ಧರ್ಮೋಪದೇಶಕಾಂಡ
15 ಪ್ರತಿ ಏಳನೇ ವರ್ಷದಲ್ಲಿ ಸಾಲ ಮನ್ನಾ ಮಾಡಬೇಕು.+ 2 ಹೇಗಂದ್ರೆ, ತನ್ನ ನೆರೆಯವನಿಗೆ ಅಥವಾ ತನ್ನ ಸಹೋದರನಿಗೆ ಸಾಲ ಕೊಟ್ಟಿರೋ ಎಲ್ರೂ ಆ ಸಾಲ ಮನ್ನಾ ಮಾಡಬೇಕು. ಅದನ್ನ ತೀರಿಸ್ಲೇಬೇಕು ಅಂತ ಒತ್ತಾಯ ಮಾಡಬಾರದು. ಯಾಕಂದ್ರೆ ಯೆಹೋವನ ಗೌರವಕ್ಕಾಗಿ ಆ ಏಳನೇ ವರ್ಷವನ್ನ ಬಿಡುಗಡೆಯ ವರ್ಷ ಅಂತ ಪ್ರಕಟಿಸಲಾಗಿರುತ್ತೆ.+ 3 ನೀವು ವಿದೇಶಿಯರಿಗೆ ಸಾಲ ಕೊಟ್ಟಿರೋದಾದ್ರೆ ಅದನ್ನ ತೀರಿಸೋಕೆ ಅವ್ರಿಗೆ ಹೇಳಬಹುದು.+ ಆದ್ರೆ ನಿಮ್ಮ ಸಹೋದರ ನಿಮಗೆ ಏನಾದ್ರೂ ಕೊಡಬೇಕಾಗಿದ್ರೆ ಅದನ್ನ ಬಿಟ್ಟುಬಿಡಬೇಕು. 4 ನಿಮ್ಮಲ್ಲಿ ಯಾರೂ ಬಡತನಕ್ಕೆ ಬರಬಾರದು. ಯಾಕಂದ್ರೆ ನಿಮ್ಮ ದೇವರಾದ ಯೆಹೋವ ನಿಮಗೆ ಆಸ್ತಿಯಾಗಿ ಕೊಡೋ ದೇಶದಲ್ಲಿ ಯೆಹೋವ ನಿಮ್ಮನ್ನ ಖಂಡಿತ ಆಶೀರ್ವದಿಸ್ತಾನೆ.+ 5 ಆದ್ರೆ ಆಶೀರ್ವಾದ ಸಿಗಬೇಕಾದ್ರೆ ನಿಮ್ಮ ದೇವರಾದ ಯೆಹೋವನ ಮಾತನ್ನ ಚಾಚೂತಪ್ಪದೆ ಕೇಳಬೇಕು. ನಾನು ಇವತ್ತು ಕೊಡ್ತಿರೋ ಈ ಎಲ್ಲ ಆಜ್ಞೆಗಳನ್ನ ತಪ್ಪದೆ ಪಾಲಿಸಬೇಕು.+ 6 ನಿಮ್ಮ ದೇವರಾದ ಯೆಹೋವ ನಿಮಗೆ ಮಾತು ಕೊಟ್ಟ ಹಾಗೇ ನಿಮ್ಮನ್ನ ಆಶೀರ್ವದಿಸ್ತಾನೆ. ಹಾಗಾಗಿ ನೀವು ಬೇರೆ ಜನಾಂಗಗಳಿಗೆ ಸಾಲ ಕೊಡ್ತೀರೇ ಹೊರತು ಅವ್ರಿಂದ ಸಾಲ ತಗೊಳ್ಳೋ ಸ್ಥಿತಿ ಬರಲ್ಲ.+ ನೀವು ತುಂಬ ಜನಾಂಗಗಳ ಮೇಲೆ ಅಧಿಕಾರ ನಡೆಸ್ತೀರ, ಅವರು ನಿಮ್ಮ ಮೇಲೆ ಅಧಿಕಾರ ನಡೆಸಲ್ಲ.+
7 ನಿಮ್ಮ ದೇವರಾದ ಯೆಹೋವ ಕೊಡೋ ದೇಶದ ಯಾವುದಾದ್ರೂ ಒಂದು ಪಟ್ಟಣದಲ್ಲಿ ನಿಮ್ಮ ಸಹೋದರನೊಬ್ಬ ಬಡವನಾದ್ರೆ ಅವನ ಜೊತೆ ನೀವು ಕಲ್ಲು ಹೃದಯದವನ ತರ ನಡ್ಕೊಬಾರದು, ಜಿಪುಣತನ ತೋರಿಸಬಾರದು.+ 8 ನೀವು ಕೈಬಿಚ್ಚಿ ಉದಾರವಾಗಿ ಕೊಡಬೇಕು.+ ಅವನಿಗೆ ಅಗತ್ಯ ಇರೋದನ್ನ ಅಥವಾ ಅವನ ಹತ್ರ ಇಲ್ಲದಿರೋದನ್ನ ಅವನಿಗೆ ಸಾಲವಾಗಿ* ಕೊಡೋಕೆ ಹಿಂದೆಮುಂದೆ ನೋಡಬಾರದು. 