ಒಂದನೇ ಪೂರ್ವಕಾಲವೃತ್ತಾಂತ
28 ದಾವೀದ ಇಸ್ರಾಯೇಲಿನ ಎಲ್ಲ ಅಧಿಕಾರಿಗಳನ್ನ ಅಂದ್ರೆ ಕುಲಾಧಿಪತಿಗಳನ್ನ, ರಾಜನಿಗೆ ಸೇವೆ ಮಾಡ್ತಿದ್ದ ವಿಭಾಗಗಳ ಮುಖ್ಯಸ್ಥರನ್ನ,+ ಸಾವಿರ ಜನ್ರ ಮೇಲಿದ್ದ ಅಧಿಕಾರಿಗಳನ್ನ, ನೂರು ಜನ್ರ ಮೇಲಿದ್ದ ಅಧಿಕಾರಿಗಳನ್ನ,+ ರಾಜ ಮತ್ತು ಅವನ ಗಂಡು ಮಕ್ಕಳ+ ಆಸ್ತಿಯನ್ನ, ಪ್ರಾಣಿಗಳನ್ನ ನೋಡ್ಕೊಳ್ತಿದ್ದ ಮುಖ್ಯಸ್ಥರನ್ನ+ ಇವ್ರೆಲ್ಲರ ಜೊತೆಗೆ ಆಸ್ಥಾನದ ಅಧಿಕಾರಿಗಳನ್ನ, ವೀರರೂ ಸಮರ್ಥ ಗಂಡಸರೂ+ ಆಗಿದ್ದ ಎಲ್ಲರನ್ನ ಯೆರೂಸಲೇಮಿಗೆ ಕರೆಸಿದ. 2 ಆಮೇಲೆ ರಾಜ ದಾವೀದ ಎದ್ದು ನಿಂತು ಹೀಗಂದ:
“ನನ್ನ ಸಹೋದರರೇ, ನನ್ನ ಜನ್ರೇ ನನ್ನ ಮಾತು ಕೇಳಿ. ಯೆಹೋವನ ಒಪ್ಪಂದದ ಮಂಜೂಷಕ್ಕಾಗಿ ಒಂದು ವಿಶ್ರಾಂತಿ ಜಾಗವನ್ನ, ದೇವರಿಗಾಗಿ ಒಂದು ಪಾದಪೀಠವನ್ನ ಕಟ್ಟಬೇಕು+ ಅನ್ನೋದು ನನ್ನ ಮನದಾಸೆ ಆಗಿತ್ತು. ಅದನ್ನ ಕಟ್ಟೋಕೆ ತಯಾರಿ ಕೂಡ ಮಾಡಿದ್ದೆ.+ 3 ಆದ್ರೆ ಸತ್ಯದೇವರು ‘ನನ್ನ ಹೆಸ್ರಿನ ಮಹಿಮೆಗಾಗಿ ನೀನು ಆಲಯ ಕಟ್ಟಲ್ಲ.+ ಯಾಕಂದ್ರೆ ನೀನು ತುಂಬಾ ಯುದ್ಧಗಳನ್ನ ಮಾಡಿದೆ, ರಕ್ತ ಸುರಿಸಿದೆ’+ ಅಂದನು. 4 ದೇವರು ಯೆಹೂದನನ್ನ ನಾಯಕನಾಗಿ ಆರಿಸ್ಕೊಂಡನು.+ ಯೆಹೂದ ಕುಲದಲ್ಲಿ ನನ್ನ ತಂದೆ ಮನೆತನವನ್ನ ಆರಿಸ್ಕೊಂಡನು.+ ನಾನು ಸದಾಕಾಲಕ್ಕೂ ಇಸ್ರಾಯೇಲಿನ ರಾಜನಾಗೋ ತರ+ ಇಸ್ರಾಯೇಲ್ ದೇವರಾದ ಯೆಹೋವ ನನ್ನ ತಂದೆಯ ಇಡೀ ಮನೆತನದಲ್ಲಿ ನನ್ನನ್ನ ಆರಿಸ್ಕೊಂಡನು. ನನ್ನ ತಂದೆಯ ಗಂಡು ಮಕ್ಕಳಲ್ಲಿ ನನ್ನನ್ನ ಮೆಚ್ಚಿ ಇಡೀ ಇಸ್ರಾಯೇಲಿನ ಮೇಲೆ ರಾಜನಾಗಿ ಮಾಡಿದನು.+ 5 ಯೆಹೋವ ನನಗೆ ಹೆಚ್ಚು ಗಂಡು ಮಕ್ಕಳನ್ನ ಕೊಟ್ಟನು.+ ಅವ್ರಲ್ಲಿ ನನ್ನ ಮಗ ಸೊಲೊಮೋನನನ್ನ+ ಯೆಹೋವನ ರಾಜ ಸಿಂಹಾಸನದ ಮೇಲೆ ಕೂರಿಸಿ ಇಸ್ರಾಯೇಲನ್ನ ಆಳೋಕೆ ಆರಿಸ್ಕೊಂಡನು.+
