ಯೆಹೋಶುವ
6 ಇಸ್ರಾಯೇಲ್ಯರಿಗೆ ಹೆದರಿ ಯೆರಿಕೋ ಜನ್ರು ಪಟ್ಟಣದ ಬಾಗಿಲನ್ನ ಗಟ್ಟಿಯಾಗಿ ಮುಚ್ಚಿದ್ರು. ಯಾರೂ ಹೊರಗೆ ಹೋಗಿಲ್ಲ, ಒಳಗೂ ಬಂದಿಲ್ಲ.+
2 ಆಮೇಲೆ ಯೆಹೋವ ಯೆಹೋಶುವನಿಗೆ “ನೋಡು, ನಾನು ಯೆರಿಕೋವನ್ನ, ಅದ್ರ ರಾಜನನ್ನ, ಬಲಶಾಲಿ ಯುದ್ಧವೀರರನ್ನ ನಿನ್ನ ಕೈಗೆ ಒಪ್ಪಿಸಿದ್ದೀನಿ.+ 3 ಸೈನಿಕರಾಗಿರೋ ನೀವೆಲ್ಲ ಹೋಗಿ ದಿನಕ್ಕೊಂದು ಸಾರಿ ಆ ಪಟ್ಟಣದ ಸುತ್ತ ಸುತ್ತಬೇಕು. ಆರು ದಿನ ತನಕ ಸುತ್ತಬೇಕು. 4 ಏಳು ಪುರೋಹಿತರು ಟಗರುಗಳ ಏಳು ಕೊಂಬುಗಳನ್ನ ಹಿಡ್ಕೊಂಡು ಮಂಜೂಷದ ಮುಂದೆ ಮುಂದೆ ಹೋಗಬೇಕು. ಆದ್ರೆ ಏಳನೇ ದಿನ ನೀವು ಆ ಪಟ್ಟಣದ ಸುತ್ತ ಏಳು ಸಾರಿ ಸುತ್ತಬೇಕು, ಪುರೋಹಿತರು ಕೊಂಬುಗಳನ್ನ ಊದಬೇಕು.+ 5 ಟಗರುಗಳ ಕೊಂಬುಗಳನ್ನ ಊದಿದ ಶಬ್ದ* ಕೇಳಿದ ಕೂಡ್ಲೇ ನೀವೆಲ್ಲ ಗಟ್ಟಿಯಾಗಿ ಕೂಗ್ತಾ ಯುದ್ಧ ಘೋಷ ಮಾಡಬೇಕು. ಆಗ ಆ ಪಟ್ಟಣದ ಗೋಡೆ ಕುಸಿದು ನೆಲಸಮ ಆಗುತ್ತೆ.+ ಆಮೇಲೆ ಪ್ರತಿಯೊಬ್ಬ ವ್ಯಕ್ತಿ ನೇರವಾಗಿ ಪಟ್ಟಣದ ಒಳಗೆ ನುಗ್ಗಬೇಕು” ಅಂದನು.
6 ಆಗ ನೂನನ ಮಗ ಯೆಹೋಶುವ ಎಲ್ಲ ಪುರೋಹಿತರನ್ನ ಕರೆದು “ನೀವು ಒಪ್ಪಂದದ ಮಂಜೂಷವನ್ನ ತಗೊಳ್ಳಬೇಕು. ಏಳು ಪುರೋಹಿತರು ಟಗರುಗಳ ಏಳು ಕೊಂಬುಗಳನ್ನ ಹಿಡಿದು ಯೆಹೋವನ ಮಂಜೂಷದ ಮುಂದೆ ಮುಂದೆ ಹೋಗಬೇಕು”+ ಅಂದ. 7 ಆಮೇಲೆ ಅವನು ಜನ್ರಿಗೆ “ನೀವು ಹೋಗಿ ಆ ಪಟ್ಟಣದ ಸುತ್ತ ಸುತ್ತಬೇಕು. ಆಯುಧ ಹಿಡ್ಕೊಂಡ ಸೈನಿಕರು+ ಯೆಹೋವನ ಮಂಜೂಷದ ಮುಂದೆ ಹೋಗಬೇಕು” ಅಂದ. 8 ಜನ್ರೆಲ್ಲ ಯೆಹೋಶುವ ಹೇಳಿದ ಹಾಗೆ ಮಾಡಿದ್ರು. ಏಳು ಪುರೋಹಿತರು ಟಗರುಗಳ ಏಳು ಕೊಂಬುಗಳನ್ನ ಹಿಡ್ಕೊಂಡು ಅದನ್ನ ಊದುತ್ತಾ ಯೆಹೋವನ ಮುಂದೆ ಮುಂದೆ ಹೋದ್ರು. ಅವ್ರ ಹಿಂದೆ ಯೆಹೋವನ ಒಪ್ಪಂದದ ಮಂಜೂಷವನ್ನ ಹೊತ್ಕೊಂಡು ಹೋದ್ರು. 9 ಕೊಂಬುಗಳನ್ನ ಊದ್ತಿದ್ದ ಪುರೋಹಿತರ ಮುಂದೆ ಆಯುಧ ಹಿಡ್ಕೊಂಡಿದ್ದ ಸೈನಿಕರು ಹೋದ್ರು. ಪುರೋಹಿತರು ಕೊಂಬುಗಳನ್ನ ಊದುತ್ತಾ ಹೋಗುವಾಗ ಇನ್ನೊಂದು ಸೈನಿಕ ದಳ ಸಹ ಮಂಜೂಷದ ಹಿಂದೆನೇ ಹೋಯ್ತು.
