ಒಂದನೇ ಸಮುವೇಲ
19 ಆಮೇಲೆ ಸೌಲ ದಾವೀದನನ್ನ ಕೊಲ್ಲೋ ವಿಷ್ಯದ+ ಬಗ್ಗೆ ತನ್ನ ಮಗ ಯೋನಾತಾನ ಮತ್ತು ಎಲ್ಲ ಸೇವಕರ ಹತ್ರ ಮಾತಾಡಿದ. 2 ಸೌಲನ ಮಗ ಯೋನಾತಾನನಿಗೆ ದಾವೀದನ ಮೇಲೆ ಪ್ರೀತಿ ಇದ್ದಿದ್ರಿಂದ+ ಅವನು ದಾವೀದನಿಗೆ “ನನ್ನ ತಂದೆ ಸೌಲ ನಿನ್ನನ್ನ ಕೊಲ್ಲಬೇಕು ಅಂತಿದ್ದಾನೆ. ದಯವಿಟ್ಟು ಬೆಳಿಗ್ಗೆ ಹುಷಾರಾಗಿರು. ಗುಟ್ಟಾದ ಜಾಗಕ್ಕೆ ಹೋಗಿ ಅಡಗಿಕೊ. 3 ನೀನು ಅಡಗಿರೋ ಜಾಗದ ಹತ್ರ ಬಂದು ನನ್ನ ತಂದೆ ಪಕ್ಕದಲ್ಲಿ ನಿಂತ್ಕೊಳ್ತೀನಿ. ನಿನ್ನ ಬಗ್ಗೆ ಅವನ ಜೊತೆ ಮಾತಾಡ್ತೀನಿ. ನನಗೆ ಏನಾದ್ರೂ ವಿಷ್ಯ ಗೊತ್ತಾದ್ರೆ ಖಂಡಿತ ಅದನ್ನ ನಿನಗೆ ಹೇಳ್ತೀನಿ”+ ಅಂದ.
4 ಹಾಗೆಯೇ ಯೋನಾತಾನ ತನ್ನ ತಂದೆ ಸೌಲನ ಹತ್ರ ದಾವೀದನ ಬಗ್ಗೆ ಒಳ್ಳೇ ವಿಷ್ಯಗಳನ್ನ ಮಾತಾಡಿದ.+ ಅವನು ಸೌಲನಿಗೆ “ರಾಜನೇ, ನೀನು ನಿನ್ನ ಸೇವಕ ದಾವೀದನ ವಿರುದ್ಧ ಪಾಪ ಮಾಡಬಾರದು. ಅವನು ನಿನ್ನ ವಿರುದ್ಧ ಯಾವ ಪಾಪನೂ ಮಾಡಿಲ್ಲ, ಅವನು ಮಾಡಿರೋದೆಲ್ಲ ನಿನಗೆ ಪ್ರಯೋಜನ ತಂದಿದೆ. 5 ಅವನು ಪ್ರಾಣವನ್ನೇ ಪಣಕ್ಕಿಟ್ಟು ಫಿಲಿಷ್ಟಿಯರನ್ನ ಸಾಯಿಸಿದ.+ ಆಗ ಯೆಹೋವ ಇಡೀ ಇಸ್ರಾಯೇಲಿಗೆ ಮಹಾಜಯ* ತಂದ್ಕೊಟ್ಟ. ಅದನ್ನ ನೋಡಿ ನಿನಗೂ ತುಂಬ ಖುಷಿ ಆಯ್ತು. ಹೀಗಿರುವಾಗ ಸುಮ್ಸುಮ್ನೆ ದಾವೀದನನ್ನ ಯಾಕೆ ಕೊಲ್ತಿಯ? ಆ ನಿರಪರಾಧಿ ವಿರುದ್ಧ ನೀನ್ಯಾಕೆ ಪಾಪ ಮಾಡ್ತೀಯ?”+ ಅಂದ. 6 ಸೌಲ ಯೋನಾತಾನನ ಮಾತು ಕೇಳಿ “ಜೀವ ಇರೋ ದೇವರಾದ ಯೆಹೋವನಾಣೆ ಅವನ ಪ್ರಾಣ ತೆಗಿಯಲ್ಲ” ಅಂತ ಆಣೆ ಮಾಡಿದ. 7 ಆಮೇಲೆ ಯೋನಾತಾನ ದಾವೀದನನ್ನ ಕರೆದು ಈ ವಿಷ್ಯಗಳನ್ನೆಲ್ಲಾ ಹೇಳಿದ. ಅವನನ್ನ ಸೌಲನ ಹತ್ರ ಕರ್ಕೊಂಡು ಬಂದ. ದಾವೀದ ಮುಂಚಿನ ತರಾನೇ ಸೌಲನ ಸೇವಕನಾಗಿ ಕೆಲಸ ಮಾಡ್ತಾ ಇದ್ದ.+
