ಎರಡನೇ ಸಮುವೇಲ
13 ದಾವೀದನ ಮಗ ಅಬ್ಷಾಲೋಮನಿಗೆ ಒಬ್ಬ ತಂಗಿ ಇದ್ದಳು. ಅವಳು ನೋಡೋಕೆ ತುಂಬ ಚೆನ್ನಾಗಿ ಇದ್ದಳು, ಹೆಸ್ರು ತಾಮಾರ.+ ದಾವೀದನ ಮಗ ಅಮ್ನೋನನಿಗೆ+ ಅವಳ ಮೇಲೆ ಪ್ರೀತಿ ಬಂತು. 2 ತಾಮಾರ ಕನ್ಯೆ ಆಗಿದ್ರಿಂದ ಅವಳ ಕಡೆಗಿದ್ದ ತನ್ನ ಆಸೆ ತೀರಿಸ್ಕೊಳ್ಳೋಕೆ ಅಮ್ನೋನನಿಗೆ ಆಗ್ತಾ ಇರ್ಲಿಲ್ಲ. ಹಾಗಾಗಿ ಅವಳ ಚಿಂತೆಯಲ್ಲೇ ಅಮ್ನೋನ ಅಸ್ವಸ್ಥನಾದ. 3 ಅಮ್ನೋನನಿಗೆ ಒಬ್ಬ ಸ್ನೇಹಿತ ಇದ್ದ. ಅವನ ಹೆಸ್ರು ಯೆಹೋನಾದಾಬ.+ ಅವನು ದಾವೀದನ ಸಹೋದರನಾದ ಶಿಮಾಹನ+ ಮಗ. ಯೆಹೋನಾದಾಬ ತುಂಬ ಚಾಣಾಕ್ಷ. 4 ಅವನು ಅಮ್ನೋನನಿಗೆ “ರಾಜನ ಮಗನೇ, ನೀನ್ಯಾಕೆ ಪ್ರತಿ ಬೆಳಿಗ್ಗೆ ಮಂಕಾಗಿ ಇರ್ತಿಯಾ? ಕಾರಣ ಏನಂತ ನನಗೆ ಹೇಳಬಹುದಲ್ಲಾ?” ಅಂದ. ಆಗ ಅಮ್ನೋನ “ಅಬ್ಷಾಲೋಮನ ತಂಗಿಯಾದ ತಾಮಾರಳನ್ನ ನಾನು ಪ್ರೀತಿಸ್ತಾ ಇದ್ದೀನಿ”+ ಅಂದ. 5 ಆಗ ಯೆಹೋನಾದಾಬ “ನೀನು ಹಾಸಿಗೆ ಮೇಲೆ ಮಲಗಿಕೊಂಡು ಹುಷಾರಿಲ್ಲದ ತರ ನಾಟಕ ಮಾಡು. ಅಪ್ಪ ನಿನ್ನನ್ನ ನೋಡೋಕೆ ಬಂದಾಗ ‘ದಯವಿಟ್ಟು ನನ್ನ ತಂಗಿ ತಾಮಾರ ಬಂದು ನನಗೆ ಸ್ವಲ್ಪ ಊಟ ಬಡಿಸ್ಲಿ. ಹುಷಾರಿಲ್ಲದವ್ರಿಗೆ ಕೊಡೋ ಆಹಾರವನ್ನ* ಅವಳು ನನ್ನ ಕಣ್ಣು ಮುಂದೆನೇ ತಯಾರಿಸಿ ಕೊಟ್ರೆ ನಾನು ಅವಳ ಕೈಯಿಂದ ತಿಂತೀನಿ’ ಅಂತ ಹೇಳು” ಅಂದ.
