ವಿಮೋಚನಕಾಂಡ
35 ಆಮೇಲೆ ಮೋಶೆ ಎಲ್ಲ ಇಸ್ರಾಯೇಲ್ಯರನ್ನ ಕರೆದು “ಯೆಹೋವ ಕೊಟ್ಟ ಆಜ್ಞೆ ಏನಂದ್ರೆ,+ 2 ಆರು ದಿನ ನೀವು ಕೆಲಸ ಮಾಡಬಹುದು. ಆದ್ರೆ ಏಳನೇ ದಿನ ಯಾವ ಕೆಲಸನೂ ಮಾಡದೆ ಪೂರ್ತಿ ವಿಶ್ರಾಂತಿ ತಗೊಬೇಕು. ಯಾಕಂದ್ರೆ ಅದು ಸಬ್ಬತ್ ದಿನ. ಅದು ನಿಮಗೆ ಪವಿತ್ರ ದಿನ, ಯೆಹೋವ ದೇವರ ವಿಷ್ಯಗಳನ್ನ ಮಾಡಬೇಕಾದ ದಿನ.+ ಯಾರಾದ್ರೂ ಆ ದಿನ ಕೆಲಸ ಮಾಡಿದ್ರೆ ಅವನನ್ನ ಸಾಯಿಸಬೇಕು.+ 3 ಸಬ್ಬತ್ ದಿನ ನಿಮ್ಮಲ್ಲಿ ಯಾರೂ ನೀವು ವಾಸ ಮಾಡೋ ಜಾಗದಲ್ಲಿ ಬೆಂಕಿ ಹೊತ್ತಿಸಬಾರದು” ಅಂದನು.
4 ಆಮೇಲೆ ಮೋಶೆ ಎಲ್ಲ ಇಸ್ರಾಯೇಲ್ಯರಿಗೆ ಹೀಗಂದ: “ಯೆಹೋವನ ಆಜ್ಞೆ ಏನಂದ್ರೆ 5 ‘ನೀವೆಲ್ಲ ಯೆಹೋವನಿಗಾಗಿ ಕಾಣಿಕೆ ತನ್ನಿ.+ ಉದಾರ ಮನಸ್ಸು+ ಇರೋರೆಲ್ಲ ಯೆಹೋವನಿಗೆ ಕಾಣಿಕೆಯಾಗಿ ಚಿನ್ನ, ಬೆಳ್ಳಿ, ತಾಮ್ರ, 6 ನೀಲಿ ದಾರ, ನೇರಳೆ ಬಣ್ಣದ ಉಣ್ಣೆ,* ಕಡುಗೆಂಪು ಬಣ್ಣದ ನೂಲು,* ಒಳ್ಳೇ ಗುಣಮಟ್ಟದ ನಾರು ಬಟ್ಟೆ, ಆಡಿನ ಕೂದಲು,+ 7 ಕೆಂಪು ಬಣ್ಣ ಹಾಕಿದ ಟಗರುಚರ್ಮ, ಸೀಲ್ ಪ್ರಾಣಿಯ* ಚರ್ಮ, ಅಕೇಶಿಯ ಮರ,* 8 ದೀಪಗಳಿಗೆ ಬೇಕಾದ ಎಣ್ಣೆ, ಅಭಿಷೇಕ ತೈಲಕ್ಕೆ ಮತ್ತು ಸುವಾಸನೆ ಇರೋ ಧೂಪಕ್ಕೆ ಬೇಕಾದ ಸುಗಂಧ ತೈಲ,+ 9 ಏಫೋದಿನಲ್ಲೂ ಎದೆಪದಕದಲ್ಲೂ+ ಇಡೋಕೆ ಗೋಮೇದಕ ರತ್ನಗಳನ್ನ ಬೇರೆ ಬೇರೆ ವಿಧದ ರತ್ನಗಳನ್ನ+ ತನ್ನಿ.
