ವಿಮೋಚನಕಾಂಡ
30 ಧೂಪ ಸುಡೋಕೆ ನೀನು ಒಂದು ಧೂಪವೇದಿ ಮಾಡಬೇಕು.+ ಅದನ್ನ ಅಕೇಶಿಯ ಮರದಿಂದ*+ ಮಾಡು. 2 ಧೂಪವೇದಿ ಚೌಕಾಕಾರ ಇರಬೇಕು. ಒಂದು ಮೊಳ* ಉದ್ದ, ಒಂದು ಮೊಳ ಅಗಲ, ಎರಡು ಮೊಳ ಎತ್ತರ ಇರಬೇಕು. ಅದಕ್ಕೆ ಕೊಂಬುಗಳು ಇರಬೇಕು. ಧೂಪವೇದಿಯನ್ನ, ಅದ್ರ ಕೊಂಬುಗಳನ್ನ ಮರದ ಒಂದೇ ತುಂಡಿಂದ ಮಾಡಬೇಕು.+ 3 ಶುದ್ಧ ಚಿನ್ನದಿಂದ ತಗಡುಗಳನ್ನ ಮಾಡಿ ಧೂಪವೇದಿ ಮೇಲೆ ಎಲ್ಲ ಬದಿಗಳಿಗೆ, ಅದ್ರ ಕೊಂಬುಗಳಿಗೆ ಹೊದಿಸಬೇಕು. ಧೂಪವೇದಿಯ ಮೇಲೆ ಸುತ್ತ ಒಂದು ಚಿನ್ನದ ಅಂಚನ್ನ ಮಾಡಬೇಕು. 4 ಧೂಪವೇದಿಯ ಎರಡು ಬದಿಗಳಲ್ಲಿ ಅಂದ್ರೆ ಎದುರುಬದುರಾಗಿರೋ ಬದಿಗಳಲ್ಲಿ ಎರಡೆರಡು ಚಿನ್ನದ ಬಳೆಗಳು ಇರಬೇಕು. ಆ ಬಳೆಗಳು ಅಂಚಿನ ಕೆಳಗೆ ಇರಬೇಕು. ಇವು ಧೂಪವೇದಿಯನ್ನ ಎತ್ತೋಕೆ ಬಳಸೋ ಕೋಲುಗಳಿಗೆ ಹಿಡಿಗಳಾಗಿ ಇರುತ್ತೆ. 5 ಅಕೇಶಿಯ ಮರದಿಂದ ಕೋಲುಗಳನ್ನ ಮಾಡಿ ಅವುಗಳಿಗೆ ಚಿನ್ನದ ತಗಡುಗಳನ್ನ ಹೊದಿಸಬೇಕು. 6 ನೀನು ಆ ಧೂಪವೇದಿಯನ್ನ ಅತಿ ಪವಿತ್ರ ಸ್ಥಳದ ಪರದೆ ಮುಂದೆ ಇಡು. ಆಗ ಧೂಪವೇದಿ ಸಾಕ್ಷಿ ಮಂಜೂಷಕ್ಕೆ ಹತ್ರ ಇರುತ್ತೆ.+ ಸಾಕ್ಷಿ ಮಂಜೂಷದ ಮುಚ್ಚಳದ ಮೇಲಿಂದ ನಾನು ನಿನಗೆ ಕಾಣಿಸ್ಕೊಳ್ತೀನಿ.+
7 ಆರೋನ+ ಪ್ರತಿ ದಿನ ಬೆಳಿಗ್ಗೆ ದೀಪಗಳನ್ನ+ ಸಿದ್ಧ ಮಾಡುವಾಗ ಆ ಧೂಪವೇದಿ ಮೇಲೆ ಒಳ್ಳೇ ವಾಸನೆ ಇರೋ ಧೂಪವನ್ನ+ ಸುಡಬೇಕು.