ಯೆರೆಮೀಯ
11 ಯೆಹೋವನಿಂದ ಯೆರೆಮೀಯನಿಗೆ ಈ ಸಂದೇಶ ಸಿಕ್ತು 2 “ಜನ್ರೇ, ಈ ಒಪ್ಪಂದದ ಮಾತುಗಳನ್ನ ಕೇಳಿಸ್ಕೊಳ್ಳಿ.
ಯೆಹೂದದ ಜನ್ರಿಗೆ ಯೆರೂಸಲೇಮಿನ ಜನ್ರಿಗೆ ಈ ಮಾತುಗಳನ್ನ ಹೇಳು* 3 ‘ಇಸ್ರಾಯೇಲಿನ ದೇವರಾದ ಯೆಹೋವ ಹೇಳೋದು ಏನಂದ್ರೆ “ಈ ಒಪ್ಪಂದದ ಮಾತುಗಳನ್ನ ಪಾಲಿಸದಿದ್ರೆ ಶಾಪ ತಟ್ಟಲಿ.+ 4 ಕಬ್ಬಿಣವನ್ನ ಕರಗಿಸೋ ಕುಲುಮೆ ತರ+ ಇದ್ದ ಈಜಿಪ್ಟ್ ದೇಶದಿಂದ ನಾನು ನಿಮ್ಮ ಪೂರ್ವಜರನ್ನ ಕರ್ಕೊಂಡು ಬಂದ ದಿನ ಅವ್ರಿಗೆ ಈ ಒಪ್ಪಂದದ ಮಾತುಗಳನ್ನ ತಿಳಿಸ್ತಾ+ ಹೀಗೆ ಹೇಳಿದೆ ‘ನೀವು ನನ್ನ ಮಾತು ಕೇಳಬೇಕು, ನಾನು ಹೇಳೋದನ್ನೆಲ್ಲ ಮಾಡಬೇಕು. ಆಗ ನೀವು ನನ್ನ ಜನರಾಗ್ತೀರ, ನಾನು ನಿಮ್ಮ ದೇವರಾಗಿ ಇರ್ತಿನಿ.+ 5 ಅಷ್ಟೇ ಅಲ್ಲ ಹಾಲೂ ಜೇನೂ ಹರಿಯೋ ದೇಶವನ್ನ ಕೊಡ್ತೀನಿ+ ಅಂತ ನಿಮ್ಮ ಪೂರ್ವಜರಿಗೆ ಮಾತು ಕೊಟ್ಟಿದ್ದನ್ನ ನೆರವೇರಿಸ್ತೀನಿ. ಇವತ್ತಿನ ತನಕ ನೀವು ಆ ದೇಶದಲ್ಲೇ ಇದ್ದೀರ.’”’”
ಆಗ ನಾನು “ಹಾಗೇ ಆಗ್ಲಿ* ಯೆಹೋವನೇ” ಅಂದೆ.
6 ಆಮೇಲೆ ಯೆಹೋವ ನನಗೆ ಹೀಗೆ ಹೇಳಿದನು “ಯೆಹೂದದ ಪಟ್ಟಣಗಳಲ್ಲಿ, ಯೆರೂಸಲೇಮಿನ ಬೀದಿಗಳಲ್ಲಿ ಈ ಎಲ್ಲ ಮಾತುಗಳನ್ನ ಸಾರಿಹೇಳು ‘ಈ ಒಪ್ಪಂದದ ಮಾತುಗಳನ್ನ ಕೇಳಿಸ್ಕೊಳ್ಳಿ. ಅದರ ಪ್ರಕಾರ ನಡಿರಿ. 7 ನಾನು ನಿಮ್ಮ ಪೂರ್ವಜರನ್ನ ಈಜಿಪ್ಟ್ ದೇಶದಿಂದ ಕರ್ಕೊಂಡು ಬಂದ ದಿನ ಅವ್ರನ್ನ ಎಚ್ಚರಿಸಿ ಬುದ್ಧಿ ಹೇಳಿದೆ. ಇವತ್ತಿನ ತನಕನೂ ನಾನು ಅವ್ರಿಗೆ “ನನ್ನ ಮಾತು ಕೇಳಿ” ಅಂತ ಪದೇ ಪದೇ ಬುದ್ಧಿ ಹೇಳ್ತಾ ಇದ್ದೀನಿ.