ನೆಹೆಮೀಯ
2 ಅದು ರಾಜ ಅರ್ತಷಸ್ತ+ ಆಳ್ತಿದ್ದ 20ನೇ ವರ್ಷದ,+ ನೈಸಾನ್* ತಿಂಗಳು. ರಾಜನಿಗೆ ದ್ರಾಕ್ಷಾಮದ್ಯ ಕುಡಿಬೇಕಂತ ಅನಿಸ್ತು. ನಾನು ಯಾವಾಗ್ಲೂ ಕೊಡೋ ತರ ದ್ರಾಕ್ಷಾಮದ್ಯ ತಗೊಂಡು ರಾಜನಿಗೆ ಕೊಟ್ಟೆ.+ ನಾನು ಯಾವತ್ತೂ ರಾಜನ ಮುಂದೆ ಸಪ್ಪೆ ಮುಖ ಹಾಕೊಂಡಿರಲಿಲ್ಲ. ಆದ್ರೆ ಅವತ್ತು ತುಂಬ ಸಪ್ಪಗಿದ್ದೆ. 2 ಅದನ್ನ ನೋಡಿ ರಾಜ “ನೀನು ಆರೋಗ್ಯವಾಗಿದ್ರೂ ಯಾಕೆ ಮುಖ ಸಪ್ಪಗಿದೆ? ನಿನಗೇನೋ ಚಿಂತೆ ಇರೋ ತರ ಇದ್ಯಲ್ಲಾ?” ಅಂದ. ಆಗ ನನಗೆ ತುಂಬ ಭಯ ಆಯ್ತು.
3 ನಾನು ರಾಜನಿಗೆ “ರಾಜ ಚಿರಂಜೀವಿ ಆಗಿರಲಿ! ನನ್ನ ಪೂರ್ವಜರನ್ನ ಸಮಾಧಿ ಮಾಡಿರೋ ನನ್ನ ಊರು ಹಾಳು ಬಿದ್ದಿರುವಾಗ, ಅದ್ರ ಬಾಗಿಲುಗಳು ಸುಟ್ಟು ಬೂದಿ ಆಗಿರುವಾಗ+ ನಾನು ಹೇಗೆ ಖುಷಿಯಾಗಿ ಇರಕ್ಕಾಗುತ್ತೆ?” ಅಂದೆ. 4 ಅದಕ್ಕೆ ರಾಜ “ಹೇಳು, ನಾನೇನು ಮಾಡಬೇಕು?” ಅಂತ ಕೇಳಿದ. ತಕ್ಷಣ ನಾನು ಸ್ವರ್ಗದ ದೇವ್ರಿಗೆ ಪ್ರಾರ್ಥನೆ ಮಾಡ್ದೆ.+ 5 ಆಮೇಲೆ “ರಾಜನಿಗೆ ಒಪ್ಪಿಗೆಯಾದ್ರೆ, ನಿನ್ನ ಸೇವಕ ನಿನ್ನ ದಯೆಗೆ ಪಾತ್ರನಾಗಿದ್ರೆ ನನ್ನ ಪೂರ್ವಜರನ್ನ ಸಮಾಧಿ ಮಾಡಿರೋ ಯೆಹೂದ ಪಟ್ಟಣಕ್ಕೆ ನನ್ನನ್ನ ಕಳಿಸ್ಕೊಡು. ಅಲ್ಲಿ ಹೋಗಿ ಅದನ್ನ ಮತ್ತೆ ಕಟ್ತೀನಿ”+ ಅಂದೆ. 6 ಆಗ ರಾಣಿಯ ಪಕ್ಕದಲ್ಲಿ ಕೂತಿದ್ದ ರಾಜ “ನಿನ್ನ ಪ್ರಯಾಣಕ್ಕೆ ಎಷ್ಟು ಸಮಯ ಹಿಡಿಯುತ್ತೆ? ಯಾವಾಗ ವಾಪಸ್ ಬರ್ತೀಯ?” ಅಂತ ಕೇಳಿದ. ಹೀಗೆ ರಾಜ ನನ್ನನ್ನ ಕಳಿಸೋಕೆ ಒಪ್ಕೊಂಡ.+ ವಾಪಸ್ ಬರೋ ದಿನಾನ ರಾಜನಿಗೆ ಹೇಳ್ದೆ.+
7 ಆಮೇಲೆ “ರಾಜನೇ, ನಿನಗೆ ಒಪ್ಪಿಗೆ ಇದ್ರೆ ನಾನು ಸುರಕ್ಷಿತವಾಗಿ ಯೆಹೂದ ತಲುಪೋಕೆ ನದಿಯ ಆಕಡೆ ಇರೋ*+ ಪ್ರದೇಶದ ರಾಜ್ಯಪಾಲರಿಗೆ ಪತ್ರಗಳನ್ನ ಬರೆದು ಕೊಡು. 8 ಜೊತೆಗೆ ದೇವಾಲಯದ ಕೋಟೆಯ+ ಬಾಗಿಲುಗಳಿಗಾಗಿ, ಪಟ್ಟಣದ ಗೋಡೆಗಳಿಗಾಗಿ,+ ನನ್ನ ಮನೆಗಾಗಿ ಮರದ ಕಂಬಗಳನ್ನ ಮಾಡಿಸೋಕೆ ದಿಮ್ಮಿಗಳನ್ನ ಕೊಡಬೇಕಂತ ರಾಜಮನೆತನದ ಉದ್ಯಾನವನ* ನೋಡ್ಕೊಳ್ಳೋ ಆಸಾಫನಿಗೂ ಒಂದು ಪತ್ರ ಕೊಡು” ಅಂತ ಕೇಳ್ಕೊಂಡೆ. ನನ್ನ ದೇವರು ನನ್ನ ಜೊತೆ ಇದ್ದಿದ್ರಿಂದ* ರಾಜ ಪತ್ರ ಬರೆದು ಕೊಟ್ಟ.+