10 ಕೌಶಲ ಇರೋ+ ಎಲ್ರೂ ಬಂದು ಯೆಹೋವ ಆಜ್ಞೆ ಕೊಟ್ಟಿರೋದನ್ನೆಲ್ಲ ಮಾಡಿ. 11 ಯಾವುದನ್ನೆಲ್ಲ ಮಾಡಬೇಕಂದ್ರೆ ಪವಿತ್ರ ಡೇರೆ, ಅದ್ರ ಎಲ್ಲ ಭಾಗಗಳು, ಅದ್ರ ಹೊದಿಕೆಗಳು, ಅದ್ರ ಬಟ್ಟೆಗೆ ಹಾಕೋ ಕೊಂಡಿಗಳು, ಡೇರೆಯ ಚೌಕಟ್ಟುಗಳು, ಚೌಕಟ್ಟುಗಳ ಅಡಿಗಲ್ಲುಗಳು, ಚೌಕಟ್ಟುಗಳಿಗೆ ಹಾಕೋ ಕೋಲುಗಳು, ಡೇರೆಯ ಕಂಬಗಳು, ಕಂಬಗಳ ಅಡಿಗಲ್ಲುಗಳು; 12 ಮಂಜೂಷ,+ ಅದ್ರ ಕೋಲುಗಳು,+ ಮಂಜೂಷದ ಮುಚ್ಚಳ,+ ಅದ್ರ ಎದುರಿಗೆ ತೂಗಿಬಿಡೋ ಪರದೆ;+ 13 ಮೇಜು,+ ಅದ್ರ ಕೋಲುಗಳು, ಅದ್ರ ಎಲ್ಲ ಉಪಕರಣಗಳು, ಅರ್ಪಣೆಯ ರೊಟ್ಟಿಗಳು;+ 14 ದೀಪಸ್ತಂಭ,+ ಅದ್ರ ಉಪಕರಣಗಳು, ದೀಪಗಳು, ದೀಪದ ಎಣ್ಣೆ;+ 15 ಧೂಪವೇದಿ,+ ಅದ್ರ ಕೋಲುಗಳು, ಅಭಿಷೇಕ ತೈಲ, ಸುವಾಸನೆ ಇರೋ ಧೂಪ,+ ಪವಿತ್ರ ಡೇರೆಯ ಬಾಗಿಲಿಗೆ ಹಾಕೋಕೆ ಪರದೆ; 16 ಸರ್ವಾಂಗಹೋಮದ ಯಜ್ಞವೇದಿ,+ ಅದ್ರ ತಾಮ್ರದ ಜಾಲರಿ, ಅದ್ರ ಕೋಲುಗಳು, ಎಲ್ಲ ಉಪಕರಣಗಳು; ತಾಮ್ರದ ದೊಡ್ಡ ಬೋಗುಣಿ, ಅದ್ರ ಪೀಠ;+ 17 ಅಂಗಳದಲ್ಲಿ ತೂಗಿಬಿಡೋಕೆ ಪರದೆಗಳು,+ ಅಂಗಳದ ಕಂಬಗಳು, ಕಂಬಗಳ ಅಡಿಗಲ್ಲುಗಳು, ಅಂಗಳದ ಬಾಗಿಲಿಗೆ ಹಾಕೋಕೆ ಪರದೆ; 18 ಪವಿತ್ರ ಡೇರೆಯ ಗೂಟಗಳು, ಅಂಗಳದ ಗೂಟಗಳು, ಅವುಗಳ ಹಗ್ಗಗಳು;+ 19 ಆರಾಧನಾ ಸ್ಥಳದಲ್ಲಿ ಸೇವೆ ಮಾಡುವಾಗ ಹಾಕೋಕೆ ಒಳ್ಳೇ ರೀತಿಯ ಹೆಣಿಗೆ ಕೆಲಸದಿಂದ ಮಾಡಿದ ಬಟ್ಟೆಗಳು,+ ಪುರೋಹಿತನಾದ ಆರೋನನಿಗಾಗಿ ಪವಿತ್ರ ಬಟ್ಟೆಗಳು,+ ಅವನ ಗಂಡುಮಕ್ಕಳು ಪುರೋಹಿತರಾಗಿ ಸೇವೆ ಮಾಡುವಾಗ ಹಾಕೋಕೆ ಬಟ್ಟೆಗಳು. ಇದನ್ನೆಲ್ಲ ನೀವು ಮಾಡಬೇಕು.”
