ಅರಣ್ಯಕಾಂಡ
14 ಇದನ್ನ ಕೇಳಿ ಇಸ್ರಾಯೇಲ್ಯರೆಲ್ಲ ಜೋರಾಗಿ ಕಿರುಚಿದ್ರು. ಅವರು ರಾತ್ರಿ ಇಡೀ ಅತ್ತು ಗೋಳಾಡ್ತಾ+ 2 ಮೋಶೆ, ಆರೋನರ ವಿರುದ್ಧ ಗೊಣಗೋಕೆ ಶುರು ಮಾಡಿದ್ರು.+ ಎಲ್ರು ಅವರಿಬ್ರ ವಿರುದ್ಧ ಮಾತಾಡ್ತಾ “ನಾವು ಈಜಿಪ್ಟ್ ದೇಶದಲ್ಲೇ ಸತ್ತಿದ್ರೆ ಚೆನ್ನಾಗಿರುತ್ತಿತ್ತು. ಈ ಕಾಡಲ್ಲಾದ್ರೂ ಸಾಯಬಾರದಿತ್ತಾ? 3 ಯೆಹೋವ ನಮ್ಮನ್ನ ಯಾಕೆ ಆ ದೇಶಕ್ಕೆ ಕರ್ಕೊಂಡು ಹೋಗ್ತಿದ್ದಾನೆ? ನಮ್ಮನ್ನ ಕತ್ತಿಯಿಂದ ಸಾಯಿಸಬೇಕಂತಾನಾ?+ ನಮ್ಮ ಹೆಂಡತಿ-ಮಕ್ಕಳು ಸೆರೆಯಾಗಿ ಹೋಗಬೇಕಂತಾನಾ?+ ಇದಕ್ಕಿಂತ ನಾವು ಈಜಿಪ್ಟಿಗೆ ವಾಪಸ್ ಹೋಗೋದೇ ಒಳ್ಳೇದು”+ ಅಂದ್ರು. 4 ಅಷ್ಟೇ ಅಲ್ಲ “ನಾವೇ ಒಬ್ಬ ನಾಯಕನನ್ನ ಆರಿಸ್ಕೊಂಡು ಈಜಿಪ್ಟ್ಗೆ ವಾಪಸ್ ಹೋಗೋಣ” ಅಂತ ಮಾತಾಡ್ಕೊಳ್ತಾ ಇದ್ರು!+
5 ಆಗ ಮೋಶೆ ಮತ್ತೆ ಆರೋನ ಎಲ್ಲ ಇಸ್ರಾಯೇಲ್ ಜನ್ರ ಮುಂದೆ ಮಂಡಿಯೂರಿ ನೆಲದ ತನಕ ಬಾಗಿದ್ರು. 6 ಇದನ್ನ ನೋಡಿ ಕಾನಾನ್ ದೇಶ ಸಂಚರಿಸಿ ನೋಡಿದ ಗೂಢಚಾರರಲ್ಲಿ ನೂನನ ಮಗ ಯೆಹೋಶುವ,+ ಯೆಫುನ್ನೆಯ ಮಗ ಕಾಲೇಬ+ ದುಃಖದಿಂದ ತಮ್ಮ ಬಟ್ಟೆ ಹರ್ಕೊಂಡ್ರು. 7 ಅವರು ಎಲ್ಲ ಇಸ್ರಾಯೇಲ್ಯರಿಗೆ “ನಾವು ಹೋಗಿ ನೋಡ್ಕೊಂಡು ಬಂದ ಆ ದೇಶ ತುಂಬ ಚೆನ್ನಾಗಿದೆ.+ 8 ಯೆಹೋವ ನಮ್ಮನ್ನ ಮೆಚ್ಚಿರೋದಾದ್ರೆ ಹಾಲೂ ಜೇನೂ ಹರಿಯೋ ಆ ದೇಶಕ್ಕೆ ನಮ್ಮನ್ನ ಖಂಡಿತ ಕರ್ಕೊಂಡು ಹೋಗ್ತಾನೆ. ಅದನ್ನ ನಮಗೆ ಆಸ್ತಿಯಾಗಿ ಕೊಡ್ತಾನೆ.+ 9 ಆದ್ರೆ ನೀವು ಯೆಹೋವನ ವಿರುದ್ಧ ದಂಗೆ ಏಳಬಾರದು. ಆ ದೇಶದ ಜನ್ರಿಗೆ ಹೆದರಬಾರದು.+ ಅವರನ್ನ ಸುಲಭವಾಗಿ ಸೋಲಿಸೋಕೆ ನಮ್ಮಿಂದಾಗುತ್ತೆ. ಅವರನ್ನ ಕಾಪಾಡೋಕೆ ಯಾರೂ ಇಲ್ಲ. ಆದ್ರೆ ನಮ್ಮ ಜೊತೆ ಯೆಹೋವ ಇದ್ದಾನೆ.+ ಹಾಗಾಗಿ ಅವರಿಗೆ ಹೆದರಬೇಡಿ” ಅಂದ್ರು.
