ಎರಡನೇ ಪೂರ್ವಕಾಲವೃತ್ತಾಂತ
33 ಮನಸ್ಸೆ+ ರಾಜನಾದಾಗ ಅವನಿಗೆ 12 ವರ್ಷ. ಅವನು ಯೆರೂಸಲೇಮಿಂದ 55 ವರ್ಷ ಆಳ್ವಿಕೆ ಮಾಡಿದ.+
2 ಮನಸ್ಸೆ ಯೆಹೋವನಿಗೆ ಇಷ್ಟ ಆಗೋದನ್ನ ಮಾಡಲಿಲ್ಲ. ಯೆಹೋವ ಇಸ್ರಾಯೇಲ್ಯರ ಮುಂದಿಂದ ಓಡಿಸಿಬಿಟ್ಟ ಜನ್ರು ಮಾಡ್ತಿದ್ದ ಅಸಹ್ಯ ಪದ್ಧತಿಗಳನ್ನೇ ಇವನೂ ಮಾಡ್ತಿದ್ದ.+ 3 ತನ್ನ ತಂದೆ ಹಿಜ್ಕೀಯ ನಾಶಮಾಡಿದ+ ದೇವಸ್ಥಾನಗಳನ್ನ ಮನಸ್ಸೆ ಮತ್ತೆ ಕಟ್ಟಿಸಿದ. ಬಾಳ್ ದೇವರುಗಳಿಗಾಗಿ ಯಜ್ಞವೇದಿಗಳನ್ನ ಕಟ್ಟಿಸಿ ಪೂಜಾಕಂಬಗಳನ್ನ* ಮಾಡಿಸಿದ. ಅಷ್ಟೇ ಅಲ್ಲ ಅವನು ಆಕಾಶದ ಇಡೀ ಸೈನ್ಯಕ್ಕೆ ಅಡ್ಡಬಿದ್ದು ಅವುಗಳನ್ನ ಆರಾಧಿಸಿದ.+ 4 ಅವನು ಯಜ್ಞವೇದಿಗಳನ್ನ ಯೆಹೋವನ ಆಲಯದಲ್ಲೂ ಕಟ್ಟಿಸಿದ.+ ಯೆಹೋವನು ಆ ಆಲಯದ ಬಗ್ಗೆ ಮಾತಾಡ್ತಾ “ಯೆರೂಸಲೇಮಲ್ಲಿ ನನ್ನ ಹೆಸ್ರು ಸದಾಕಾಲಕ್ಕೂ ಇರುತ್ತೆ”+ ಅಂದಿದ್ದನು. 5 ಯೆಹೋವನ ಆಲಯದ ಎರಡು ಅಂಗಳಗಳಲ್ಲಿ ಆಕಾಶದ ಇಡೀ ಸೈನ್ಯಕ್ಕಾಗಿ ಅವನು ಯಜ್ಞವೇದಿಗಳನ್ನ ಕಟ್ಟಿಸಿದ.+ 6 ಮನಸ್ಸೆ ತನ್ನ ಸ್ವಂತ ಮಕ್ಕಳನ್ನ ಹಿನ್ನೋಮ್* ಕಣಿವೆಯಲ್ಲಿ+ ಬೆಂಕಿಯಲ್ಲಿ ಬಲಿ ಕೊಟ್ಟ.+ ಅವನು ಮಾಟಮಂತ್ರ ಮಾಡ್ತಿದ್ದ,+ ಕಣಿ ಹೇಳ್ತಿದ್ದ. ಅಷ್ಟೇ ಅಲ್ಲ ಸತ್ತವರನ್ನ ಮಾತಾಡಿಸ್ತೀವಿ ಅಂತ ಹೇಳ್ಕೊಳ್ತಿದ್ದ ಜನ್ರನ್ನ, ಭವಿಷ್ಯ ಹೇಳೋರನ್ನ+ ನೇಮಿಸಿದ್ದ. ಹೀಗೆ ಅವನು ಇಂಥ ಕೆಲಸ ಮಾಡೋದ್ರಲ್ಲಿ ಎಲ್ಲೆಮೀರಿ ಹೋಗಿ ಯೆಹೋವನಿಗೆ ಇಷ್ಟ ಆಗದೇ ಇರೋದನ್ನೇ ಮಾಡಿ ಆತನಿಗೆ ತುಂಬ ಕೋಪ ಬರಿಸಿದ.