*+ 8 ಆದ್ರೆ ಅವರು ನನ್ನ ಮಾತು ಕೇಳಲಿಲ್ಲ, ಸ್ವಲ್ಪನೂ ಕಿವಿಗೆ ಹಾಕೊಳ್ಳಲಿಲ್ಲ. ಪ್ರತಿಯೊಬ್ಬರು ಹಠಮಾರಿಗಳಾಗಿ ತಮ್ಮ ಕೆಟ್ಟಹೃದಯ ಹೇಳೋದನ್ನೇ ಮಾಡ್ತಿದ್ರು.+ ಹಾಗಾಗಿ ನಾನು ಒಪ್ಪಂದದಲ್ಲಿ ಹೇಳಿದ ಹಾಗೆ ಅವರಿಗೆ ಶಿಕ್ಷೆ ಕೊಡ್ತೀನಿ. ಆ ಒಪ್ಪಂದದ ಪ್ರಕಾರ ನಡಿರಿ ಅಂತ ಅವ್ರಿಗೆ ಹೇಳಿದ್ರೂ ಅವರು ನನ್ನ ಮಾತು ಕೇಳಲಿಲ್ಲ.’”
9 ಆಮೇಲೆ ಯೆಹೋವ ನನಗೆ ಹೀಗೆ ಹೇಳಿದನು “ಯೆಹೂದದ ಜನ್ರು, ಯೆರೂಸಲೇಮಿನ ಜನ್ರು ಸೇರ್ಕೊಂಡು ನನ್ನ ವಿರುದ್ಧ ಸಂಚು ಮಾಡ್ತಾ ಇದ್ದಾರೆ. 10 ಅವರ ಪೂರ್ವಜರು ನನ್ನ ಮಾತು ಕೇಳಲಿಲ್ಲ. ಪೂರ್ವಜರು ಮಾಡಿದ ತಪ್ಪುಗಳನ್ನೇ ಇವರು ಕೂಡ ಮಾಡ್ತಿದ್ದಾರೆ.+ ಇವರು ಬೇರೆ ದೇವರುಗಳನ್ನ ಆರಾಧಿಸಿ ಅವುಗಳ ಸೇವೆ ಮಾಡಿದ್ದಾರೆ.+ ಇಸ್ರಾಯೇಲಿನ ಜನ್ರು, ಯೆಹೂದದ ಜನ್ರು ಅವರ ಪೂರ್ವಜರ ಜೊತೆ ನಾನು ಮಾಡ್ಕೊಂಡ ಒಪ್ಪಂದ ಮುರಿದಿದ್ದಾರೆ.+ 11 ಹಾಗಾಗಿ ಯೆಹೋವ ಹೇಳೋದು ಏನಂದ್ರೆ ‘ನಾನು ಅವ್ರ ಮೇಲೆ ಒಂದು ಕಷ್ಟ ತರ್ತಿನಿ.+ ಅದ್ರಿಂದ ಅವರು ತಪ್ಪಿಸ್ಕೊಳ್ಳೋಕೆ ಆಗೋದೇ ಇಲ್ಲ. ಅವರು ಸಹಾಯಕ್ಕಾಗಿ ನನ್ನನ್ನ ಕೂಗಿಕೊಂಡ್ರೂ ನಾನು ಕಿವಿಗೊಡಲ್ಲ.+ 12 ಆಗ ಯೆಹೂದದ ಪಟ್ಟಣಗಳವರು, ಯೆರೂಸಲೇಮಿನ ಜನ್ರು ತಾವು ಬಲಿಗಳನ್ನ ಅರ್ಪಿಸ್ತಿದ್ದ ದೇವರುಗಳ ಹತ್ರ ಹೋಗಿ ಸಹಾಯಕ್ಕಾಗಿ ಕೂಗಿಕೊಳ್ತಾರೆ.