10 ಆಗ ಯೆಹೋಶುವ ಜನ್ರಿಗೆ “ನೀವು ಕೂಗಬಾರದು, ನಿಮ್ಮ ಶಬ್ದ ಕೇಳಬಾರದು. ನಾನು ನಿಮಗೆ ‘ಕೂಗಿ’ ಅಂದಾಗ ನೀವು ಕೂಗಬೇಕು. ಅಲ್ಲಿ ತನಕ ನಿಮ್ಮ ಬಾಯಿಂದ ಒಂದು ಮಾತು ಕೂಡ ಬರಬಾರದು” ಅಂತ ಆಜ್ಞೆ ಕೊಟ್ಟ. 11 ಅವನು ಹೇಳಿದ ಹಾಗೆ ಅವರು ಯೆಹೋವನ ಮಂಜೂಷವನ್ನ ಹೊತ್ಕೊಂಡು ಆ ಪಟ್ಟಣದ ಸುತ್ತ ಒಂದು ಸಾರಿ ಸುತ್ತಿದ್ರು. ಅದಾದ ಮೇಲೆ ಪಾಳೆಯಕ್ಕೆ ಬಂದು, ಆ ರಾತ್ರಿ ಅಲ್ಲೇ ಇದ್ರು.
12 ಮಾರನೇ ದಿನ ಯೆಹೋಶುವ ಬೆಳಿಗ್ಗೆ ಬೇಗ ಎದ್ದ. ಪುರೋಹಿತರು ಯೆಹೋವನ ಮಂಜೂಷ ಹೊತ್ಕೊಂಡ್ರು.+ 13 ಏಳು ಪುರೋಹಿತರು ಟಗರುಗಳ ಏಳು ಕೊಂಬುಗಳನ್ನ ಊದುತ್ತಾ ಯೆಹೋವನ ಮಂಜೂಷದ ಮುಂದೆ ಮುಂದೆ ಹೋದ್ರು. ಇವರ ಮುಂದೆ ಆಯುಧ ಹಿಡ್ಕೊಂಡ ಸೈನಿಕರು ಹೋದ್ರು. ಪುರೋಹಿತರು ಕೊಂಬು ಊದುತ್ತಾ ಹೋಗುವಾಗ ಇನ್ನೊಂದು ಸೈನಿಕ ದಳ ಯೆಹೋವನ ಮಂಜೂಷವನ್ನ ಹಿಂಬಾಲಿಸ್ತಾ ಹೋಯ್ತು. 14 ಎರಡನೇ ದಿನನೂ ಅವರು ಆ ಪಟ್ಟಣವನ್ನ ಒಂದು ಸಾರಿ ಸುತ್ತಿದ್ರು. ಆಮೇಲೆ ಅವರು ಪಾಳೆಯಕ್ಕೆ ವಾಪಸ್ ಹೋದ್ರು. ಹೀಗೆ ಅವರು ಆರು ದಿನದ ತನಕ ಮಾಡಿದ್ರು.+
15 ಏಳನೇ ದಿನ ಅವರು ಮುಂಜಾನೆ ಎದ್ದು ಆ ಪಟ್ಟಣವನ್ನ ಈ ಮುಂಚೆ ಸುತ್ತಿದ ತರಾನೇ ಸುತ್ತಿದ್ರು. ಆ ದಿನ ಮಾತ್ರ ಅವರು ಪಟ್ಟಣದ ಸುತ್ತ ಏಳು ಸಾರಿ ಸುತ್ತಿದ್ರು.+ 16 ಏಳನೇ ಸುತ್ತಿನಲ್ಲಿ ಪುರೋಹಿತರು ಕೊಂಬು ಊದಿದಾಗ ಯೆಹೋಶುವ ಜನ್ರಿಗೆ “ಕೂಗಿ!