ಪರಮಗೀತ
8 “ನೀನು ನನ್ನ ತಾಯಿ ಹಾಲು ಕುಡಿದು ಬೆಳೆದ
ನನ್ನ ಸಹೋದರನ ತರ ಇರಬಾರದಿತ್ತಾ?
ಆಗ ನಾನು ನಿನ್ನನ್ನ ಮನೆ ಹೊರಗೆ ನೋಡಿದಾಗ್ಲೂ ಮುತ್ತು ಕೊಡ್ತಿದ್ದೆ,+
ಯಾರೂ ನನ್ನನ್ನ ಅವಮಾನಿಸ್ತಾ ಇರಲಿಲ್ಲ.
2 ನಿನ್ನನ್ನ ನನ್ನ ತಾಯಿ ಮನೆಗೆ,
ನನಗೆ ಬುದ್ಧಿ ಹೇಳಿಕೊಟ್ಟ ಅಮ್ಮನ ಮನೆಗೆ ಕರ್ಕೊಂಡು ಹೋಗ್ತಿದ್ದೆ.+
ನಿನಗೆ ಮಧುರ ದ್ರಾಕ್ಷಾಮದ್ಯ ಸವಿಯೋಕೆ ಕೊಡ್ತಿದ್ದೆ,
ತಾಜಾ ದಾಳಿಂಬೆರಸ ಕುಡಿಯೋಕೆ ಕೊಡ್ತಿದ್ದೆ.
3 ಅವನ ಎಡಗೈ ನನಗೆ ತಲೆದಿಂಬು ಆಗಿರ್ತಿತ್ತು,
ಅವನ ಬಲಗೈ ನನ್ನನ್ನ ತಬ್ಬಿಹಿಡಿತಿತ್ತು.+
4 ಯೆರೂಸಲೇಮಿನ ಹೆಣ್ಣುಮಕ್ಕಳೇ,
ನನ್ನಲ್ಲಿ ಪ್ರೀತಿ ತಾನಾಗಿ ಹುಟ್ಟೋ ತನಕ
ನನ್ನೊಳಗೆ ಅದನ್ನ ಬಡಿದೆಬ್ಬಿಸೋಕೆ ಪ್ರಯತ್ನಿಸಬೇಡಿ,
ಹಾಗೆ ಪ್ರಯತ್ನಿಸಲ್ಲ ಅಂತ ಆಣೆ ಮಾಡಿ.”+
5 “ನಲ್ಲನ ತೋಳಿನ ಮೇಲೆ ಒರಗಿ
ಕಾಡಿಂದ ಬರ್ತಿರೋ ಅವಳ್ಯಾರು?”
“ನಿನ್ನ ತಾಯಿಗೆ ಪ್ರಸವವೇದನೆ ಬಂದ ಆ ಸೇಬು ಮರದ ಕೆಳಗೆ,
ಅವಳು ನಿನ್ನನ್ನ ಹೆತ್ತ ಆ ಮರದ ಕೆಳಗೆ ನಾನು ನಿನ್ನನ್ನ ಎಬ್ಬಿಸಿದೆ.
6 ನಿನ್ನ ಹೃದಯದ ಮೇಲೆ, ನಿನ್ನ ಕೈ ಮೇಲೆ
ನನ್ನನ್ನ ಮುದ್ರೆ ತರ ಅಚ್ಚೊತ್ತು.
ಯಾಕಂದ್ರೆ ಪ್ರೀತಿ ಮರಣದಷ್ಟು ಬಲವಾಗಿದೆ,+
ಪರಸ್ಪರ ಪ್ರೇಮನಿಷ್ಠೆ* ಎಂದೆಂದಿಗೂ ಸ್ಥಿರ, ಅದು ಸಮಾಧಿ* ತರ ಯಾವುದಕ್ಕೂ ಬಗ್ಗದು.
