ವಿಮೋಚನಕಾಂಡ
7 ಆಗ ಯೆಹೋವ ಮೋಶೆಗೆ “ಫರೋಹನಿಗೆ ನಿನ್ನನ್ನ ದೇವರ ತರ* ಮಾಡಿದ್ದೀನಿ. ನಿನ್ನ ಅಣ್ಣ ಆರೋನ ಪ್ರವಾದಿಯಾಗಿ ನಿನಗೋಸ್ಕರ ಮಾತಾಡ್ತಾನೆ.+ 2 ನಾನು ನಿನಗೆ ಕೊಟ್ಟ ಆಜ್ಞೆಗಳನ್ನೆಲ್ಲ ಆರೋನನಿಗೆ ಹೇಳಬೇಕು. ಅವನು ಫರೋಹನ ಹತ್ರ ಮಾತಾಡ್ತಾನೆ. ಆಗ ಫರೋಹ ತನ್ನ ದೇಶದಿಂದ ಇಸ್ರಾಯೇಲ್ಯರನ್ನ ಬಿಡ್ತಾನೆ. 3 ಆದ್ರೆ ಫರೋಹನ ಹೃದಯ ಕಲ್ಲಾಗೋಕೆ ಬಿಡ್ತೀನಿ.+ ನಾನು ಈಜಿಪ್ಟ್ ದೇಶದಲ್ಲಿ ತುಂಬ ಅದ್ಭುತ ಮಾಡ್ತೀನಿ.+ 4 ಆಗ್ಲೂ ಫರೋಹ ನಿಮ್ಮ ಮಾತು ಕೇಳಲ್ಲ. ಆಗ ನಾನು ಈಜಿಪ್ಟ್ ದೇಶದ ವಿರುದ್ಧ ನನ್ನ ಕೈಯೆತ್ತಿ ಅವರಿಗೆ ದೊಡ್ಡ ಶಿಕ್ಷೆ ಕೊಡ್ತೀನಿ. ದೊಡ್ಡ ಸೈನ್ಯ ತರ ಇರೋ ನನ್ನ ಜನರಾದ ಇಸ್ರಾಯೇಲ್ಯರನ್ನ ಆ ದೇಶದಿಂದ ಕರ್ಕೊಂಡು ಬರ್ತಿನಿ.+ 5 ನಾನು ಈಜಿಪ್ಟ್ ಜನ್ರಿಗೆ ಶಿಕ್ಷೆ ಕೊಟ್ಟು ಅವರ ಮಧ್ಯದಿಂದ ಇಸ್ರಾಯೇಲ್ಯರನ್ನ ಕರ್ಕೊಂಡು ಬಂದಾಗ ನಾನು ಯೆಹೋವ+ ಅಂತ ಅವರಿಗೆ ಖಂಡಿತ ಗೊತ್ತಾಗುತ್ತೆ” ಅಂದನು. 6 ಮೋಶೆ ಆರೋನರು ಯೆಹೋವನ ಆಜ್ಞೆ ಪ್ರಕಾರನೇ ಮಾಡಿದ್ರು, ದೇವರು ಹೇಳಿದ ತರಾನೇ ಅವರು ಮಾಡಿದ್ರು. 7 ಫರೋಹನ ಹತ್ರ ಮಾತಾಡೋಕೆ ಹೋದಾಗ ಮೋಶೆಗೆ 80 ವರ್ಷ, ಆರೋನನಿಗೆ 83 ವರ್ಷ.+
8 ಯೆಹೋವ ಮೋಶೆ ಮತ್ತು ಆರೋನನಿಗೆ 9 “ಫರೋಹ ನಿಮಗೆ ಒಂದು ಅದ್ಭುತ ಮಾಡೋಕೆ ಹೇಳಿದ್ರೆ ನೀನು ಆರೋನನಿಗೆ ‘ಫರೋಹನ ಮುಂದೆ ನೆಲಕ್ಕೆ ನಿನ್ನ ಕೋಲು ಬಿಸಾಕು’ ಅಂತ ಹೇಳು. ಬಿಸಾಕಿದಾಗ ಅದು ದೊಡ್ಡ ಹಾವಾಗುತ್ತೆ”+ ಅಂದನು. 10 ಮೋಶೆ ಆರೋನ ಫರೋಹನ ಹತ್ರ ಹೋಗಿ ಯೆಹೋವ ಹೇಳಿದ ಹಾಗೇ ಮಾಡಿದ್ರು. ಆರೋನ ತನ್ನ ಕೋಲನ್ನ ಫರೋಹನ ಮುಂದೆ, ಅವನ ಸೇವಕರ ಮುಂದೆ ನೆಲದ ಮೇಲೆ ಹಾಕಿದ. ಆಗ ಅದು ದೊಡ್ಡ ಹಾವಾಯ್ತು. 