ಯೆರೆಮೀಯ
52 ಚಿದ್ಕೀಯ+ ರಾಜ ಆದಾಗ ಅವನಿಗೆ 21 ವರ್ಷ. ಅವನು ಯೆರೂಸಲೇಮಿಂದ 11 ವರ್ಷ ಆಳಿದ. ಅವನ ತಾಯಿಯ ಹೆಸ್ರು ಹಮೂಟಲ್.+ ಇವಳು ಲಿಬ್ನದವನಾದ ಯೆರೆಮೀಯನ ಮಗಳು. 2 ಚಿದ್ಕೀಯ ಯೆಹೋಯಾಕೀಮನ ತರಾನೇ ಯೆಹೋವನಿಗೆ ಇಷ್ಟ ಆಗದೇ ಇರೋದನ್ನೇ ಮಾಡ್ತಿದ್ದ.+ 3 ಯೆರೂಸಲೇಮಿನ ಜನ ಯೆಹೂದದ ಜನ ಇಂಥ ಕೆಟ್ಟ ಕೆಲಸ ಮಾಡ್ತಾ ಇದ್ದಿದ್ರಿಂದ ಯೆಹೋವ ಅವ್ರ ಮೇಲೆ ತನ್ನ ಕೋಪಾಗ್ನಿ ಸುರಿಸಿದನು. ಕೊನೆಗೆ ಅವರು ತನ್ನ ಕಣ್ಮುಂದೆ ಇರಬಾರದು ಅಂತ ಆತನು ಅವ್ರನ್ನ ಓಡಿಸಿಬಿಟ್ಟನು.+ ಚಿದ್ಕೀಯ ಬಾಬೆಲಿನ ರಾಜನ ವಿರುದ್ಧ ತಿರುಗಿಬಿದ್ದ.+ 4 ಚಿದ್ಕೀಯ ಆಳ್ತಿದ್ದ ಒಂಬತ್ತನೇ ವರ್ಷದ ಹತ್ತನೇ ತಿಂಗಳಿನ ಹತ್ತನೇ ದಿನದಲ್ಲಿ ಬಾಬೆಲಿನ ರಾಜ ನೆಬೂಕದ್ನೆಚ್ಚರ* ತನ್ನ ಇಡೀ ಸೈನ್ಯದ ಜೊತೆ ಯೆರೂಸಲೇಮಿನ ಮೇಲೆ ದಾಳಿ ಮಾಡೋಕೆ ಬಂದ. ಅವ್ರೆಲ್ಲ ಅದ್ರ ಮುಂದೆ ಪಾಳೆಯಹೂಡಿ ಅದ್ರ ಸುತ್ತ ಇಳಿಜಾರು ದಿಬ್ಬ ಕಟ್ಟಿದ್ರು.+ 5 ರಾಜ ಚಿದ್ಕೀಯನ ಆಳ್ವಿಕೆಯ 11ನೇ ವರ್ಷದ ತನಕ ಪಟ್ಟಣಕ್ಕೆ ಮುತ್ತಿಗೆ ಹಾಕಿದ್ರು.