6 ಹಾಗಾಗಿ ಅಮ್ನೋನ ಮಲಗಿಕೊಂಡು ಹುಷಾರು ಇಲ್ಲದವನ ತರ ನಾಟಕ ಮಾಡಿದ. ರಾಜ ಅವನನ್ನ ನೋಡೋಕೆ ಬಂದಾಗ ಅಮ್ನೋನ ರಾಜನಿಗೆ “ದಯವಿಟ್ಟು, ನನ್ನ ತಂಗಿಯಾದ ತಾಮಾರ ಬಂದು ಹೃದಯಾಕಾರದ ಎರಡು ಬಿಲ್ಲೆಗಳನ್ನ ನನ್ನ ಕಣ್ಮುಂದೆನೇ ಮಾಡ್ಕೊಡ್ಲಿ. ಆಗ ನಾನು ಅವಳ ಕೈಯಿಂದ ಊಟ ಮಾಡ್ತೀನಿ” ಅಂದ. 7 ಆಗ ದಾವೀದ ಮನೆಯಲ್ಲಿದ್ದ ತಾಮಾರಳಿಗೆ ಒಂದು ಸಂದೇಶ ಕಳಿಸಿದ. ಅದೇನಂದ್ರೆ: “ನಿನ್ನ ಸಹೋದರನಾದ ಅಮ್ನೋನನ ಮನೆಗೆ ಹೋಗು, ಅವನಿಗಾಗಿ ಊಟ ತಯಾರಿ ಮಾಡು.” 8 ಆಗ ತಾಮಾರ ತನ್ನ ಸಹೋದರನಾದ ಅಮ್ನೋನನ ಮನೆಗೆ ಹೋದಳು. ಅಲ್ಲಿ ಅವನು ಮಲಗಿದ್ದ. ಅವಳು ಅವನ ಕಣ್ಮುಂದೆನೇ ಹಿಟ್ಟು ನಾದಿ, ಅದ್ರಿಂದ ಬಿಲ್ಲೆಗಳನ್ನ ಮಾಡಿ ಬೇಯಿಸಿದಳು. 9 ಆಮೇಲೆ ಅದನ್ನ ತಗೊಂಡು ಅವನಿಗೆ ಬಡಿಸಿದಳು. ಆದ್ರೆ ಅಮ್ನೋನ ಅದನ್ನ ತಿನ್ನೋಕೆ ಒಪ್ಪದೆ “ಎಲ್ರೂ ಇಲ್ಲಿಂದ ಹೋಗಲಿ!” ಅಂದ. ಹಾಗಾಗಿ ಎಲ್ರೂ ಅವನನ್ನ ಬಿಟ್ಟು ಅಲ್ಲಿಂದ ಹೋದ್ರು.
10 ಅಮ್ನೋನ ತಾಮಾರಗೆ “ಊಟ ತಗೊಂಡು ಮಲಗೋ ಕೋಣೆಗೆ ಬಾ. ನಾನು ಅದನ್ನ ನಿನ್ನ ಕೈಯಿಂದ ತಿನ್ನಬೇಕು” ಅಂದ. ಆಗ ತಾಮಾರ ತಾನು ಮಾಡಿದ ಹೃದಯಾಕಾರದ ಬಿಲ್ಲೆಗಳನ್ನ ತಗೊಂಡು ಅಮ್ನೋನ ಮಲಗಿದ್ದ ಕೋಣೆಗೆ ಹೋದಳು. 11 ಅವಳು ಅವನಿಗಾಗಿ ಊಟ ತಂದಾಗ ಅವಳನ್ನ ಹಿಡಿದು “ನನ್ನ ತಂಗಿ, ಬಾ ನನ್ನ ಜೊತೆ ಮಲಗು” ಅಂದ. 12 ಆದ್ರೆ ತಾಮಾರ “ಬೇಡ ಅಣ್ಣ! ನನ್ನನ್ನ ಕೆಡಿಸಬೇಡ. ಇಸ್ರಾಯೇಲಲ್ಲಿ ಇಂಥ ವಿಷ್ಯ ಇಲ್ಲಿ ತನಕ ನಡೆದಿಲ್ಲ.