8 ಸ್ವಲ್ಪ ಸಮಯ ಆದ್ಮೇಲೆ ಮತ್ತೆ ಯುದ್ಧ ಶುರು ಆಯ್ತು. ದಾವೀದ ಯುದ್ಧಕ್ಕೆ ಹೋಗಿ ಫಿಲಿಷ್ಟಿಯರ ವಿರುದ್ಧ ಹೋರಾಡಿದ. ತುಂಬ ಶತ್ರುಗಳನ್ನ ಕೊಂದ. ಅವರು ಅವನ ಮುಂದೆ ನಿಲ್ಲೋಕೆ ಆಗದೆ ಓಡಿಹೋದ್ರು.
9 ಸೌಲ ಕೈಯಲ್ಲಿ ಈಟಿ ಹಿಡ್ಕೊಂಡು ಮನೆಯಲ್ಲಿ ಕೂತಿದ್ದ. ದಾವೀದ ಅವನ ಮುಂದೆ ತಂತಿವಾದ್ಯವನ್ನ ನುಡಿಸ್ತಿದ್ದ.+ ದಿಢೀರ್ ಅಂತ ಸೌಲನ ಮನಸ್ಥಿತಿ ಹಾಳಾಯ್ತು. ಇದನ್ನ ಯೆಹೋವ ಅನುಮತಿಸಿದನು.+ 10 ಆಗ ಸೌಲ, ದಾವೀದ ಗೋಡೆಗೆ ನಾಟ್ಕೊಳ್ಳೋ ತರ ಈಟಿ ಎಸೆದ. ಆದ್ರೆ ದಾವೀದ ತಪ್ಪಿಸ್ಕೊಂಡ. ಈಟಿ ಹೋಗಿ ಗೋಡೆಗೆ ನಾಟಿಕೊಳ್ತು. ದಾವೀದ ಆ ರಾತ್ರಿನೇ ಓಡಿಹೋದ. 11 ಸೌಲ ತನ್ನ ಸಂದೇಶವಾಹಕರನ್ನ ದಾವೀದನ ಮನೆಗೆ ಕಳಿಸಿ ಅವನ ಮನೆ ಹೊರಗೆ ಕಾದು ಬೆಳಿಗ್ಗೆ ಅವನನ್ನ ಸಾಯಿಸೋಕೆ ಹೇಳಿದ.+ ಆದ್ರೆ ದಾವೀದನ ಹೆಂಡತಿ ಮೀಕಲ “ಈ ರಾತ್ರಿ ನೀನು ತಪ್ಪಿಸ್ಕೊಳ್ಳದಿದ್ರೆ ನಾಳೆ ಬೆಳಿಗ್ಗೆ ನಿನ್ನ ಶವ ಬೀಳುತ್ತೆ” ಅಂತ ದಾವೀದನಿಗೆ ಹೇಳಿದಳು. 12 ತಕ್ಷಣ ಅವನನ್ನ ಕಿಟಕಿಯಿಂದ ಕೆಳಗೆ ಇಳಿಸಿ ತಪ್ಪಿಸ್ಕೊಂಡು ಓಡಿಹೋಗೋಕೆ ಸಹಾಯ ಮಾಡಿದಳು. 13 ಆಮೇಲೆ ಅವಳು ಮನೆದೇವರ ಮೂರ್ತಿಯನ್ನ ತಗೊಂಡು ಹಾಸಿಗೆ ಮೇಲಿಟ್ಟಳು. ಅವನು ತಲೆಯಿಡೋ ಜಾಗದಲ್ಲಿ ಆಡಿನ ಕೂದಲಿಂದ ಮಾಡಿದ್ದ ಬಟ್ಟೆಯನ್ನ ಇಟ್ಟಳು. ಅವುಗಳ ಮೇಲೆ ಒಂದು ಹೊದಿಕೆ ಮುಚ್ಚಿದಳು.