7 ಮನಸ್ಸೆ ಕೆತ್ತಿಸಿ ಮಾಡಿಸಿದ ಮೂರ್ತಿಯನ್ನ ತಗೊಂಡು ಹೋಗಿ ಸತ್ಯ ದೇವರ ಆಲಯದಲ್ಲಿ ಇಟ್ಟ.+ ಆ ಆಲಯದ ಬಗ್ಗೆ ದೇವರು ದಾವೀದನಿಗೆ ಮತ್ತು ಅವನ ಮಗ ಸೊಲೊಮೋನನಿಗೆ “ಇಸ್ರಾಯೇಲಿನ ಎಲ್ಲ ಕುಲಗಳಿಂದ ನಾನು ಆರಿಸ್ಕೊಂಡಿರೋ ಈ ಆಲಯದಲ್ಲಿ ಮತ್ತು ಯೆರೂಸಲೇಮಲ್ಲಿ ನನ್ನ ಹೆಸ್ರು ಶಾಶ್ವತವಾಗಿ ಇರುತ್ತೆ.+ 8 ಇಸ್ರಾಯೇಲ್ಯರು ನಾನು ಕೊಟ್ಟ ಎಲ್ಲ ಆಜ್ಞೆಗಳ ಪ್ರಕಾರ ಅಂದ್ರೆ ನನ್ನ ಸೇವಕ ಮೋಶೆ ಅವ್ರಿಗೆ ಕೊಟ್ಟ ನಿಯಮ ಪುಸ್ತಕದಲ್ಲಿರೋ ಎಲ್ಲ ವಿಷ್ಯಗಳ ಪ್ರಕಾರ, ಕಟ್ಟಳೆಗಳ ಪ್ರಕಾರ ಮತ್ತು ತೀರ್ಪುಗಳ ಪ್ರಕಾರ ನಡೆದ್ರೆ, ನಾನು ಅವ್ರ ಪೂರ್ವಜರಿಗೆ ಕೊಟ್ಟ ಈ ದೇಶದಿಂದ ಅವ್ರನ್ನ ಓಡಿಸಿಬಿಡಲ್ಲ. ಇನ್ನು ಯಾವತ್ತೂ ಅವರು ಅಲೆಯೋ ತರ ಮಾಡಲ್ಲ” ಅಂದಿದ್ದನು. 9 ಮನಸ್ಸೆ ಯೆಹೂದ ಮತ್ತು ಯೆರೂಸಲೇಮಿನ ಜನ್ರನ್ನ ತಪ್ಪು ದಾರಿಗೆ ನಡೆಸ್ತಾನೇ ಹೋದ. ಯೆಹೋವ ಯಾವ ಜನಾಂಗಗಳನ್ನ ಸಂಪೂರ್ಣವಾಗಿ ನಾಶವಾಗೋ ತರ ಮಾಡಿದ್ದನೋ ಆ ಜನಾಂಗಗಳಿಗಿಂತ ತುಂಬ ಕೆಟ್ಟ ಕೆಲಸಗಳನ್ನ ಮನಸ್ಸೆ ಇಸ್ರಾಯೇಲ್ಯರ ಕೈಯಿಂದ ಮಾಡಿಸಿದ.+
10 ಯೆಹೋವ ಮನಸ್ಸೆ ಮತ್ತು ಅವನ ಜನ್ರಿಗೆ ಎಚ್ಚರಿಕೆ ಕೊಡ್ತಾನೇ ಇದ್ದನು. ಆದ್ರೆ ಅವರು ಆತನ ಮಾತನ್ನ ಕೇಳಲಿಲ್ಲ.+ 11 ಹಾಗಾಗಿ ಯೆಹೋವ ಅಶ್ಶೂರ್ಯರ ರಾಜನ ಸೇನಾಪತಿಗಳನ್ನ ಅವ್ರ ವಿರುದ್ಧ ಬರೋ ತರ ಮಾಡಿದ. ಅವರು ಮನಸ್ಸೆಯನ್ನ ಕೊಕ್ಕೆಗಳಿಂದ* ಬಂಧಿಸಿ, ಅವನಿಗೆ ಬೇಡಿಹಾಕಿ ಬಾಬೆಲಿಗೆ ಕರ್ಕೊಂಡು ಹೋದ್ರು. 