20 ಆಮೇಲೆ ಎಲ್ಲ ಇಸ್ರಾಯೇಲ್ಯರು ಮೋಶೆ ಎದುರಿಂದ ಹೋದ್ರು. 21 ಯೆಹೋವನಿಗೆ ಕಾಣಿಕೆ ಕೊಡೋಕೆ ಯಾರಿಗೆಲ್ಲ ಮನಸ್ಸಾಯ್ತೋ,+ ಯಾರ ಹೃದಯ ಪ್ರೇರಿಸ್ತೋ ಅವರೆಲ್ಲ ಕಾಣಿಕೆ ತಂದ್ರು. ದೇವದರ್ಶನ ಡೇರೆಯನ್ನ ಮಾಡೋಕೆ, ಅದ್ರೊಳಗೆ ನಡಿಯೋ ಸೇವೆಗೆ, ಪವಿತ್ರ ಬಟ್ಟೆಗಳನ್ನ ಸಿದ್ಧ ಮಾಡೋಕೆ ಅವರು ಕಾಣಿಕೆ ಕೊಟ್ರು. 22 ಉದಾರ ಮನಸ್ಸಿನ ಸ್ತ್ರೀಪುರುಷರೆಲ್ಲ ಕಾಣಿಕೆಗಳನ್ನ ತಂದ್ಕೊಡ್ತಾ ಇದ್ರು. ಅವರು ಅಲಂಕಾರಿಕ ಪಿನ್ನು, ಓಲೆ, ಉಂಗುರ, ಬೇರೆ ಆಭರಣ, ಬೇರೆ ಬೇರೆ ಚಿನ್ನದ ವಸ್ತುಗಳನ್ನ ತಂದು ಕೊಡ್ತಾ ಇದ್ರು. ಅವರೆಲ್ಲ ಚಿನ್ನವನ್ನ ಕಾಣಿಕೆಯಾಗಿ* ತಂದು ಯೆಹೋವನಿಗೆ ಅರ್ಪಿಸಿದ್ರು.+ 23 ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲು, ಒಳ್ಳೇ ಗುಣಮಟ್ಟದ ನಾರುಬಟ್ಟೆ, ಆಡಿನ ಕೂದಲು, ಕೆಂಪು ಬಣ್ಣ ಹಾಕಿದ ಟಗರುಚರ್ಮ, ಸೀಲ್ ಪ್ರಾಣಿಯ ಚರ್ಮ ಯಾರ ಹತ್ರ ಇತ್ತೋ ಅವರೆಲ್ಲ ಅದನ್ನ ತಂದ್ಕೊಟ್ರು. 24 ಬೆಳ್ಳಿ, ತಾಮ್ರವನ್ನ ಕೊಡೋ ಮನಸ್ಸಿದ್ದವರೆಲ್ಲ ಯೆಹೋವನಿಗೆ ಕಾಣಿಕೆಯಾಗಿ ತಂದು ಕೊಟ್ರು. ಯಾರ ಹತ್ರ ಅಕೇಶಿಯ ಮರದ ತುಂಡುಗಳು ಇತ್ತೋ ಅವರೆಲ್ಲ ಅವುಗಳನ್ನ ಪವಿತ್ರ ಡೇರೆಯ ಕೆಲಸಕ್ಕೆ ತಂದ್ಕೊಟ್ರು.
25 ನೂಲುವುದರಲ್ಲಿ ನಿಪುಣರಾದ ಸ್ತ್ರೀಯರೆಲ್ಲ+ ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲು, ಒಳ್ಳೇ ಗುಣಮಟ್ಟದ ನಾರನ್ನ ಕೈಯಲ್ಲಿ ಹೊಸೆದು ತಂದ್ಕೊಟ್ರು. 26 ಆಡಿನ ಕೂದಲನ್ನ ಹೊಸೆಯೋದ್ರಲ್ಲಿ ನಿಪುಣರಾದ ಸ್ತ್ರೀಯರು ಅದನ್ನ ಹೊಸೆದು ತಂದ್ಕೊಟ್ರು. ಅವರ ಹೃದಯ ಪ್ರೇರಿಸಿದ್ರಿಂದ ಹಾಗೆ ಮಾಡಿದ್ರು.
