ವಿಮೋಚನಕಾಂಡ
9 ಹಾಗಾಗಿ ಯೆಹೋವ ಮೋಶೆಗೆ “ನೀನು ಫರೋಹನ ಹತ್ರ ಹೋಗಿ ಅವನಿಗೆ ಹೀಗೆ ಹೇಳು: ‘ಇಬ್ರಿಯರ ದೇವರಾದ ಯೆಹೋವ ನಿನಗೆ ಹೇಳೋದು ಏನಂದ್ರೆ “ನನ್ನ ಜನ ನನ್ನ ಆರಾಧನೆ ಮಾಡಬೇಕು, ಅವರನ್ನ ಕಳಿಸು.+ 2 ನೀನು ಕಳಿಸೋಕೆ ಒಪ್ಪದೆ ಅವರನ್ನ ನಿನ್ನ ದೇಶದಲ್ಲೇ ಇಟ್ಕೊಂಡ್ರೆ 3 ಯೆಹೋವನಾದ ನಾನು ಬಯಲಲ್ಲಿ ಇರೋ ನಿನ್ನ ಪ್ರಾಣಿಗಳಿಗೆ ಕಾಯಿಲೆ ತರ್ತಿನಿ.+ ಕುದುರೆ, ಕತ್ತೆ, ಒಂಟೆ, ದನ-ಹೋರಿ, ಕುರಿ ಇದಕ್ಕೆಲ್ಲ ದೊಡ್ಡ ಕಾಯಿಲೆ+ ಬರುತ್ತೆ. 4 ಯೆಹೋವನಾದ ನಾನು ಈಜಿಪ್ಟಿನ ಪ್ರಾಣಿಗಳಿಗೆ ಕಾಯಿಲೆ ತಂದ್ರೂ ಇಸ್ರಾಯೇಲ್ಯರ ಪ್ರಾಣಿಗಳಿಗೆ ತರಲ್ಲ. ಇಸ್ರಾಯೇಲ್ಯರ ಪ್ರಾಣಿಗಳು ಸಾಯಲ್ಲ”’” ಅಂದನು.+ 5 ಅಷ್ಟೇ ಅಲ್ಲ ಆ ದೊಡ್ಡ ಕಾಯಿಲೆ ತರೋಕೆ ಯೆಹೋವ ಸಮಯ ನಿರ್ಧರಿಸಿದನು. ಹಾಗಾಗಿ “ಯೆಹೋವನಾದ ನಾನು ಇದನ್ನ ನಾಳೆನೇ ಈ ದೇಶದಲ್ಲಿ ಮಾಡ್ತೀನಿ” ಅಂದನು.
6 ಯೆಹೋವ ಮಾರನೆ ದಿನಾನೇ ಆ ಕಾಯಿಲೆ ತಂದನು. ಈಜಿಪ್ಟಿನ ಎಲ್ಲ ಪ್ರಾಣಿಗಳು ಸತ್ತೋಯ್ತು.+ ಆದ್ರೆ ಇಸ್ರಾಯೇಲ್ಯರ ಪ್ರಾಣಿಗಳಲ್ಲಿ ಒಂದೇ ಒಂದು ಪ್ರಾಣಿನೂ ಸಾಯಲಿಲ್ಲ. 7 ಫರೋಹ ತನ್ನ ಸೇವಕರನ್ನ ಕಳಿಸಿ ವಿಚಾರಿಸಿದಾಗ ಇಸ್ರಾಯೇಲ್ಯರ ಒಂದು ಪ್ರಾಣಿ ಕೂಡ ಸಾಯಲಿಲ್ಲ ಅಂತ ಗೊತ್ತಾಯ್ತು. ಹಾಗಿದ್ರೂ ಫರೋಹ* ಸ್ವಲ್ಪನೂ ಬದಲಾಗಲಿಲ್ಲ, ಇಸ್ರಾಯೇಲ್ಯರನ್ನ ಬಿಡಲಿಲ್ಲ.+