14 ದಾವೀದನನ್ನ ಹಿಡ್ಕೊಂಡು ಬರೋಕೆ ಸೌಲ ಸಂದೇಶವಾಹಕರನ್ನ ಕಳಿಸಿದ. ಆದ್ರೆ ಮೀಕಲ ಸಂದೇಶವಾಹಕರಿಗೆ “ಅವನ ಆರೋಗ್ಯ ಸರಿಯಿಲ್ಲ” ಅಂದಳು. 15 ಆಗ ಸೌಲ ದಾವೀದನನ್ನ ನೋಡೋಕೆ ಸಂದೇಶವಾಹಕರನ್ನ ಮತ್ತೆ ಕಳಿಸಿ ಅವ್ರಿಗೆ “ಹಾಸಿಗೆ ಸಮೇತ ಅವನನ್ನ ಎತ್ಕೊಂಡು ಬನ್ನಿ, ಅವನನ್ನ ನಾನು ಕೊಲ್ಲಬೇಕು”+ ಅಂದ. 16 ಸಂದೇಶವಾಹಕರು ಮನೆಗೆ ಬಂದಾಗ ಹಾಸಿಗೆ ಮೇಲೆ ಮನೆದೇವರ ಮೂರ್ತಿ ಇತ್ತು. ಅವನು ತಲೆ ಇಡೋ ಜಾಗದಲ್ಲಿ ಆಡಿನ ಕೂದಲಿಂದ ಮಾಡಿದ್ದ ಬಟ್ಟೆ ಇತ್ತು. 17 ಸೌಲ ಮೀಕಲಗೆ “ಯಾಕೆ ನನಗೆ ಮೋಸ ಮಾಡ್ದೆ? ನನ್ನ ಶತ್ರುವನ್ನ+ ತಪ್ಪಿಸ್ಕೊಂಡು ಹೋಗೋಕೆ ಯಾಕೆ ಬಿಟ್ಟೆ?” ಅಂತ ಕೇಳಿದ. ಅದಕ್ಕೆ ಮೀಕಲ ಸೌಲನಿಗೆ “ಅವನು ನನಗೆ ‘ತಪ್ಪಿಸ್ಕೊಂಡು ಹೋಗೋಕೆ ನೀನು ಸಹಾಯ ಮಾಡದಿದ್ರೆ ಸಾಯಿಸಿಬಿಡ್ತೀನಿ!’ ಅಂತ ಹೆದರಿಸಿದ” ಅಂದಳು.