9 ಕೊನೆಗೆ ನಾನು ಹೋಗಿ ನದಿಯ ಆಕಡೆ ಇರೋ ರಾಜ್ಯಪಾಲರಿಗೆ ರಾಜನ ಆ ಪತ್ರಗಳನ್ನ ಕೊಟ್ಟೆ. ರಾಜ ನನ್ನ ಜೊತೆ ಸೈನ್ಯದ ಅಧಿಪತಿಗಳನ್ನ ಕುದುರೆಸವಾರರನ್ನ ಕಳಿಸ್ಕೊಟ್ಟಿದ್ದ. 10 ಇಸ್ರಾಯೇಲ್ ಜನ್ರಿಗೆ ಒಳ್ಳೇದನ್ನ ಮಾಡೋಕೆ ಯಾರೋ ಬಂದಿದ್ದಾರೆ ಅನ್ನೋ ವಿಷ್ಯ ಹೊರೋನ್ಯನಾದ ಸನ್ಬಲ್ಲಟನಿಗೆ,+ ಅಮ್ಮೋನಿಯರ+ ಅಧಿಕಾರಿ* ಟೋಬೀಯನಿಗೆ+ ಗೊತ್ತಾದಾಗ ತುಂಬ ಕೋಪ ಬಂತು.
11 ತುಂಬ ಪ್ರಯಾಣ ಮಾಡಿ ನಾನು ಯೆರೂಸಲೇಮ್ ತಲುಪಿದೆ. ಮೂರು ದಿನ ಅಲ್ಲೇ ಇದ್ದೆ. 12 ರಾತ್ರಿ ನನ್ನ ಜೊತೆ ಕೆಲವು ಗಂಡಸ್ರನ್ನ ಕರ್ಕೊಂಡು ಹೊರಟೆ. ಯೆರೂಸಲೇಮಿನ ವಿಷ್ಯವಾಗಿ ಏನೇನು ಮಾಡಬೇಕಂತ ದೇವರು ನನ್ನ ಮನಸ್ಸಿಗೆ* ಹಾಕಿದ್ದನೋ ಆ ಆಲೋಚನೆ ಬಗ್ಗೆ ನಾನು ಯಾರಿಗೂ ಹೇಳಿರಲಿಲ್ಲ. ನಾನು ಸವಾರಿ ಮಾಡ್ತಿದ್ದ ಪ್ರಾಣಿಯನ್ನ ಬಿಟ್ಟು ಬೇರೆ ಯಾವ ಪ್ರಾಣಿನೂ ನನ್ನ ಹತ್ರ ಇರಲಿಲ್ಲ. 13 ನಾನು ರಾತ್ರಿ ‘ತಗ್ಗಿನ ಬಾಗಿಲ’+ ಮೂಲಕ ‘ದೊಡ್ಡ ಹಾವಿನ ಬುಗ್ಗೆ’ ಮುಂದಿಂದ ‘ಬೂದಿ ರಾಶಿಯ ಬಾಗಿಲ’+ ದಾರೀಲಿ ಹೋದೆ. ಬಿದ್ದು ಹೋಗಿದ್ದ ಯೆರೂಸಲೇಮ್ ಗೋಡೆಗಳನ್ನ, ಸುಟ್ಟು ಹೋಗಿದ್ದ ಅದ್ರ ಬಾಗಿಲುಗಳನ್ನ ಹೋಗಿ ನೋಡ್ದೆ.+ 14 ಆಮೇಲೆ ‘ಬುಗ್ಗೆ ಬಾಗಿಲು’+ ದಾಟಿ ‘ರಾಜನ ಕೊಳದ’ ಹತ್ರ ಹೋದೆ. ನಾನು ಸವಾರಿ ಮಾಡ್ತಿದ್ದ ಪ್ರಾಣಿಗೆ ಅಲ್ಲಿಂದ ಮುಂದೆ ಹೋಗೋಕೆ ಸಾಕಷ್ಟು ಜಾಗ ಇರಲಿಲ್ಲ. 15 ಹಾಗಿದ್ರೂ ನಾನು ರಾತ್ರಿ ಹೊತ್ತಲ್ಲೇ ಕಣಿವೆ*+ ಮೂಲಕ ಮುಂದೆ ಹೋಗಿ ಗೋಡೆಯನ್ನ ಚೆನ್ನಾಗಿ ನೋಡ್ತಾ ಹೋದೆ. ಆಮೇಲೆ ‘ತಗ್ಗಿನ ಬಾಗಿಲ’ ಮೂಲಕ ಮನೆಗೆ ವಾಪಸ್ ಬಂದೆ.