+ ಯೆಹೋವ ನಿಮಗೆ ಈ ಪಟ್ಟಣ ಕೊಟ್ಟಿದ್ದಾನೆ. 17 ಈ ಪಟ್ಟಣವನ್ನ, ಇದ್ರಲ್ಲಿರೋ ಎಲ್ಲವನ್ನ ಪೂರ್ತಿ ನಾಶ ಮಾಡಬೇಕು.+ ಇದೆಲ್ಲ ಯೆಹೋವನಿಗೆ ಸೇರಿದೆ. ವೇಶ್ಯೆ ರಾಹಾಬ+ ನಾವು ಕಳಿಸಿದ್ದ ಗೂಢಚಾರರನ್ನ ಬಚ್ಚಿಟ್ಟಿದ್ದಳು. ಹಾಗಾಗಿ ಅವಳನ್ನ, ಅವಳ ಮನೇಲಿ ಇರೋರನ್ನ ಮಾತ್ರ ಉಳಿಸಬೇಕು.+ 18 ಆದ್ರೆ ನಾಶ ಮಾಡಬೇಕಾದ ವಸ್ತುಗಳಿಂದ ದೂರ ಇರಿ.+ ಇಲ್ಲದಿದ್ರೆ ಅವುಗಳ ಮೇಲೆ ಆಸೆ ಬೆಳೆಸ್ಕೊಂಡು ಅವುಗಳನ್ನ ತಗೊಳ್ಳಬಹುದು.+ ಹಾಗೆ ಮಾಡಿದ್ರೆ ನೀವು ಇಸ್ರಾಯೇಲಿನ ಪಾಳೆಯದ ಮೇಲೆ ಕಷ್ಟ* ಬರೋ ತರ ಮಾಡಿ ಅದ್ರ ನಾಶಕ್ಕೆ ಕಾರಣ ಆಗ್ತೀರ.+ 19 ಆದ್ರೆ ಎಲ್ಲ ಬೆಳ್ಳಿಬಂಗಾರ, ತಾಮ್ರ, ಕಬ್ಬಿಣದ ವಸ್ತುಗಳು ಯೆಹೋವನಿಗೆ ಸೇರಿದ ಪವಿತ್ರ ವಸ್ತುಗಳು.+ ಹಾಗಾಗಿ ಅವು ಯೆಹೋವನ ಆಲಯದ ಖಜಾನೆಗೆ ಸೇರಬೇಕು”+ ಅಂದ.
20 ಕೊಂಬುಗಳನ್ನ ಊದಿದಾಗ ಜನ ಕೂಗಿದ್ರು.+ ಕೊಂಬುಗಳ ಶಬ್ದ ಕೇಳಿ ಜನ ಗಟ್ಟಿಯಾಗಿ ಕೂಗಿ ಯುದ್ಧ ಘೋಷ ಮಾಡಿದ ಕೂಡ್ಲೇ ಪಟ್ಟಣದ ಗೋಡೆ ಕುಸಿದು ನೆಲಸಮ ಆಯ್ತು.+ ಆಮೇಲೆ ಜನ್ರೆಲ್ಲ ನೇರವಾಗಿ ಪಟ್ಟಣದ ಒಳಗೆ ನುಗ್ಗಿ ಅದನ್ನ ವಶ ಮಾಡ್ಕೊಂಡ್ರು. 21 ಪಟ್ಟಣದಲ್ಲಿದ್ದ ಗಂಡಸ್ರನ್ನ, ಸ್ತ್ರೀಯರನ್ನ, ಚಿಕ್ಕವರನ್ನ, ದೊಡ್ಡವರನ್ನ, ಹೋರಿ, ಕುರಿ, ಕತ್ತೆ, ಹೀಗೆ ಎಲ್ಲವನ್ನ ಕತ್ತಿಯಿಂದ ಪೂರ್ತಿ ನಾಶ ಮಾಡಿದ್ರು.+