+ ಇಂಥ ನಾಚಿಕೆಗೆಟ್ಟ ಕೆಲಸ ಮಾಡಬೇಡ.+ 13 ಈ ಅವಮಾನ ಸಹಿಸ್ಕೊಂಡು ನಾನು ಹೇಗೆ ತಾನೇ ಬದುಕ್ಲಿ? ಜನ್ರು ನಿನ್ನನ್ನ ನೀಚ ಅಂತಾರೆ. ನನ್ನನ್ನ ನಿನಗೆ ಕೊಡು ಅಂತ ದಯವಿಟ್ಟು ರಾಜನನ್ನ ಕೇಳು. ಅವನು ಇಲ್ಲ ಅನ್ನಲ್ಲ” ಅಂದಳು. 14 ಆದ್ರೆ ಅವಳ ಮಾತು ಕೇಳದೆ ಬಲವಂತದಿಂದ ಅವಳನ್ನ ಕೆಡಿಸಿದ. 15 ಆಮೇಲೆ ಅಮ್ನೋನ ಅವಳನ್ನ ತುಂಬಾ ದ್ವೇಷಿಸೋಕೆ ಶುರು ಮಾಡಿದ. ಅವಳ ಮೇಲೆ ಪ್ರೀತಿಗಿಂತ ದ್ವೇಷ ಹೆಚ್ಚಾಯ್ತು. ಹಾಗಾಗಿ ಅವನು ಅವಳಿಗೆ “ಎದ್ದು ಹೋಗು!” ಅಂದ. 16 ಅದಕ್ಕೆ ತಾಮಾರ “ಬೇಡ ಅಣ್ಣ! ನೀನು ನನಗೆ ಮೊದ್ಲು ಮಾಡಿದ್ದಕ್ಕಿಂತ ಈಗ ಮಾಡ್ತಿರೋದು ಇನ್ನೂ ಕೆಟ್ಟದು” ಅಂದಳು. ಆದ್ರೆ ಅವನು ಅವಳ ಮಾತು ಕೇಳಲಿಲ್ಲ.
17 ಅವನು ತನ್ನ ಯುವ ಸೇವಕನನ್ನ ಕರೆದು “ದಯವಿಟ್ಟು, ಈ ಸ್ತ್ರೀಯನ್ನ ಇಲ್ಲಿಂದ ಕರ್ಕೊಂಡು ಹೋಗು. ಇವಳನ್ನ ಹೊರಗೆ ಹಾಕಿ ಬಾಗಿಲು ಮುಚ್ಚು” ಅಂದ. 18 (ಅವಳು ವಿಶೇಷವಾದ* ನಿಲುವಂಗಿ ಹಾಕೊಂಡಿದ್ದಳು. ರಾಜನ ಹೆಣ್ಣು ಮಕ್ಕಳು ಕನ್ಯೆಯರಾಗಿದ್ರೆ ಈ ರೀತಿಯ ನಿಲುವಂಗಿ ಹಾಕ್ತಿದ್ರು.) ಆಗ ಅವನ ಸೇವಕ ತಾಮಾರಳನ್ನ ಹೊರಗೆ ಕರ್ಕೊಂಡು ಹೋಗಿ ಬಾಗಿಲು ಮುಚ್ಚಿದ. 19 ತಾಮಾರ ತನ್ನ ತಲೆ ಮೇಲೆ ಬೂದಿ ಹಾಕೊಂಡಳು.+ ತಾನು ಹಾಕಿದ್ದ ಉತ್ತಮ ನಿಲುವಂಗಿ ಹರಿದ್ಕೊಂಡಳು. ತಲೆ ಮೇಲೆ ಕೈ ಇಟ್ಕೊಂಡು ಅಳ್ತಾ ಅಲ್ಲಿಂದ ಹೋದಳು.
