ಎಸ್ತೇರ್
7 ರಾಜ ಮತ್ತು ಹಾಮಾನ+ ಎಸ್ತೇರ್ ರಾಣಿ ಏರ್ಪಡಿಸಿದ್ದ ಔತಣಕ್ಕೆ ಬಂದ್ರು. 2 ಔತಣದ ಕೊನೇಲಿ ದ್ರಾಕ್ಷಾಮದ್ಯ ಕುಡಿತಿದ್ದಾಗ ಎರಡನೇ ದಿನನೂ ರಾಜ ಎಸ್ತೇರ್ಗೆ “ನಿನ್ನ ಕೋರಿಕೆ ಏನಂತ ಹೇಳು? ನಾನು ಅದನ್ನ ನೆರವೇರಿಸ್ತೀನಿ. ಏನು ಬೇಕು? ನನ್ನ ರಾಜ್ಯದಲ್ಲಿ ಅರ್ಧ ರಾಜ್ಯ ಕೇಳಿದ್ರೂ ಕೊಡ್ತೀನಿ!” ಅಂದ.+ 3 ಅದಕ್ಕೆ ಎಸ್ತೇರ್ “ರಾಜ, ನನ್ನ ಕೋರಿಕೆ ಏನಂದ್ರೆ, ನಿಜವಾಗ್ಲೂ ನಾನು ನಿನ್ನ ಮೆಚ್ಚುಗೆ ಪಡೆದಿರೋದಾದ್ರೆ, ನಾನು ಹೇಳೋದು ನಿನಗೆ ಒಪ್ಪಿಗೆ ಆದ್ರೆ ನನ್ನ ಮತ್ತು ನನ್ನ ಜನ್ರ+ ಪ್ರಾಣ ಉಳಿಸು. 4 ಯಾಕಂದ್ರೆ ನನ್ನನ್ನ, ನನ್ನ ಜನ್ರನ್ನ ಕೊಂದು ಸರ್ವನಾಶ ಮಾಡಬೇಕಂತ,+ ನಾವು ಹುಟ್ಲೇ ಇಲ್ಲ ಅನ್ನೋ ತರ ಮಾಡಬೇಕಂತ ನಮ್ಮನ್ನ ಮಾರಿಬಿಟ್ಟಿದ್ದಾರೆ.+ ನಮ್ಮನ್ನ ಗುಲಾಮರಾಗಿ ಮಾರಿಬಿಟ್ಟಿದ್ರೂ ಸುಮ್ನೆ ಇರ್ತಿದ್ದೆ. ಆದ್ರೆ ನಾವು ಸರ್ವನಾಶ ಆದ್ರೆ ರಾಜನಿಗೆ ಅದ್ರಿಂದ ಹಾನಿ ಆಗುವಾಗ ನಾನು ಹೇಗೆ ಸುಮ್ನೆ ಇರ್ಲಿ” ಅಂದಳು.
5 ಆಗ ರಾಜ ಅಹಷ್ವೇರೋಷ ಎಸ್ತೇರ್ ರಾಣಿಯನ್ನ “ಯಾರವನು? ಇಂಥ ವಿಷ್ಯ ಮಾಡೋಕೆ ಎಷ್ಟು ಧೈರ್ಯ ಅವ್ನಿಗೆ” ಅಂದ. 6 ಅದಕ್ಕೆ ಎಸ್ತೇರ್ “ನಮ್ಮ ವಿರುದ್ಧ ಸಂಚು ಮಾಡಿದ ನಮ್ಮ ವಿರೋಧಿ ಬೇರೆ ಯಾರೂ ಅಲ್ಲ, ಈ ದುಷ್ಟ ಹಾಮಾನ!” ಅಂದಳು.
ಇದನ್ನ ಕೇಳಿದ ತಕ್ಷಣ ಹಾಮಾನ ಗಡಗಡ ನಡುಗಿದ. 7 ಕೋಪದಿಂದ ರಾಜನ ರಕ್ತ ಕುದಿಯೋಕೆ ಶುರು ಆಯ್ತು. ಹಾಗಾಗಿ ಅವನು ಔತಣದ ಮಧ್ಯದಲ್ಲೇ ಎದ್ದು ಅರಮನೆಯ ಉದ್ಯಾನವನಕ್ಕೆ ಹೊರಟುಹೋದ. ಆದ್ರೆ ಹಾಮಾನ ಎದ್ದು ತನ್ನ ಜೀವಕ್ಕಾಗಿ ಎಸ್ತೇರ್ ರಾಣಿಯ ಹತ್ರ ಬೇಡ್ಕೊಳ್ಳೋಕೆ ಶುರುಮಾಡಿದ. ಯಾಕಂದ್ರೆ ರಾಜ ತನಗೆ ಖಂಡಿತ ಶಿಕ್ಷೆ ಕೊಡ್ತಾನೆ ಅಂತ ಅವನಿಗೆ ಗೊತ್ತಾಗಿತ್ತು. 8 ರಾಜ ಅರಮನೆಯ ತೋಟದಿಂದ ಔತಣದ ಮನೆಗೆ ವಾಪಸ್ ಬಂದಾಗ ಹಾಮಾನ ಎಸ್ತೇರಳ ದಿವಾನ್ ಮೇಲೆ ಬಿದ್ಕೊಂಡಿರೋದನ್ನ ನೋಡಿ “ನನ್ನ ಕಣ್ಮುಂದೆನೇ ನನ್ನ ಅರಮನೆಯಲ್ಲೇ ರಾಣಿಯ ಮಾನಭಂಗ ಮಾಡಬೇಕು ಅಂತಿದ್ದೀಯಾ?” ಅಂತ ಕಿರುಚಿದ. ಈ ಮಾತುಗಳು ರಾಜನ ಬಾಯಿಂದ ಬಂದ ತಕ್ಷಣ ಹಾಮಾನನ ಮುಖವನ್ನ ಸೇವಕರು ಬಟ್ಟೆಯಿಂದ ಮುಚ್ಚಿದ್ರು. 9 ಆಗ ರಾಜನ ಆಸ್ಥಾನದ ಅಧಿಕಾರಿಗಳಲ್ಲಿ ಒಬ್ಬನಾಗಿದ್ದ ಹರ್ಬೋನ+ “ರಾಜನ ಪ್ರಾಣ ಕಾಪಾಡೋ ವರದಿ+ ಕೊಟ್ಟಿದ್ದ ಮೊರ್ದೆಕೈಗಾಗಿ ಈ ಹಾಮಾನ ಒಂದು ಕಂಬ ಸಿದ್ಧ ಮಾಡಿದ್ದಾನೆ.+ 50 ಮೊಳ* ಎತ್ತರದ ಆ ಕಂಬವನ್ನ ತನ್ನ ಮನೆ ಹತ್ರಾನೇ ನಿಲ್ಸಿದ್ದಾನೆ” ಅಂದ. ಆಗ ರಾಜ “ಇವನನ್ನೇ ಆ ಕಂಬಕ್ಕೆ ನೇತುಹಾಕಿ” ಅಂದ. 10 ಹಾಗಾಗಿ ಹಾಮಾನ ಮೊರ್ದೆಕೈಗಾಗಿ ಮಾಡಿದ್ದ ಕಂಬಕ್ಕೆ ಅವರು ಹಾಮಾನನನ್ನೇ ನೇತುಹಾಕಿದ್ರು. ಆಗ ರಾಜನ ಕೋಪ ತಣ್ಣಗಾಯ್ತು.