8 ಆಮೇಲೆ ಯೆಹೋವ ಮೋಶೆ ಆರೋನರಿಗೆ “ನೀವು ಇಟ್ಟಿಗೆ ಗೂಡಿನ ಹೊಗೆಮಸಿಯನ್ನ ಎರಡು ಕೈತುಂಬ ತಗೊಳಿ. ಮೋಶೆ ಅದನ್ನ ಫರೋಹನ ಕಣ್ಣ ಮುಂದೆ ಗಾಳಿಗೆ ತೂರಬೇಕು. 9 ಆಗ ಅದು ತುಂಬಾ ಹೆಚ್ಚಿ ಧೂಳಾಗಿ ಈಜಿಪ್ಟಲ್ಲೆಲ್ಲ ಹರಡ್ಕೊಳ್ಳುತ್ತೆ. ಆ ಧೂಳು ಈಜಿಪ್ಟಿನ ಜನ್ರ ಮೇಲೆ, ಪ್ರಾಣಿಗಳ ಮೇಲೆ ಬಿದ್ದು ಕೀವುಗಟ್ಟಿದ ಹುಣ್ಣುಗಳಾಗುತ್ತೆ” ಅಂದನು.
10 ಆಗ ಅವರು ಇಟ್ಟಿಗೆ ಗೂಡಿನ ಹೊಗೆಮಸಿ ತಗೊಂಡು ಫರೋಹನ ಮುಂದೆ ನಿಂತ್ರು. ಆಮೇಲೆ ಮೋಶೆ ಅದನ್ನ ಗಾಳಿಗೆ ತೂರಿದ. ಅದು ಜನ್ರ ಮೇಲೆ, ಪ್ರಾಣಿಗಳ ಮೇಲೆ ಬಿದ್ದು ಕೀವುಗಟ್ಟಿದ ಹುಣ್ಣುಗಳಾಯ್ತು. 11 ಈಜಿಪ್ಟಿನ ಎಲ್ಲ ಜನ್ರ ಮೈಮೇಲೆ, ಮಂತ್ರವಾದಿಗಳ ಮೈಮೇಲೆ ಹುಣ್ಣುಗಳಾಯ್ತು. ಹಾಗಾಗಿ ಆ ಮಂತ್ರವಾದಿಗಳಿಗೆ ಮೋಶೆ ಮುಂದೆ ನಿಲ್ಲೋಕೆ ಆಗಲಿಲ್ಲ.+ 12 ಇಷ್ಟೆಲ್ಲ ಆದ್ರೂ ಫರೋಹ ಹೃದಯ ಕಲ್ಲು ಮಾಡ್ಕೊಂಡ. ಅವನು ಹಾಗೇ ಇರೋ ತರ ಯೆಹೋವ ಬಿಟ್ಟನು. ಈ ಮುಂಚೆ ಯೆಹೋವ ಮೋಶೆಗೆ ಹೇಳಿದ್ದ ಹಾಗೇ ಫರೋಹ ಅವರ ಮಾತು ಕೇಳಲಿಲ್ಲ.+
13 ಆಮೇಲೆ ಯೆಹೋವ ಮೋಶೆಗೆ “ನೀನು ಬೆಳಿಗ್ಗೆ ಬೇಗ ಫರೋಹನ ಮುಂದೆ ನಿಂತು ಹೀಗೆ ಹೇಳು ‘ಇಬ್ರಿಯರ ದೇವರಾದ ಯೆಹೋವ ನಿನಗೆ ಹೀಗೆ ಹೇಳಿದ್ದಾನೆ: “ನನ್ನ ಜನ್ರು ನನ್ನ ಆರಾಧನೆ ಮಾಡಬೇಕು, ಅವರನ್ನ ಕಳಿಸು. 14 ಇಲ್ಲದಿದ್ರೆ ನಾನು ಎಲ್ಲ ಬಾಧೆಗಳಿಂದ ನಿನ್ನನ್ನ, ನಿನ್ನ ಸೇವಕರನ್ನ, ನಿನ್ನ ಜನ್ರನ್ನ ಹೊಡಿತೀನಿ. ಆಗ ಇಡೀ ಭೂಮೀಲಿ ನನ್ನ ಹಾಗೆ ಬೇರೆ ಯಾವ ದೇವರೂ ಇಲ್ಲ ಅಂತ ನಿನಗೆ ಗೊತ್ತಾಗುತ್ತೆ.