12 ಕಷ್ಟದಲ್ಲಿದ್ದ ಅವನು ಸಹಾಯಕ್ಕಾಗಿ ಯೆಹೋವನ ಹತ್ರ ಬೇಡ್ಕೊಂಡ. ತನ್ನ ಪೂರ್ವಜರ ದೇವರ ಮುಂದೆ ತನ್ನನ್ನೇ ತುಂಬ ತಗ್ಗಿಸಿಕೊಂಡ. 13 ಅವನು ದೇವರಿಗೆ ಪ್ರಾರ್ಥಿಸ್ತಾ ಇದ್ದ. ಅವನ ಪ್ರಾರ್ಥನೆ ಕೇಳಿ ದೇವರಿಗೆ ಕನಿಕರ ಹುಟ್ತು. ಹಾಗಾಗಿ ಆತನು ಮನಸ್ಸೆಯನ್ನ ಯೆರೂಸಲೇಮಿಗೆ ಕರ್ಕೊಂಡು ಬಂದು ಮತ್ತೆ ಅವನನ್ನ ರಾಜ ಮಾಡಿದ.+ ಆಗ ಯೆಹೋವನೇ ಸತ್ಯ ದೇವರು ಅಂತ ಮನಸ್ಸೆಗೆ ಪಕ್ಕಾ ಗೊತ್ತಾಯ್ತು.+
14 ಇದಾದ ಮೇಲೆ ಅವನು ಗೀಹೋನ್+ ಕಣಿವೆಯ ಪಶ್ಚಿಮದಲ್ಲಿ ದಾವೀದಪಟ್ಟಣಕ್ಕಾಗಿ ಒಂದು ಹೊರಗೋಡೆ ಕಟ್ಟಿಸಿದ.+ ಈ ಗೋಡೆ ಮೀನುಬಾಗಿಲಿನ+ ತನಕ ಹೋಗಿ ಅಲ್ಲಿಂದ ಓಫೆಲಿನ+ ಸುತ್ತಲೂ ಇತ್ತು. ಇದು ತುಂಬ ಎತ್ರದ ಗೋಡೆಯಾಗಿತ್ತು. ಆಮೇಲೆ ಅವನು ಭದ್ರ ಕೋಟೆಗಳಿದ್ದ ಯೆಹೂದದ ಎಲ್ಲ ಪಟ್ಟಣಗಳಲ್ಲಿ ಸೇನಾಪತಿಗಳನ್ನ ನೇಮಿಸಿದ. 15 ಅವನು ಬೇರೆ ದೇವರುಗಳ ಮೂರ್ತಿಗಳನ್ನ ಮತ್ತು ಯೆಹೋವನ ಆಲಯದಲ್ಲಿದ್ದ ಮೂರ್ತಿಗಳನ್ನ ತೆಗಿಸಿದ.+ ಯೆಹೋವನ ಆಲಯವಿದ್ದ ಬೆಟ್ಟದಲ್ಲಿ ಮತ್ತು ಯೆರೂಸಲೇಮಲ್ಲಿ ತಾನು ಕಟ್ಟಿಸಿದ್ದ+ ಎಲ್ಲ ಯಜ್ಞವೇದಿಗಳನ್ನ ಕೆಡವಿಸಿದ. ಅವನು ಅವುಗಳನ್ನ ಪಟ್ಟಣದ ಹೊರಗೆ ಬಿಸಾಡೋ ತರ ಮಾಡಿದ. 16 ಅವನು ಯೆಹೋವನ ಯಜ್ಞವೇದಿ ಕಟ್ಟಿಸಿದ.+ ಅದ್ರ ಮೇಲೆ ಸಮಾಧಾನ ಬಲಿಗಳನ್ನ+ ಮತ್ತು ಕೃತಜ್ಞತೆಯ ಬಲಿಗಳನ್ನ+ ಅರ್ಪಿಸೋಕೆ ಶುರು ಮಾಡಿದ. ಯೆಹೂದದ ಜನ್ರಿಗೆ ಇಸ್ರಾಯೇಲ್ ದೇವರಾದ ಯೆಹೋವನನ್ನ ಆರಾಧಿಸೋಕೆ ಹೇಳಿದ. 17 ಹಾಗಾಗಿ ಅವರು ತಮ್ಮ ದೇವರಾದ ಯೆಹೋವನಿಗೇ ಬಲಿಗಳನ್ನ ಅರ್ಪಿಸ್ತಿದ್ರು. ಆದ್ರೆ ಆ ಬಲಿಗಳನ್ನ ಇನ್ನೂ ದೇವಸ್ಥಾನಗಳಲ್ಲೇ ಅರ್ಪಿಸ್ತಿದ್ರು.
