಊರೀಮ್ ಮತ್ತು ತುಮ್ಮೀಮ್*+ ಅನ್ನು ದೇವನಿರ್ಣಯದ ಎದೆಪದಕದೊಳಗೆ ಇಡಬೇಕು. ಇಸ್ರಾಯೇಲ್ಯರಿಗೆ ಹೇಳಬೇಕಾದ ಯೆಹೋವನ ತೀರ್ಪುಗಳನ್ನ ತಿಳ್ಕೊಳ್ಳೋಕೆ ಸಹಾಯ ಆಗೋ ಆ ಸಾಧನಗಳನ್ನ ಆರೋನ ಯೆಹೋವನ ಮುಂದೆ ಬರುವಾಗೆಲ್ಲ ತನ್ನ ಎದೆ* ಮೇಲೆ ಹಾಕೊಂಡಿರಬೇಕು.
31 ಏಫೋದಿನ ಒಳಗೆ ಹಾಕೋಕೆ ತೋಳಿಲ್ಲದ ಅಂಗಿ ಮಾಡಬೇಕು. ನೀನು ಅದನ್ನ ಪೂರ್ತಿಯಾಗಿ ನೀಲಿ ದಾರದಿಂದಾನೇ ಮಾಡಬೇಕು.+ 32 ಅಂಗಿಯ ಮೇಲ್ಭಾಗದ ಮಧ್ಯದಲ್ಲಿ ಕತ್ತು* ಇಡಬೇಕು. ಕತ್ತಿನ ಸುತ್ತ ಅಂಚು ಇರಬೇಕು. ಆ ಅಂಚನ್ನ ನೇಕಾರರಿಂದ ನೇಯಿಸಿರಬೇಕು. ಅದು ಯುದ್ಧಕವಚದ ಕತ್ತಿನ ತರ ಇರಬೇಕು. ಆಗ ಅದು ಹರಿದು ಹೋಗಲ್ಲ. 33 ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲಿಂದ ನೀನು ದಾಳಿಂಬೆಗಳನ್ನ ಮಾಡಬೇಕು. ಅವು ಅಂಗಿ ಕೆಳಗಿರೋ ಮಡಚಿದ ಅಂಚಿನ ಸುತ್ತ ಇರಬೇಕು. ಅವುಗಳ ಮಧ್ಯ ಚಿನ್ನದ ಗಂಟೆಗಳು ಇರಬೇಕು. 34 ಹೀಗೆ ಚಿನ್ನದ ಗಂಟೆ ಮತ್ತೆ ದಾಳಿಂಬೆ ಒಂದಾದ ಮೇಲೆ ಒಂದು ತೋಳಿಲ್ಲದ ಅಂಗಿ ಕೆಳಗಿರೋ ಮಡಚಿದ ಅಂಚಿನ ಸುತ್ತಲೂ ಇರಬೇಕು. 35 ಆರೋನ ಸೇವೆ ಮಾಡುವಾಗ ಆ ಅಂಗಿ ಹಾಕಬೇಕು. ಅವನು ಪವಿತ್ರ ಕೋಣೆಯ ಒಳಗೆ ಯೆಹೋವನ ಮುಂದೆ ಹೋಗುವಾಗ, ಅಲ್ಲಿಂದ ಹೊರಗೆ ಬರುವಾಗ ಆ ಗಂಟೆಗಳ ಶಬ್ದ ಕೇಳಿಸಬೇಕು. ಇಲ್ಲಾಂದ್ರೆ ಅವನು ಸಾಯ್ತಾನೆ.+
36 ನೀನು ಶುದ್ಧ ಚಿನ್ನದಿಂದ ಪಳಪಳ ಹೊಳೆಯೋ ಫಲಕ ಮಾಡಬೇಕು. ಮುದ್ರೆಯನ್ನ ಕೆತ್ತೋ ತರ ಅದ್ರ ಮೇಲೆ ‘ಯೆಹೋವ ಪವಿತ್ರನು’*+ ಅಂತ ಕೆತ್ತಬೇಕು. 37 ಆ ಫಲಕನ ನೀಲಿ ಹಗ್ಗದಿಂದ ವಿಶೇಷ ಪೇಟಕ್ಕೆ+ ಕಟ್ಟಬೇಕು. ಫಲಕ ವಿಶೇಷ ಪೇಟದ ಮುಂಭಾಗದಲ್ಲಿ ಇರಬೇಕು. 38 ಅದು ಆರೋನನ ಹಣೆ ಮೇಲೆ ಇರಬೇಕು. ಇಸ್ರಾಯೇಲ್ಯರು ದೇವರಿಗೆ ಪವಿತ್ರ ಉಡುಗೊರೆಗಳಾಗಿ ಪ್ರತ್ಯೇಕಿಸೋ ಪವಿತ್ರ ವಸ್ತುಗಳ ವಿಷ್ಯದಲ್ಲಿ ಯಾರಾದ್ರೂ ಪಾಪ ಮಾಡಿದ್ರೆ ಅದಕ್ಕೆ ಆರೋನನೇ ಹೊಣೆ ಆಗಿರುತ್ತಾನೆ.+ ಅವರು ಯೆಹೋವನ ಮೆಚ್ಚುಗೆ ಪಡಿಯೋ ಹಾಗೆ ಆ ಫಲಕ ಯಾವಾಗ್ಲೂ ಆರೋನನ ಹಣೆ ಮೇಲೆ ಇರಬೇಕು.