20 ಅವಳ ಸಹೋದರ ಅಬ್ಷಾಲೋಮ+ ಅವಳನ್ನ ನೋಡಿ “ಬಲವಂತವಾಗಿ ನಿನ್ನ ಜೊತೆ ಮಲಗಿದವನು ನಿನ್ನ ಅಣ್ಣನಾದ ಅಮ್ನೋನನಾ? ತಂಗಿ, ಈಗ ಸುಮ್ನಿರು. ಅವನು ನಿನ್ನ ಅಣ್ಣ+ ಅಲ್ವಾ? ಈ ವಿಷ್ಯವನ್ನ ಮನಸ್ಸಿಗೆ ಹಚ್ಕೊಬೇಡ” ಅಂದ. ಆಮೇಲೆ ತಾಮಾರ ತನ್ನ ಅಣ್ಣನಾದ ಅಬ್ಷಾಲೋಮನ ಮನೆಯಲ್ಲಿ ಏಕಾಂಗಿಯಾಗಿ ವಾಸಿಸಿದಳು. 21 ಈ ಎಲ್ಲ ವಿಷ್ಯಗಳು ರಾಜ ದಾವೀದನ ಕಿವಿಗೆ ಬಿದ್ದಾಗ ಅವನಿಗೆ ತುಂಬ ಕೋಪ ಬಂತು.+ ಆದ್ರೆ ಅವನು ಅಮ್ನೋನನ ಮನಸ್ಸಿಗೆ ನೋವು ಮಾಡೋಕೆ ಬಯಸಲಿಲ್ಲ. ಯಾಕಂದ್ರೆ ಅಮ್ನೋನ ದಾವೀದನ ಮೊದಲ್ನೇ ಮಗನಾಗಿದ್ದ, ಅವನನ್ನ ತುಂಬ ಪ್ರೀತಿಸ್ತಿದ್ದ. 22 ಅಬ್ಷಾಲೋಮ ಅಮ್ನೋನನಿಗೆ ಕೆಟ್ಟದು ಒಳ್ಳೇದು ಏನೂ ಹೇಳಲಿಲ್ಲ. ಅಮ್ನೋನ ತಾಮಾರಳನ್ನ ಕೆಡಿಸಿದ್ರಿಂದ+ ಅಬ್ಷಾಲೋಮ ಅವನ ಮೇಲೆ ದ್ವೇಷ ಬೆಳೆಸ್ಕೊಂಡ.+
23 ಎರಡು ವರ್ಷ ಆದ್ಮೇಲೆ ಅಬ್ಷಾಲೋಮನ ಕುರಿಕಾಯುವವರು ಎಫ್ರಾಯೀಮಿನ+ ಹತ್ರ ಇದ್ದ ಬಾಳ್-ಹಾಚೋರಿನಲ್ಲಿ ಉಣ್ಣೆ ಕತ್ತರಿಸ್ತಿದ್ರು. ಅಬ್ಷಾಲೋಮ ರಾಜನ ಎಲ್ಲ ಗಂಡು ಮಕ್ಕಳನ್ನ ಔತಣಕ್ಕೆ ಕರೆದ.+ 24 ಹಾಗಾಗಿ ಅಬ್ಷಾಲೋಮ ರಾಜನ ಹತ್ರ ಹೋಗಿ “ನಿನ್ನ ಸೇವಕ ತನ್ನ ಕುರಿಗಳ ಉಣ್ಣೆ ಕತ್ತರಿಸ್ತಾ ಇದ್ದಾನೆ. ದಯವಿಟ್ಟು ರಾಜ, ಅವನ ಸೇವಕರು ನನ್ನ ಜೊತೆ ಬರಲಿ” ಅಂದ. 25 ಆದ್ರೆ ಅಬ್ಷಾಲೋಮನಿಗೆ “ಬೇಡ ನನ್ನ ಮಗನೇ. ನಾವೆಲ್ರೂ ಬಂದ್ರೆ ನಿನಗೆ ಭಾರ ಆಗುತ್ತೆ” ಅಂದ ರಾಜ. ಅಬ್ಷಾಲೋಮ ಎಷ್ಟು ಒತ್ತಾಯ ಮಾಡಿದ್ರೂ ದಾವೀದ ಒಪ್ಕೊಳ್ಳಲಿಲ್ಲ. ಆದ್ರೆ ಅವನನ್ನ ಆಶೀರ್ವದಿಸಿದ. 26 ಆಮೇಲೆ ಅಬ್ಷಾಲೋಮ “ನೀನು ಬರದಿದ್ರೆ, ದಯವಿಟ್ಟು ನನ್ನ ಸಹೋದರ ಅಮ್ನೋನನ್ನ ನಮ್ಮ ಜೊತೆ ಕಳಿಸು”+ ಅಂದ. ಅದಕ್ಕೆ ರಾಜ “ಅವನು ಯಾಕೆ ನಿನ್ನ ಜೊತೆ ಬರಬೇಕು?” ಅಂತ ಕೇಳಿದ. 27 ಆದ್ರೆ ಅಬ್ಷಾಲೋಮ ಒತ್ತಾಯ ಮಾಡಿದ್ರಿಂದ ದಾವೀದ ಅಮ್ನೋನನ್ನ, ರಾಜನ ಎಲ್ಲ ಗಂಡು ಮಕ್ಕಳನ್ನ ಅವನ ಜೊತೆ ಕಳಿಸ್ಕೊಟ್ಟ.
