ಎರಡನೇ ಪೂರ್ವಕಾಲವೃತ್ತಾಂತ
24 ಯೆಹೋವಾಷ ರಾಜ ಆದಾಗ ಅವನಿಗೆ ಏಳು ವರ್ಷ.+ ಅವನು ಯೆರೂಸಲೇಮಿಂದ 40 ವರ್ಷ ಆಳಿದ. ಅವನ ತಾಯಿ ಹೆಸರು ಚಿಬ್ಯ. ಅವಳು ಬೇರ್ಷೆಬದವಳು.+ 2 ಪುರೋಹಿತನಾದ ಯೆಹೋಯಾದ ಬದುಕಿರೋ ತನಕ ರಾಜ ಯೆಹೋವಾಷ ಯೆಹೋವನಿಗೆ ಇಷ್ಟ ಆಗಿರೋದ್ದನ್ನೇ ಮಾಡಿದ.+ 3 ಯೆಹೋಯಾದ ಯೆಹೋವಾಷನಿಗೆ ಎರಡು ಮದ್ವೆ ಮಾಡಿಸಿದ. ಯೆಹೋವಾಷನಿಗೆ ಮಕ್ಕಳಾದ್ರು.
4 ಸ್ವಲ್ಪ ಸಮಯ ಆದ್ಮೇಲೆ ಯೆಹೋವಾಷಗೆ ಯೆಹೋವನ ಆಲಯನ ದುರಸ್ತಿ ಮಾಡಬೇಕು+ ಅಂತ ಮನಸ್ಸಾಯ್ತು. 5 ಹಾಗಾಗಿ ಅವನು ಪುರೋಹಿತರನ್ನ ಮತ್ತು ಲೇವಿಯರನ್ನ ಒಟ್ಟುಸೇರಿಸಿ ಅವ್ರಿಗೆ “ಪ್ರತಿವರ್ಷ ನಿಮ್ಮ ದೇವರ ಆಲಯ ದುರಸ್ತಿ ಮಾಡೋಕೆ ಯೆಹೂದದ ಎಲ್ಲ ಪಟ್ಟಣಗಳಿಗೆ ಹೋಗಿ ಇಸ್ರಾಯೇಲ್ಯರಿಂದ ದುಡ್ಡು ಸೇರಿಸಿ.+ ನೀವು ಆದಷ್ಟು ಬೇಗ ಈ ಕೆಲಸ ಮಾಡಬೇಕು” ಅಂದ. ಆದ್ರೆ ಲೇವಿಯರು ಆ ಕೆಲಸ ಮಾಡೋಕೆ ತಡಮಾಡಿದ್ರು.+ 6 ಹಾಗಾಗಿ ರಾಜ ಮುಖ್ಯಸ್ಥ ಯೆಹೋಯಾದನನ್ನ ಕರೆದು ಅವನಿಗೆ+ “ಯೆಹೋವನ ಸೇವಕ ಮೋಶೆ ಆಜ್ಞೆ ಕೊಟ್ಟ ಹಾಗೆ ಪವಿತ್ರ ತೆರಿಗೆಯನ್ನ ಯೆಹೂದ ಮತ್ತು ಯೆರೂಸಲೇಮಲ್ಲಿ ಕೂಡಿಸೋಕೆ ನೀನು ಲೇವಿಯರಿಗೆ ಯಾಕೆ ಹೇಳಲಿಲ್ಲ?