ಧರ್ಮೋಪದೇಶಕಾಂಡ
22 ನಿಮ್ಮ ಸಹೋದರನ ಹೋರಿ ಅಥವಾ ಕುರಿ ತಪ್ಪಿಸ್ಕೊಂಡು ಹೋಗ್ತಿರೋದು ನಿಮ್ಮ ಕಣ್ಣಿಗೆ ಬಿದ್ರೆ ಅದನ್ನ ನೋಡಿನೂ ನೋಡದ ಹಾಗೆ ಹೋಗಬಾರದು.+ ನೀವು ಅದನ್ನ ಹೊಡ್ಕೊಂಡು ಹೋಗಿ ನಿಮ್ಮ ಸಹೋದರನಿಗೆ ಕೊಡ್ಲೇಬೇಕು. 2 ನಿಮ್ಮ ಸಹೋದರ ತುಂಬ ದೂರದಲ್ಲಿದ್ರೆ ಅಥವಾ ಆ ಪ್ರಾಣಿ ಯಾರದು ಅಂತ ನಿಮಗೆ ಗೊತ್ತಿಲ್ಲಾಂದ್ರೆ ಅದನ್ನ ನಿಮ್ಮ ಮನೆಗೆ ಹೊಡ್ಕೊಂಡು ಹೋಗಿ ಇಟ್ಕೊಬೇಕು. ನಿಮ್ಮ ಸಹೋದರ ಅದನ್ನ ಹುಡ್ಕೊಂಡು ಬರೋ ತನಕ ಅದು ನಿಮ್ಮ ಮನೆಲೇ ಇರಬೇಕು. ಅವನು ಬಂದ್ಮೇಲೆ ಅದನ್ನ ವಾಪಾಸ್ ಕೊಡಬೇಕು.+ 3 ನಿಮ್ಮ ಸಹೋದರನ ಕತ್ತೆ, ಬಟ್ಟೆ ಅಥವಾ ಬೇರೆ ಏನೇ ವಸ್ತು ಕಳೆದುಹೋಗಿದ್ರೂ ನಿಮಗೆ ಅದು ಸಿಕ್ಕಿದಾಗ ನೋಡಿನೂ ನೋಡದ ಹಾಗೆ ಇರಬಾರದು. ಅವನಿಗೆ ಹಿಂದೆ ಕೊಡಬೇಕು.
4 ನಿಮ್ಮ ಸಹೋದರನ ಕತ್ತೆ ಅಥವಾ ಹೋರಿ ದಾರೀಲಿ ಬಿದ್ದಿರೋದಾದ್ರೆ ಅದನ್ನ ನೋಡಿನೂ ನೋಡದ ಹಾಗೆ ಹೋಗಬಾರದು. ಆ ಪ್ರಾಣಿನ ಎತ್ತೋಕೆ ಅವನಿಗೆ ಸಹಾಯ ಮಾಡ್ಲೇಬೇಕು.+
5 ಸ್ತ್ರೀ ಪುರುಷನ ಬಟ್ಟೆ ಹಾಕೊಳ್ಳಬಾರದು. ಪುರುಷ ಸ್ತ್ರೀಯ ಬಟ್ಟೆ ಹಾಕೊಳ್ಳಬಾರದು. ಹಾಗೆ ಹಾಕೊಳ್ಳೋರು ನಿಮ್ಮ ದೇವರಾದ ಯೆಹೋವನಿಗೆ ಅಸಹ್ಯ.
6 ನೀವು ದಾರಿಲಿ ಹೋಗುವಾಗ ಮರದ ಮೇಲೆ ಅಥವಾ ನೆಲದ ಮೇಲೆ ಒಂದು ಹಕ್ಕಿ ಗೂಡನ್ನ ನೋಡಿದ್ರೆ, ಅದ್ರೊಳಗೆ ತಾಯಿಹಕ್ಕಿ ಮರಿಗಳ ಮೇಲೆ ಅಥವಾ ಮೊಟ್ಟೆಗಳ ಮೇಲೆ ಕೂತಿದ್ರೆ ನೀವು ಆ ಮರಿಗಳ ಜೊತೆ ತಾಯಿ ಹಕ್ಕಿಯನ್ನೂ ತಗೊಬಾರದು.+ 7 ತಾಯಿ ಹಕ್ಕಿಯನ್ನ ಹಾರಿಹೋಗೋಕೆ ಬಿಟ್ಟು ಮರಿಗಳನ್ನ ಮಾತ್ರ ತಗೊಬಹುದು. ಹೀಗೆ ಮಾಡಿದ್ರೆ ನಿಮಗೆ ಒಳ್ಳೇದಾಗುತ್ತೆ, ಜಾಸ್ತಿ ವರ್ಷ ಬದುಕ್ತೀರ.