22 ಆ ದೇಶದ ಗೂಢಚಾರಿಕೆ ಮಾಡಿದ್ದ ಇಬ್ರು ಗಂಡಸ್ರಿಗೆ ಯೆಹೋಶುವ “ಆ ವೇಶ್ಯೆ ಮನೆಗೆ ಹೋಗಿ ನೀವು ಮಾತು ಕೊಟ್ಟ ಹಾಗೆ ಅವಳನ್ನ, ಅವಳ ಕಡೆಯವ್ರನ್ನೆಲ್ಲ ಕರ್ಕೊಂಡು ಬನ್ನಿ”+ ಅಂದ. 23 ಆಗ ಆ ಯುವ ಗೂಢಚಾರರು ಒಳಗೆ ಹೋಗಿ ರಾಹಾಬ, ಅವಳ ಅಪ್ಪಅಮ್ಮ, ಒಡಹುಟ್ಟಿದವರು, ಅವಳ ಕಡೆಯವರು ಹೀಗೆ ಅವಳ ಇಡೀ ಕುಟುಂಬವನ್ನ ಇಸ್ರಾಯೇಲ್ ಪಾಳೆಯದ ಹೊರಗಿದ್ದ ಒಂದು ಜಾಗಕ್ಕೆ ಸುರಕ್ಷಿತವಾಗಿ ಕರ್ಕೊಂಡು ಬಂದ್ರು.+
24 ಆಮೇಲೆ ಇಸ್ರಾಯೇಲ್ಯರು ಪಟ್ಟಣವನ್ನ, ಅದ್ರಲ್ಲಿದ್ದ ಎಲ್ಲವನ್ನ ಪೂರ್ತಿ ಸುಟ್ಟು ಹಾಕಿದ್ರು. ಆದ್ರೆ ಬೆಳ್ಳಿಬಂಗಾರ, ತಾಮ್ರ, ಕಬ್ಬಿಣದ ವಸ್ತುಗಳನ್ನ ಯೆಹೋವನ ಆಲಯದ ಖಜಾನೆಗೆ ಕೊಟ್ರು.+ 25 ವೇಶ್ಯೆಯಾಗಿದ್ದ ರಾಹಾಬಳನ್ನ, ಅವಳ ಕುಟುಂಬವನ್ನ ಯೆಹೋಶುವ ಉಳಿಸಿದ.+ ಅವಳು ಇವತ್ತಿಗೂ ಇಸ್ರಾಯೇಲಿನಲ್ಲಿ ವಾಸವಾಗಿದ್ದಾಳೆ.+ ಯಾಕಂದ್ರೆ ಯೆಹೋಶುವ ಯೆರಿಕೋವನ್ನ ಗೂಢಚಾರಿಕೆ ಮಾಡ್ಕೊಂಡು ಬರೋಕೆ ಕಳಿಸಿದ್ದ ಗಂಡಸ್ರನ್ನ ಅವಳು ಬಚ್ಚಿಟ್ಟು ಕಾಪಾಡಿದಳು.+
26 ಆ ಸಮಯದಲ್ಲಿ ಯೆಹೋಶುವ ಹೀಗೆ ಮಾತು ಕೊಟ್ಟ:* “ಈ ಯೆರಿಕೋ ಪಟ್ಟಣವನ್ನ ಮತ್ತೆ ಕಟ್ಟೋಕೆ ಕೈ ಹಾಕುವವನಿಗೆ ಯೆಹೋವ ಶಾಪ ಹಾಕ್ಲಿ. ಅವನು ಇದಕ್ಕೆ ಅಡಿಪಾಯ ಹಾಕಿದ್ರೆ ತನ್ನ ಮೊದಲ್ನೇ ಮಗನನ್ನ ಕಳ್ಕೊಳ್ತಾನೆ. ಇದ್ರ ಬಾಗಿಲನ್ನ ನಿಲ್ಲಿಸಿದ್ರೆ ತನ್ನ ಕಿರಿಯ ಮಗನನ್ನ ಕಳ್ಕೊಳ್ತಾನೆ.”+
27 ಹೀಗೆ ಯೆಹೋವ ಯೆಹೋಶುವನ ಜೊತೆ ಇದ್ದನು,+ ಅವನ ಕೀರ್ತಿ ಭೂಮಿಯಲ್ಲೆಲ್ಲಾ ಹರಡಿತು.+