ಜೆಕರ್ಯ
3 ಆಮೇಲೆ ಅವನು ಮಹಾ ಪುರೋಹಿತನಾದ ಯೆಹೋಶುವನನ್ನ+ ನನಗೆ ತೋರಿಸಿದ. ಯೆಹೋಶುವ ಯೆಹೋವನ ದೂತನ ಮುಂದೆ ನಿಂತಿದ್ದ. ಯೆಹೋಶುವನನ್ನ ವಿರೋಧಿಸೋಕೆ ಸೈತಾನ+ ಅವನ ಬಲಗಡೆ ನಿಂತ್ಕೊಂಡಿದ್ದ. 2 ಆಗ ಯೆಹೋವನ ದೂತ ಸೈತಾನನಿಗೆ ಹೀಗಂದ: “ಸೈತಾನನೇ, ಯೆಹೋವ ನಿನ್ನನ್ನ ಗದರಿಸ್ಲಿ!+ ಹೌದು, ಯೆರೂಸಲೇಮನ್ನ ಆರಿಸ್ಕೊಂಡಿರೋ ಯೆಹೋವ+ ನಿನ್ನನ್ನ ಗದರಿಸ್ಲಿ! ಈ ಯೆಹೋಶುವ ಬೆಂಕಿಯಿಂದ ಹೊರಗೆ ತೆಗೆದಿರೋ ದಿಮ್ಮಿ ತರ ಇದ್ದಾನಲ್ವಾ?”
3 ಯೆಹೋಶುವ ಕೊಳಕಾದ ಬಟ್ಟೆ ಹಾಕಿ ದೇವದೂತನ ಮುಂದೆ ನಿಂತಿದ್ದ. 4 ದೇವದೂತ ತನ್ನ ಮುಂದೆ ನಿಂತಿದ್ದವ್ರಿಗೆ “ಇವನ ಕೊಳಕಾದ ಬಟ್ಟೆ ತೆಗಿರಿ” ಅಂದ. ಆಮೇಲೆ ದೇವದೂತ ಯೆಹೋಶುವನಿಗೆ “ನೋಡು! ನಾನು ನಿನ್ನ ಅಪರಾಧಗಳನ್ನ ತೆಗೆದುಹಾಕ್ತೀನಿ. ಈಗ ನಿನಗೆ ಒಳ್ಳೇ ಬಟ್ಟೆ* ಹಾಕಲಾಗುತ್ತೆ”+ ಅಂದ.
5 ಆಗ ನಾನು “ಅವನ ತಲೆಗೆ ಶುದ್ಧವಾದ ವಿಶೇಷ ಪೇಟ ಹಾಕಿ”+ ಅಂದೆ. ಅವರು ಅವನ ತಲೆಗೆ ಶುದ್ಧವಾದ ವಿಶೇಷ ಪೇಟ ಹಾಕಿದ್ರು ಮತ್ತು ಬಟ್ಟೆಗಳನ್ನ ತೊಡಿಸಿದ್ರು. ಆ ಸಮಯದಲ್ಲಿ ಯೆಹೋವನ ದೂತ ಹತ್ರದಲ್ಲೇ ನಿಂತ್ಕೊಂಡಿದ್ದ. 6 ಯೆಹೋವನ ದೂತ ಯೆಹೋಶುವನಿಗೆ ಹೀಗಂದ: 7 “ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ ‘ನೀನು ನನ್ನ ಮಾರ್ಗಗಳಲ್ಲಿ ನಡೆದ್ರೆ, ನಾನು ನಿನಗೆ ಕೊಟ್ಟಿರೋ ಜವಾಬ್ದಾರಿಗಳನ್ನ ನಿಭಾಯಿಸಿದ್ರೆ ನನ್ನ ಆಲಯದಲ್ಲಿ ನ್ಯಾಯಾಧೀಶನಾಗಿ ಸೇವೆಮಾಡ್ತೀಯ.+ ನನ್ನ ಅಂಗಳಗಳನ್ನ ನೋಡ್ಕೊಳ್ತೀಯ.* ಇಲ್ಲಿ ನಿಂತಿರುವವ್ರ ತರ ನೀನೂ ನನ್ನ ಸನ್ನಿಧಿಗೆ ಬರೋ ತರ ನಾನು ಅವಕಾಶ ಮಾಡ್ಕೊಡ್ತೀನಿ.’
8 ‘ಮಹಾ ಪುರೋಹಿತನಾದ ಯೆಹೋಶುವನೇ, ನೀನು ಮತ್ತು ನಿನ್ನ ಮುಂದೆ ಕೂತಿರೋ ಪುರೋಹಿತರು ಭವಿಷ್ಯದಲ್ಲಿ ನಡಿಯೋ ವಿಷ್ಯಕ್ಕೆ ಒಂದು ಗುರುತಾಗಿ ಇರ್ತಿರ. ನೋಡು! ನಾನು ನನ್ನ ಸೇವಕನನ್ನ ಕರ್ಕೊಂಡು ಬರ್ತಿನಿ.+ ಅವನನ್ನ ಮೊಳಕೆ+ ಅಂತ ಕರೆಯಲಾಗುತ್ತೆ. 9 ನಾನು ಯೆಹೋಶುವನ ಮುಂದೆ ಇಟ್ಟಿರೋ ಆ ಕಲ್ಲನ್ನ ನೋಡು. ಆ ಒಂದು ಕಲ್ಲಿನ ಮೇಲೆ ಏಳು ಕಣ್ಣುಗಳ ದೃಷ್ಟಿಯಿದೆ.* ನಾನು ಕಲ್ಲಿನ ಮೇಲೆ ಒಂದು ಮಾತನ್ನ ಕೆತ್ತುತ್ತಿದ್ದೀನಿ. ನಾನು ಈ ದೇಶದ ಅಪರಾಧವನ್ನ ಒಂದೇ ದಿನದಲ್ಲಿ ತೆಗೆದುಹಾಕ್ತೀನಿ’+ ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ.
10 ‘ಆ ದಿನ ನಿಮ್ಮಲ್ಲಿ ಪ್ರತಿಯೊಬ್ರು ನಿಮ್ಮ ದ್ರಾಕ್ಷಿತೋಟದ ಮತ್ತು ಅಂಜೂರ ಮರದ ಕೆಳಗೆ ಬರೋಕೆ ಪಕ್ಕದ ಮನೆಯವ್ರನ್ನ ಕರಿತೀರ’+ ಅಂತ ಸೈನ್ಯಗಳ ದೇವರಾದ ಯೆಹೋವ ಹೇಳ್ತಿದ್ದಾನೆ.”