+ 8 ಸೂರ್ಯ ಮುಳುಗಿದ* ನಂತ್ರ ಆರೋನ ದೀಪಗಳನ್ನ ಹೊತ್ತಿಸುವಾಗ್ಲೂ ಧೂಪ ಸುಡಬೇಕು. ಇದು ಯೆಹೋವನ ಮುಂದೆ ತಪ್ಪದೆ ಅರ್ಪಿಸೋ ಧೂಪ ಅರ್ಪಣೆ. ಇದನ್ನ ನೀವು ತಲೆಮಾರು ತಲೆಮಾರು ತನಕ ಅರ್ಪಿಸಬೇಕು. 9 ನೀವು ಧೂಪವೇದಿ ಮೇಲೆ ನಾನು ಹೇಳಿದ ಧೂಪವನ್ನ ಬಿಟ್ಟು ಬೇರೆ ಯಾವ ಧೂಪವನ್ನೂ ಅರ್ಪಿಸಬಾರದು,+ ಸರ್ವಾಂಗಹೋಮ ಬಲಿಯನ್ನಾಗಲಿ ಧಾನ್ಯ ಅರ್ಪಣೆಯನ್ನಾಗಲಿ ಅರ್ಪಿಸಬಾರದು, ಪಾನ ಅರ್ಪಣೆಯನ್ನೂ ಸುರಿಬಾರದು. 10 ಆರೋನ ವರ್ಷಕ್ಕೆ ಒಮ್ಮೆ ಧೂಪವೇದಿಯನ್ನ ಪರಿಶುದ್ಧ ಮಾಡಬೇಕು.+ ಅವನು ಪಾಪಪರಿಹಾರಕ ಬಲಿಯಾಗಿ ಅರ್ಪಿಸಲಾದ ಪ್ರಾಣಿಯ ರಕ್ತದಲ್ಲಿ ಸ್ವಲ್ಪ ತಗೊಂಡು ಧೂಪವೇದಿಯ ಕೊಂಬುಗಳಿಗೆ ಹಾಕೋ ಮೂಲಕ ಅದನ್ನ ಪರಿಶುದ್ಧ ಮಾಡಬೇಕು.+ ಇದನ್ನ ತಲೆಮಾರುಗಳ ತನಕ ಮಾಡಬೇಕು. ಈ ಧೂಪವೇದಿ ಯೆಹೋವನಿಗೆ ಅತಿ ಪವಿತ್ರ.”
11 ಯೆಹೋವ ಮೋಶೆಗೆ ಹೀಗಂದನು: 12 “ನೀನು ಜನಗಣತಿ ಮಾಡಿ ಇಸ್ರಾಯೇಲ್ಯರಲ್ಲಿರೋ ಗಂಡಸರನ್ನ ಲೆಕ್ಕ ಮಾಡಬೇಕು.+ ಹಾಗೆ ಲೆಕ್ಕಿಸುವಾಗ ಪ್ರತಿಯೊಬ್ಬ ಗಂಡಸು ತನ್ನ ಜೀವಕ್ಕಾಗಿ ಬಿಡುಗಡೆಯ ಬೆಲೆಯನ್ನ ಯೆಹೋವನಿಗೆ ಕೊಡ್ಲೇಬೇಕು. ಅವರ ನೋಂದಣಿ ಮಾಡುವಾಗ ಅವ್ರ ಮೇಲೆ ಯಾವ ವ್ಯಾಧಿನೂ ಬರಬಾರ್ದು ಅಂದ್ರೆ ಹೀಗೆ ಮಾಡಬೇಕು. 13 ನೋಂದಣಿ ಆದ ಪ್ರತಿಯೊಬ್ಬ ತನ್ನ ತನ್ನ ಜೀವದ ಬಿಡುಗಡೆಗಾಗಿ ಯೆಹೋವನಿಗೆ ಕೊಡಬೇಕಾದ ಬೆಲೆ ಎಷ್ಟೆಂದ್ರೆ ಅರ್ಧ ಶೆಕೆಲ್.* ಇದು ಆರಾಧನಾ ಸ್ಥಳದ ತೂಕದ ಪ್ರಕಾರ*+ ಇರಬೇಕು. ಒಂದು ಶೆಕೆಲ್ ಅಂದ್ರೆ ಇಪ್ಪತ್ತು ಗೇರಾ.