6 ನಾಲ್ಕನೇ ತಿಂಗಳ ಒಂಬತ್ತನೇ ದಿನ+ ಪಟ್ಟಣದಲ್ಲಿ ದೊಡ್ಡ ಬರಗಾಲ ಬಂತು. ಇದ್ರಿಂದಾಗಿ ಜನ್ರಿಗೆ* ತಿನ್ನೋಕೆ ಏನೂ ಇರಲಿಲ್ಲ.+ 7 ಕೊನೆಗೆ ಕಸ್ದೀಯರು ಪಟ್ಟಣದ ಗೋಡೆಯನ್ನ ಒಡೆದು ಒಳಗೆ ಬಂದ್ರು. ಅವರು ಪಟ್ಟಣವನ್ನ ಸುತ್ತುವರೀತಾ ಇದ್ದಾಗ ಯೆರೂಸಲೇಮಿನ ಸೈನಿಕರೆಲ್ಲ ರಾತ್ರೋರಾತ್ರಿ ರಾಜಉದ್ಯಾನದ ಹತ್ರ ಇದ್ದ ಎರಡು ಗೋಡೆಗಳ ಮಧ್ಯ ಇರೋ ಬಾಗಿಲು ಮೂಲಕ ಪಟ್ಟಣದಿಂದ ಹೊರಗೆ ಹೋದ್ರು. ಅಲ್ಲಿಂದ ಅರಾಬಾ+ ದಾಟ್ಕೊಂಡು ಮುಂದೆ ಹೋದ್ರು. 8 ಆದ್ರೆ ಕಸ್ದೀಯರ ಸೈನ್ಯ ರಾಜ ಚಿದ್ಕೀಯನ+ ಹಿಂದೆನೇ ಹೋಗಿ ಯೆರಿಕೋವಿನ ಬಯಲು ಪ್ರದೇಶಗಳಲ್ಲಿ ಅವನನ್ನ ಹಿಡಿದ್ರು. ಆಗ ರಾಜನ ಸೈನಿಕರೆಲ್ಲ ಅವನನ್ನ ಬಿಟ್ಟು ಒಬ್ಬೊಬ್ರು ಒಂದೊಂದು ದಿಕ್ಕಿಗೆ ಓಡಿಹೋದ್ರು. 9 ಆಮೇಲೆ ಕಸ್ದೀಯರ ಸೈನಿಕರು ರಾಜ ಚಿದ್ಕೀಯನನ್ನ ಹಿಡಿದು ಹಾಮಾತ್ ದೇಶದ ರಿಬ್ಲದಲ್ಲಿದ್ದ ಬಾಬೆಲಿನ ರಾಜನ ಹತ್ರ ಕರ್ಕೊಂಡು ಬಂದ್ರು. ಅಲ್ಲಿ ಅವನು ಚಿದ್ಕೀಯನಿಗೆ ಶಿಕ್ಷೆ ಕೊಟ್ಟ. 10 ಬಾಬೆಲಿನ ರಾಜ ಚಿದ್ಕೀಯನ ಕಣ್ಮುಂದೆನೇ ಅವನ ಗಂಡುಮಕ್ಕಳನ್ನ ಕೊಂದ. ಯೆಹೂದದ ಎಲ್ಲ ಅಧಿಕಾರಿಗಳನ್ನ ರಿಬ್ಲದಲ್ಲಿ ಕೊಂದುಹಾಕಿದ. 11 ಆಮೇಲೆ ಬಾಬೆಲಿನ ರಾಜ ಚಿದ್ಕೀಯನ ಕಣ್ಣುಗಳನ್ನ ಕುರುಡು ಮಾಡಿದ.+ ತಾಮ್ರದ ಬೇಡಿ ಹಾಕಿ ಬಾಬೆಲಿಗೆ ಕರ್ಕೊಂಡು ಹೋದ, ಸಾಯೋ ತನಕ ಅವನನ್ನ ಜೈಲಲ್ಲಿ ಇಟ್ಟ.
