ಯೋಹಾನ
20 ವಾರದ ಮೊದಲನೇ ದಿನ ಮಗ್ದಲದ ಮರಿಯ ಬೆಳಬೆಳಿಗ್ಗೆ ಕತ್ತಲೆ ಇರುವಾಗಲೇ ಸಮಾಧಿ ಹತ್ರ ಹೋದಳು.+ ಸಮಾಧಿಗೆ ಮುಚ್ಚಿಟ್ಟಿದ್ದ ಕಲ್ಲನ್ನ ಯಾರೋ ಸರಿಸಿದ್ರು.+ 2 ಅದನ್ನ ನೋಡಿದಾಗ ಅವಳು ಅಲ್ಲಿಂದ ಓಡಿ ಸೀಮೋನ ಪೇತ್ರ ಮತ್ತು ಯೇಸುವಿನ ಪ್ರಿಯನಾಗಿದ್ದ ಇನ್ನೊಬ್ಬ ಶಿಷ್ಯನ+ ಹತ್ರ ಬಂದಳು. “ಪ್ರಭುನ ಯಾರೋ ಸಮಾಧಿಯಿಂದ ತಗೊಂಡು ಹೋಗಿದ್ದಾರೆ.+ ಆತನನ್ನ ಎಲ್ಲಿಟ್ಟಿದ್ದಾರೋ ಗೊತ್ತಿಲ್ಲ” ಅಂದಳು.
3 ಆಗ ಪೇತ್ರ ಮತ್ತು ಇನ್ನೊಬ್ಬ ಶಿಷ್ಯ ಸಮಾಧಿ ಹತ್ರ ಹೊರಟ್ರು. 4 ಅವರಿಬ್ರೂ ಓಡಕ್ಕೆ ಶುರುಮಾಡಿದ್ರು. ಆದ್ರೆ ಇನ್ನೊಬ್ಬ ಶಿಷ್ಯ ಪೇತ್ರನಿಗಿಂತ ಮುಂದೆ ಓಡಿಹೋಗಿ ಸಮಾಧಿ ಹತ್ರ ಮೊದಲು ತಲಪಿದ. 5 ಆದ್ರೆ ಒಳಗೆ ಹೋಗಲಿಲ್ಲ. ಸಮಾಧಿ ಒಳಗೆ ಬಗ್ಗಿ ನಾರಿನ ಬಟ್ಟೆಗಳು+ ಬಿದ್ದಿರೋದನ್ನ ನೋಡಿದ. 6 ಸ್ವಲ್ಪ ಹೊತ್ತಲ್ಲಿ ಸೀಮೋನ ಪೇತ್ರ ಸಮಾಧಿ ಹತ್ರ ಬಂದ. ಒಳಗೆ ಹೋಗಿ ಬಿದ್ದಿದ್ದ ನಾರಿನ ಬಟ್ಟೆ ನೋಡಿದ. 7 ಯೇಸು ತಲೆಗೆ ಸುತ್ತಿದ್ದ ಬಟ್ಟೆ ಬೇರೆ ಬಟ್ಟೆಗಳ ಜೊತೆ ಇರಲಿಲ್ಲ. ಅದನ್ನು ಸುತ್ತಿ ಬೇರೆ ಕಡೆ ಇಟ್ಟಿದ್ರು. 8 ಆಗ ಸಮಾಧಿ ಹತ್ರ ಮೊದಲು ತಲಪಿದ ಶಿಷ್ಯ ಒಳಗೆ ಹೋಗಿ ನೋಡಿದ ಮೇಲೆನೇ ಮರಿಯ ಹೇಳಿದ್ದನ್ನ ನಂಬಿದ. 9 ಯಾಕಂದ್ರೆ ಯೇಸು ಸತ್ತ ಮೇಲೆ ಮತ್ತೆ ಬದುಕ್ತಾನೆ ಅನ್ನೋ ಮಾತಿನ ಅರ್ಥ ಏನಂತ ಅವ್ರಿಗೆ ಇನ್ನೂ ಗೊತ್ತಾಗಿರಲಿಲ್ಲ.+ 10 ಹಾಗಾಗಿ ಶಿಷ್ಯರು ಮನೆಗೆ ವಾಪಸ್ ಹೋದ್ರು.