+ ಸಾಕ್ಷಿ ಡೇರೆಗಾಗಿ+ ಇಸ್ರಾಯೇಲ್ಯರಿಂದ ಪವಿತ್ರ ತೆರಿಗೆಯನ್ನ ಯಾಕೆ ಕೂಡಿಸಲಿಲ್ಲ? 7 ಆ ಕೆಟ್ಟ ಸ್ತ್ರೀ ಅತಲ್ಯಳ+ ಮಕ್ಕಳು ಸತ್ಯ ದೇವರ ಆಲಯಕ್ಕೆ ನುಗ್ಗಿ,+ ಬಾಳ್ ದೇವರುಗಳ ಆರಾಧನೆಗಾಗಿ ಯೆಹೋವನ ಆಲಯದಲ್ಲಿದ್ದ ಎಲ್ಲ ಪವಿತ್ರ ವಸ್ತುಗಳನ್ನ ಬಳಸಿದ್ರು” ಅಂದ. 8 ಆಮೇಲೆ ರಾಜನ ಆಜ್ಞೆ ಪ್ರಕಾರ ಒಂದು ಪೆಟ್ಟಿಗೆ+ ಮಾಡಿ, ಅದನ್ನ ಯೆಹೋವನ ಆಲಯದ ಬಾಗಿಲ ಮುಂದೆ ಇಟ್ರು.+ 9 ಪವಿತ್ರ ತೆರಿಗೆಯ+ ಬಗ್ಗೆ ಸತ್ಯ ದೇವರ ಸೇವಕ ಮೋಶೆ ಕಾಡಲ್ಲಿ ಇಸ್ರಾಯೇಲ್ಯರಿಗೆ ಆಜ್ಞೆ ಕೊಟ್ಟಿದ್ದ. ಯೆಹೋವನಿಗಾಗಿ ಆ ತೆರಿಗೆಯನ್ನ ತರೋಕೆ ಇಡೀ ಯೆಹೂದ ಮತ್ತು ಯೆರೂಸಲೇಮಿನಲ್ಲಿ ಡಂಗುರ ಸಾರಿದ್ರು. 10 ಎಲ್ಲ ಅಧಿಕಾರಿಗಳು ಮತ್ತು ಜನ್ರು ಖುಷಿಪಟ್ರು.+ ಅವರು ಕಾಣಿಕೆಗಳನ್ನ ತರ್ತಾನೇ ಇದ್ರು ಮತ್ತು ಆ ಪೆಟ್ಟಿಗೆ ತುಂಬೋ ತನಕ* ಕಾಣಿಕೆಗಳನ್ನ ಹಾಕ್ತಾನೇ ಇದ್ರು.
11 ಪೆಟ್ಟಿಗೆ ತುಂಬಿರೋದನ್ನ ಲೇವಿಯರು ನೋಡಿದಾಗೆಲ್ಲ ಅದನ್ನ ತಗೊಂಡು ಬಂದು ರಾಜನಿಗೆ ಒಪ್ಪಿಸ್ತಿದ್ರು. ಆಮೇಲೆ ರಾಜನ ಕಾರ್ಯದರ್ಶಿ ಮತ್ತು ಮುಖ್ಯ ಪುರೋಹಿತನ ಸಹಾಯಕ ಬಂದು ಆ ಪೆಟ್ಟಿಗೆನ ಖಾಲಿ ಮಾಡಿ+ ಮತ್ತೆ ಅದನ್ನ ಅದ್ರ ಜಾಗದಲ್ಲಿ ಇಡ್ತಿದ್ರು. ಹೀಗೆ ಅವರು ಪ್ರತಿದಿನ ಮಾಡ್ತಿದ್ರು ಮತ್ತು ತುಂಬ ಹಣ ಕೂಡಿಸಿದ್ರು. 12 ರಾಜ ಮತ್ತು ಯೆಹೋಯಾದ ಆ ಹಣನ ಯೆಹೋವನ ಆಲಯದ ಕೆಲಸಗಳನ್ನ ನೋಡ್ಕೊಳ್ತಾ ಇದ್ದವ್ರಿಗೆ ಕೊಡ್ತಿದ್ರು. ಅವರು ಯೆಹೋವನ ಆಲಯದ ದುರಸ್ತಿ ಕೆಲಸಕ್ಕಾಗಿ ಕಲ್ಲು ಒಡೆಯೋರನ್ನ ಮತ್ತು ಕರಕುಶಲಗಾರರನ್ನ ಕೆಲಸಕ್ಕೆ ತಗೊಳ್ತಿದ್ರು.