6 ದೇವರು ನನಗೆ ‘ನಿನ್ನ ಮಗ ಸೊಲೊಮೋನ ನನಗಾಗಿ ಆಲಯವನ್ನ, ಅಂಗಳಗಳನ್ನ ಕಟ್ತಾನೆ. ಯಾಕಂದ್ರೆ ನಾನು ಅವನನ್ನ ನನ್ನ ಮಗನಾಗಿ ಆರಿಸ್ಕೊಂಡಿದ್ದೀನಿ, ನಾನು ಅವನಿಗೆ ತಂದೆಯಾಗಿ ಇರ್ತಿನಿ.+ 7 ಅವನು ನನ್ನ ಆಜ್ಞೆಗಳನ್ನ, ನನ್ನ ತೀರ್ಪುಗಳನ್ನ ಈಗ ಪಾಲಿಸೋ ಹಾಗೇ ಮುಂದೆನೂ ತಪ್ಪದೆ ಪಾಲಿಸಿದ್ರೆ+ ನಾನು ಅವನ ಆಡಳಿತವನ್ನ ಶಾಶ್ವತವಾಗಿ ಸ್ಥಿರಪಡಿಸ್ತೀನಿ’+ ಅಂದನು. 8 ಹಾಗಾಗಿ ಇವತ್ತು ಎಲ್ಲ ಇಸ್ರಾಯೇಲ್ಯರ ಮುಂದೆ, ಯೆಹೋವನ ಸಭೆ ಮುಂದೆ, ನಮ್ಮ ದೇವರ ಮುಂದೆ ನಿಮಗೆ ನಾನು ಹೇಳೋದು ಏನಂದ್ರೆ, ನಿಮ್ಮ ದೇವರಾದ ಯೆಹೋವನ ಎಲ್ಲ ಆಜ್ಞೆಗಳನ್ನ ಚೆನ್ನಾಗಿ ತಿಳ್ಕೊಳ್ಳಿ, ಅವುಗಳನ್ನ ಪಾಲಿಸಿ. ಹಾಗೆ ಮಾಡಿದ್ರೆ ನೀವು ಈ ಒಳ್ಳೇ ದೇಶದಲ್ಲೇ ಇರ್ತಿರ,+ ಇದನ್ನ ನಿಮ್ಮ ಮುಂದಿನ ಸಂತಾನದವ್ರಿಗೂ ಶಾಶ್ವತ ಆಸ್ತಿಯಾಗಿ ದಾಟಿಸ್ತೀರ.
9 ನನ್ನ ಮಗನಾದ ಸೊಲೊಮೋನ, ನಿನ್ನ ತಂದೆಯ ದೇವರನ್ನ ತಿಳ್ಕೊ. ನಿನ್ನ ಪೂರ್ಣ* ಹೃದಯದಿಂದ,+ ಖುಷಿ ಖುಷಿಯಿಂದ ಆತನ ಸೇವೆ ಮಾಡು. ಯಾಕಂದ್ರೆ ಯೆಹೋವ ಎಲ್ರ ಹೃದಯವನ್ನ ನೋಡ್ತಾನೆ.+ ಮನಸ್ಸಿನ ಒಂದೊಂದು ವಿಷ್ಯಗಳನ್ನ, ಆಸೆಗಳನ್ನ ತಿಳ್ಕೊಂಡಿದ್ದಾನೆ.+ ನೀನು ಆತನನ್ನ ಹುಡುಕಿದ್ರೆ ನಿನಗೆ ಸಿಕ್ತಾನೆ,+ ಸಹಾಯ ಮಾಡ್ತಾನೆ. ಆದ್ರೆ ನೀನು ಅವನನ್ನ ಬಿಟ್ಟುಬಿಟ್ರೆ, ಆತನು ನಿನ್ನನ್ನ ಶಾಶ್ವತವಾಗಿ ಬಿಟ್ಟುಬಿಡ್ತಾನೆ.+ 10 ಈ ಮಾತುಗಳಿಗೆ ಚೆನ್ನಾಗಿ ಗಮನಕೊಡು. ಯಾಕಂದ್ರೆ ಯೆಹೋವ ನಿನಗೆ ಕಟ್ಟೋಕೆ ಹೇಳ್ತಿರೋ ಆಲಯ ಒಂದು ಪವಿತ್ರವಾದ ಆರಾಧನಾ ಜಾಗ. ಧೈರ್ಯದಿಂದ ಆ ಕೆಲಸಕ್ಕೆ ಕೈ ಹಾಕು.”