*+ 14 ಪಟ್ಟಿ ಮಾಡಿದ 20 ವರ್ಷ, ಅದಕ್ಕಿಂತ ಜಾಸ್ತಿ ವಯಸ್ಸಿನ ಗಂಡಸರೆಲ್ಲ ಈ ಬೆಲೆಯನ್ನ ಯೆಹೋವನಿಗೆ ಕಾಣಿಕೆಯಾಗಿ ಕೊಡಬೇಕು.+ 15 ನಿಮ್ಮ ಜೀವಕ್ಕಾಗಿ ಪ್ರಾಯಶ್ಚಿತ್ತ ಮಾಡೋಕೆ ಯೆಹೋವನಿಗೆ ಅರ್ಧ ಶೆಕೆಲನ್ನ* ಕಾಣಿಕೆಯಾಗಿ ಕೊಡಬೇಕು. ಶ್ರೀಮಂತ ಅದಕ್ಕಿಂತ ಹೆಚ್ಚು ಕೊಡಬಾರದು, ಬಡವ ಅದಕ್ಕಿಂತ ಕಡಿಮೆ ಕೊಡಬಾರದು. 16 ಪ್ರಾಯಶ್ಚಿತ್ತಕ್ಕಾಗಿ ಇಸ್ರಾಯೇಲ್ಯರು ಕೊಡೋ ಬೆಳ್ಳಿ ಹಣವನ್ನ ನೀನು ತಗೊಂಡು ದೇವದರ್ಶನ ಡೇರೆಯಲ್ಲಿ ಮಾಡಲಾಗೋ ಸೇವೆಗಾಗಿ ಬಳಸಬೇಕು. ಈ ಹಣ ಇಸ್ರಾಯೇಲ್ಯರಿಗೋಸ್ಕರ ಯೆಹೋವನ ಮುಂದೆ ನೆನಪಿಗಾಗಿ ಇರುತ್ತೆ. ಅದ್ರಿಂದ ನಿಮ್ಮ ಜೀವಕ್ಕೆ ಪ್ರಾಯಶ್ಚಿತ್ತ ಆಗುತ್ತೆ.”
17 ಯೆಹೋವ ಮೋಶೆ ಜೊತೆ ಮಾತು ಮುಂದುವರಿಸಿ ಹೀಗಂದನು: 18 “ತಾಮ್ರದಿಂದ ಒಂದು ದೊಡ್ಡ ಬೋಗುಣಿಯನ್ನ ಅದಕ್ಕೆ ಪೀಠವನ್ನ ಮಾಡಬೇಕು.+ ಅದನ್ನ ದೇವದರ್ಶನ ಡೇರೆ, ಯಜ್ಞವೇದಿ ಮಧ್ಯ ಇಟ್ಟು ಅದ್ರಲ್ಲಿ ನೀರು ತುಂಬಿಸಬೇಕು.+ 19 ಆರೋನ, ಅವನ ಮಕ್ಕಳು ಅಲ್ಲಿ ತಮ್ಮ ಕೈಕಾಲುಗಳನ್ನ ತೊಳಿಬೇಕು.+ 20 ಅವರು ದೇವದರ್ಶನ ಡೇರೆಯೊಳಗೆ ಹೋಗುವಾಗ ಸೇವೆ ಮಾಡೋಕೆ, ಬೆಂಕಿಯಲ್ಲಿ ಅರ್ಪಣೆಗಳನ್ನ ಯೆಹೋವನಿಗೆ ಕೊಡೋಕೆ ಯಜ್ಞವೇದಿಯ ಹತ್ರ ಬರುವಾಗ ಆ ನೀರಿಂದ ತಮ್ಮನ್ನ ಶುದ್ಧ ಮಾಡ್ಕೊಬೇಕು. ಇಲ್ಲಾಂದ್ರೆ ಅವರು ಸಾಯ್ತಾರೆ. 21 ಅವರು ತಮ್ಮ ಕೈಕಾಲುಗಳನ್ನ ತೊಳಿಲೇಬೇಕು. ಆಗ ಅವರು ಸಾಯಲ್ಲ. ಇದು ಆರೋನನೂ ಅವನ ವಂಶದವರೂ ತಲೆಮಾರುಗಳ ತನಕ ಪಾಲಿಸ್ಲೇಬೇಕಾದ ನಿಯಮ.”+