+ 15 ಇಷ್ಟರೊಳಗೆ ನಾನು ಕೈಚಾಚಿ ನಿನಗೆ, ನಿನ್ನ ಜನ್ರಿಗೆ ಒಂದು ದೊಡ್ಡ ಕಾಯಿಲೆ ಬರೋ ಹಾಗೆ ಮಾಡಬಹುದಿತ್ತು. ಹಾಗೆ ಮಾಡಿದ್ರೆ ನೀನು ನಾಶವಾಗಿ ಭೂಮಿ ಮೇಲಿಂದ ನಾಪತ್ತೆ ಆಗಿಹೋಗ್ತಿದ್ದೆ. 16 ಆದ್ರೆ ನಿನಗೆ ನನ್ನ ಶಕ್ತಿ ತೋರಿಸಬೇಕು, ಇಡೀ ಭೂಮೀಲಿ ನನ್ನ ಹೆಸರನ್ನ ತಿಳಿಸಬೇಕು ಅಂತಾನೇ ನಿನ್ನನ್ನ ಇನ್ನೂ ಜೀವಂತ ಬಿಟ್ಟಿದ್ದೀನಿ.+ 17 ನೀನು ನನ್ನ ಜನ್ರನ್ನ ಹೋಗೋಕೆ ಬಿಡದೆ ಇನ್ನೂ ಅಹಂಕಾರದಿಂದ ನಡ್ಕೊಳ್ತಾ ಇದ್ದೀಯಾ? 18 ನೋಡು, ನಾಳೆ ಇಷ್ಟು ಹೊತ್ತಿಗೆ ತುಂಬ ಆಲಿಕಲ್ಲು ಬೀಳೋ ಹಾಗೆ ಮಾಡ್ತೀನಿ. ಅಂಥ ಆಲಿಕಲ್ಲು ಈಜಿಪ್ಟ್ ದೇಶದಲ್ಲಿ ಯಾವತ್ತೂ ಬಿದ್ದಿಲ್ಲ. 19 ಹಾಗಾಗಿ ಬಯಲಲ್ಲಿರೋ ನಿನ್ನ ಎಲ್ಲ ಪ್ರಾಣಿಗಳನ್ನ, ಸೊತ್ತುಗಳನ್ನ ಒಳಗೆ ತರೋಕೆ ಹೇಳು. ನಿನ್ನ ಎಲ್ಲ ಸೇವಕರಿಗೆ ಸಹ ಒಳಗೆ ಬರೋಕೆ ಹೇಳು. ಇಲ್ಲಾಂದ್ರೆ ಆಲಿಕಲ್ಲು ಬಿದ್ದು ಜನ್ರು ಸಾಯ್ತಾರೆ, ಪ್ರಾಣಿಗಳೂ ಸತ್ತುಹೋಗುತ್ತೆ”’” ಅಂದನು.
20 ಫರೋಹನ ಸೇವಕರಲ್ಲಿ ಯಾರೆಲ್ಲ ಯೆಹೋವನ ಮಾತು ಕೇಳಿ ಭಯಪಟ್ರೋ ಅವರೆಲ್ಲ ಬೇಗಬೇಗ ತಮ್ಮ ಸೇವಕರನ್ನ, ಪ್ರಾಣಿಗಳನ್ನ ಮನೆ ಒಳಗೆ ಕರ್ಕೊಂಡು ಬಂದ್ರು. 21 ಆದ್ರೆ ಯಾರೆಲ್ಲ ಯೆಹೋವನ ಮಾತು ಕೇಳಲಿಲ್ವೋ ಅವರೆಲ್ಲ ತಮ್ಮ ಸೇವಕರನ್ನ, ಪ್ರಾಣಿಗಳನ್ನ ಬಯಲಲ್ಲೇ ಬಿಟ್ರು.
