ವಿಮೋಚನಕಾಂಡ
31 ಯೆಹೋವ ಮೋಶೆ ಜೊತೆ ಇನ್ನೂ ಮಾತಾಡ್ತಾ ಹೀಗಂದನು: 2 “ನೋಡು, ಯೆಹೂದ ಕುಲದ ಬೆಚಲೇಲನನ್ನ+ ನಾನು ಆರಿಸ್ಕೊಂಡಿದ್ದೀನಿ. ಅವನು ಊರಿಯ ಮಗ, ಹೂರನ ಮೊಮ್ಮಗ.+ 3 ಅವನಲ್ಲಿ ಪವಿತ್ರಶಕ್ತಿ ತುಂಬಿಸ್ತೀನಿ. ವಿವೇಕ, ತಿಳುವಳಿಕೆ ಮತ್ತು ಪ್ರತಿಯೊಂದು ರೀತಿಯ ಕರಕುಶಲ ಕೆಲಸಗಳ ಜ್ಞಾನವನ್ನ ಅವನಿಗೆ ಕೊಡ್ತೀನಿ. 4 ಇದ್ರಿಂದ ಅವನು ಕಲಾತ್ಮಕ ವಿನ್ಯಾಸಗಳನ್ನ ಮಾಡೋದ್ರಲ್ಲಿ, ಚಿನ್ನ, ಬೆಳ್ಳಿ, ತಾಮ್ರದ ಕೆಲಸದಲ್ಲಿ, 5 ರತ್ನಗಳನ್ನ ಕತ್ತರಿಸೋ, ಕುಂದಣಗಳನ್ನ ಮಾಡಿ ಅವುಗಳಲ್ಲಿ ರತ್ನಗಳನ್ನ ಕೂರಿಸೋ,+ ಮರದ ಎಲ್ಲ ರೀತಿಯ ವಸ್ತುಗಳನ್ನ ಮಾಡೋ ಕೆಲಸದಲ್ಲಿ ನಿಪುಣನಾಗ್ತಾನೆ.+ 6 ಬೆಚಲೇಲನಿಗೆ ಸಹಾಯ ಮಾಡೋಕೆ ದಾನ್ ಕುಲದ ಅಹೀಸಾಮಾಕನ ಮಗ ಒಹೊಲೀಯಾಬನನ್ನ+ ನೇಮಿಸಿದ್ದೀನಿ. ಅಷ್ಟೇ ಅಲ್ಲ ಯಾರಲ್ಲಿ ಕೌಶಲ ಇದ್ಯೋ ಅವರಿಗೆಲ್ಲ ವಿವೇಕ ಕೊಡ್ತೀನಿ. ಇದ್ರಿಂದ ನಾನು ನಿನಗೆ ಆಜ್ಞಾಪಿಸಿದ್ದೆಲ್ಲ ಅವರು ಮಾಡ್ತಾರೆ.+ 7 ದೇವದರ್ಶನದ ಡೇರೆ,+ ಸಾಕ್ಷಿ ಮಂಜೂಷ,+ ಅದ್ರ ಮುಚ್ಚಳ,+ ಡೇರೆಯಲ್ಲಿ ಇರಬೇಕಾದ ಎಲ್ಲ ಉಪಕರಣಗಳು, 8 ಮೇಜು,+ ಅದ್ರ ಉಪಕರಣಗಳು, ಶುದ್ಧ ಚಿನ್ನದ ದೀಪಸ್ತಂಭ, ಅದ್ರ ಎಲ್ಲ ಉಪಕರಣಗಳು,+ ಧೂಪವೇದಿ,+ 9 ಸರ್ವಾಂಗಹೋಮದ ಯಜ್ಞವೇದಿ,+ ಅದ್ರ ಎಲ್ಲ ಉಪಕರಣಗಳು, ತಾಮ್ರದ ದೊಡ್ಡ ಬೋಗುಣಿ, ಅದ್ರ ಪೀಠ,+ 10 ಉತ್ತಮ ರೀತಿಯ ಹೆಣಿಗೆ ಕೆಲಸದಿಂದ ಮಾಡಿದ ಬಟ್ಟೆಗಳು, ಪುರೋಹಿತ ಆರೋನನ ಪವಿತ್ರ ಬಟ್ಟೆಗಳು, ಅವನ ಮಕ್ಕಳು ಪುರೋಹಿತರಾಗಿ ಸೇವೆ ಮಾಡುವಾಗ ಹಾಕೋ ಬಟ್ಟೆಗಳು,+ 11 ಅಭಿಷೇಕ ತೈಲ, ಆರಾಧನಾ ಸ್ಥಳದಲ್ಲಿ ಬಳಸೋ ಸುವಾಸನೆಯ ಧೂಪ,+ ಹೀಗೆ ನಾನು ನಿನಗೆ ಆಜ್ಞೆ ಕೊಟ್ಟ ಪ್ರತಿಯೊಂದನ್ನೂ ಅವರು ಮಾಡ್ತಾರೆ.”