22 ಯೆಹೋವ ಮೋಶೆಗೆ ಇನ್ನೂ ಹೇಳಿದ್ದೇನಂದ್ರೆ 23 “ನೀನು ಶ್ರೇಷ್ಠ ಸುಗಂಧ ದ್ರವ್ಯಗಳನ್ನ ತಗೊಬೇಕು. ಅವು ಯಾವುದಂದ್ರೆ, ಘನಗೊಳಿಸಿದ ಗಂಧರಸ* 500 ಶೆಕೆಲ್ ಮತ್ತು ಅದ್ರ ಅರ್ಧದಷ್ಟು ಅಂದ್ರೆ 250 ಶೆಕೆಲ್ ಒಳ್ಳೇ ವಾಸನೆ ಇರೋ ದಾಲ್ಚಿನ್ನಿ ಚಕ್ಕೆ, 250 ಶೆಕೆಲ್ ಸುವಾಸನೆ ಇರೋ ಬಜೆ, 24 ಆರಾಧನಾ ಸ್ಥಳದ ತೂಕದ ಪ್ರಕಾರ*+ 500 ಶೆಕೆಲ್ ದಾಲ್ಚಿನ್ನಿ ಚಕ್ಕೆ.* ಇವುಗಳ ಜೊತೆ ಒಂದು ಹಿನ್* ಆಲಿವ್ ಎಣ್ಣೆ ತಗೊಬೇಕು. 25 ಅದನ್ನೆಲ್ಲ ಕೌಶಲದಿಂದ*+ ಹದವಾಗಿ ಬೆರೆಸಿ ಅಭಿಷೇಕ ತೈಲ ತಯಾರಿಸಬೇಕು. ಇದು ಪವಿತ್ರವಾದ ಅಭಿಷೇಕ ತೈಲ.
26 ನೀನು ಆ ತೈಲದಿಂದ ದೇವದರ್ಶನ ಡೇರೆಯನ್ನ+ ಮತ್ತು ಸಾಕ್ಷಿ ಮಂಜೂಷವನ್ನ ಅಭಿಷೇಕಿಸಬೇಕು. 27 ಮೇಜು, ಅದ್ರ ಎಲ್ಲ ಉಪಕರಣಗಳನ್ನ, ದೀಪಸ್ತಂಭ, ಅದ್ರ ಉಪಕರಣಗಳನ್ನ, ಧೂಪವೇದಿಯನ್ನ, 28 ಸರ್ವಾಂಗಹೋಮದ ಯಜ್ಞವೇದಿ, ಅದ್ರ ಎಲ್ಲ ಉಪಕರಣಗಳನ್ನ, ತಾಮ್ರದ ದೊಡ್ಡ ಬೋಗುಣಿ, ಅದ್ರ ಪೀಠವನ್ನೂ ಅಭಿಷೇಕಿಸಬೇಕು. 29 ಅವು ಅತಿ ಪವಿತ್ರ ಆಗೋ ತರ ನೀನು ಅವುಗಳನ್ನ ನನ್ನ ಸೇವೆಗಾಗಿ ಪ್ರತ್ಯೇಕಿಸಬೇಕು.+ ಅವುಗಳನ್ನ ಮುಟ್ಟೋ ಪ್ರತಿಯೊಬ್ಬ ಪವಿತ್ರನಾಗಿರಬೇಕು.+ 30 ನೀನು ಆರೋನನನ್ನ+ ಅವನ ಮಕ್ಕಳನ್ನ+ ಅಭಿಷೇಕಿಸಿ ಪುರೋಹಿತರಾಗಿ ನನ್ನ ಸೇವೆ ಮಾಡೋಕೆ ಪ್ರತ್ಯೇಕಿಸಬೇಕು.+