28 ಅಬ್ಷಾಲೋಮ ತನ್ನ ಸೇವಕರಿಗೆ “ಗಮನಿಸ್ತಾ ಇರಿ, ಅಮ್ನೋನ ದ್ರಾಕ್ಷಾಮದ್ಯ ಕುಡಿದು ಮತ್ತನಾದಾಗ ನಾನು ನಿಮಗೆ ‘ಅಮ್ನೋನನ್ನ ಸಾಯಿಸಿ!’ ಅಂತ ಹೇಳ್ತೀನಿ. ಆಗ ನೀವು ಅವನನ್ನ ಸಾಯಿಸಬೇಕು. ನಿಮಗೆ ಈ ಆಜ್ಞೆ ಕೊಡ್ತಿರೋದು ನಾನು, ಹೆದರಬೇಡಿ. ಧೈರ್ಯವಾಗಿರಿ” ಅಂದ. 29 ಹಾಗಾಗಿ ಅಬ್ಷಾಲೋಮನ ಸೇವಕರು ಅವನು ಹೇಳಿದ ಹಾಗೇ ಅಮ್ನೋನನಿಗೆ ಮಾಡಿದ್ರು. ಆಮೇಲೆ ರಾಜನ ಬೇರೆ ಗಂಡು ಮಕ್ಕಳೆಲ್ಲ ತಮ್ಮತಮ್ಮ ಹೇಸರಗತ್ತೆಗಳನ್ನ ಹತ್ತಿ ಓಡಿಹೋದ್ರು. 30 ಅವರು ಇನ್ನೂ ದಾರಿಯಲ್ಲಿರುವಾಗ ದಾವೀದನಿಗೆ “ಅಬ್ಷಾಲೋಮ ರಾಜನ ಎಲ್ಲ ಗಂಡು ಮಕ್ಕಳನ್ನ ಸಾಯಿಸಿದ, ಅವ್ರಲ್ಲಿ ಒಬ್ಬನೂ ಉಳಿದಿಲ್ಲ” ಅಂತ ಸುದ್ದಿ ಸಿಕ್ತು. 31 ಅದಕ್ಕೆ ರಾಜ ಬಟ್ಟೆಗಳನ್ನ ಹರ್ಕೊಂಡು ನೆಲಕ್ಕೆ ಬಿದ್ದ. ಅಲ್ಲಿ ನಿಂತಿದ್ದ ಅವನ ಎಲ್ಲ ಸೇವಕರು ಸಹ ತಮ್ಮತಮ್ಮ ಬಟ್ಟೆಗಳನ್ನ ಹರ್ಕೊಂಡ್ರು.