12 ಬಾಬೆಲಿನ ರಾಜ ನೆಬೂಕದ್ನೆಚ್ಚರನ* ಆಳ್ವಿಕೆಯ 19ನೇ ವರ್ಷದ ಐದನೇ ತಿಂಗಳ ಹತ್ತನೇ ದಿನ ಅವನ ಸೇವಕ ಕಾವಲುಗಾರರ ಮುಖ್ಯಸ್ಥ ಆಗಿದ್ದ ನೆಬೂಜರದಾನ ಯೆರೂಸಲೇಮಿನ ಒಳಗೆ ಬಂದ.+ 13 ಅವನು ಯೆಹೋವನ ಆಲಯವನ್ನ,+ ರಾಜನ ಅರಮನೆಯನ್ನ, ಯೆರೂಸಲೇಮಲ್ಲಿದ್ದ ಎಲ್ಲ ಮನೆಗಳನ್ನ ಸುಟ್ಟುಹಾಕಿದ. ಆ ಪಟ್ಟಣದಲ್ಲಿದ್ದ ಎಲ್ಲ ದೊಡ್ಡ ಮನೆಗಳನ್ನ ಸಹ ಸುಟ್ಟುಹಾಕಿದ. 14 ಕಾವಲುಗಾರರ ಮುಖ್ಯಸ್ಥನ ಜೊತೆ ಕಸ್ದೀಯರ ಇಡೀ ಸೈನ್ಯ ಯೆರೂಸಲೇಮ್ ಸುತ್ತ ಇದ್ದ ಗೋಡೆಗಳನ್ನ ಬೀಳಿಸ್ತು.+
15 ಕಾವಲುಗಾರರ ಮುಖ್ಯಸ್ಥ ನೆಬೂಜರದಾನ ಕೆಳವರ್ಗದ ಕೆಲವು ಜನ್ರನ್ನ, ಪಟ್ಟಣದಲ್ಲಿ ಉಳಿದಿದ್ದ ಜನ್ರನ್ನ ಕೈದಿಗಳಾಗಿ ಕರ್ಕೊಂಡು ಹೋದ. ಅಷ್ಟೇ ಅಲ್ಲ ಯೆಹೂದ್ಯರ ಪಕ್ಷ ಬಿಟ್ಟು ಬಾಬೆಲಿನ ರಾಜನ ಜೊತೆ ಸೇರ್ಕೊಂಡಿದ್ದವ್ರನ್ನ, ಉಳಿದ ಎಲ್ಲ ಕರಕುಶಲಗಾರರನ್ನ ಕರ್ಕೊಂಡು ಹೋದ.+ 16 ಆದ್ರೆ ದೇಶದಲ್ಲಿದ್ದ ಕೆಲವು ಕಡು ಬಡವರನ್ನ ದ್ರಾಕ್ಷಿತೋಟಗಳಲ್ಲಿ ಕೆಲಸ ಮಾಡೋಕೆ, ಕಡ್ಡಾಯ ದುಡಿಮೆ ಮಾಡೋಕೆ ಬಿಟ್ಟುಹೋದ.+
17 ಕಸ್ದೀಯರು ಯೆಹೋವನ ಆಲಯದ ತಾಮ್ರದ ಕಂಬಗಳನ್ನ,+ ಜೊತೆಗೆ ಯೆಹೋವನ ಆಲಯದಲ್ಲಿದ್ದ ಬಂಡಿಗಳನ್ನ,+ “ಸಮುದ್ರ” ಅಂತ ಕರಿತಿದ್ದ ತಾಮ್ರದ ಪಾತ್ರೆನ+ ತುಂಡುತುಂಡು ಮಾಡಿದ್ರು. ಆ ತಾಮ್ರನ್ನೆಲ್ಲಾ ಬಾಬೆಲಿಗೆ ಹೊತ್ಕೊಂಡು ಹೋದ್ರು.+ 18 ದೇವಾಲಯದಲ್ಲಿ ಬಳಸ್ತಿದ್ದ ಹಂಡೆಗಳನ್ನ, ಸಲಿಕೆಗಳನ್ನ, ದೀಪಶಾಮಕಗಳನ್ನ, ಬಟ್ಟಲುಗಳನ್ನ,+ ಲೋಟಗಳನ್ನ,+ ತಾಮ್ರದ ಎಲ್ಲ ಪಾತ್ರೆಗಳನ್ನ ಸಹ ತಗೊಂಡು ಹೋದ್ರು. 19 ಅಪ್ಪಟ ಚಿನ್ನ, ಬೆಳ್ಳಿಯಿಂದ ಮಾಡಿದ್ದ ಬೋಗುಣಿಗಳನ್ನ,+ ಕೆಂಡ ಹಾಕೋ ಪಾತ್ರೆಗಳನ್ನ, ಬಟ್ಟಲುಗಳನ್ನ, ಹಂಡೆಗಳನ್ನ, ದೀಪಸ್ತಂಭಗಳನ್ನ,+ ಲೋಟಗಳನ್ನ, ಅರ್ಪಣೆಗಳಿಗಾಗಿ ಬಳಸ್ತಿದ್ದ ಬಟ್ಟಲುಗಳನ್ನ ಕಾವಲುಗಾರರ ಮುಖ್ಯಸ್ಥ ತಗೊಂಡು ಹೋದ.+ 20 ಯೆಹೋವನ ಆಲಯಕ್ಕಾಗಿ ರಾಜ ಸೊಲೊಮೋನ ಮಾಡಿಸಿದ್ದ ಎರಡು ಕಂಬಗಳು “ಸಮುದ್ರ” ಅಂತ ಕರಿತಿದ್ದ ಪಾತ್ರೆ, ಆ ಪಾತ್ರೆ ಕೆಳಗಿದ್ದ ತಾಮ್ರದ 12 ಹೋರಿಗಳು,+ ಬಂಡಿಗಳು, ಇದಕ್ಕೆಲ್ಲ ಬಳಸಿದ್ದ ತಾಮ್ರ ತೂಕಮಾಡೋಕೆ ಆಗದಷ್ಟು ಜಾಸ್ತಿ ಇತ್ತು.