11 ಆಮೇಲೆ ದಾವೀದ ತನ್ನ ಮಗನಾದ ಸೊಲೊಮೋನನಿಗೆ ಆಲಯದ ಮಂಟಪ,+ ಅದ್ರ ಕೋಣೆಗಳ, ಕಣಜಗಳ, ಮಾಳಿಗೆಗಳ, ಒಳಗಿನ ಕೊಠಡಿಗಳ, ಪ್ರಾಯಶ್ಚಿತ್ತ ಆಲಯದ+ ಹೀಗೆ ಎಲ್ಲವುಗಳ ನಿರ್ಮಾಣ ಕೆಲಸಕ್ಕಾಗಿ ನಕ್ಷೆ+ ಕೊಟ್ಟ. 12 ದೇವರ ಪ್ರೇರಣೆಯಿಂದ ನಿರ್ಮಾಣ ಕೆಲಸಕ್ಕಾಗಿ ತನಗೆ ಸಿಕ್ಕಿದ ನಕ್ಷೆಯನ್ನೆಲ್ಲ ಅಂದ್ರೆ ಯೆಹೋವನ ಆಲಯದ ಅಂಗಳಗಳ,+ ಅದ್ರ ಸುತ್ತ ಇದ್ದ ಎಲ್ಲ ಊಟದ ಕೋಣೆಗಳ, ಸತ್ಯದೇವರ ಆಲಯದ ಖಜಾನೆಗಳ, ಪವಿತ್ರ ಮಾಡಿದ* ವಸ್ತುಗಳನ್ನ ಇಡ್ತಿದ್ದ ಖಜಾನೆಗಳ+ ಹೀಗೆ ಎಲ್ಲದ್ರ ನಕ್ಷೆಯನ್ನ ದಾವೀದ ಸೊಲೊಮೋನನಿಗೆ ಕೊಟ್ಟ. 13 ಅಷ್ಟೇ ಅಲ್ಲ ದಾವೀದ ಪುರೋಹಿತರ,+ ಲೇವಿಯರ ದಳಗಳ ಬಗ್ಗೆ, ಯೆಹೋವನ ಆಲಯದಲ್ಲಿ ನಡಿಯೋ ಎಲ್ಲ ಸೇವೆಗಳ ಬಗ್ಗೆ, ಯೆಹೋವನ ಆಲಯದ ಸೇವೆಯಲ್ಲಿ ಉಪಯೋಗಿಸೋ ಎಲ್ಲ ವಸ್ತುಗಳ ಬಗ್ಗೆ ನಿರ್ದೇಶನ ಕೊಟ್ಟ. 14 ಬೇರೆಬೇರೆ ಕೆಲಸಗಳಲ್ಲಿ ಉಪಯೋಗಿಸೋ ಚಿನ್ನದ ವಸ್ತುಗಳನ್ನ ಮಾಡೋಕೆ ಎಷ್ಟು ಚಿನ್ನ ಬೇಕಾಗುತ್ತೆ, ಬೆಳ್ಳಿ ವಸ್ತುಗಳನ್ನ ಮಾಡೋಕೆ ಎಷ್ಟು ಬೆಳ್ಳಿ ಬೇಕಾಗುತ್ತೆ ಅಂತ ಕೂಡ ಹೇಳಿದ. 15 ಚಿನ್ನದ ದೀಪಸ್ತಂಭಗಳು,+ ಅವುಗಳ ಚಿನ್ನದ ದೀಪಗಳು ಎಷ್ಟು ತೂಕ ಇರಬೇಕು, ಬೆಳ್ಳಿ ದೀಪಸ್ತಂಭಗಳು, ಅವುಗಳ ಬೆಳ್ಳಿ ದೀಪಗಳು ಎಷ್ಟು ತೂಕ ಇರಬೇಕು ಅಂತ ಕೂಡ ಹೇಳಿದ. 16 ಅರ್ಪಣೆಯ ರೊಟ್ಟಿಗಳನ್ನ ಇಡೋ ಮೇಜುಗಳಲ್ಲಿ+ ಪ್ರತಿಯೊಂದು ಮೇಜನ್ನ ಮಾಡೋಕೆ ಎಷ್ಟು ಚಿನ್ನ ಬೇಕಾಗುತ್ತೆ, ಬೆಳ್ಳಿ ಮೇಜುಗಳನ್ನ ಮಾಡೋಕೆ ಎಷ್ಟು ಬೆಳ್ಳಿ ಬೇಕಾಗುತ್ತೆ ಅಂತಾನೂ ಹೇಳಿದ. 17 