10 ಆದ್ರೆ ಜನ್ರೆಲ್ಲ ಅವರಿಬ್ರನ್ನ ಕಲ್ಲು ಹೊಡೆದು ಕೊಲ್ಲಬೇಕಂತ+ ಮಾತಾಡ್ಕೊಂಡ್ರು. ಆಗ ಎಲ್ಲ ಇಸ್ರಾಯೇಲ್ಯರಿಗೆ ದೇವದರ್ಶನ ಡೇರೆ ಮೇಲೆ ಯೆಹೋವನ ಮಹಿಮೆ ಕಾಣಿಸ್ತು.+
11 ಆಮೇಲೆ ಯೆಹೋವ ಮೋಶೆಗೆ “ಈ ಜನ ಇನ್ನೆಷ್ಟು ದಿನ ನನಗೆ ಗೌರವ ಕೊಡದೆ ಇರ್ತಾರೆ?+ ನಾನು ಮಾಡಿದ ಅದ್ಭುತಗಳನ್ನ ಕಣ್ಣಾರೆ ನೋಡಿದ್ರೂ ನನ್ನ ಮೇಲೆ ನಂಬಿಕೆ ಇಲ್ಲ.+ 12 ಅವ್ರಿಗೆ ಅಂಟುರೋಗ ಬರೋ ತರ ಮಾಡಿ ಎಲ್ರನ್ನ ನಾಶ ಮಾಡ್ತೀನಿ. ನಿನ್ನ ವಂಶದವರನ್ನ ಅವರಿಗಿಂತ ದೊಡ್ಡ, ಬಲಿಷ್ಠ ಜನಾಂಗ ಆಗೋ ತರ ಮಾಡ್ತೀನಿ”+ ಅಂದನು.
13 ಆದ್ರೆ ಮೋಶೆ ಯೆಹೋವನಿಗೆ “ನಿನ್ನ ಶಕ್ತಿನ ತೋರಿಸಿ ಈಜಿಪ್ಟಿನವರ ಮಧ್ಯದಿಂದ ಈ ನಿನ್ನ ಜನ್ರನ್ನ ಬಿಡಿಸ್ಕೊಂಡು ಬಂದೆ. ಈಗ ನೀನು ಇವರನ್ನ ನಾಶ ಮಾಡಿದ್ರೆ ಈ ಸುದ್ದಿ ಈಜಿಪ್ಟಿನವರಿಗೆ ಮುಟ್ಟುತ್ತೆ.+ 14 ಅವರು ಅದನ್ನೆಲ್ಲ ಈ ದೇಶದ ಜನ್ರಿಗೆ ಹೇಳ್ತಾರೆ. ಯೆಹೋವನಾದ ನೀನು ಈ ನಿನ್ನ ಜನ್ರ ಮಧ್ಯ ಇದ್ದೀಯ,+ ಇವ್ರಿಗೆ ಸ್ಪಷ್ಟವಾಗಿ ಕಾಣಿಸ್ಕೊಂಡಿದ್ದೀಯ+ ಅಂತ ಇಲ್ಲಿನ ಜನ ಕೂಡ ಕೇಳಿಸ್ಕೊಂಡಿದ್ದಾರೆ. ನಿನ್ನ ಹೆಸ್ರು ಯೆಹೋವ ಅಂತ, ನಿನ್ನ ಜನ್ರ ಮೇಲೆ ನಿನ್ನ ಮೋಡ ನಿಲ್ಲೋ ತರ ಮಾಡಿದ್ದೀಯ ಅಂತ, ಅಷ್ಟೇ ಅಲ್ಲ ಹಗಲಲ್ಲಿ ಮೋಡದಲ್ಲೂ ರಾತ್ರಿಯಲ್ಲಿ ಬೆಂಕಿಯಲ್ಲೂ ಇದ್ದು ಅವ್ರ ಮುಂದೆಮುಂದೆ ಹೋಗ್ತೀಯ+ ಅನ್ನೋ ವಿಷ್ಯನೂ ಅವರಿಗೆ ಗೊತ್ತು. 