21 ಆ ಎರಡು ಕಂಬಗಳ ಎತ್ರ 18 ಮೊಳ,* ಅವುಗಳ* ಸುತ್ತಳತೆ 12 ಮೊಳ.+ ಅವುಗಳ ತಾಮ್ರ ನಾಲ್ಕು ಬೆರಳುದಪ್ಪ ಇತ್ತು.* ಆ ಕಂಬಗಳು ಮಧ್ಯದಲ್ಲಿ ಟೊಳ್ಳಾಗಿತ್ತು. 22 ಅವುಗಳ ಮೇಲಿದ್ದ ಶಿರಸ್ಸುಗಳು ತಾಮ್ರದ್ದು. ಮೊದಲನೇ ಕಂಬದ ಮೇಲಿದ್ದ ಶಿರಸ್ಸು ಐದು ಮೊಳ ಎತ್ರ ಇತ್ತು.+ ಶಿರಸ್ಸಿನ ಮೇಲೆ ಸುತ್ತ ಇದ್ದ ಜಾಲರಿ, ದಾಳಿಂಬೆಗಳನ್ನ ತಾಮ್ರದಿಂದ ಮಾಡಿದ್ರು. ಎರಡನೇ ಕಂಬ ಮತ್ತು ದಾಳಿಂಬೆಗಳು ಸಹ ಅದೇ ರೀತಿ ಇತ್ತು. 23 ಶಿರಸ್ಸಿನ ಸುತ್ತ 96 ದಾಳಿಂಬೆ ಇತ್ತು, ಜಾಲರಿ ಸುತ್ತ ಒಟ್ಟು 100 ದಾಳಿಂಬೆ ಇತ್ತು.+
24 ಕಾವಲುಗಾರರ ಮುಖ್ಯಸ್ಥ ಮುಖ್ಯ ಪುರೋಹಿತ ಸೆರಾಯನನ್ನ,+ ಸಹಾಯಕ ಪುರೋಹಿತ ಚೆಫನ್ಯನನ್ನ+ ಜೊತೆಗೆ ಮೂರು ಬಾಗಿಲು ಕಾಯೋರನ್ನ+ ಕರ್ಕೊಂಡು ಹೋದ. 25 ಅವನು ಪಟ್ಟಣದಿಂದ ಸೈನಿಕರ ಮುಖ್ಯಾಧಿಕಾರಿಯಾಗಿದ್ದ ಆಸ್ಥಾನದ ಒಬ್ಬ ಅಧಿಕಾರಿಯನ್ನ, ರಾಜನ ಏಳು ಆಪ್ತರನ್ನ, ಸೇನಾಪತಿಯ ಕಾರ್ಯದರ್ಶಿಯಾಗಿದ್ದು ಸೈನ್ಯಕ್ಕಾಗಿ ದೇಶದ ಜನ್ರನ್ನ ಒಟ್ಟುಗೂಡಿಸೋನನ್ನ, 60 ಸಾಮಾನ್ಯ ಜನ್ರನ್ನ ಹಿಡ್ಕೊಂಡು ಹೋದ. 26 ಕಾವಲುಗಾರರ ಮುಖ್ಯಸ್ಥನಾಗಿದ್ದ ನೆಬೂಜರದಾನ ಇವರನ್ನೆಲ್ಲ ರಿಬ್ಲದಲ್ಲಿದ್ದ ಬಾಬೆಲಿನ ರಾಜನ ಹತ್ರ ಕರ್ಕೊಂಡು ಬಂದ. 27 ಬಾಬೆಲಿನ ರಾಜ ಅವ್ರನ್ನ ಹಾಮಾತ್ ದೇಶದ ರಿಬ್ಲದಲ್ಲಿ ಕೊಂದುಹಾಕಿದ.+ ಹೀಗೆ ಯೆಹೂದದವರು ತಮ್ಮ ದೇಶ ಬಿಟ್ಟು ಕೈದಿಗಳಾಗಿ ಹೋದ್ರು.+