9 ನೀವು ‘ಏಳನೇ ವರ್ಷ ಅಂದ್ರೆ ಬಿಡುಗಡೆಯ ವರ್ಷ ಬರೋಕೆ ಇನ್ನೇನು ಸ್ವಲ್ಪನೇ ಸಮಯ ಇದೆ’ + ಅಂತ ಆಲೋಚಿಸಿ ನಿಮ್ಮ ಬಡ ಸಹೋದರನಿಗೆ ಏನೂ ಕೊಡದೆ ಇರಬಾರದು, ಸಹಾಯ ಮಾಡದೇ ಇರಬಾರದು. ನಿಮ್ಮ ಮನಸ್ಸಲ್ಲಿ ಇಂಥ ಕೆಟ್ಟ ಯೋಚನೆ ಬರದ ಹಾಗೆ ನೋಡ್ಕೊಳ್ಳಿ. ಆ ಬಡ ಸಹೋದರ ನಿಮ್ಮ ಬಗ್ಗೆ ದೂರುತ್ತಾ ಯೆಹೋವನ ಹತ್ರ ಹೇಳ್ಕೊಂಡ್ರೆ ದೇವರ ದೃಷ್ಟಿಯಲ್ಲಿ ನೀವು ಪಾಪಿಗಳಾಗ್ತೀರ.+ 10 ನೀವು ಉದಾರವಾಗಿ ಕೊಡಬೇಕು,+ ಒಲ್ಲದ ಮನಸ್ಸಿಂದ ಕೊಡಬಾರದು. ಉದಾರವಾಗಿ ಕೊಟ್ರೆ ನಿಮ್ಮ ದೇವರಾದ ಯೆಹೋವ ನೀವು ಮಾಡೋ ಪ್ರತಿಯೊಂದು ಕೆಲಸವನ್ನ ಪ್ರಯಾಸವನ್ನ ಆಶೀರ್ವದಿಸ್ತಾನೆ.+ 11 ನಿಮ್ಮ ದೇಶದಲ್ಲಿ ಬಡವರು ಇದ್ದೇ ಇರ್ತಾರೆ.+ ಹಾಗಾಗಿ ‘ನಿಮ್ಮ ದೇಶದಲ್ಲಿ ಕಷ್ಟದಲ್ಲಿರೋ, ಬಡವನಾಗಿರೋ ನಿಮ್ಮ ಸಹೋದರನಿಗೆ ನೀವು ಧಾರಾಳ ಮನಸ್ಸಿಂದ ಕೈಬಿಚ್ಚಿ ಕೊಡಬೇಕು’ + ಅಂತ ನಿಮಗೆ ಆಜ್ಞೆ ಕೊಡ್ತಾ ಇದ್ದೀನಿ.
12 ನಿಮಗೆ ಮಾರಿರೋ ಒಬ್ಬ ಇಬ್ರಿಯ ಪುರುಷ ಅಥವಾ ಸ್ತ್ರೀ ನಿಮ್ಮ ಹತ್ರ ಆರು ವರ್ಷ ಕೆಲಸ ಮಾಡಿದ್ರೆ ಏಳನೇ ವರ್ಷ ಆ ಇಬ್ರಿಯನನ್ನ ಬಿಡುಗಡೆ ಮಾಡಬೇಕು.+ 13 ಅವನನ್ನ ಬಿಡುಗಡೆ ಮಾಡುವಾಗ ಬರಿಗೈಲಿ ಕಳಿಸಬಾರದು. 14 ಅವನಿಗೆ ಆಡು-ಕುರಿ, ದವಸಧಾನ್ಯ, ಎಣ್ಣೆ, ದ್ರಾಕ್ಷಾಮದ್ಯ ಎಲ್ಲವನ್ನ ಧಾರಾಳವಾಗಿ ಕೊಟ್ಟು ಕಳಿಸಬೇಕು. ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಎಷ್ಟು ಆಶೀರ್ವಾದ ಮಾಡಿದ್ದಾನೋ ಅದಕ್ಕೆ ತಕ್ಕ ಹಾಗೆ ಅವನಿಗೆ ಕೊಡಬೇಕು. 15 ಈಜಿಪ್ಟಲ್ಲಿ ಗುಲಾಮರಾಗಿ ನೀವು ಇದ್ರಿ ಅನ್ನೋದನ್ನ ಯಾವತ್ತೂ ಮರಿಬೇಡಿ. ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಅಲ್ಲಿಂದ ಬಿಡಿಸ್ಕೊಂಡು ಬಂದ್ನಲ್ಲಾ. ಹಾಗಾಗಿ ನಾನು ಇವತ್ತು ನಿಮಗೆ ಈ ಆಜ್ಞೆ ಕೊಡ್ತಾ ಇದ್ದೀನಿ.