32 ಆದ್ರೆ ದಾವೀದನ ಸಹೋದರನಾದ ಶಿಮಾಹನ+ ಮಗ ಯೆಹೋನಾದಾಬ+ “ರಾಜನ ಎಲ್ಲ ಗಂಡು ಮಕ್ಕಳನ್ನ ಅವರು ಸಾಯಿಸಿದಕ್ಕೆ ನನ್ನ ಒಡೆಯ ಚಿಂತೆ ಮಾಡಬೇಡ. ಯಾಕಂದ್ರೆ ಅಮ್ನೋನ ಮಾತ್ರ ಸತ್ತುಹೋದ.+ ಕೊಲ್ಲಿಸಿದವನು ಅಬ್ಷಾಲೋಮ.+ ತನ್ನ ತಂಗಿಯಾದ+ ತಾಮಾರಳನ್ನ ಅಮ್ನೋನ ಕೆಡಿಸಿದ+ ದಿನಾನೇ ಹೀಗೆ ಮಾಡಬೇಕು ಅಂತ ಇದ್ದ. 33 ಹಾಗಾಗಿ ‘ರಾಜನ ಎಲ್ಲ ಗಂಡು ಮಕ್ಕಳು ತೀರಿ ಹೋದ್ರು’ ಅನ್ನೋ ಸುಳ್ಳು ಸುದ್ದಿನ ನನ್ನ ಒಡೆಯನಾದ ರಾಜ ನಂಬಬೇಡ. ಯಾಕಂದ್ರೆ ಅಮ್ನೋನ ಮಾತ್ರ ತೀರಿ ಹೋಗಿದ್ದಾನೆ” ಅಂದ.
34 ಅಷ್ಟರಲ್ಲಿ ಅಬ್ಷಾಲೋಮ ಓಡಿಹೋದ.+ ಆಮೇಲೆ ಕಾವಲುಗಾರ ತನ್ನ ಕಣ್ಣೆತ್ತಿ ನೋಡಿದಾಗ ಬೆಟ್ಟದ ಪಕ್ಕದ ದಾರಿಯಲ್ಲಿ ತುಂಬ ಜನ ಬರ್ತಿರೋದು ಕಾಣಿಸ್ತು. 35 ಅದಕ್ಕೆ ಯೆಹೋನಾದಾಬ+ ರಾಜನಿಗೆ “ನೋಡು! ನಿನ್ನ ಸೇವಕ ಹೇಳಿದ ಹಾಗೇ ರಾಜನ ಗಂಡು ಮಕ್ಕಳು ವಾಪಸ್ ಬರ್ತಿದ್ದಾರೆ” ಅಂದ. 36 ಅವನು ಮಾತಾಡೋದನ್ನ ಮುಗಿಸಿದಾಗ ರಾಜನ ಗಂಡು ಮಕ್ಕಳು ಜೋರಾಗಿ ಅಳ್ತಾ ಬಂದ್ರು. ಅವ್ರ ಜೊತೆ ರಾಜ, ಅವನ ಎಲ್ಲ ಸೇವಕರು ತುಂಬ ಗೋಳಾಡಿದ್ರು. 37 ಅಬ್ಷಾಲೋಮ ಗೆಷೂರಿನ ರಾಜನಾಗಿದ್ದ ಅಮ್ಮೀಹೂದನ ಮಗನಾದ ತಲ್ಮೈಯ+ ಹತ್ರ ಓಡಿಹೋದ. ದಾವೀದ ತನ್ನ ಮಗನ ಸಾವಿಗಾಗಿ ತುಂಬ ದಿನ ಗೋಳಾಡಿದ. 38 ಅಬ್ಷಾಲೋಮ ಗೆಷೂರಿಗೆ+ ಓಡಿಹೋದ ಮೇಲೆ ಮೂರು ವರ್ಷ ಅಲ್ಲೇ ಇದ್ದ.
39 ಕೊನೆಗೆ ರಾಜ ದಾವೀದ ಅಮ್ನೋನನ ಸಾವಿನ ದುಃಖದಿಂದ ಹೊರಗೆ ಬಂದ. ಈಗ ಅವನಿಗೆ ಅಬ್ಷಾಲೋಮನನ್ನ ನೋಡಬೇಕು ಅಂತ ಅನಿಸ್ತಿತ್ತು.