16 ನಾನು ಎಲ್ಲಿ ಹೋಗಿದ್ದೆ, ಏನು ಮಾಡ್ತಾ ಇದ್ದೀನಿ ಅಂತ ಉಪಾಧಿಪತಿಗಳಿಗೆ+ ಗೊತ್ತಿರಲಿಲ್ಲ. ಯಾಕಂದ್ರೆ ಯೆಹೂದ್ಯರಿಗೆ, ಪುರೋಹಿತರಿಗೆ, ಪ್ರಮುಖರಿಗೆ, ಉಪಾಧಿಪತಿಗಳಿಗೆ, ಬೇರೆ ಕೆಲಸಗಾರರಿಗೆ ಅದ್ರ ಬಗ್ಗೆ ಇಲ್ಲಿ ತನಕ ಏನೂ ಹೇಳಿರಲಿಲ್ಲ. 17 ಕೊನೆಗೆ ನಾನು ಅವ್ರಿಗೆ “ನಮಗೆ ಎಂಥ ಕಷ್ಟ ಬಂದಿದೆ ಅಂತ ನೀವೇ ನೋಡ್ತಿದ್ದೀರ! ಯೆರೂಸಲೇಮ್ ಹಾಳುಬಿದ್ದಿದೆ, ಅದ್ರ ಬಾಗಿಲೆಲ್ಲ ಸುಟ್ಟು ಬೂದಿ ಆಗಿದೆ. ಈಗ ಆಗಿರೋ ಅವಮಾನನೇ ಸಾಕು, ಬನ್ನಿ ಯೆರೂಸಲೇಮಿನ ಗೋಡೆಗಳನ್ನ ಮತ್ತೆ ಕಟ್ಟೋಣ” ಅಂದೆ. 18 ಆಮೇಲೆ ನನ್ನ ದೇವರು ಹೇಗೆ ನನ್ನನ್ನ ಬೆಂಬಲಿಸಿದನು*+ ಅಂತಾನೂ ಹೇಳ್ದೆ. ಜೊತೆಗೆ ರಾಜ ನನಗೆ ಹೇಳಿದ ಮಾತುಗಳನ್ನೂ ಹೇಳ್ದೆ.+ ಅದಕ್ಕೆ ಅವರು “ಬನ್ನಿ, ಕೆಲ್ಸ ಶುರು ಮಾಡೋಣ” ಅಂದ್ರು. ಹೀಗೆ ಅವರು ಆ ಒಳ್ಳೇ ಕೆಲಸಕ್ಕೆ ಕೈ ಹಾಕೋಕೆ ಒಬ್ರನ್ನೊಬ್ರು ಪ್ರೋತ್ಸಾಹಿಸಿದ್ರು.+
19 ಈ ವಿಷ್ಯ ಹೊರೋನ್ಯನಾದ ಸನ್ಬಲ್ಲಟನ, ಅಮ್ಮೋನಿಯರ+ ಅಧಿಕಾರಿ* ಟೋಬೀಯನ+ ಮತ್ತು ಅರಬಿಯನಾದ ಗೆಷೆಮನ+ ಕಿವಿಗೆ ಬಿದ್ದಾಗ ನಮ್ಮನ್ನ ಗೇಲಿ ಮಾಡೋಕೆ ಶುರು ಮಾಡಿದ್ರು.+ ಜೊತೆಗೆ “ನೀವೇನು ಮಾಡ್ತಾ ಇದ್ದೀರಾ? ರಾಜನ ವಿರುದ್ಧ ತಿರುಗಿಬೀಳ್ತಾ ಇದ್ದೀರಾ?” ಅಂತ ಹೇಳ್ತಾ ನಮ್ಮನ್ನ ಕೀಳಾಗಿ ನೋಡಿದ್ರು.+ 20 ಆದ್ರೆ ನಾನು ಅವ್ರಿಗೆ “ನಮಗೆ ಯಶಸ್ಸು ಕೊಡ್ತಿರೋನು ಸ್ವರ್ಗದ ದೇವರು.+ ನಾವು ಆತನ ಸೇವಕರು. ನಾವು ಪಟ್ಟಣದ ಗೋಡೆ ಕಟ್ತೀವಿ. ನಿಮಗೂ ಯೆರೂಸಲೇಮ್ಗೂ ಸಂಬಂಧ ಇಲ್ಲ. ನಿಮಗೆ ಯಾವ ಹಕ್ಕೂ ಇಲ್ಲ. ಅಷ್ಟೇ ಅಲ್ಲ ನಿಮ್ಮನ್ನ ನೆನಪಿಸ್ಕೊಳ್ಳುವಂಥ ಯಾವುದೇ ಕೆಲಸವನ್ನೂ ನೀವು ಯೆರೂಸಲೇಮಲ್ಲಿ ಮಾಡಿಲ್ಲ”+ ಅಂದೆ.