+ ಕಬ್ಬಿಣ ಮತ್ತು ತಾಮ್ರದ ಕೆಲಸಗಾರರನ್ನೂ ಯೆಹೋವನ ಆಲಯದ ಕೆಲಸಕ್ಕಾಗಿ ತಗೊಳ್ತಿದ್ರು. 13 ಮೇಲ್ವಿಚಾರಕರು ಕೆಲಸ ಮಾಡಿಸೋಕೆ ಶುರುಮಾಡಿದ್ರು. ಅವರು ಹೇಳಿದ ಹಾಗೆ ದುರಸ್ತಿ ಕೆಲಸ ನಡೀತಾ ಇತ್ತು. ಹೀಗೆ ಅವರು ಸತ್ಯ ದೇವರ ಆಲಯನ ಭದ್ರಪಡಿಸಿ ಅದನ್ನ ಮುಂಚಿನ ಸ್ಥಿತಿಗೆ ತಂದ್ರು. 14 ಅವರು ಆ ಕೆಲಸ ಮುಗಿಸಿದ ತಕ್ಷಣ ಉಳಿದ ಹಣನ ರಾಜ ಮತ್ತು ಯೆಹೋಯಾದನ ಹತ್ರ ತಗೊಂಡು ಬಂದ್ರು. ಅವರು ಆ ಹಣನ ಯೆಹೋವನ ಆಲಯಕ್ಕೆ ಬೇಕಾಗಿದ್ದ ಪಾತ್ರೆ ಮಾಡಿಸೋಕೆ, ಅರ್ಪಣೆಗಳನ್ನ ಕೊಡುವಾಗ ಮತ್ತು ಸೇವೆ ಮಾಡುವಾಗ ಬಳಸೋ ಚಿನ್ನಬೆಳ್ಳಿಯ ಲೋಟಗಳನ್ನ ಹಾಗೂ ಪಾತ್ರೆಗಳನ್ನ ಮಾಡಿಸೋಕೆ ಬಳಸಿದ್ರು.+ ಎಲ್ಲಿ ತನಕ ಯೆಹೋಯಾದ ಬದುಕಿದ್ದನೋ ಅಲ್ಲಿ ತನಕ ಯೆಹೋವನ ಆಲಯದಲ್ಲಿ ಪ್ರತಿದಿನ ತಪ್ಪದೆ ಸರ್ವಾಂಗಹೋಮ ಬಲಿಗಳನ್ನ+ ಕೊಡ್ತಿದ್ರು.
15 ಯೆಹೋಯಾದ ತುಂಬ ವರ್ಷ ನೆಮ್ಮದಿಯಿಂದ ಬಾಳಿ ಬದುಕಿದ. ತೀರಿಹೋದಾಗ ಅವನಿಗೆ 130 ವರ್ಷ. 16 ಅವರು ಅವನನ್ನ ದಾವೀದಪಟ್ಟಣದಲ್ಲಿ ರಾಜರ ಸಮಾಧಿಯಲ್ಲಿ ಹೂಣಿಟ್ರು.+ ಯಾಕಂದ್ರೆ ಅವನು ಇಸ್ರಾಯೇಲಲ್ಲಿ ಒಳ್ಳೇ ಕೆಲಸಗಳನ್ನ ಮಾಡಿದ್ದ.+ ಅದ್ರಲ್ಲೂ ಸತ್ಯ ದೇವರ ವಿಷ್ಯದಲ್ಲಿ, ಆತನ ಆಲಯದ ವಿಷ್ಯದಲ್ಲಿ ಒಳ್ಳೇ ಕೆಲಸಗಳನ್ನ ಮಾಡಿದ್ದ.