15 ಈಗ ನೀನು ಈ ಜನ್ರನ್ನೆಲ್ಲ ಒಂದೇ ಸಾರಿ ಸಾಯಿಸಿಬಿಟ್ರೆ ನಿನ್ನ ಪ್ರಖ್ಯಾತಿಯ ಬಗ್ಗೆ ಕೇಳಿಸ್ಕೊಂಡ ಬೇರೆ ಬೇರೆ ದೇಶದ ಜನ್ರು, 16 ‘ತಾನು ಮಾತು ಕೊಟ್ಟ ದೇಶಕ್ಕೆ ಅವರನ್ನ ಕರ್ಕೊಂಡು ಹೋಗೋಕೆ ಯೆಹೋವನ ಕೈಯಲ್ಲಿ ಆಗಲಿಲ್ಲ. ಹಾಗಾಗಿ ಅವರನ್ನ ಕಾಡಲ್ಲೇ ಸಾಯಿಸಿಬಿಟ್ಟ’ ಅಂತ ಹೇಳ್ತಾರೆ.+ 17 ಯೆಹೋವನೇ ನೀನು ಮಾತು ಕೊಟ್ಟಿರೋ ತರ ನಿನಗೆಷ್ಟು ಶಕ್ತಿ ಇದೆ ಅಂತ ದಯವಿಟ್ಟು ತೋರಿಸು. ನೀನು ಮಾತು ಕೊಟ್ಟಾಗ 18 ‘ಯೆಹೋವ ತಟ್ಟಂತ ಕೋಪ ಮಾಡ್ಕೊಳ್ಳಲ್ಲ, ಶಾಶ್ವತ ಪ್ರೀತಿಯನ್ನ+ ಧಾರಾಳವಾಗಿ ತೋರಿಸ್ತಾನೆ, ತಪ್ಪು ಅಪರಾಧಗಳನ್ನ ಕ್ಷಮಿಸ್ತಾನೆ, ಆದ್ರೆ ಕೆಟ್ಟವರಿಗೆ ಶಿಕ್ಷೆ ಕೊಡದೆ ಬಿಡಲ್ಲ, ತಂದೆಗಳು ಮಾಡಿದ ಪಾಪದ ಪರಿಣಾಮಗಳನ್ನ ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಅನುಭವಿಸೋ ತರ ಬಿಟ್ಟುಬಿಡ್ತಾನೆ’ ಅಂತ ಹೇಳಿದ್ದೆ ಅಲ್ವಾ.+ 19 ನೀನು ಈ ಜನ್ರಿಗೆ ಶಾಶ್ವತ ಪ್ರೀತಿಯನ್ನ ಅಪಾರವಾಗಿ ತೋರಿಸಿ ದಯವಿಟ್ಟು ಅವ್ರ ಪಾಪನ ಕ್ಷಮಿಸು. ನೀನು ಈ ಜನ್ರನ್ನ ಈಜಿಪ್ಟಿಂದ ಕರ್ಕೊಂಡು ಬಂದಾಗಿಂದ ಇಲ್ಲಿ ತನಕ ಕ್ಷಮಿಸ್ತಾ ಬಂದ ಹಾಗೆ ಈ ಸಲಾನೂ ಕ್ಷಮಿಸು”+ ಅಂತ ಬೇಡ್ಕೊಂಡ.