8 ನೀವು ಒಂದು ಹೊಸ ಮನೆ ಕಟ್ಟಿದ್ರೆ ಮನೆ ಮಾಳಿಗೆ* ಸುತ್ತ ಒಂದು ಸಣ್ಣ ಗೋಡೆ ಕಟ್ಟಬೇಕು.+ ಇಲ್ಲಾಂದ್ರೆ ಯಾರಾದ್ರೂ ನಿಮ್ಮ ಮನೆ ಮಾಳಿಗೆಯಿಂದ ಕೆಳಗೆ ಬೀಳಬಹುದು. ಆಗ ಆ ಕೊಲೆ ಅಪರಾಧ ನಿಮ್ಮ ಕುಟುಂಬದ ಮೇಲೆ ಬರುತ್ತೆ.
9 ನಿಮ್ಮ ದ್ರಾಕ್ಷಿತೋಟದಲ್ಲಿ ದ್ರಾಕ್ಷಿ ಜೊತೆ ಬೇರೆ ಯಾವ ಬೀಜವನ್ನೂ ಬಿತ್ತಬಾರದು.+ ಬಿತ್ತಿದ್ರೆ ಆ ಬೆಳೆಯನ್ನೂ ದ್ರಾಕ್ಷಿ ಬೆಳೆಯನ್ನೂ ಆರಾಧನಾ ಸ್ಥಳಕ್ಕೆ ಕೊಡಬೇಕಾಗುತ್ತೆ.
10 ಹೋರಿ ಮತ್ತೆ ಕತ್ತೆ ಎರಡನ್ನೂ ಒಂದೇ ನೇಗಿಲಿಗೆ ಕಟ್ಟಿ ಹೊಲ ಉಳಬಾರದು.+
11 ಉಣ್ಣೆ ಮತ್ತೆ ನಾರು ಎರಡನ್ನೂ ಸೇರಿಸಿ ಮಾಡಿರೋ ಬಟ್ಟೆ ಹಾಕೊಳ್ಳಬಾರದು.+
12 ಬಟ್ಟೆಯ ನಾಲ್ಕು ಮೂಲೆಗಳಲ್ಲಿ ಕುಚ್ಚುಗಳನ್ನ ಕಟ್ಟಬೇಕು.+
13 ಒಬ್ಬ ಪುರುಷ ಒಬ್ಬ ಸ್ತ್ರೀಯನ್ನ ಮದುವೆಯಾಗಿ ಲೈಂಗಿಕ ಸಂಬಂಧ ಇಟ್ಕೊಂಡ ಮೇಲೆ ಅವಳನ್ನ ದ್ವೇಷಿಸಿ* 14 ಅವಳ ನಡತೆ ಸರಿಯಿಲ್ಲ ಅಂತ ಹೇಳ್ತಾ ‘ನಾನು ಇವಳನ್ನ ಮದುವೆ ಆದೆ. ಆದ್ರೆ ಇವಳ ಜೊತೆ ಲೈಂಗಿಕ ಸಂಬಂಧ ಇಟ್ಕೊಂಡ ಮೇಲೆ ಇವಳು ಕನ್ಯೆ ಅಲ್ಲ ಅಂತ ಗೊತ್ತಾಯ್ತು’ ಅಂತ ಹೇಳಿ ಅವಳ ಹೆಸ್ರನ್ನ ಹಾಳು ಮಾಡಿದ್ರೆ 15 ಅವಳ ತಂದೆತಾಯಿ ಪಟ್ಟಣದ ಬಾಗಿಲ ಹತ್ರ ಇರೋ ಹಿರಿಯರ ಹತ್ರ ಹೋಗಿ ತಮ್ಮ ಮಗಳು ಕನ್ಯೆ ಆಗಿರೋದಕ್ಕೆ ಪುರಾವೆ ತೋರಿಸಬೇಕು. 16 ಅವಳ ತಂದೆ ಆ ಹಿರಿಯರಿಗೆ ‘ನನ್ನ ಮಗಳನ್ನ ಇವನಿಗೆ ಕೊಟ್ಟು ಮದುವೆ ಮಾಡ್ದೆ. ಆದ್ರೆ ಇವನು ಅವಳನ್ನ ದ್ವೇಷಿಸ್ತಿದ್ದಾನೆ.