11 ಅದನ್ನ ನೋಡಿ ಫರೋಹ ಈಜಿಪ್ಟಿನ ಜ್ಞಾನಿಗಳಿಗೆ, ಮಂತ್ರವಾದಿಗಳಿಗೆ ಅದೇ ತರ ಮಾಡೋಕೆ ಹೇಳಿದ. ಆಗ ಮಂತ್ರವಾದಿಗಳು+ ಮಂತ್ರವಿದ್ಯೆಯಿಂದ ಅದೇ ತರ ಅದ್ಭುತ ಮಾಡಿದ್ರು.+ 12 ಅವರಲ್ಲಿ ಪ್ರತಿಯೊಬ್ಬ ಅವನವನ ಕೋಲನ್ನ ನೆಲಕ್ಕೆ ಹಾಕಿದಾಗ ಆ ಕೋಲೆಲ್ಲ ದೊಡ್ಡ ದೊಡ್ಡ ಹಾವಾಯ್ತು. ಆದ್ರೆ ಆರೋನನ ಕೋಲು ಅವರ ಕೋಲುಗಳನ್ನ ನುಂಗಿಬಿಡ್ತು. 13 ಇದನ್ನ ನೋಡಿದ ಮೇಲೂ ಫರೋಹನ ಹೃದಯ ಕಲ್ಲಾಗೇ ಇತ್ತು.+ ಯೆಹೋವ ಹೇಳಿದ ಹಾಗೇ ಅವನು ಮೋಶೆ ಆರೋನರ ಮಾತು ಕೇಳಲಿಲ್ಲ.
14 ಆಮೇಲೆ ಯೆಹೋವ ಮೋಶೆಗೆ ಹೀಗಂದನು: “ಫರೋಹನ ಹೃದಯ ಒಂಚೂರೂ ಬದಲಾಗಿಲ್ಲ.+ ಅದಕ್ಕೆ ಅವನು ನನ್ನ ಜನ್ರನ್ನ ಕಳಿಸೋಕೆ ಒಪ್ಪಲಿಲ್ಲ. 15 ಬೆಳಿಗ್ಗೆ ಫರೋಹನ ಹತ್ರ ಹೋಗು. ಅವನು ನೈಲ್ ನದಿ ಹತ್ರ ಹೋಗ್ತಾನೆ. ನೀನು ಅವನ ಹತ್ರ ಮಾತಾಡೋಕೆ ನೈಲ್ ನದಿತೀರದಲ್ಲಿ ನಿಂತ್ಕೊ. ಈ ಮುಂಚೆ ಹಾವಾಗಿ ಬದಲಾದ ನಿನ್ನ ಕೋಲನ್ನ ಕೈಯಲ್ಲಿ ಹಿಡ್ಕೊಂಡು+ 16 ಹೀಗೆ ಹೇಳು: ‘ಇಬ್ರಿಯರ ದೇವರಾದ ಯೆಹೋವ ನನ್ನನ್ನ ನಿನ್ನ ಹತ್ರ ಕಳಿಸಿದ್ದಾನೆ.+ ಆತನು ನಿನಗೆ “ನನ್ನ ಆರಾಧನೆ ಮಾಡೋಕೆ ನನ್ನ ಜನ್ರನ್ನ ಕಾಡಿಗೆ ಕಳಿಸು” ಅಂತ ಹೇಳ್ತಾನೆ. ಆದ್ರೆ ನೀನು ಆತನ ಮಾತು ಕೇಳಲಿಲ್ಲ. 17 ಹಾಗಾಗಿ ಯೆಹೋವ ಹೇಳೋದು ಏನಂದ್ರೆ “ನಾನು ಯೆಹೋವ ಅಂತ ನಿನಗೆ ಗೊತ್ತಾಗೋ ತರ ಮಾಡ್ತೀನಿ.+ ನನ್ನ ಕೈಯಲ್ಲಿರೋ ಕೋಲಿಂದ ನೈಲ್ ನದಿ ನೀರನ್ನ ಹೊಡಿತೀನಿ. ಆ ನೀರೆಲ್ಲ ರಕ್ತ ಆಗುತ್ತೆ. 18 ನೈಲ್ ನದಿಯಲ್ಲಿರೋ ಮೀನೆಲ್ಲ ಸಾಯುತ್ತೆ. ಆ ನದಿಯಿಂದ ಕೆಟ್ಟ ವಾಸನೆ ಬರುತ್ತೆ. ಇದ್ರಿಂದ ಈಜಿಪ್ಟಿನ ಜನ್ರಿಗೆ ನೈಲ್ ನದಿ ನೀರು ಕುಡಿಯೋಕೆ ಆಗಲ್ಲ.”’”