20 ಅದಕ್ಕೆ ಯೆಹೋವ “ಸರಿ, ನೀನು ಹೇಳಿದ ಹಾಗೇ ಅವರನ್ನ ಕ್ಷಮಿಸ್ತೀನಿ.+ 21 ನನ್ನ ಜೀವದಾಣೆ, ಭೂಮಿ ಮೇಲೆಲ್ಲ ಯೆಹೋವನ ಮಹಿಮೆ ತುಂಬ್ಕೊಳ್ಳುತ್ತೆ.+ 22 ಆದ್ರೆ ನನ್ನ ಮಹಿಮೆಯನ್ನ ನಾನು ಈಜಿಪ್ಟಲ್ಲಿ, ಕಾಡಲ್ಲಿ ಮಾಡಿದ ಅದ್ಭುತಗಳನ್ನ ಕಣ್ಣಾರೆ ನೋಡಿನೂ+ ನನ್ನನ್ನ ತುಂಬ* ಸಲ ಪರೀಕ್ಷಿಸ್ತಾ+ ನನ್ನ ಮಾತನ್ನ ಕೇಳದೆ+ ಹೋದ ಇವ್ರಲ್ಲಿ ಒಬ್ಬನೂ 23 ನಾನು ಅವ್ರ ಪೂರ್ವಜರಿಗೆ ಕೊಡ್ತೀನಿ ಅಂತ ಮಾತು ಕೊಟ್ಟ ದೇಶವನ್ನ ಯಾವತ್ತೂ ನೋಡಲ್ಲ. ನನಗೆ ಗೌರವ ಕೊಡದೇ ಇರೋ ಈ ಜನ್ರಲ್ಲಿ ಒಬ್ಬನೂ ಆ ದೇಶವನ್ನ ನೋಡಲ್ಲ.+ 24 ಆದ್ರೆ ನನ್ನ ಸೇವಕ ಕಾಲೇಬ+ ಅವರ ತರ ಅಲ್ಲ. ನಾನು ಹೇಳಿದ ಹಾಗೇ ಮನಸ್ಸಾರೆ* ನಡೀತಾ ಬಂದಿದ್ದಾನೆ. ಹಾಗಾಗಿ ಅವನು ನೋಡ್ಕೊಂಡು ಬಂದಿರೋ ದೇಶಕ್ಕೆ ಅವನನ್ನ ಖಂಡಿತ ಕರ್ಕೊಂಡು ಹೋಗ್ತೀನಿ. ಆ ದೇಶ ಅವನ ಸಂತತಿಯವರ ಸ್ವತ್ತಾಗುತ್ತೆ.+ 25 ಅಮಾಲೇಕ್ಯರು, ಕಾನಾನ್ಯರು+ ಈ ಕಣಿವೆಯಲ್ಲಿ ವಾಸ ಮಾಡೋದ್ರಿಂದ ನಾಳೆ ನೀವು ವಾಪಸ್ ಹೋಗಿ ಕೆಂಪು ಸಮುದ್ರದ ಕಡೆ ಹೋಗೋ ದಾರಿಯಾಗಿ ಕಾಡಿಗೆ ಹೋಗಿ” ಅಂದನು.+
26 ಆಮೇಲೆ ಯೆಹೋವ ಮೋಶೆಗೆ, ಆರೋನನಿಗೆ ಹೀಗಂದನು: 27 “ಈ ಕೆಟ್ಟ ಜನ್ರು ಇನ್ನೆಷ್ಟು ದಿನ ನನ್ನ ವಿರುದ್ಧ ಗೊಣಗ್ತಾ ಇರ್ತಾರೆ?+ ಇಸ್ರಾಯೇಲ್ಯರು ನನ್ನ ವಿರುದ್ಧ ಗೊಣಗ್ತಾ ಹೇಳ್ತಿರೋ+ ಮಾತುಗಳನ್ನ ಕೇಳಿಸ್ಕೊಂಡೆ. 28 ಅವರಿಗೆ ಹೀಗೆ ಹೇಳಿ: ‘ಯೆಹೋವ ಹೇಳೋದು ಏನಂದ್ರೆ “ನನ್ನ ಜೀವದಾಣೆ, ನೀವು ಏನು ಹೇಳಿದ್ರೋ ನಾನು ಅದನ್ನೇ ನಿಮಗೆ ಮಾಡ್ತೀನಿ.+ 29 ಈ ಕಾಡಲ್ಲೇ ನಿಮ್ಮ ಹೆಣಗಳು ಬೀಳುತ್ತೆ.