ಎರಡನೇ ಅರಸು
3 ಯೆಹೂದದ ರಾಜನಾದ ಯೆಹೋಷಾಫಾಟನ ಆಳ್ವಿಕೆಯ 18ನೇ ವರ್ಷದಲ್ಲಿ ಅಹಾಬನ ಮಗ ಯೆಹೋರಾಮ+ ಸಮಾರ್ಯದಲ್ಲಿ ಇಸ್ರಾಯೇಲಿನ ರಾಜನಾದ. ಅವನು 12 ವರ್ಷ ಆಳ್ವಿಕೆ ಮಾಡಿದ. 2 ಅವನು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡಿದ. ಆದ್ರೆ ಅವನ ತಂದೆತಾಯಿ ಮಾಡಿದಷ್ಟು ಕೆಟ್ಟದ್ದನ್ನ ಅವನು ಮಾಡಲಿಲ್ಲ. ಅವನು ತನ್ನ ತಂದೆ ಮಾಡಿಸಿದ್ದ ಬಾಳನ ವಿಗ್ರಹಸ್ತಂಭವನ್ನ ತೆಗೆದುಹಾಕಿದ.+ 3 ನೆಬಾಟನ ಮಗ ಯಾರೊಬ್ಬಾಮ ಇಸ್ರಾಯೇಲ್ಯರ ಕೈಯಲ್ಲಿ ಮಾಡಿಸಿದ ಪಾಪಗಳನ್ನೇ ಯೆಹೋರಾಮ ಸಹ ಮಾಡಿಸಿದ.+ ಅವನು ಆ ಮಾರ್ಗ ಬಿಡಲೇ ಇಲ್ಲ.
4 ಮೋವಾಬಿನ ರಾಜ ಮೇಷ ಕುರಿಗಳನ್ನ ಸಾಕ್ತಿದ್ದ. ಅವನು 1,00,000 ಕುರಿಮರಿಗಳನ್ನ ಮತ್ತು ಉಣ್ಣೆ ಕತ್ತರಿಸದ 1,00,000 ಟಗರುಗಳನ್ನ ಇಸ್ರಾಯೇಲಿನ ರಾಜನಿಗೆ ಕಪ್ಪವಾಗಿ ಕೊಡ್ತಿದ್ದ. 5 ಅಹಾಬ ತೀರಿ ಹೋದ+ ತಕ್ಷಣ ಮೋವಾಬಿನ ರಾಜ ಇಸ್ರಾಯೇಲಿನ ರಾಜನ ವಿರುದ್ಧ ತಿರುಗಿಬಿದ್ದ.+ 6 ಹಾಗಾಗಿ ರಾಜ ಯೆಹೋರಾಮ ಸಮಾರ್ಯದಿಂದ ಹೊರಟು ಎಲ್ಲ ಇಸ್ರಾಯೇಲ್ಯರನ್ನ ಯುದ್ಧಕ್ಕಾಗಿ ಒಟ್ಟುಸೇರಿಸಿದ. 7 ಅಷ್ಟೇ ಅಲ್ಲ ಅವನು ಯೆಹೂದದ ರಾಜ ಯೆಹೋಷಾಫಾಟನಿಗೆ ಸಂದೇಶ ಕಳಿಸಿ “ಮೋವಾಬಿನ ರಾಜ ನನ್ನ ವಿರುದ್ಧ ತಿರುಗಿ ಬಿದ್ದಿದ್ದಾನೆ. ಹಾಗಾಗಿ ಮೋವಾಬಿನ ವಿರುದ್ಧ ಯುದ್ಧ ಮಾಡೋಕೆ ನೀನು ನನ್ನ ಜೊತೆ ಬರ್ತಿಯಾ?” ಅಂತ ಕೇಳಿದ. ಅದಕ್ಕೆ ಅವನು “ನಾನು ಬರ್ತಿನಿ,+ ನಾನೂ ನೀನೂ, ನನ್ನ ಜನ್ರೂ ನಿನ್ನ ಜನ್ರೂ, ನನ್ನ ಕುದುರೆಗಳೂ ನಿನ್ನ ಕುದುರೆಗಳೂ ಒಂದೇ ಅಲ್ವಾ”+ ಅಂದ. 8 ಯೆಹೋಷಾಫಾಟ “ನಾವು ಯಾವ ದಾರಿಯಲ್ಲಿ ಹೋಗಬೇಕು?” ಅಂತ ಕೇಳಿದಾಗ ಯೆಹೋರಾಮ “ನಾವು ಎದೋಮಿನ ಕಾಡಿನ ಮಾರ್ಗವಾಗಿ ಹೋಗೋಣ” ಅಂದ.