+ ಆದ್ರೆ ಆ ದೇವರುಗಳಿಗೆ ಕಷ್ಟದ ಸಮಯದಲ್ಲಿ ಅವ್ರನ್ನ ಕಾಪಾಡೋಕೆ ಆಗೋದೇ ಇಲ್ಲ. 13 ಯೆಹೂದವೇ, ನಿನ್ನ ಹತ್ರ ಎಷ್ಟು ಪಟ್ಟಣ ಇದ್ಯೋ ಅಷ್ಟೇ ದೇವರುಗಳನ್ನ ಮಾಡ್ಕೊಂಡಿದ್ದೀಯಲ್ಲಾ. ನೀನು ಯಜ್ಞವೇದಿಗಳನ್ನ ಕಟ್ಕೊಂಡು ನಾಚಿಕೆಗೀಡು ಮಾಡೋ ದೇವರಾದ ಬಾಳನಿಗೆ ಬಲಿಗಳನ್ನ ಅರ್ಪಿಸ್ತಾ ಇದ್ದೀಯ. ಯೆರೂಸಲೇಮಲ್ಲಿ ಎಷ್ಟು ಬೀದಿಗಳಿವೆಯೋ ಅಷ್ಟೇ ಯಜ್ಞವೇದಿಗಳನ್ನ ಕಟ್ಟಿದ್ದೀರ.’+
14 ನೀನು* ಈ ಜನ್ರಿಗೋಸ್ಕರ ಪ್ರಾರ್ಥಿಸಬೇಡ. ಇವ್ರಿಗಾಗಿ ಮೊರೆಯಿಡಬೇಡ, ವಿಜ್ಞಾಪಿಸಬೇಡ.+ ಯಾಕಂದ್ರೆ ಅವರು ಕಷ್ಟದಲ್ಲಿರುವಾಗ ನನಗೆ ಮೊರೆಯಿಟ್ರೆ ನಾನು ಅದನ್ನ ಕೇಳಲ್ಲ.
15 ನನ್ನ ಪ್ರೀತಿಯ ಜನ್ರಿಗೆ* ನನ್ನ ಮನೆಯಲ್ಲಿರೋಕೆ ಯಾವ ಹಕ್ಕಿದೆ?
ಅವ್ರಲ್ಲಿ ಎಷ್ಟೋ ಜನ ಕೆಟ್ಟದನ್ನ ಮಾಡೋಕೆ ಸಂಚು ಹೂಡಿದ್ದಾರಲ್ಲಾ.
ಅವರು ಪ್ರಾಣಿಗಳನ್ನ ಬಲಿ ಅರ್ಪಿಸಿದ್ರೆ ಅವಳ ಮೇಲೆ ಬರೋ ಕಷ್ಟವನ್ನ ತಡಿಯೋಕೆ ಆಗುತ್ತಾ?
ಆ ಸಮಯದಲ್ಲಿ ಹಿಗ್ಗೋಕೆ ಅವಳಿಂದಾಗುತ್ತಾ?
16 ಯೆಹೋವ ಅವಳನ್ನ, ಹುಲುಸಾಗಿ ಬೆಳೆದಿರೋ,
ಒಳ್ಳೇ ಹಣ್ಣು ಕೊಡೋ ಸುಂದರ ಆಲಿವ್ ಮರ ಅಂತ ಮುಂಚೆ ಕರೆದನು.
ಆದ್ರೆ ಆತನು ಜೋರಾಗಿ ಗರ್ಜಿಸ್ತಾ ಅವಳಿಗೆ ಬೆಂಕಿ ಹಚ್ಚಿದ್ದಾನೆ,
ಅವರು ಅದ್ರ ಕೊಂಬೆಗಳನ್ನ ಮುರಿದಿದ್ದಾರೆ.
17 ನಿನ್ನನ್ನ ನೆಟ್ಟಿರೋ ಸೈನ್ಯಗಳ ದೇವರಾದ ಯೆಹೋವ+ ಹೇಳೋದು ಏನಂದ್ರೆ ನಿನ್ನ ಮೇಲೆ ಕಷ್ಟ ಬರುತ್ತೆ. ಯಾಕಂದ್ರೆ ಇಸ್ರಾಯೇಲ್ ಜನ್ರು, ಯೆಹೂದದ ಜನ್ರು ಕೆಟ್ಟ ಕೆಲಸಗಳನ್ನ ಮಾಡಿದ್ದಾರೆ. ಬಾಳನಿಗೆ ಬಲಿಗಳನ್ನ ಅರ್ಪಿಸಿ ನನ್ನನ್ನ ರೇಗಿಸಿದ್ದಾರೆ.”+
18 ನನಗೆ ಈ ವಿಷ್ಯ ಗೊತ್ತಾಗಬೇಕಂತ ಯೆಹೋವ ಇದನ್ನ ನನಗೆ ಹೇಳಿದ್ದಾನೆ,
ದೇವರೇ, ಅವರು ಮಾಡ್ತಾ ಇದ್ದದನ್ನ ಆಗ ನೀನು ನನಗೆ ತೋರಿಸಿದೆ.