17 ಯೆಹೋಯಾದ ತೀರಿಹೋದ ಮೇಲೆ ಯೆಹೂದದ ಅಧಿಕಾರಿಗಳು ರಾಜ ಯೆಹೋವಾಷನ ಹತ್ರ ಬಂದು ಅವನಿಗೆ ಬಗ್ಗಿ ನಮಸ್ಕರಿಸಿದ್ರು. ಅವತ್ತಿಂದ ರಾಜ ಅವರು ಹೇಳಿದ ಹಾಗೆ ನಡಿಯೋಕೆ ಶುರುಮಾಡಿದ. 18 ಅವರು ತಮ್ಮ ಪೂರ್ವಜರ ದೇವರಾದ ಯೆಹೋವನ ಆಲಯವನ್ನ ಬಿಟ್ಟು ಪೂಜಾಕಂಬಗಳನ್ನ,* ಮೂರ್ತಿಗಳನ್ನ ಆರಾಧಿಸೋಕೆ ಶುರುಮಾಡಿದ್ರು. ಅವ್ರ ಈ ತಪ್ಪಿಂದಾಗಿ ಯೆಹೂದ ಮತ್ತು ಯೆರೂಸಲೇಮಿನ ಮೇಲೆ ದೇವರಿಗೆ ತುಂಬ ಕೋಪ ಬಂತು. 19 ಯೆಹೋವ ಅವ್ರನ್ನ ಮತ್ತೆ ತನ್ನ ಹತ್ರ ವಾಪಸ್ ಕರ್ಕೊಂಡು ಬರೋಕೆ ಪ್ರವಾದಿಗಳನ್ನ ಕಳಿಸ್ತಾನೇ ಇದ್ದನು ಮತ್ತು ಆ ಪ್ರವಾದಿಗಳ ಮೂಲಕ ಅವರನ್ನ ಎಚ್ಚರಿಸ್ತಾ* ಇದ್ದನು. ಆದ್ರೆ ಅವರು ಆತನ ಮಾತನ್ನ ಕಿವಿಗೆ ಹಾಕೊಳ್ಳಲಿಲ್ಲ.+
20 ದೇವರ ಪವಿತ್ರಶಕ್ತಿ ಪುರೋಹಿತ ಯೆಹೋಯಾದನ+ ಮಗ ಜೆಕರ್ಯನ ಮೇಲೆ ಬಂತು. ಆಗ ಅವನು ಎತ್ತರವಾದ ಜಾಗದಲ್ಲಿ ನಿಂತು ಜನ್ರಿಗೆ ಹೀಗೆ ಹೇಳಿದ “ಸತ್ಯ ದೇವರು ಹೀಗೆ ಹೇಳ್ತಿದ್ದಾನೆ ‘ನೀವು ಯೆಹೋವನ ಆಜ್ಞೆನ ಯಾಕೆ ಮೀರಿ ನಡೀತಾ ಇದ್ದೀರಾ? ಹೀಗೆ ನಡೆದ್ರೆ ನೀವು ಗೆಲ್ಲಲ್ಲ. ನೀವು ಯೆಹೋವನನ್ನ ಬಿಟ್ಟಿರೋದ್ರಿಂದ ಆತನೂ ನಿಮ್ಮನ್ನ ಬಿಟ್ಟುಬಿಡ್ತಾನೆ.’”+ 21 ಆದ್ರೆ ಅವರು ಜೆಕರ್ಯನ ವಿರುದ್ಧ ಸಂಚು ಮಾಡಿ+ ಯೆಹೋವನ ಆಲಯದ ಅಂಗಳದಲ್ಲಿ ರಾಜನ ಆಜ್ಞೆಯ ಪ್ರಕಾರ ಕಲ್ಲು ಹೊಡೆದು ಅವನನ್ನ ಕೊಂದ್ರು.+ 22 ಹೀಗೆ ರಾಜ ಯೆಹೋವಾಷ ಜೆಕರ್ಯನ ತಂದೆ ಯೆಹೋಯಾದ ಅವನಿಗೆ ತೋರಿಸಿದ ಶಾಶ್ವತ ಪ್ರೀತಿನ ಮರೆತುಬಿಟ್ಟು ಅವನ ಮಗನನ್ನ ಕೊಂದುಬಿಟ್ಟ. ಸಾಯೋ ಸಮಯದಲ್ಲಿ ಜೆಕರ್ಯ ರಾಜನಿಗೆ ಹೀಗಂದ “ನೀನು ಮಾಡಿದ್ದನ್ನ ಯೆಹೋವನೇ ನೋಡಲಿ, ಆತನೇ ಶಿಕ್ಷೆ ಕೊಡಲಿ.”+