9 ಇಸ್ರಾಯೇಲಿನ ರಾಜ ಯೆಹೂದದ ಮತ್ತು ಎದೋಮಿನ+ ರಾಜರ ಜೊತೆ ಹೊರಟ. ಏಳು ದಿನ ಪ್ರಯಾಣ ಮಾಡಿದ ಮೇಲೆ ಅವ್ರನ್ನ ಹಿಂಬಾಲಿಸ್ತಿದ್ದ ಸೈನಿಕರಿಗೆ ಮತ್ತು ಸಾಕುಪ್ರಾಣಿಗಳಿಗೆ ಕುಡಿಯೋಕೆ ನೀರಿರಲಿಲ್ಲ. 10 ಆಗ ಇಸ್ರಾಯೇಲಿನ ರಾಜ “ಅಯ್ಯೋ ಎಂಥ ಪರಿಸ್ಥಿತಿ ಬಂತು! ಮೋವಾಬಿನ ರಾಜನ ಕೈಗೆ ಒಪ್ಪಿಸೋಕೇ ರಾಜರಾಗಿರೋ ನಮ್ಮ ಮೂವರನ್ನ ಯೆಹೋವ ಇಲ್ಲಿ ಕರ್ಕೊಂಡು ಬಂದಿದ್ದಾನೆ!” ಅಂದ. 11 ಆಗ ಯೆಹೋಷಾಫಾಟ “ಯೆಹೋವನ ಹತ್ರ ಕೇಳೋಕೆ ಇಲ್ಲಿ ಯಾರೂ ಯೆಹೋವನ ಪ್ರವಾದಿಗಳಿಲ್ವಾ?”+ ಅಂತ ಕೇಳಿದ. ಆಗ ಇಸ್ರಾಯೇಲ್ ರಾಜನ ಸೇವಕನೊಬ್ಬ “ಶಾಫಾಟನ ಮಗ ಎಲೀಷ+ ಇದ್ದಾನೆ. ಎಲೀಯನಿಗೆ ಕೈ ತೊಳಿಯೋಕೆ ಅವನು ನೀರು ಕೊಡ್ತಿದ್ದ”*+ ಅಂದ. 12 ಯೆಹೋಷಾಫಾಟ “ಅವನು ನಮಗೆ ಯೆಹೋವನ ಚಿತ್ತ ಏನಂತ ಹೇಳ್ತಾನೆ” ಅಂದ. ಹಾಗಾಗಿ ಇಸ್ರಾಯೇಲ್ ರಾಜ, ಯೆಹೋಷಾಫಾಟ ಮತ್ತು ಎದೋಮಿನ ರಾಜ ಅವನ ಹತ್ರ ಹೋದ್ರು.
13 ಎಲೀಷ ಇಸ್ರಾಯೇಲ್ ರಾಜನಿಗೆ “ನನ್ನ ಹತ್ರ ನಿನಗೇನು ಕೆಲಸ?+ ನಿನ್ನ ತಂದೆತಾಯಿಯ ಪ್ರವಾದಿಗಳ ಹತ್ರ ಹೋಗು”+ ಅಂದ. ಅದಕ್ಕೆ ಇಸ್ರಾಯೇಲ್ ರಾಜ “ಇಲ್ಲ, ಹಾಗೆ ಹೇಳಬೇಡ. ಯಾಕಂದ್ರೆ ಯೆಹೋವನೇ ರಾಜರಾಗಿರೋ ನಮ್ಮ ಮೂವರನ್ನ ಮೋವಾಬಿನ ರಾಜನ ಕೈಗೆ ಒಪ್ಪಿಸೋಕೆ ಒಟ್ಟುಸೇರಿಸಿದ್ದಾನೆ” ಅಂದ. 14 ಅದಕ್ಕೆ ಎಲೀಷ “ನಾನು ಆರಾಧಿಸೋ* ಯೆಹೋವನ ಆಣೆ, ಸೈನ್ಯಗಳ ದೇವರ ಆಣೆ, ಯೆಹೂದದ ರಾಜನಾಗಿರೋ ಯೆಹೋಷಾಫಾಟನ+ ಮೇಲೆ ನನಗೆ ಗೌರವವಿರದಿದ್ರೆ ನಾನಿವತ್ತು ನಿನ್ನ ಮುಖ ನೋಡ್ತಿರಲಿಲ್ಲ. ನಿನ್ನ ಕಡೆ ಗಮನನೂ ಕೊಡ್ತಿರಲಿಲ್ಲ.