28 ನೆಬೂಕದ್ನೆಚ್ಚರ* ತನ್ನ ಆಳ್ವಿಕೆಯ ಏಳನೇ ವರ್ಷದಲ್ಲಿ 3,023 ಯೆಹೂದ್ಯರನ್ನ ಹಿಡ್ಕೊಂಡು ಹೋದ.+
29 ನೆಬೂಕದ್ನೆಚ್ಚರ* ತನ್ನ ಆಳ್ವಿಕೆಯ 18ನೇ ವರ್ಷದಲ್ಲಿ+ ಯೆರೂಸಲೇಮಿಂದ 832 ಜನ್ರನ್ನ ಹಿಡ್ಕೊಂಡು ಹೋದ.
30 ನೆಬೂಕದ್ನೆಚ್ಚರನ* ಆಳ್ವಿಕೆಯ 23ನೇ ವರ್ಷದಲ್ಲಿ ಕಾವಲುಗಾರರ ಮುಖ್ಯಸ್ಥನಾಗಿದ್ದ ನೆಬೂಜರದಾನ 745 ಯೆಹೂದ್ಯರನ್ನ ಹಿಡ್ಕೊಂಡು ಹೋದ.+
ಕೈದಿಗಳಾಗಿ ಹೋದ ಜನ್ರು ಒಟ್ಟು 4,600.
31 ಯೆಹೂದದ ರಾಜ ಯೆಹೋಯಾಖೀನ+ ಕೈದಿಯಾಗಿದ್ದ 37ನೇ ವರ್ಷದ 12ನೇ ತಿಂಗಳ 25ನೇ ದಿನದಲ್ಲಿ ಬಾಬೆಲಿನ ರಾಜ ಎವೀಲ್ಮೆರೋದಕ ಯೆಹೋಯಾಖೀನನನ್ನ ಬಿಡುಗಡೆ ಮಾಡಿದ, ಜೈಲಿಂದ ಹೊರಗೆ ತಂದ. ಎವೀಲ್ಮೆರೋದಕ ರಾಜನಾದದ್ದು ಆ ವರ್ಷದಲ್ಲೇ.+ 32 ರಾಜ ಯೆಹೋಯಾಖೀನನ ಜೊತೆ ಪ್ರೀತಿಯಿಂದ ಮಾತಾಡಿ ಅವನ ಜೊತೆ ಬಾಬೆಲಲ್ಲಿದ್ದ ಬೇರೆಲ್ಲ ರಾಜರಿಗಿಂತ ಅವನಿಗೆ ದೊಡ್ಡ ಸ್ಥಾನ ಕೊಟ್ಟ. 33 ಹಾಗಾಗಿ ಯೆಹೋಯಾಖೀನ ಜೈಲಿನ ಬಟ್ಟೆಗಳನ್ನ ತೆಗೆದುಹಾಕಿದ. ಅವನು ಜೀವನಪೂರ್ತಿ ರಾಜನ ಮೇಜಲ್ಲಿ ಕೂತು ಊಟಮಾಡಿದ. 34 ಯೆಹೋಯಾಖೀನ ಬದುಕಿರೋ ತನಕ ಪ್ರತಿ ದಿನ ಬಾಬೆಲಿನ ರಾಜ ಅವನಿಗೆ ಊಟ ಕೊಡ್ತಿದ್ದ.