27 ಏಫೋದಿನಲ್ಲೂ ಎದೆಪದಕದಲ್ಲೂ+ ಇಡೋಕೆ ಗೋಮೇದಕ ರತ್ನಗಳನ್ನ, ಬೇರೆಬೇರೆ ವಿಧದ ರತ್ನಗಳನ್ನ ಇಸ್ರಾಯೇಲ್ಯರ ಪ್ರಧಾನರು ತಂದ್ಕೊಟ್ರು. 28 ಅಷ್ಟೇ ಅಲ್ಲ ಅವರು ದೀಪಗಳಿಗೆ, ಅಭಿಷೇಕ ತೈಲಕ್ಕೆ,+ ಸುವಾಸನೆ ಇರೋ ಧೂಪಕ್ಕೆ+ ಬೇಕಾದ ಸುಗಂಧ ತೈಲ, ಎಣ್ಣೆ ಕೊಟ್ರು. 29 ಉದಾರ ಮನಸ್ಸಿನ* ಆ ಸ್ತ್ರೀಪುರುಷರೆಲ್ಲ ಯೆಹೋವ ಮೋಶೆ ಮೂಲಕ ಆಜ್ಞಾಪಿಸಿದ ಕೆಲಸಕ್ಕಾಗಿ ಏನನ್ನಾದ್ರೂ ಕಾಣಿಕೆ ಕೊಡ್ತಾ ಇದ್ರು. ಹೀಗೆ ಇಸ್ರಾಯೇಲ್ಯರು ಯೆಹೋವನಿಗೆ ಸ್ವಇಷ್ಟದ ಕಾಣಿಕೆಗಳನ್ನ ಕೊಟ್ರು.+
30 ಮೋಶೆ ಇಸ್ರಾಯೇಲ್ಯರಿಗೆ ಹೀಗಂದ: “ಯೆಹೂದ ಕುಲದ ಊರಿಯ ಮಗನೂ ಹೂರನ ಮೊಮ್ಮಗನೂ ಆದ ಬೆಚಲೇಲನನ್ನ ಯೆಹೋವ ಆರಿಸ್ಕೊಂಡಿದ್ದಾನೆ.+ 31 ತನ್ನ ಪವಿತ್ರಶಕ್ತಿನ ಅವನಲ್ಲಿ ತುಂಬಿಸಿದ್ದಾನೆ. ಜೊತೆಗೆ ವಿವೇಕ, ತಿಳುವಳಿಕೆ, ಪ್ರತಿಯೊಂದು ರೀತಿಯ ಕರಕುಶಲ ಕೆಲಸ ಮಾಡೋಕೆ ಬೇಕಾದ ಜ್ಞಾನ ಕೊಟ್ಟಿದ್ದಾನೆ. 32 ಹಾಗಾಗಿ ಬೆಚಲೇಲ ಕಲಾತ್ಮಕ ವಿನ್ಯಾಸಗಳನ್ನ ಮಾಡೋದ್ರಲ್ಲಿ ಮತ್ತು ಚಿನ್ನ, ಬೆಳ್ಳಿ, ತಾಮ್ರದ ಕೆಲಸದಲ್ಲಿ ನಿಪುಣನಾಗಿದ್ದಾನೆ. 33 ರತ್ನಗಳನ್ನ ಕತ್ತರಿಸೋ, ಕುಂದಣಗಳನ್ನ ಮಾಡಿ ಅವುಗಳಲ್ಲಿ ರತ್ನಗಳನ್ನ ಕೂರಿಸೋ, ಮರದ ಎಲ್ಲ ರೀತಿಯ ಕಲಾತ್ಮಕ ವಸ್ತುಗಳನ್ನ ಮಾಡೋ ಕೆಲಸದಲ್ಲೂ ನಿಪುಣನಾಗಿದ್ದಾನೆ. 34 ಈ ಕೆಲಸಗಳನ್ನ ಬೇರೆಯವ್ರಿಗೆ ಕಲಿಸೋ ಸಾಮರ್ಥ್ಯವನ್ನ ಸಹ ದೇವರು ಬೆಚಲೇಲನಿಗೆ, ದಾನ್ ಕುಲದ ಅಹೀಸಾಮಾಕನ ಮಗ ಒಹೊಲೀಯಾಬನಿಗೆ+ ಕೊಟ್ಟಿದ್ದಾನೆ. 35 ಎಲ್ಲ ಕರಕುಶಲ ಕೆಲಸ+ ಮತ್ತು ಕಸೂತಿ ಕೆಲಸ ಮಾಡೋಕೆ, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ಬಣ್ಣದ ನೂಲು, ಒಳ್ಳೇ ಗುಣಮಟ್ಟದ ನಾರನ್ನ ಉಪಯೋಗಿಸಿ ಹೆಣೆಯೋ ಕೆಲಸ ಮಾಡೋಕೆ, ನೇಯೋ ಕೆಲಸ ಮಾಡೋಕೆ ದೇವರು ಅವರಿಗೆ ಕೌಶಲ ಕೊಟ್ಟಿದ್ದಾನೆ.* ಹಾಗಾಗಿ ದೇವರು ಹೇಳಿದ ಎಲ್ಲ ರೀತಿಯ ಕೆಲಸವನ್ನ ಎಲ್ಲ ರೀತಿಯ ವಿನ್ಯಾಸಗಳನ್ನ ಅವರು ಮಾಡ್ತಾರೆ.”