+ 15 ಈಗ ಹೋಗಿ ನನ್ನ ಹತ್ರ ತಂತಿವಾದ್ಯ ನುಡಿಸುವವನನ್ನ*+ ಕರ್ಕೊಂಡು ಬನ್ನಿ” ಅಂದ. ತಂತಿವಾದ್ಯ ನುಡಿಸುವವನು ಬಂದು ನುಡಿಸೋಕೆ ಶುರುಮಾಡಿದ ತಕ್ಷಣ ಯೆಹೋವನ ಶಕ್ತಿ* ಎಲೀಷನ ಮೇಲೆ ಬಂತು.+ 16 ಆಗ ಅವನು “ಯೆಹೋವ ಹೀಗೆ ಹೇಳ್ತಾನೆ: ‘ಈ ಕಣಿವೆಯಲ್ಲಿ ಒಂದ್ರ ನಂತ್ರ ಒಂದು ಹಳ್ಳ ತೋಡಿ. 17 ಯಾಕಂದ್ರೆ ಯೆಹೋವನಾದ ನಾನು ಹೇಳ್ತಿದ್ದೀನಿ “ನೀವು ಗಾಳಿಯನ್ನಾಗಲಿ ಮಳೆಯನ್ನಾಗಲಿ ನೋಡಲ್ಲ. ಆದ್ರೆ ಈ ಕಣಿವೆ ನೀರಿಂದ ತುಂಬುತ್ತೆ.+ ಅದ್ರಿಂದ ನೀವು ನೀರು ಕುಡಿತೀರ ಮತ್ತು ನಿಮ್ಮ ಜಾನುವಾರುಗಳು, ಬೇರೆ ಪ್ರಾಣಿಗಳು ನೀರನ್ನ ಕುಡಿಯುತ್ತೆ.”’ 18 ಆದ್ರೆ ಹಾಗೆ ಮಾಡೋದು ಯೆಹೋವನಿಗೆ ದೊಡ್ಡ ವಿಷ್ಯ ಏನಲ್ಲ.+ ಆತನು ಮೋವಾಬನ್ನ ಸಹ ನಿಮ್ಮ ಕೈಗೆ ಒಪ್ಪಿಸ್ತಾನೆ.+ 19 ನೀವು ಭದ್ರ ಕೋಟೆಗಳಿರೋ ಎಲ್ಲ ಪಟ್ಟಣಗಳನ್ನ,+ ಎಲ್ಲ ಪ್ರಾಮುಖ್ಯ ಪಟ್ಟಣಗಳನ್ನ ನಾಶ ಮಾಡಬೇಕು. ಎಲ್ಲ ಒಳ್ಳೇ ಮರಗಳನ್ನ ಕಡಿದುಹಾಕಬೇಕು. ನೀರಿನ ಎಲ್ಲ ಬುಗ್ಗೆಗಳನ್ನ ನಿಲ್ಲಿಸಿಬಿಡಬೇಕು. ಎಲ್ಲ ಒಳ್ಳೇ ಪ್ರದೇಶಗಳಿಗೆ ಕಲ್ಲು ಹಾಕಿ ಹಾಳುಮಾಡಬೇಕು”+ ಅಂದ.
20 ಮಾರನೇ ದಿನ ಬೆಳಿಗ್ಗೆ ಧಾನ್ಯ ಅರ್ಪಣೆ ಮಾಡೋ ಸಮಯದಲ್ಲಿ+ ಎದೋಮ್ ದೇಶದ ದಿಕ್ಕಿಂದ ಇದ್ದಕ್ಕಿದ್ದಂತೆ ನೀರು ಹರಿತಾ ಬಂತು. ಆಗ ಕಣಿವೆ ನೀರಿಂದ ತುಂಬ್ಕೊಂಡಿತು.