19 ಯೆಹೋವ ಮತ್ತೆ ಮೋಶೆ ಹತ್ರ ಮಾತಾಡ್ತಾ “‘ಈಜಿಪ್ಟಿನ ಎಲ್ಲಾ ನದಿ,+ ಕಾಲುವೆ,* ಕೆರೆ, ಕೊಳಗಳ ಮೇಲೆ ನಿನ್ನ ಕೋಲು ಚಾಚು,+ ಆಗ ನೀರೆಲ್ಲ ರಕ್ತ ಆಗುತ್ತೆ’ ಅಂತ ಆರೋನನಿಗೆ ಹೇಳು. ಈಜಿಪ್ಟಲ್ಲಿ ಇರೋ ನೀರೆಲ್ಲ ರಕ್ತ ಆಗುತ್ತೆ. ಮರದ, ಕಲ್ಲಿನ ಪಾತ್ರೆಗಳಲ್ಲಿ ಇರೋ ನೀರೂ ರಕ್ತ ಆಗುತ್ತೆ” ಅಂದನು. 20 ಯೆಹೋವ ಆಜ್ಞೆ ಕೊಟ್ಟ ಹಾಗೇ ಮೋಶೆ ಆರೋನ ತಕ್ಷಣ ಮಾಡಿದ್ರು. ಫರೋಹ ಮತ್ತು ಅವನ ಸೇವಕರ ಕಣ್ಮುಂದೆನೇ ಆರೋನ ತನ್ನ ಕೋಲೆತ್ತಿ ನೈಲ್ ನದಿ ನೀರನ್ನ ಹೊಡೆದ. ಆಗ ನೀರೆಲ್ಲ ರಕ್ತ ಆಯ್ತು,+ 21 ಮೀನೆಲ್ಲ ಸತ್ತೋಯ್ತು.+ ಆಗ ನದಿಯಿಂದ ಕೆಟ್ಟ ವಾಸನೆ ಬರೋಕೆ ಶುರು ಆಯ್ತು. ಹಾಗಾಗಿ ಈಜಿಪ್ಟ್ ಜನ್ರಿಗೆ ನೈಲ್ ನದಿನೀರನ್ನ ಕುಡಿಯೋಕೆ ಆಗಲಿಲ್ಲ.+ ಯಾಕಂದ್ರೆ ದೇಶದ ನೀರೆಲ್ಲ ರಕ್ತ ಆಗಿತ್ತು.
22 ಈಜಿಪ್ಟಿನ ಮಂತ್ರವಾದಿಗಳು ಕೂಡ ತಮ್ಮ ಮಂತ್ರವಿದ್ಯೆಯಿಂದ ಅದೇ ರೀತಿ ಮಾಡಿದ್ರು.+ ಹಾಗಾಗಿ ಫರೋಹನ ಹೃದಯ ಕಲ್ಲಾಗೇ ಇತ್ತು. ಯೆಹೋವ ಹೇಳಿದ ತರಾನೇ ಆಯ್ತು. ಫರೋಹ ಮಾತು ಕೇಳಲಿಲ್ಲ.+ 23 ಆಮೇಲೆ ಫರೋಹ ಮನೆಗೆ ಹೋದ. ಆ ವಿಷ್ಯವನ್ನ ಅವನು ಮನಸ್ಸಿಗೇ ಹಾಕೊಳ್ಳಲಿಲ್ಲ. 24 ನೈಲ್ ನದಿ ನೀರು ಕುಡಿಯೋಕೆ ಆಗದಿದ್ದ ಕಾರಣ ಈಜಿಪ್ಟಿನ ಜನ್ರೆಲ್ಲ ಕುಡಿಯೋ ನೀರಿಗಾಗಿ ನೈಲ್ ನದಿ ಸುತ್ತ ಅಗೆಯುತಿದ್ರು. 25 ಯೆಹೋವ ನೈಲ್ ನದಿ ನೀರನ್ನ ಹೊಡೆದ ಮೇಲೆ ಏಳು ದಿನ ಆ ನೀರು ರಕ್ತವಾಗೇ ಇತ್ತು.