+ ಪಟ್ಟಿಯಾದ 20 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಎಲ್ರೂ ಅಂದ್ರೆ ನನ್ನ ವಿರುದ್ಧ ಗೊಣಗಿದ ಎಲ್ರೂ ಇಲ್ಲೇ ಸಾಯ್ತೀರ.+ 30 ನಿಮಗೆ ಕೊಡ್ತೀನಿ ಅಂತ ಮಾತು ಕೊಟ್ಟ ಆ ದೇಶಕ್ಕೆ+ ಯೆಫುನ್ನೆಯ ಮಗ ಕಾಲೇಬ, ನೂನನ ಮಗ ಯೆಹೋಶುವ ಬಿಟ್ಟು ಬೇರೆ ಯಾರೂ ಹೋಗಲ್ಲ.+
31 ಕೈದಿಗಳಾಗಿ ಹೋಗ್ತಾರೆ+ ಅಂತ ನೀವು ಹೇಳಿದ ನಿಮ್ಮ ಮಕ್ಕಳನ್ನ ಆ ದೇಶಕ್ಕೆ ಕರ್ಕೊಂಡು ಹೋಗ್ತೀನಿ. ನೀವು ತಿರಸ್ಕರಿಸಿದ ಆ ದೇಶ+ ಅವ್ರಿಗೆ ಚಿರಪರಿಚಿತ ಸ್ಥಳ ಆಗುತ್ತೆ. 32 ಆದ್ರೆ ನೀವಂತೂ ಈ ಕಾಡಲ್ಲೇ ಸಾಯ್ತೀರ. 33 ನಿಮ್ಮ ಮಕ್ಕಳು ಈ ಕಾಡಲ್ಲಿ 40 ವರ್ಷ ತನಕ ಕುರುಬರಾಗಿ ಇರ್ತಾರೆ.+ ನೀವು ನನ್ನ ಮೇಲೆ ನಂಬಿಕೆ ಇಡದಿರೋ ಕಾರಣ* ನಿಮ್ಮಲ್ಲಿ ಪ್ರತಿಯೊಬ್ಬ ಸಾಯೋ ತನಕ ನಿಮ್ಮ ಮಕ್ಕಳು ಶಿಕ್ಷೆ ಅನುಭವಿಸಬೇಕಾಗುತ್ತೆ.+ 34 ನೀವು ಕಾನಾನ್ ದೇಶನ ಸಂಚರಿಸಿ ನೋಡಿದ್ದು 40 ದಿನ+ ಅಲ್ವಾ? ಹಾಗಾಗಿ ಒಂದು ದಿನಕ್ಕೆ ಒಂದು ವರ್ಷದ ಲೆಕ್ಕದಲ್ಲಿ ಆ 40 ದಿನಗಳಿಗೆ 40 ವರ್ಷ+ ನಿಮ್ಮ ಪಾಪಗಳಿಗೆ ಶಿಕ್ಷೆ ಅನುಭವಿಸ್ತೀರ. ನನ್ನನ್ನ ವಿರೋಧಿಸಿದ್ರೆ* ಏನಾಗುತ್ತೆ ಅಂತ ಆಗ ನಿಮಗೆ ಗೊತ್ತಾಗುತ್ತೆ.
35 ಯೆಹೋವನಾದ ನಾನು ಹೇಳ್ತಾ ಇದ್ದೀನಿ. ನನ್ನ ವಿರುದ್ಧ ಎದ್ದಿರೋ ಈ ಎಲ್ಲ ಕೆಟ್ಟವರಿಗೆ ಶಿಕ್ಷೆ ಕೊಡ್ತೀನಿ. ಈ ಕಾಡಲ್ಲೇ ಅವರು ನಾಶ ಆಗ್ತಾರೆ, ಇಲ್ಲೇ ಅವರು ಸತ್ತುಹೋಗ್ತಾರೆ.