16 ಆದ್ರೆ ಆ ದಾಸ ನಿಮ್ಮನ್ನೂ ನಿಮ್ಮ ಮನೆಯವರನ್ನೂ ಪ್ರೀತಿಸೋದ್ರಿಂದ, ನಿಮ್ಮ ಹತ್ರ ಇದ್ದಾಗ ಅವನು ತುಂಬ ಖುಷಿಯಾಗಿ ಇದ್ದಿದ್ರಿಂದ ‘ನಾನು ಹೋಗಲ್ಲ, ಇಲ್ಲೇ ಇರ್ತೀನಿ’ ಅಂದ್ರೆ+ 17 ನೀವು ಅವನನ್ನ ಬಾಗಿಲಿನ ಮುಂದೆ ಕರ್ಕೊಂಡು ಬಂದು ದೊಡ್ಡ ಸೂಜಿಯಿಂದ ಅವನ ಕಿವಿ ಚುಚ್ಚಬೇಕು. ಆಗ ಅವನು ಜೀವನವಿಡೀ ನಿಮ್ಮ ದಾಸನಾಗಿ ಇರ್ತಾನೆ. ನಿಮ್ಮ ದಾಸಿಯ ವಿಷ್ಯದಲ್ಲೂ ನೀವು ಹೀಗೇ ಮಾಡಬೇಕು. 18 ಒಬ್ಬ ದಾಸನನ್ನ ಬಿಡುಗಡೆ ಮಾಡುವಾಗ ‘ಅವನನ್ನ ಕಳಿಸಿದ್ರೆ ತುಂಬ ಕಷ್ಟನಷ್ಟ ಅನುಭವಿಸಬೇಕಾಗುತ್ತೆ’ ಅಂತ ನೆನಸಬೇಡಿ. ಯಾಕಂದ್ರೆ ಅವನು ಕೆಲಸ ಮಾಡಿದ ಆ ಆರು ವರ್ಷಗಳಲ್ಲಿ ನಿಮಗೆ ಕೂಲಿಯವನು ಕೆಲಸ ಮಾಡಿದಾಗ ಸಿಗೋ ಲಾಭಕ್ಕಿಂತ ಎರಡು ಪಟ್ಟು ಜಾಸ್ತಿ ಲಾಭ ಸಿಕ್ಕಿದೆ. ಅಷ್ಟೇ ಅಲ್ಲ ಆ ಸಮಯದಲ್ಲಿ ನಿಮ್ಮ ಎಲ್ಲ ಕೆಲಸವನ್ನ ಯೆಹೋವ ಆಶೀರ್ವಾದ ಮಾಡಿದ್ದಾನೆ.
19 ನಿಮ್ಮ ಹಸು, ಆಡು-ಕುರಿಗಳ ಮೊದಲ ಗಂಡುಮರಿಗಳನ್ನ ನಿಮ್ಮ ದೇವರಾದ ಯೆಹೋವನಿಗೆ ಅಂತಾನೇ ಮೀಸಲಿಡಬೇಕು.*+ ಹಸುಗಳ ಮೊದಲ ಕರುಗಳಿಂದ ಯಾವ ಕೆಲಸವನ್ನೂ ಮಾಡಿಸಬಾರದು, ಆಡು-ಕುರಿಗಳ ಮೊದಲ ಮರಿಗಳ ಉಣ್ಣೆ ಕತ್ತರಿಸಬಾರದು. 20 ಪ್ರತಿ ವರ್ಷ ನೀವು ಅವುಗಳ ಮಾಂಸವನ್ನ ನಿಮ್ಮ ಕುಟುಂಬದವರ ಜೊತೆ ಯೆಹೋವ ಆರಿಸ್ಕೊಳ್ಳೋ ಸ್ಥಳದಲ್ಲಿ ನಿಮ್ಮ ದೇವರಾದ ಯೆಹೋವನ ಮುಂದೆ ತಿನ್ನಬೇಕು.+ 21 ಆದ್ರೆ ಕುಂಟಾಗಿರೋ, ಕುರುಡಾಗಿರೋ ಅಥವಾ ಬೇರೆ ಯಾವುದೇ ಗಂಭೀರ ದೋಷ ಇರೋ ಮೊದಲ ಮರಿಗಳನ್ನ ನಿಮ್ಮ ದೇವರಾದ ಯೆಹೋವನಿಗೆ ಬಲಿಯಾಗಿ ಅರ್ಪಿಸಬಾರದು.+ 22 ಅಂಥ ಮೊದಲ ಮರಿಗಳನ್ನ ನಿಮ್ಮ ಪಟ್ಟಣಗಳಲ್ಲಿ ಕಡಿದು ತಿನ್ನಬೇಕು. ಜಿಂಕೆಯ ಮಾಂಸದ ತರ ಅವುಗಳ ಮಾಂಸವನ್ನ ಶುದ್ಧರಾಗಿರೋ ಅಶುದ್ಧರಾಗಿರೋ ವ್ಯಕ್ತಿಗಳೆಲ್ಲ ತಿನ್ನಬಹುದು.+ 23 ಆದ್ರೆ ಅವುಗಳ ರಕ್ತ ತಿನ್ನಬಾರದು.+ ಅದನ್ನ ನೀರಿನ ಹಾಗೆ ನೆಲಕ್ಕೆ ಸುರಿಬೇಕು.+