21 ಆಗ ಎಲ್ಲ ಮೋವಾಬ್ಯರಿಗೂ ಈ ರಾಜರು ಯುದ್ಧಕ್ಕೆ ಬಂದಿದ್ದಾರೆ ಅಂತ ಗೊತ್ತಾಯ್ತು. ಹಾಗಾಗಿ ಆಯುಧ ಇದ್ದ* ಎಲ್ಲ ಗಂಡಸರನ್ನ ಒಟ್ಟುಗೂಡಿಸಿದ್ರು. ಆ ಗಂಡಸರು ಹೋಗಿ ದೇಶದ ಗಡಿಯಲ್ಲಿ ನಿಂತ್ಕೊಂಡ್ರು. 22 ಅವರು ಬೆಳಿಗ್ಗೆ ಎದ್ದು ನೋಡಿದಾಗ ಸೂರ್ಯನ ಕಿರಣಗಳು ನೀರಿನ ಮೇಲೆ ಬಿದ್ದು ಆ ಕಡೆ ಇದ್ದ ಮೋವಾಬ್ಯರಿಗೆ ನೀರು ರಕ್ತದ ತರ ಕೆಂಪಾಗಿ ಕಾಣಿಸ್ತಿತ್ತು. 23 ಹಾಗಾಗಿ ಅವರು “ಇದು ರಕ್ತ! ರಾಜರು ಒಬ್ಬರಿಗೊಬ್ರು ತಮ್ಮನ್ನೇ ಕತ್ತಿಯಿಂದ ತಿವಿದ್ಕೊಂಡು ಸತ್ತು ಹೋಗಿದ್ದಾರೆ. ಮೋವಾಬ್ಯರೇ, ಬನ್ನಿ ಹೋಗಿ ಲೂಟಿ ಮಾಡೋಣ!”+ ಅಂದ್ರು. 24 ಅವರು ಇಸ್ರಾಯೇಲ್ಯರ ಪಾಳೆಯದೊಳಕ್ಕೆ ಬಂದಾಗ ಇಸ್ರಾಯೇಲ್ಯರು ಎದ್ದು ಮೋವಾಬ್ಯರನ್ನ ಸಾಯಿಸೋಕೆ ಶುರು ಮಾಡಿದ್ರು. ಮೋವಾಬ್ಯರು ಅವ್ರಿಂದ ತಪ್ಪಿಸ್ಕೊಂಡು ಓಡಿಹೋಗುವಾಗ+ ಇಸ್ರಾಯೇಲ್ಯರು ಅವ್ರನ್ನ ಸಾಯಿಸ್ತಾ ಅವ್ರ ಹಿಂದೆಹಿಂದೆ ಮೋವಾಬಿನ ತನಕ ಹೋದ್ರು. 25 ಅವರು ಪಟ್ಟಣಗಳನ್ನ ಕೆಡವಿಹಾಕಿದ್ರು. ಪ್ರತಿಯೊಂದು ಒಳ್ಳೇ ಜಾಗಕ್ಕೆ ಒಬ್ಬೊಬ್ಬರು ಒಂದೊಂದು ಕಲ್ಲನ್ನ ಎಸೆದು ಅದನ್ನ ಕಲ್ಲುಗಳಿಂದ ತುಂಬಿಸಿಬಿಟ್ರು. ನೀರಿನ ಎಲ್ಲ ಬುಗ್ಗೆಗಳನ್ನ ನಿಲ್ಲಿಸಿಬಿಟ್ರು+ ಮತ್ತು ಎಲ್ಲ ಒಳ್ಳೇ ಮರಗಳನ್ನ ಕಡಿದುಹಾಕಿದ್ರು.+ ಕೊನೆಗೆ ಕೀರ್-ಹರೆಷೆತ್ತಿನ+ ಕಲ್ಲು ಗೋಡೆಗಳು ಮಾತ್ರ ಉಳಿದವು. ಸೈನಿಕರೆಲ್ಲ ಪಟ್ಟಣವನ್ನ ಸುತ್ತುವರಿದು ಕವಣೆಯಿಂದ ಕಲ್ಲುಗಳನ್ನ ಬೀಸಿ ಅದನ್ನ ನಾಶಮಾಡಿದ್ರು.
26 ಮೋವಾಬಿನ ರಾಜನಿಗೆ ತಾನು ಯುದ್ಧದಲ್ಲಿ ಸೋತಿದ್ದೀನಿ ಅಂತ ಗೊತ್ತಾದಾಗ ಅವನು ಕತ್ತಿ ಇದ್ದ 700 ಗಂಡಸರನ್ನ ಕರ್ಕೊಂಡು ಹೋಗಿ ಶತ್ರು ಸೈನ್ಯದೊಳಗೆ ನುಗ್ಗಿ ಎದೋಮಿನ+ ರಾಜನ ಹತ್ರ ಹೋಗೋಕೆ ಪ್ರಯತ್ನಿಸಿದ. ಆದ್ರೆ ಅವ್ರಿಂದ ಆಗಲಿಲ್ಲ. 27 ಆಗ ಅವನು ತನ್ನ ಸ್ಥಾನದಲ್ಲಿ ಮುಂದೆ ರಾಜನಾಗೋ ತನ್ನ ಮೊದಲ ಮಗನನ್ನ ಕರ್ಕೊಂಡು ಹೋಗಿ ಗೋಡೆ ಮೇಲೆ ಸರ್ವಾಂಗಹೋಮ ಬಲಿಯಾಗಿ ಅರ್ಪಿಸಿದ.+ ಇದ್ರಿಂದ ಮೋವಾಬ್ಯರಿಗೆ ಇಸ್ರಾಯೇಲ್ಯರ ಮೇಲೆ ತುಂಬಾ ಕೋಪ ಬಂತು. ಆಗ ಇಸ್ರಾಯೇಲ್ಯರು ಮೋವಾಬಿನ ರಾಜನ ಮೇಲೆ ದಾಳಿ ಮಾಡೋದನ್ನ ನಿಲ್ಲಿಸಿ ತಮ್ಮ ದೇಶಕ್ಕೆ ವಾಪಸ್ ಹೋದ್ರು.