* 17 “ಇವಳು ಕನ್ಯೆ ಅಲ್ಲ ಅಂತ ಗೊತ್ತಾಯ್ತು” ಅಂತ ಹೇಳಿ ಅವಳ ನಡತೆ ಸರಿಯಿಲ್ಲ ಅಂತ ಆರೋಪ ಹಾಕ್ತಿದ್ದಾನೆ. ಆದ್ರೆ ನಮ್ಮ ಮಗಳು ಕನ್ಯೆ ಆಗಿದ್ದಳು ಅನ್ನೋದಕ್ಕೆ ಪುರಾವೆ ಇಲ್ಲಿದೆ ನೋಡಿ’ ಅಂತ ಹೇಳಬೇಕು. ಆಮೇಲೆ ಅವಳ ತಂದೆತಾಯಿ ಪುರಾವೆಯಾಗಿ ತಂದಿರೋ ಬಟ್ಟೆನ ಪಟ್ಟಣದ ಹಿರಿಯರ ಮುಂದೆ ಹಾಸಬೇಕು. 18 ಆಗ ಪಟ್ಟಣದ ಹಿರಿಯರು+ ಆ ಪುರುಷನನ್ನ ಹಿಡಿದು ಅವನಿಗೆ ಶಿಕ್ಷೆ ಕೊಡಬೇಕು.+ 19 ಅವನು ಇಸ್ರಾಯೇಲಿನ ಒಬ್ಬ ಕನ್ಯೆಯ ಹೆಸ್ರನ್ನ ಹಾಳು ಮಾಡಿದ್ರಿಂದ+ ಆ ಹಿರಿಯರು ಅವನಿಗೆ 100 ಬೆಳ್ಳಿ ಶೆಕೆಲ್* ದಂಡ ಹಾಕಿ ಆ ಹಣನ ಅವಳ ತಂದೆಗೆ ಕೊಡಬೇಕು. ಅವಳು ಅವನ ಹೆಂಡತಿಯಾಗೇ ಇರಬೇಕು. ಅವನು ಸಾಯೋ ತನಕ ಅವಳಿಗೆ ವಿಚ್ಛೇದನ ಕೊಡೋ ಹಾಗಿಲ್ಲ.
20 ಅವನ ಆರೋಪ ನಿಜ ಆಗಿದ್ರೆ, ಅವಳು ಕನ್ಯೆಯಾಗಿದ್ದಳು ಅನ್ನೋದಕ್ಕೆ ಯಾವ ಪುರಾವೆನೂ ಇಲ್ಲದಿದ್ರೆ 21 ಅವಳನ್ನ ಅವಳ ತಂದೆ ಮನೆ ಬಾಗಿಲ ಮುಂದೆ ತಂದು ನಿಲ್ಲಿಸಬೇಕು. ಅವಳು ತಂದೆ ಮನೇಲಿ ಇರುವಾಗ ಲೈಂಗಿಕ ಅನೈತಿಕತೆ ನಡೆಸಿ*+ ಇಸ್ರಾಯೇಲಿಗೆ ಕಳಂಕ ತರೋ ಕೆಲಸ ಮಾಡಿದ್ರಿಂದ+ ಆ ಪಟ್ಟಣದವರೆಲ್ಲ ಅವಳನ್ನ ಕಲ್ಲು ಹೊಡೆದು ಸಾಯಿಸಬೇಕು. ಹೀಗೆ ನಿಮ್ಮ ಮಧ್ಯದಿಂದ ಆ ಕೆಟ್ಟತನ ತೆಗೆದುಹಾಕಬೇಕು.+
22 ಒಬ್ಬ ಪುರುಷ ಇನ್ನೊಬ್ಬನ ಹೆಂಡತಿ ಜೊತೆ ಮಲಗಿಕೊಂಡಿರುವಾಗ ಸಿಕ್ಕಿಬಿದ್ರೆ ಆ ಪುರುಷ ಮತ್ತು ಸ್ತ್ರೀ ಇಬ್ರನ್ನೂ ಸಾಯಿಸಬೇಕು.+ ಹೀಗೆ ಇಸ್ರಾಯೇಲ್ಯರ ಮಧ್ಯದಿಂದ ಆ ಕೆಟ್ಟತನ ತೆಗೆದುಹಾಕಬೇಕು.