39 ನೀನು ಒಳ್ಳೇ ಗುಣಮಟ್ಟದ ನಾರಿಂದ ಚೌಕಗಳಿರೋ ಉದ್ದ ಅಂಗಿ ನೇಯಬೇಕು, ಒಳ್ಳೇ ಗುಣಮಟ್ಟದ ನಾರಿಂದ ಒಂದು ವಿಶೇಷ ಪೇಟ ಮಾಡಬೇಕು, ಒಂದು ಸೊಂಟಪಟ್ಟಿ ನೇಯಬೇಕು.+
40 ನೀನು ಆರೋನನ ಮಕ್ಕಳಿಗೂ+ ಉದ್ದ ಅಂಗಿಗಳನ್ನ, ಸೊಂಟಪಟ್ಟಿಗಳನ್ನ, ಪೇಟಗಳನ್ನ ಮಾಡಬೇಕು. ಅವು ಅವರಿಗೆ ಗೌರವ, ಸೌಂದರ್ಯ ಕೊಡುತ್ತೆ.+ 41 ನಿನ್ನ ಅಣ್ಣ ಆರೋನನಿಗೆ, ಅವನ ಮಕ್ಕಳಿಗೆ ಆ ಬಟ್ಟೆಗಳನ್ನ ಹಾಕಬೇಕು. ಅವರನ್ನ ಪುರೋಹಿತರಾಗಿ ಅಭಿಷೇಕಿಸಿ,+ ನೇಮಿಸಿ,+ ಆ ಪವಿತ್ರ ಸೇವೆಗಾಗಿ ಅವರನ್ನ ಪ್ರತ್ಯೇಕಿಸಬೇಕು. ಆಗ ಅವರು ಪುರೋಹಿತರಾಗಿ ನನ್ನ ಸೇವೆ ಮಾಡ್ತಾರೆ. 42 ಅವರ ಗುಪ್ತಾಂಗಗಳು ಕಾಣದ ಹಾಗೆ ಅವರಿಗಾಗಿ ನಾರಿನ ಚಡ್ಡಿಗಳನ್ನ* ಮಾಡಬೇಕು.+ ಅವು ಸೊಂಟದಿಂದ ತೊಡೆ ತನಕ ಇರಬೇಕು. 43 ಆರೋನ, ಅವನ ಮಕ್ಕಳು ದೇವದರ್ಶನ ಡೇರೆಯೊಳಗೆ ಬರುವಾಗ, ಆರಾಧನಾ ಸ್ಥಳದಲ್ಲಿ ಸೇವೆ ಮಾಡೋಕೆ ಯಜ್ಞವೇದಿ ಹತ್ರ ಬರುವಾಗ ಇವನ್ನ ಹಾಕಿರಬೇಕು. ಹಾಕದೇ ಇದ್ರೆ ಅವರು ಅಪರಾಧಿಗಳಾಗಿ ಸಾಯ್ತಾರೆ. ಇದು ಅವನೂ ಅವನ ಸಂತತಿಯವರೂ ಯಾವಾಗ್ಲೂ ಪಾಲಿಸಬೇಕಾದ ನಿಯಮ.