31 ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು ‘ಈ ಪವಿತ್ರ ಅಭಿಷೇಕ ತೈಲವನ್ನ ತಲೆಮಾರುಗಳ ತನಕ ನನ್ನ ಸೇವೆಯಲ್ಲಿ ಉಪಯೋಗಿಸಬೇಕು.+ 32 ಇದನ್ನ ಯಾರೂ ಮೈಗೆ ಹಚ್ಕೊಳ್ಳಬಾರದು. ಬೇರೆ ಯಾವುದೇ ಉದ್ದೇಶಕ್ಕಾಗಿ ನೀವು ಈ ತರದ ಮಿಶ್ರಣ ತಯಾರಿಸಬಾರದು. ಇದು ಪವಿತ್ರ. ಇದು ನಿಮಗೆ ಯಾವಾಗ್ಲೂ ಪವಿತ್ರವಾಗಿ ಇರಬೇಕು. 33 ಇದೇ ತರದ ಸುಗಂಧ ತೈಲನ ಯಾರಾದ್ರೂ ಮಾಡಿದ್ರೆ ಅವನನ್ನ ಸಾಯಿಸಬೇಕು. ಯಾರಾದ್ರೂ ಆ ತೈಲದಲ್ಲಿ ಸ್ವಲ್ಪವನ್ನ ಪುರೋಹಿತನಲ್ಲದವನ* ಮೇಲೆ ಹಚ್ಚಿದ್ರೆ ಹಚ್ಚಿದವನನ್ನೂ ಸಾಯಿಸಬೇಕು.’”+
34 ಯೆಹೋವ ಮೋಶೆಗೆ ಹೀಗಂದನು: “ನೀನು ಸುಗಂಧ ಅಂಟು, ಸುವಾಸನೆಯ ಚಿಪ್ಪುಗಳು, ಸುವಾಸನೆ ಇರೋ ಗುಗ್ಗುಲ, ಶುದ್ಧವಾದ ಸಾಂಬ್ರಾಣಿ, ಈ ಎಲ್ಲ ಸುಗಂಧ ದ್ರವ್ಯಗಳನ್ನ+ ಒಂದೇ ಅಳತೆ ಪ್ರಕಾರ ತಗೊಂಡು 35 ಅವುಗಳಿಂದ ಧೂಪ ತಯಾರಿಸಬೇಕು.+ ಅದನ್ನೆಲ್ಲ ಕೌಶಲದಿಂದ* ಹದವಾಗಿ ಬೆರೆಸಿರಬೇಕು, ಉಪ್ಪು ಹಾಕಿರಬೇಕು.+ ಧೂಪ ಶುದ್ಧವಾಗಿ ಪವಿತ್ರವಾಗಿ ಇರಬೇಕು. 36 ಅದ್ರಲ್ಲಿ ಸ್ವಲ್ಪ ಕುಟ್ಟಿ ನುಣ್ಣಗೆ ಪುಡಿ ಮಾಡಬೇಕು. ಆ ಪುಡಿಯಲ್ಲಿ ಸ್ವಲ್ಪ ದೇವದರ್ಶನ ಡೇರೆಯೊಳಗೆ ನಾನು ನಿನಗೆ ಕಾಣಿಸೋ ಜಾಗದಲ್ಲಿ ಅಂದ್ರೆ ಸಾಕ್ಷಿ ಮಂಜೂಷದ ಮುಂದೆ ಹಾಕಬೇಕು. ಆ ಧೂಪ ನಿಮಗೆ ಅತಿ ಪವಿತ್ರವಾಗಿ ಇರಬೇಕು. 37 ಈ ಮಿಶ್ರಣದಿಂದ ನಿಮ್ಮ ಸ್ವಂತ ಉಪಯೋಗಕ್ಕಾಗಿ ಧೂಪ ಮಾಡ್ಕೊಳ್ಳಬಾರದು.+ ಯಾಕಂದ್ರೆ ಇದು ಯೆಹೋವನಿಗೆ ಪವಿತ್ರ. 38 ಅದ್ರ ಸುವಾಸನೆಯನ್ನ ಆನಂದಿಸೋಕೆ ಯಾರಾದ್ರೂ ಅದೇ ತರದ ಧೂಪ ಮಾಡ್ಕೊಂಡ್ರೆ ಅವನನ್ನ ಸಾಯಿಸಬೇಕು.”