ಪ್ರೇಮಾಗ್ನಿಯು ಧಗಧಗಿಸೋ ಜ್ವಾಲೆ, ಅದು ಯಾಹುವಿನ* ಜ್ವಾಲೆ.+
7 ಮುನ್ನುಗ್ಗಿ ಬರೋ ಪ್ರವಾಹ ಕೂಡ ಪ್ರೀತಿಯನ್ನ ನಂದಿಸಲಾರದು,+
ಹರಿದು ಬರೋ ನದಿಗಳು ಕೂಡ ಅದನ್ನ ಕೊಚ್ಚಿಕೊಂಡು ಹೋಗಲಾರವು.+
ಒಬ್ಬನು ಪ್ರೀತಿಯನ್ನ ಪಡೆಯೋಕೆ ತನ್ನೆಲ್ಲ ಸಂಪತ್ತನ್ನ ಕೊಟ್ರೂ
ಅದನ್ನೆಲ್ಲ* ತಿರಸ್ಕರಿಸಲಾಗುತ್ತೆ.”
8 “ಇನ್ನೂ ಸ್ತನ ಬೆಳೆದಿರದ
ಪುಟ್ಟ ತಂಗಿಯೊಬ್ಬಳು ನಮಗಿದ್ದಾಳೆ.+
ನಮ್ಮ ತಂಗಿಗೆ ಮದುವೆ ಪ್ರಸ್ತಾಪ ಬಂದಾಗ
ಅವಳಿಗಾಗಿ ಏನು ಮಾಡೋಣ?”
9 “ಅವಳು ಗೋಡೆಯಾಗಿದ್ರೆ
ಅವಳ ಮೇಲೆ ಬೆಳ್ಳಿಯ ಕೈಪಿಡಿಗೋಡೆಯನ್ನ ಕಟ್ಟೋಣ,
ಅವಳು ಬಾಗಿಲಾಗಿದ್ರೆ
ದೇವದಾರು ಮರದ ಹಲಗೆಯಿಂದ ಅವಳನ್ನ ಭದ್ರಪಡಿಸೋಣ.”
10 “ನಾನು ಗೋಡೆ,
ನನ್ನ ಸ್ತನಗಳು ಬುರುಜುಗಳ ತರ ಇವೆ.
ನನ್ನ ಮನಸ್ಸು ಈಗ ನೆಮ್ಮದಿಯಿಂದ ಇದೆ,
ನನ್ನವನಿಗೆ ಅದು ಗೊತ್ತಿದೆ.
11 ಬಾಲ್-ಹಾಮೋನಲ್ಲಿ ಸೊಲೊಮೋನನಿಗೆ ಒಂದು ದ್ರಾಕ್ಷಿತೋಟ ಇತ್ತು.+
ಅದನ್ನ ನೋಡ್ಕೊಳ್ಳೋಕೆ ಅವನು ಕೆಲಸಗಾರರನ್ನ ನೇಮಿಸಿದ.
ಪ್ರತಿಯೊಬ್ಬರು ಸಾವಿರ ಬೆಳ್ಳಿ ಶೆಕೆಲ್ಗಳನ್ನ* ಕೊಟ್ಟು ಅದರ ಹಣ್ಣುಗಳನ್ನ ಕೊಂಡುಕೊಳ್ತಿದ್ರು.
12 ನನಗೆ ನನ್ನ ಸ್ವಂತ ದ್ರಾಕ್ಷಿತೋಟ ಇದೆ.
ಸೊಲೊಮೋನನೇ, ಸಾವಿರ ಬೆಳ್ಳಿ ಶೆಕೆಲ್ಗಳು* ನಿನ್ನ ಹತ್ರನೇ ಇರಲಿ,
ಇನ್ನೂರು ಬೆಳ್ಳಿ ಶೆಕೆಲ್ಗಳು ತೋಟ ಕಾಯುವವರ ಹತ್ರನೇ ಇರಲಿ.”
13 “ತೋಟಗಳಲ್ಲಿ ವಾಸಿಸ್ತಿರುವವಳೇ,+
ನಿನ್ನ ದನಿ ಕೇಳೋಕೆ ಜೊತೆಗಾರರು ಕಾಯ್ತಿದ್ದಾರೆ.
ನಾನೂ ನಿನ್ನ ಸ್ವರ ಕೇಳೋಕೆ ಹಂಬಲಿಸ್ತಿದ್ದೀನಿ.”+