12 ಯೆಹೋವ ಮೋಶೆಗೆ ಇನ್ನೂ ಹೇಳಿದ್ದು ಏನಂದ್ರೆ 13 “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ನಾನು ಕೊಟ್ಟ ಸಬ್ಬತ್+ ನಿಯಮವನ್ನ ತಪ್ಪದೆ ಪಾಲಿಸಬೇಕು. ಯಾಕಂದ್ರೆ ನಾನು ನಿಮ್ಮ ಜೊತೆ ಮಾಡ್ಕೊಂಡಿರೋ ಒಪ್ಪಂದಕ್ಕೆ ಗುರುತು ಈ ಸಬ್ಬತ್. ಯೆಹೋವನಾದ ನಾನು ನಿಮ್ಮನ್ನ ಪವಿತ್ರ ಜನರಾಗಿ ಪ್ರತ್ಯೇಕಿಸ್ತಾ ಇದ್ದೀನಿ ಅಂತ ಈ ಗುರುತು ನಿಮ್ಮ ಎಲ್ಲ ಪೀಳಿಗೆಗೆ ನೆನಪು ಹುಟ್ಟಿಸುತ್ತೆ. 14 ಸಬ್ಬತ್ ಪವಿತ್ರ ಆಗಿರೋದ್ರಿಂದ ನೀವು ಅದನ್ನ ಆಚರಿಸ್ಲೇಬೇಕು.+ ಸಬ್ಬತ್ ನಿಯಮ ಮೀರುವವರನ್ನ ಸಾಯಿಸಬೇಕು. ಯಾರಾದ್ರೂ ಆ ದಿನ ಕೆಲಸ ಮಾಡಿದ್ರೆ ಅವನನ್ನ ಸಾಯಿಸಬೇಕು.+ 15 ಆರು ದಿನ ನೀವು ಕೆಲಸ ಮಾಡಬಹುದು, ಆದ್ರೆ ಏಳನೇ ದಿನ ಸಬ್ಬತ್ ಆಗಿರೋದ್ರಿಂದ ಪೂರ್ತಿ ವಿಶ್ರಾಂತಿ ತಗೊಬೇಕು.+ ಆ ದಿನ ಯೆಹೋವನಿಗೆ ಪವಿತ್ರ. ಯಾರಾದ್ರೂ ಸಬ್ಬತ್ ದಿನದಲ್ಲಿ ಕೆಲಸ ಮಾಡಿದ್ರೆ ಅವರನ್ನ ಸಾಯಿಸಬೇಕು. 16 ಇಸ್ರಾಯೇಲ್ಯರು ಸಬ್ಬತ್ ನಿಯಮ ಪಾಲಿಸ್ಲೇಬೇಕು. ಇದನ್ನ ಎಲ್ಲ ಪೀಳಿಗೆಯವರು ಪಾಲಿಸಬೇಕು. ಇದು ಶಾಶ್ವತ ಒಪ್ಪಂದ. 17 ನಾನು ಇಸ್ರಾಯೇಲ್ಯರ ಜೊತೆ ಮಾಡಿರೋ ಒಪ್ಪಂದಕ್ಕೆ ಸಬ್ಬತ್ ಆಚರಣೆ ಯಾವಾಗ್ಲೂ ಗುರುತಾಗಿ ಇರುತ್ತೆ.+ ಯಾಕಂದ್ರೆ ಯೆಹೋವನಾದ ನಾನು ಆರು ದಿನದಲ್ಲಿ ಆಕಾಶ ಭೂಮಿಯನ್ನ ಸೃಷ್ಟಿ ಮಾಡಿ, ಏಳನೇ ದಿನ ಕೆಲಸ ನಿಲ್ಲಿಸಿ ವಿಶ್ರಾಂತಿ ತಗೊಂಡೆ.’”+
18 ಸಿನಾಯಿ ಬೆಟ್ಟದ ಮೇಲೆ ಮೋಶೆ ಜೊತೆ ಮಾತಾಡಿ ಮುಗಿಸಿದ ಕೂಡ್ಲೇ ದೇವರು ತನ್ನ ಆಜ್ಞೆಗಳಿರೋ ಎರಡು ಕಲ್ಲಿನ ಹಲಗೆಗಳನ್ನ ಅವನಿಗೆ ಕೊಟ್ಟನು.+ ದೇವರು ತನ್ನ ಕೈಯಿಂದಾನೇ*+ ಆ ಕಲ್ಲಿನ ಹಲಗೆಗಳ ಮೇಲೆ ಬರೆದಿದ್ದನು.