18 ಮನಸ್ಸೆಯ ಉಳಿದ ಜೀವನಚರಿತ್ರೆ ಬಗ್ಗೆ, ತನ್ನ ದೇವರಿಗೆ ಅವನು ಮಾಡಿದ ಪ್ರಾರ್ಥನೆ ಬಗ್ಗೆ, ಇಸ್ರಾಯೇಲ್ ದೇವರಾದ ಯೆಹೋವನ ಹೆಸ್ರಲ್ಲಿ ದರ್ಶಿಗಳು ಅವನ ಹತ್ರ ಹೇಳಿದ ಮಾತುಗಳ ಬಗ್ಗೆ ಇಸ್ರಾಯೇಲ್ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಬರೆಯಲಾಗಿದೆ. 19 ಅಷ್ಟೇ ಅಲ್ಲ ಅವನ ಪ್ರಾರ್ಥನೆ ಬಗ್ಗೆ,+ ಅವನಿಗೆ ಸಿಕ್ಕಿದ ಸಹಾಯದ ಬಗ್ಗೆ, ಅವನು ದೀನತೆ ತೋರಿಸೋದಕ್ಕಿಂತ ಮುಂಚೆ ಮಾಡಿದ ಎಲ್ಲ ಪಾಪಗಳ ಮತ್ತು ನಂಬಿಕೆದ್ರೋಹದ ಬಗ್ಗೆ,+ ಅವನು ಕಟ್ಟಿಸಿದ ದೇವಸ್ಥಾನಗಳ ಬಗ್ಗೆ, ಪೂಜಾಕಂಬಗಳನ್ನ*+ ಕಟ್ಟಿಸಿದ ಸ್ಥಳಗಳ ಬಗ್ಗೆ, ಕೆತ್ತಿದ ಮೂರ್ತಿಗಳ ಬಗ್ಗೆ ದರ್ಶನದ ಗ್ರಂಥಗಳಲ್ಲಿ ದಾಖಲಿಸಲಾಗಿದೆ. 20 ಕೊನೆಗೆ ಮನಸ್ಸೆ ತೀರಿಹೋದ. ಅವನನ್ನ ಅವನ ಮನೆ ಹತ್ರ ಹೂಣಿಟ್ರು. ಅವನ ನಂತ್ರ ಅವನ ಮಗ ಆಮೋನ ರಾಜನಾದ.+
21 ಆಮೋನ+ ರಾಜನಾದಾಗ ಅವನಿಗೆ 22 ವರ್ಷ. ಅವನು ಯೆರೂಸಲೇಮಿಂದ ಎರಡು ವರ್ಷ ಆಳಿದ.+ 22 ಆಮೋನ ತನ್ನ ತಂದೆ ಮನಸ್ಸೆ ತರನೇ ಯೆಹೋವನಿಗೆ ಇಷ್ಟ ಆಗೋದನ್ನ ಮಾಡಲಿಲ್ಲ.+ ಮನಸ್ಸೆ ಮಾಡಿಸಿದ್ದ ಕೆತ್ತಿದ ಮೂರ್ತಿಗಳಿಗೆ ಅವನು ಬಲಿಗಳನ್ನ ಅರ್ಪಿಸಿದ.+ ಅವನು ಅವುಗಳನ್ನ ಆರಾಧಿಸ್ತಾ ಹೋದ. 23 ಆಮೋನ ತನ್ನ ತಂದೆ ಮನಸ್ಸೆ ತರ+ ಯೆಹೋವನ ಮುಂದೆ ತನ್ನನ್ನ ತಗ್ಗಿಸಿಕೊಳ್ಳಲಿಲ್ಲ.+ ಅಷ್ಟೇ ಅಲ್ಲ ಅವನು ತಪ್ಪುಗಳ ಮೇಲೆ ತಪ್ಪುಗಳನ್ನ ಮಾಡ್ತಾ ಹೋದ. 24 ಸ್ವಲ್ಪ ಸಮಯ ಆದ ಮೇಲೆ ಆಮೋನನ ಸೇವಕರು ಅವನ ವಿರುದ್ಧ ಸಂಚು ಮಾಡಿ+ ಅವನ ಮನೆಯಲ್ಲೇ ಅವನನ್ನ ಸಾಯಿಸಿದ್ರು. 25 ರಾಜನ ವಿರುದ್ಧ ಸಂಚು ಮಾಡಿದ ಎಲ್ಲರನ್ನೂ ಆ ದೇಶದ ಜನ ಸಾಯಿಸಿದ್ರು.+ ಆಮೋನನ ಸ್ಥಾನದಲ್ಲಿ ಅವನ ಮಗ ಯೋಷೀಯನನ್ನ+ ರಾಜನನ್ನಾಗಿ ಮಾಡಿದ್ರು.