23 ಒಬ್ಬನಿಗೆ ನಿಶ್ಚಯ ಆಗಿರೋ ಕನ್ಯೆನ ಇನ್ನೊಬ್ಬ ಪುರುಷ ಪಟ್ಟಣದಲ್ಲಿ ನೋಡಿ ಅವಳ ಜೊತೆ ಮಲಗಿಕೊಂಡ್ರೆ 24 ಅವರಿಬ್ರನ್ನೂ ಆ ಪಟ್ಟಣದ ಬಾಗಿಲಿಗೆ ಕರ್ಕೊಂಡು ಬಂದು ಕಲ್ಲುಹೊಡೆದು ಸಾಯಿಸಬೇಕು. ಅವಳು ಪಟ್ಟಣದಲ್ಲಿದ್ರೂ ಕೂಗಿಕೊಳ್ಳದೆ ಇದ್ದಿದ್ರಿಂದ, ಆ ಪುರುಷ ಇನ್ನೊಬ್ಬನ ಹೆಂಡತಿಯ ಶೀಲ ಕೆಡಿಸಿದ್ರಿಂದ ಅವರಿಬ್ರನ್ನೂ ಸಾಯಿಸಬೇಕು.+ ಹೀಗೆ ನಿಮ್ಮ ಮಧ್ಯದಿಂದ ಆ ಕೆಟ್ಟತನ ತೆಗೆದುಹಾಕಬೇಕು.
25 ಒಬ್ಬ ಪುರುಷ ಇನ್ನೊಬ್ಬನಿಗೆ ನಿಶ್ಚಯ ಆಗಿರೋ ಹೆಣ್ಣನ್ನ ಬಯಲಲ್ಲಿ ನೋಡಿ ಬಲಾತ್ಕಾರ ಮಾಡಿದ್ರೆ ಅವನನ್ನ ಸಾಯಿಸಬೇಕು. 26 ಅವಳನ್ನ ಸಾಯಿಸಬಾರದು. ಯಾಕಂದ್ರೆ ಅವಳು ಪಾಪ ಮಾಡಲಿಲ್ಲ. ಇದು, ನಿರಪರಾಧಿ ಮೇಲೆ ಒಬ್ಬ ದಾಳಿ ಮಾಡಿ ಕೊಲ್ಲೋದಕ್ಕೆ ಸಮ.+ 27 ಅವಳು ಬಯಲಲ್ಲಿದ್ದಾಗ ಅವನು ಹಾಗೆ ಮಾಡಿದ್ರಿಂದ, ಅವಳು ಕೂಗ್ಕೊಂಡ್ರೂ ಅವಳನ್ನ ಕಾಪಾಡೋಕೆ ಅಲ್ಲಿ ಯಾರೂ ಇಲ್ಲದಿದ್ರಿಂದ ಅವಳು ನಿರಪರಾಧಿ.
28 ಯಾರಿಗೂ ನಿಶ್ಚಯ ಆಗಿರದ ಕನ್ಯೆಯನ್ನ ಒಬ್ಬ ಪುರುಷ ನೋಡಿ ಬಲಾತ್ಕಾರ ಮಾಡಿ ಆ ವಿಷ್ಯ ಬೆಳಕಿಗೆ ಬಂದ್ರೆ+ 29 ಅವನು ಅವಳ ತಂದೆಗೆ 50 ಬೆಳ್ಳಿ ಶೆಕೆಲ್ ಕೊಟ್ಟು ಅವಳನ್ನ ಮದುವೆ ಆಗಬೇಕು.+ ಅವನು ಅವಳನ್ನ ಕೆಡಿಸಿದ್ರಿಂದ ಅವನು ಸಾಯೋ ತನಕ ಅವಳಿಗೆ ವಿಚ್ಛೇದನ ಕೊಡೋ ಹಾಗಿಲ್ಲ.
30 ಯಾವ ಪುರುಷನೂ ತನ್ನ ತಂದೆಯ ಹೆಂಡತಿಯನ್ನ ಮದುವೆ ಆಗಬಾರದು. ಹಾಗೆ ಮಾಡಿದ್ರೆ ಅವನು ತನ್ನ ತಂದೆಗೆ ಅವಮಾನ ಮಾಡಿದ ಹಾಗೆ.+