ಕವಲುಗೋಲು, ಬಟ್ಟಲು, ಅಪ್ಪಟ ಚಿನ್ನದ ಹೂಜಿಗಳನ್ನ ಮಾಡೋಕೆ ಎಷ್ಟು ಚಿನ್ನ ಬೇಕಾಗುತ್ತೆ, ಚಿನ್ನದ ಚಿಕ್ಕ ಬಟ್ಟಲುಗಳಲ್ಲಿ+ ಪ್ರತಿಯೊಂದು ಬಟ್ಟಲನ್ನ ಮಾಡೋಕೆ ಎಷ್ಟು ಚಿನ್ನ ಬೇಕಾಗುತ್ತೆ, ಬೆಳ್ಳಿ ಬಟ್ಟಲುಗಳಲ್ಲಿ ಪ್ರತಿಯೊಂದು ಬಟ್ಟಲನ್ನ ಮಾಡೋಕೆ ಎಷ್ಟು ಬೆಳ್ಳಿ ಬೇಕಾಗುತ್ತೆ ಅಂತ ಕೂಡ ಹೇಳಿದ. 18 ಧೂಪವೇದಿಯನ್ನ ಮಾಡೋಕೆ ಎಷ್ಟು ಚಿನ್ನ ಬೇಕಾಗುತ್ತೆ,+ ರಥದ+ ಪ್ರತೀಕದ ಅಂದ್ರೆ ತಮ್ಮ ರೆಕ್ಕೆಗಳನ್ನ ಚಾಚಿ ಯೆಹೋವನ ಒಪ್ಪಂದದ ಮಂಜೂಷವನ್ನ ಮುಚ್ಚೋ ಬಂಗಾರದ ಕೆರೂಬಿಗಳ+ ತೂಕ ಎಷ್ಟಿರಬೇಕು ಅಂತ ಕೂಡ ಹೇಳಿದ. 19 ದಾವೀದ “ಯೆಹೋವನ ಆಶೀರ್ವಾದ ನನ್ನ ಮೇಲಿದೆ. ಆತನು ನನಗೆ ನಿರ್ಮಾಣ ಕೆಲಸದ ನಕ್ಷೆಯ+ ಪ್ರತಿಯೊಂದು ವಿವ್ರಗಳನ್ನ ದಾಖಲಿಸೋ ಹಾಗೇ ತಿಳುವಳಿಕೆಯನ್ನ* ಕೊಟ್ಟನು”+ ಅಂದ.
20 ಆಮೇಲೆ ದಾವೀದ ತನ್ನ ಮಗ ಸೊಲೊಮೋನನಿಗೆ ಹೀಗಂದ: “ಧೈರ್ಯವಾಗಿರು, ದೃಢವಾಗಿರು, ಈ ಕೆಲಸಕ್ಕೆ ಕೈ ಹಾಕು. ನನ್ನ ದೇವರಾದ ಯೆಹೋವ ನಿನ್ನ ಜೊತೆ ಇದ್ದಾನೆ.+ ಭಯಪಡಬೇಡ, ಕಳವಳಪಡಬೇಡ. ಆತನು ನಿನ್ನ ಕೈಬಿಡಲ್ಲ, ಬಿಟ್ಟುಬಿಡಲ್ಲ.+ ಯೆಹೋವನ ಆಲಯದ ಸೇವೆಗೆ ಸಂಬಂಧಿಸಿದ ಕೆಲಸಗಳೆಲ್ಲ ಪೂರ್ತಿ ಮುಗಿಯೋ ತನಕ ಆತನು ನಿನ್ನ ಜೊತೆ ಇರ್ತಾನೆ. 21 ಸತ್ಯದೇವರ ಆಲಯದ ಎಲ್ಲ ಕೆಲಸಗಳನ್ನ ಮಾಡೋಕೆ ಪುರೋಹಿತರು,+ ಲೇವಿಯರ+ ವಿಭಾಗಗಳು ತಯಾರಾಗಿವೆ. ಎಲ್ಲ ರೀತಿಯ ಕೆಲಸಗಳನ್ನ ಇಷ್ಟಪಟ್ಟು ಮಾಡೋ ನಿಪುಣ ಕೆಲಸಗಾರರು+ ನಿನ್ನ ಹತ್ರ ಇದ್ದಾರೆ. ಅಧಿಕಾರಿಗಳು,+ ಜನ್ರೆಲ್ಲ ನಿನ್ನ ನಿರ್ದೇಶನ ಪಾಲಿಸ್ತಾರೆ.”