23 ವರ್ಷದ ಆರಂಭದಲ್ಲಿ ಅರಾಮ್ಯರ ಸೈನ್ಯ ಯೆಹೋವಾಷನ ವಿರುದ್ಧ ಯುದ್ಧಕ್ಕೆ ಬಂತು. ಅವರು ಯೆಹೂದ ಮತ್ತು ಯೆರೂಸಲೇಮಿನ ಮೇಲೆ ಆಕ್ರಮಣ ಮಾಡಿದ್ರು.+ ಆಮೇಲೆ ಜನ್ರ ಎಲ್ಲ ಅಧಿಕಾರಿಗಳನ್ನ ಸಾಯಿಸಿದ್ರು.+ ತಾವು ಕೊಳ್ಳೆ ಹೊಡೆದಿದ್ದನ್ನೆಲ್ಲ ದಮಸ್ಕದ ರಾಜನಿಗೆ ಕಳಿಸಿದ್ರು. 24 ಅರಾಮ್ಯರ ಸೈನ್ಯದಲ್ಲಿ ಸ್ವಲ್ಪ ಜನ್ರೇ ಇದ್ರೂ ಯೆಹೋವ ಅವ್ರ ಕೈಗೆ ಯೆಹೂದದ ದೊಡ್ಡ ಸೈನ್ಯನ ಒಪ್ಪಿಸಿಬಿಟ್ಟನು.+ ಯಾಕಂದ್ರೆ ಯೆಹೂದದ ಜನ್ರು ತಮ್ಮ ಪೂರ್ವಜರ ದೇವರಾದ ಯೆಹೋವನನ್ನ ಬಿಟ್ಟುಬಿಟ್ಟಿದ್ರು. ಹಾಗಾಗಿ ಅರಾಮ್ಯರು ಯೆಹೋವಾಷನಿಗೆ ಶಿಕ್ಷೆಕೊಟ್ರು. 25 ಅರಾಮ್ಯರ ಸೈನ್ಯ ಅವನನ್ನ ಬಿಟ್ಟು ಹೋದ ಮೇಲೆ (ಅವರು ಯೆಹೋವಾಷನಿಗೆ ಗಾಯಮಾಡಿ ಹೋಗಿದ್ರು) ಅವನ ಸ್ವಂತ ಸೇವಕರೇ ಸಂಚು ಮಾಡಿ ಅವನನ್ನ ಅವನ ಹಾಸಿಗೆ ಮೇಲೆನೇ ಸಾಯಿಸಿಬಿಟ್ರು.+ ಯಾಕಂದ್ರೆ ಅವನು ಪುರೋಹಿತ ಯೆಹೋಯಾದನ ಮಕ್ಕಳ* ರಕ್ತವನ್ನ ಸುರಿಸಿದ್ದ.+ ಅವನ ಶವವನ್ನ ದಾವೀದಪಟ್ಟಣದಲ್ಲಿ ಸಮಾಧಿ ಮಾಡಿದ್ರು.+ ಆದ್ರೆ ರಾಜರ ಸಮಾಧಿಯಲ್ಲಿ ಹೂಣಿಡಲಿಲ್ಲ.+
26 ಅವನ ವಿರುದ್ಧ ಸಂಚು ಮಾಡಿದವರು+ ಯಾರಂದ್ರೆ ಅಮ್ಮೋನಿಯಳಾದ ಶಿಮ್ಗಾತೆಯ ಮಗ ಜಾಬಾದ, ಮೋವಾಬ್ಯಳಾದ ಶಿಮ್ರಿತಳ ಮಗ ಯೆಹೋದಾಬಾದ್. 27 ಯೆಹೋವಾಷನ ಮಕ್ಕಳ ಬಗ್ಗೆ, ಅವನ ವಿರುದ್ಧ ನೀಡಿದ ತೀರ್ಪುಗಳ ಬಗ್ಗೆ+ ಮತ್ತು ಸತ್ಯ ದೇವರ ಆಲಯವನ್ನ ದುರಸ್ತಿ ಮಾಡಿದ್ದರ ಬಗ್ಗೆ+ ರಾಜರ ಪುಸ್ತಕದಲ್ಲಿ* ಇದೆ. ಯೆಹೋವಾಷನ ಸ್ಥಾನದಲ್ಲಿ ಅವನ ಮಗ ಅಮಚ್ಯ ರಾಜನಾದ.