19 ಬಲಿ ಕೊಡೋಕೆ ತಗೊಂಡು ಹೋಗ್ತಿರೋ ಸಾಧು ಕುರಿಮರಿ ತರ ನಾನಿದ್ದೆ.
ಅವರು ನನ್ನ ವಿರುದ್ಧ ಸಂಚು ಮಾಡ್ತಾ,+
“ಆ ಮರವನ್ನ ಅದ್ರ ಹಣ್ಣುಗಳ ಸಮೇತ ನಾಶ ಮಾಡೋಣ,
ಭೂಮಿ ಮೇಲಿಂದ ಅವನನ್ನ ಅಳಿಸಿಬಿಡೋಣ,
ಮುಂದೆ ಯಾರೂ ಅವನ ಹೆಸ್ರನ್ನ ನೆನಪಿಸ್ಕೊಳ್ಳಬಾರದು” ಅಂತ ಮಾತಾಡ್ಕೊಳ್ತಾ ಇದ್ರು.
ನನಗದು ಗೊತ್ತೇ ಇರಲಿಲ್ಲ.
20 ಆದ್ರೆ ಸೈನ್ಯಗಳ ದೇವರಾದ ಯೆಹೋವ ನೀತಿಯಿಂದ ನ್ಯಾಯತೀರಿಸ್ತಾನೆ,
ದೇವರೇ, ನೀನು ಅವ್ರಿಗೆ ಸೇಡು ತೀರಿಸೋದನ್ನ ನೋಡೋ ಅವಕಾಶ ನನಗೆ ಕೊಡು,
ಯಾಕಂದ್ರೆ ನನ್ನ ಮೊಕದ್ದಮೆಯನ್ನ ನಿನ್ನ ಕೈಗೆ ಕೊಟ್ಟಿದ್ದೀನಿ.
21 ಅನಾತೋತಿನ+ ಜನ್ರು ನಿನಗೆ “ಯೆಹೋವನ ಹೆಸ್ರಲ್ಲಿ ನೀನು ಭವಿಷ್ಯ ಹೇಳಬಾರದು.+ ಹೇಳಿದ್ರೆ ನಾವು ನಿನ್ನನ್ನ ಸಾಯಿಸಿಬಿಡ್ತೀವಿ” ಅಂತ ನಿನ್ನ ಜೀವ ತೆಗಿಯೋಕೆ ಕಾಯ್ತಾ ಇದ್ದಾರಲ್ಲಾ. ಅವ್ರ ವಿರುದ್ಧ ಯೆಹೋವ ಈ ಸಂದೇಶ ಹೇಳಿದ್ದಾನೆ 22 ಸೈನ್ಯಗಳ ದೇವರಾದ ಯೆಹೋವ ಹೇಳೋದು ಏನಂದ್ರೆ “ನಾನು ಅವ್ರಿಗೆ ಶಿಕ್ಷೆ ಕೊಡ್ತೀನಿ. ಯುವಕರು ಕತ್ತಿಯಿಂದ ಸಾಯ್ತಾರೆ.+ ಅವರ ಮಕ್ಕಳು ಬರಗಾಲದಿಂದ ಸಾಯ್ತಾರೆ.+ 23 ಅವ್ರಲ್ಲಿ ಒಬ್ರೂ ಉಳಿಯಲ್ಲ. ಯಾಕಂದ್ರೆ ನಾನು ಅನಾತೋತಿನ+ ಜನ್ರಿಗೆ ಶಿಕ್ಷೆ ಕೊಡೋ ವರ್ಷದಲ್ಲಿ ಅವ್ರೆಲ್ಲರ ಮೇಲೆ ಕಷ್ಟ ತರ್ತಿನಿ.”