18 ದಾವೀದ ತಪ್ಪಿಸ್ಕೊಂಡು ರಾಮದಲ್ಲಿದ್ದ+ ಸಮುವೇಲನ ಹತ್ರ ಹೋದ. ಸೌಲ ತನಗೆ ಮಾಡಿದ ಎಲ್ಲ ವಿಷ್ಯಗಳನ್ನ ಸಮುವೇಲನಿಗೆ ಹೇಳಿದ. ಅವರಿಬ್ರು ಹೋಗಿ ನಯೋತಿನಲ್ಲಿ+ ಉಳ್ಕೊಂಡ್ರು. 19 ಸ್ವಲ್ಪ ಸಮಯ ಆದ್ಮೇಲೆ ಸೌಲನಿಗೆ “ಇಗೋ, ದಾವೀದ ರಾಮದ ನಯೋತಿನಲ್ಲಿದ್ದಾನೆ” ಅಂತ ಸುದ್ದಿ ಸಿಕ್ತು. 20 ತಕ್ಷಣ ಸೌಲ ದಾವೀದನನ್ನ ಹಿಡಿಯೋಕೆ ಸಂದೇಶವಾಹಕರನ್ನ ಕಳಿಸಿದ. ಪ್ರವಾದಿಗಳಲ್ಲಿದ್ದ ಹಿರಿಯರು ಭವಿಷ್ಯ ಹೇಳೋದನ್ನ, ಸಮುವೇಲ ಅವರ ಮುಂದಾಳತ್ವ ವಹಿಸ್ಕೊಂಡು ಅಲ್ಲಿ ನಿಂತಿರೋದನ್ನ ಸೌಲನ ಸಂದೇಶವಾಹಕರು ನೋಡಿದ ತಕ್ಷಣ ದೇವರ ಪವಿತ್ರಶಕ್ತಿ ಅವ್ರ ಮೇಲೆ ಬಂತು. ಆಗ ಅವರು ಸಹ ಪ್ರವಾದಿಗಳ ತರ ನಡ್ಕೊಳ್ಳೋಕೆ ಶುರು ಮಾಡಿದ್ರು.
21 ಸೌಲನಿಗೆ ಈ ವಿಷ್ಯ ಗೊತ್ತಾದಾಗ ತಕ್ಷಣ ಬೇರೆ ಸಂದೇಶವಾಹಕರನ್ನ ಕಳಿಸಿದ. ಅವರೂ ಪ್ರವಾದಿಗಳ ತರ ನಡ್ಕೊಳ್ಳೋಕೆ ಶುರು ಮಾಡಿದ್ರು. ಹಾಗಾಗಿ ಸೌಲ ಮೂರನೇ ಸಲ ಸಂದೇಶವಾಹಕರ ಗುಂಪನ್ನ ಕಳಿಸಿದ. ಅವರೂ ಪ್ರವಾದಿಗಳ ತರ ವರ್ತಿಸೋಕೆ ಶುರು ಮಾಡಿದ್ರು. 22 ಕೊನೆಗೆ ಸೌಲನೇ ರಾಮಕ್ಕೆ ಹೋದ. ಅವನು ಸೇಕೂವಿನಲ್ಲಿದ್ದ ದೊಡ್ಡ ಬಾವಿ ಹತ್ರ ತಲುಪಿದಾಗ “ಸಮುವೇಲ ಮತ್ತು ದಾವೀದ ಎಲ್ಲಿ?” ಅಂತ ಕೇಳಿದ. ಅದಕ್ಕವರು “ರಾಮದ ನಯೋತಿನಲ್ಲಿದ್ದಾರೆ”+ ಅಂದ್ರು. 23 ಸೌಲ ಅಲ್ಲಿಂದ ರಾಮದ ನಯೋತಿಗೆ ಹೋಗ್ತಿದ್ದಾಗ ದೇವರ ಪವಿತ್ರಶಕ್ತಿ ಅವನ ಮೇಲೂ ಬಂತು. ರಾಮದ ನಯೋತಿಗೆ ಬರೋ ತನಕ ಸೌಲ ಒಬ್ಬ ಪ್ರವಾದಿ ತರ ವರ್ತಿಸ್ತಾ ನಡ್ಕೊಂಡು ಹೋಗ್ತಿದ್ದ. 24 ಅವನು ತನ್ನ ಬಟ್ಟೆಗಳನ್ನ ಬಿಚ್ಚಿಹಾಕಿ ಸಮುವೇಲನ ಮುಂದೆ ಪ್ರವಾದಿ ತರ ವರ್ತಿಸಿದ. ಅಲ್ಲಿ ಇಡೀ ಹಗಲು, ರಾತ್ರಿ ಬೆತ್ತಲೆಯಾಗಿ* ಬಿದ್ಕೊಂಡಿದ್ದ. ಅದಕ್ಕೆ ಅವರು “ಸೌಲನೂ ಒಬ್ಬ ಪ್ರವಾದಿನಾ?”+ ಅಂತ ಮಾತಾಡ್ಕೊಂಡ್ರು.