22 ಆಮೇಲೆ ಯೆಹೋವ ಮೋಶೆಗೆ “ಆಕಾಶದ ಕಡೆ ನಿನ್ನ ಕೈ ಎತ್ತು. ಆಗ ಜನ್ರ ಮೇಲೆ, ಪ್ರಾಣಿಗಳ ಮೇಲೆ, ಬಯಲಲ್ಲಿರೋ ಎಲ್ಲ ಗಿಡಗಳ ಮೇಲೆ,+ ಹೀಗೆ ಇಡೀ ಈಜಿಪ್ಟ್ ದೇಶದ ಮೇಲೆ ಆಲಿಕಲ್ಲು+ ಬೀಳುತ್ತೆ” ಅಂದನು. 23 ಆಗ ಮೋಶೆ ಆಕಾಶದ ಕಡೆ ಕೋಲು ಎತ್ತಿದಾಗ ಗುಡುಗು, ಆಲಿಕಲ್ಲು, ಬೆಂಕಿ* ಬೀಳೋ ತರ ಯೆಹೋವ ಮಾಡಿದನು. ಈಜಿಪ್ಟ್ ದೇಶದ ಮೇಲೆ ಆಲಿಕಲ್ಲು ಬೀಳ್ತಾ ಇರೋ ಹಾಗೆ ಯೆಹೋವ ಮಾಡಿದನು. 24 ಆಲಿಕಲ್ಲು ತುಂಬ ಜೋರಾಗಿ ಬೀಳ್ತಿತ್ತು, ಅದ್ರ ಜೊತೆ ಬೆಂಕಿನೂ ಬೀಳ್ತಿತ್ತು. ಈಜಿಪ್ಟಿನ ಇತಿಹಾಸದಲ್ಲೇ ಯಾವತ್ತೂ ಈ ತರ ಆಲಿಕಲ್ಲು ಬಿದ್ದಿರಲಿಲ್ಲ.+ 25 ಆಲಿಕಲ್ಲಿಂದ ಇಡೀ ಈಜಿಪ್ಟ್ ದೇಶದಲ್ಲಿ ಬಯಲಲ್ಲಿದ್ದ ಎಲ್ಲ ನಾಶ ಆಯ್ತು. ಜನ್ರು ಪ್ರಾಣ ಕಳ್ಕೊಂಡ್ರು, ಪ್ರಾಣಿಗಳೂ ಸತ್ತೋಯ್ತು. ಎಲ್ಲ ಗಿಡ, ಮರ ನಾಶ ಆಯ್ತು.+ 26 ಆದ್ರೆ ಇಸ್ರಾಯೇಲ್ಯರು ಇದ್ದ ಗೋಷೆನ್ನಲ್ಲಿ ಮಾತ್ರ ಆಲಿಕಲ್ಲು ಬೀಳಲಿಲ್ಲ.+
27 ಆಗ ಫರೋಹ ಮೋಶೆ ಆರೋನರನ್ನ ಕರೆಸಿ “ನಾನು ಪಾಪ ಮಾಡಿದ್ದೀನಿ ಅಂತ ಈಗ ಅರ್ಥ ಆಯ್ತು. ಯೆಹೋವ ಮಾಡೋದೆಲ್ಲ ಸರಿನೇ.* ನಾನು, ನನ್ನ ಜನ್ರು ಮಾಡಿದ್ದು ತಪ್ಪು. 