+ 36 ಕಾನಾನ್ ದೇಶನ ಸಂಚರಿಸಿ ನೋಡೋಕೆ ಮೋಶೆ ಕಳಿಸಿದ ಗಂಡಸರಲ್ಲಿ ಯಾರು ಆ ದೇಶದ ಬಗ್ಗೆ ಕೆಟ್ಟ ಸುದ್ದಿ ತಂದು+ ಎಲ್ರೂ ಮೋಶೆ ವಿರುದ್ಧ ಗೊಣಗೋ ತರ ಮಾಡಿದ್ರೋ ಅವರು 37 ಖಂಡಿತ ಶಿಕ್ಷೆ ಅನುಭವಿಸ್ತಾರೆ. ಆ ದೇಶದ ಬಗ್ಗೆ ಕೆಟ್ಟ ಸುದ್ದಿ ತಂದವರೆಲ್ಲ ಯೆಹೋವನ ಮುಂದೆ ಸಾಯ್ತಾರೆ.+ 38 ಆದ್ರೆ ಆ ದೇಶನ ಸಂಚರಿಸಿ ನೋಡೋಕೆ ಹೋದವ್ರಲ್ಲಿ ನೂನನ ಮಗ ಯೆಹೋಶುವ, ಯೆಫುನ್ನೆಯ ಮಗ ಕಾಲೇಬ ಮಾತ್ರ ಬದುಕಿ ಉಳಿತಾರೆ.”’”+
39 ಈ ಮಾತುಗಳನ್ನ ಮೋಶೆ ಎಲ್ಲಾ ಇಸ್ರಾಯೇಲ್ಯರಿಗೆ ಹೇಳಿದಾಗ ತುಂಬ ದುಃಖಪಟ್ರು. 40 ಅಷ್ಟೇ ಅಲ್ಲ ಅವರು ಬೆಳಿಗ್ಗೆ ಬೇಗ ಎದ್ದು ಬೆಟ್ಟ ಹತ್ತಿ ಹೋಗೋಕೆ ಪ್ರಯತ್ನಿಸ್ತಾ “ನಾವು ಪಾಪ ಮಾಡಿದ್ದೀವಿ. ಆದ್ರೆ ನಾವೀಗ ಯೆಹೋವ ಹೇಳಿದ ಜಾಗಕ್ಕೆ ಹೋಗೋಕೆ ತಯಾರಾಗಿದ್ದೀವಿ” ಅಂದ್ರು.+ 41 ಆಗ ಮೋಶೆ “ಯೆಹೋವನ ಅಪ್ಪಣೆನ ಮೀರಿ ಹೋಗಬೇಡಿ. ನಿಮಗೆ ಜಯ ಸಿಗಲ್ಲ. 42 ಯೆಹೋವ ನಿಮ್ಮ ಜೊತೆ ಇಲ್ಲ. ಹಾಗಾಗಿ ಬೆಟ್ಟ ಹತ್ತಬೇಡಿ. ನೀವು ಹೋದ್ರೆ ಶತ್ರುಗಳು ನಿಮ್ಮನ್ನ ಸೋಲಿಸ್ತಾರೆ.+ 43 ಅಲ್ಲಿ ಅಮಾಲೇಕ್ಯರು ಕಾನಾನ್ಯರು ಇದ್ದಾರೆ. ಅವರು ನಿಮ್ಮ ವಿರುದ್ಧ ಯುದ್ಧ ಮಾಡ್ತಾರೆ.+ ನೀವು ಯೆಹೋವನಿಗೆ ವಿಧೇಯರಾಗದ ಕಾರಣ ಯೆಹೋವ ನಿಮ್ಮ ಜೊತೆ ಇರಲ್ಲ.+ ಹಾಗಾಗಿ ಶತ್ರುಗಳು ನಿಮ್ಮನ್ನ ಕತ್ತಿಯಿಂದ ಸಾಯಿಸ್ತಾರೆ” ಅಂದ.
44 ಇಷ್ಟು ಹೇಳಿದ್ರೂ ಅವರು ಅಹಂಕಾರದಿಂದ ಬೆಟ್ಟ ಹತ್ತೋಕೆ ಶುರು ಮಾಡಿದ್ರು.+ ಆದ್ರೆ ಯೆಹೋವನ ಒಪ್ಪಂದದ ಮಂಜೂಷ ಪಾಳೆಯದ ಮಧ್ಯದಲ್ಲೇ ಇತ್ತು.+ ಮೋಶೆನೂ ಅಲ್ಲೇ ಇದ್ದ. 45 ಆ ಬೆಟ್ಟದಲ್ಲಿ ವಾಸವಾಗಿದ್ದ ಅಮಾಲೇಕ್ಯರು ಕಾನಾನ್ಯರು ಇಳಿದುಬಂದು ಅವ್ರನ್ನ ಹೊಡೆದು ಹೊರ್ಮಾ ಪಟ್ಟಣ ತನಕ ಅಟ್ಟಿಸ್ಕೊಂಡು ಹೋಗಿ ಚೆದರಿಸಿಬಿಟ್ರು.+