28 ಗುಡುಗು, ಸಿಡಿಲು, ಆಲಿಕಲ್ಲು ಬೀಳೋದನ್ನ ನಿಲ್ಲಿಸೋಕೆ ಯೆಹೋವನ ಹತ್ರ ಬೇಡಿ. ಆಗ ನಿಮ್ಮನ್ನ ಇಲ್ಲಿಂದ ಕಳಿಸ್ತೀನಿ, ಇನ್ನು ಮುಂದೆ ತಡಿಯಲ್ಲ” ಅಂದ. 29 ಅದಕ್ಕೆ ಮೋಶೆ “ನಾನು ಪಟ್ಟಣದಿಂದ ಹೊರಗೆ ಹೋದ ತಕ್ಷಣ ನನ್ನ ಕೈಗಳನ್ನ ಎತ್ತಿ ಯೆಹೋವನಿಗೆ ಪ್ರಾರ್ಥಿಸ್ತೀನಿ. ಆಗ ಗುಡುಗು, ಆಲಿಕಲ್ಲು ನಿಂತುಹೋಗುತ್ತೆ. ಇದ್ರಿಂದ ಯೆಹೋವನೇ ಇಡೀ ಭೂಮಿಗೆ ಒಡೆಯ ಅಂತ ನಿನಗೆ ಗೊತ್ತಾಗುತ್ತೆ.+ 30 ಆದ್ರೆ ಆಮೇಲೆ ನೀನು, ನಿನ್ನ ಸೇವಕರು ಯೆಹೋವ ದೇವರಿಗೆ ಭಯಪಡಲ್ಲ ಅಂತ ನಂಗೊತ್ತು” ಅಂದ.
31 ಆಲಿಕಲ್ಲು ಬೀಳೋ ಮುಂಚೆನೇ ಬಾರ್ಲಿ* ಕೊಯ್ಲಿಗೆ ಸಿದ್ಧವಾಗಿತ್ತು, ಅಗಸೆ ಗಿಡಗಳು ಮೊಗ್ಗು ಬಿಟ್ಟಿತ್ತು. ಹಾಗಾಗಿ ಆಲಿಕಲ್ಲು ಬಿದ್ದಾಗ ಆ ಎರಡೂ ಬೆಳೆಗಳು ನಾಶ ಆಯ್ತು. 32 ಆದ್ರೆ ಗೋದಿಗಳಲ್ಲಿ,* ಪೈರುಗಳಲ್ಲಿ ತೆನೆ ಬರೋಕೆ* ಇನ್ನೂ ತುಂಬ ದಿನ ಇತ್ತು. ಹಾಗಾಗಿ ಗೋದಿ ನಾಶ ಆಗಲಿಲ್ಲ. 33 ಮೋಶೆ ಫರೋಹನ ಹತ್ರದಿಂದ ಹೋಗಿ ಪಟ್ಟಣದ ಹೊರಗೆ ತನ್ನ ಕೈಗಳನ್ನ ಎತ್ತಿ ಯೆಹೋವನಿಗೆ ಪ್ರಾರ್ಥಿಸಿದ. ಆಗ ಗುಡುಗು, ಆಲಿಕಲ್ಲು, ಮಳೆ ನಿಂತುಹೋಯ್ತು.+ 34 ಅವೆಲ್ಲ ನಿಂತಿದ್ದನ್ನ ನೋಡಿ ಫರೋಹ ಹೃದಯ ಕಲ್ಲು ಮಾಡ್ಕೊಂಡ.+ ಹೀಗೆ ಅವನು ಮತ್ತೆ ಪಾಪಮಾಡಿದ. ಅವನ ಸೇವಕರು ಸಹ ಅದೇ ತರ ಪಾಪ ಮಾಡಿದ್ರು. 35 ಯೆಹೋವ ಈ ಮುಂಚೆ ಮೋಶೆ ಮೂಲಕ ಹೇಳಿದ ಹಾಗೆ ಫರೋಹನ ಹೃದಯ ಕಲ್ಲಾಗೇ ಇತ್ತು. ಅವನು ಇಸ್ರಾಯೇಲ್ಯರನ್ನ ಕಳಿಸಲಿಲ್ಲ.+