11 ಆದ್ರೆ ಮರಿಯ ಸಮಾಧಿ ಹೊರಗೆ ಅಳ್ತಾ ನಿಂತಿದ್ದಳು. ಅವಳು ಸಮಾಧಿ ಒಳಗೆ ಬಗ್ಗಿ ನೋಡಿದಾಗ 12 ಬಿಳಿ ಬಟ್ಟೆ ಹಾಕಿದ್ದ ಇಬ್ರು ದೇವದೂತರನ್ನ ನೋಡಿದಳು.+ ಅವರು ಯೇಸು ದೇಹ ಇದ್ದ ಜಾಗದಲ್ಲೇ ಕೂತಿದ್ರು. ಒಬ್ಬ ತಲೆ ಇದ್ದ ಕಡೆ, ಇನ್ನೊಬ್ಬ ಕಾಲಿದ್ದ ಕಡೆ ಕೂತಿದ್ದ. 13 ಆ ದೇವದೂತರು “ಅಮ್ಮಾ ಯಾಕೆ ಅಳ್ತಾ ಇದ್ದೀಯಾ?” ಅಂತ ಕೇಳಿದ್ರು. ಅದಕ್ಕೆ ಅವಳು “ಯಾರೋ ನನ್ನ ಪ್ರಭುನ ತಗೊಂಡು ಹೋಗಿಬಿಟ್ಟಿದ್ದಾರೆ. ಆತನನ್ನ ಎಲ್ಲಿ ಇಟ್ಟಿದ್ದಾರೋ ಗೊತ್ತಿಲ್ಲ” ಅಂದಳು. 14 ಈ ಮಾತು ಹೇಳಿ ಹಿಂದೆ ತಿರುಗಿದಳು. ಅಲ್ಲಿ ಯೇಸು ನಿಂತಿದ್ದನು. ಅದು ಯೇಸು ಅಂತ ಅವಳಿಗೆ ಗೊತ್ತಾಗಲಿಲ್ಲ.+ 15 ಯೇಸು ಅವಳಿಗೆ “ಅಮ್ಮಾ ಯಾಕೆ ಅಳ್ತಾ ಇದ್ದೀಯಾ? ಯಾರನ್ನ ಹುಡುಕ್ತಿದ್ದೀಯಾ?” ಅಂತ ಕೇಳಿದನು. ಅವನು ತೋಟಗಾರ ಅಂತ ನೆನಸಿ “ಅಯ್ಯಾ ನೀನು ಆತನನ್ನ ತಗೊಂಡು ಹೋಗಿದ್ರೆ ಆತನನ್ನ ಎಲ್ಲಿ ಇಟ್ಟಿದ್ಯಾ ಅಂತ ದಯವಿಟ್ಟು ಹೇಳು. ನಾನು ಆತನನ್ನ ತಗೊಂಡು ಹೋಗ್ತೀನಿ” ಅಂದಳು. 16 ಆಗ ಯೇಸು “ಮರಿಯ!” ಅಂತ ಕರೆದನು. ಆಗ ಅವಳು ತಿರುಗಿ ಹೀಬ್ರು ಭಾಷೆಯಲ್ಲಿ “ರಬ್ಬೋನಿ!” (ಅಂದ್ರೆ “ಗುರು!” ಅಂತರ್ಥ) ಅಂದಳು. 17 ಯೇಸು ಅವಳಿಗೆ “ನಾನು ಈಗಲೇ ನನ್ನ ಅಪ್ಪನ ಹತ್ರ ಹೋಗ್ತಾ ಇಲ್ಲ. ಹಾಗಾಗಿ ನನ್ನನ್ನ ಹಾಗೆ ಹಿಡ್ಕೊಂಡು ಇರಬೇಡ. ನೀನು ನನ್ನ ಸಹೋದರರ+ ಹತ್ರ ಹೋಗಿ ‘ನನ್ನ ತಂದೆ ನಿಮ್ಮ ತಂದೆ, ನನ್ನ ದೇವರು ನಿಮ್ಮ ದೇವರು ಆಗಿರುವವನ+ ಹತ್ರ ಹೋಗ್ತಾ ಇದ್ದೀನಿ’+ ಅಂತೇಳು” ಅಂದನು. 18 ಮಗ್ದಲದ ಮರಿಯ ಹೋಗಿ ಶಿಷ್ಯರಿಗೆ “ನಾನು ಪ್ರಭುನ ನೋಡಿದೆ!” ಅಂತ ಹೇಳಿ ಯೇಸು ಹೇಳಿದ್ದೆಲ್ಲ ಅವ್ರಿಗೆ ಹೇಳಿದಳು.+
19 ಅದು ವಾರದ ಮೊದಲನೇ ದಿನ. ಆ ದಿನ ಸಂಜೆ ಶಿಷ್ಯರೆಲ್ಲ ಒಂದು ಮನೆಯಲ್ಲಿ ಸೇರಿಬಂದ್ರು. ಅವರು ಯೆಹೂದ್ಯರಿಗೆ ಭಯಪಟ್ಟು ಬಾಗಿಲನ್ನ ಗಟ್ಟಿಯಾಗಿ ಹಾಕೊಂಡ್ರು. ಆಗ ಇದ್ದಕ್ಕಿದ್ದ ಹಾಗೆ ಯೇಸು ಬಂದು ಅವ್ರ ಮಧ್ಯ ನಿಂತು “ದೇವರು ನಿಮಗೆ ಶಾಂತಿ ಕೊಡಲಿ” ಅಂದನು.+ 20 ಆಮೇಲೆ ತನ್ನ ಕೈಗಳನ್ನ, ತನ್ನ ಪಕ್ಕೆಲುಬನ್ನ ತೋರಿಸಿದನು.+ ಶಿಷ್ಯರು ಪ್ರಭುನ ನೋಡಿ ಖುಷಿಪಟ್ರು.+ 21 ಯೇಸು ಮತ್ತೆ “ದೇವರು ನಿಮಗೆ ಶಾಂತಿ ಕೊಡಲಿ.+ ಅಪ್ಪ ನನ್ನನ್ನ ಕಳಿಸಿದ ತರ+ ನಾನೂ ನಿಮ್ಮನ್ನ ಕಳಿಸ್ತಾ ಇದ್ದೀನಿ”+ ಅಂದನು. 22 ಇದನ್ನ ಹೇಳಿದ ಮೇಲೆ ಅವ್ರ ಮೇಲೆ ಊದಿ “ದೇವರ ಪವಿತ್ರಶಕ್ತಿ ಪಡ್ಕೊಳ್ಳಿ.+ 23 ನೀವು ಬೇರೆಯವರ ಪಾಪಗಳನ್ನ ಕ್ಷಮಿಸಿದ್ರೆ ಆಗಲೇ ದೇವ್ರಿಂದ ನಿಮಗೆ ಕ್ಷಮೆ ಸಿಗುತ್ತೆ. ನೀವು ಬೇರೆಯವರ ಪಾಪಗಳನ್ನ ಕ್ಷಮಿಸಿಲ್ಲಾಂದ್ರೆ ದೇವರು ಸಹ ನಿಮ್ಮ ಪಾಪಗಳನ್ನ ಕ್ಷಮಿಸಲ್ಲ” ಅಂದನು.
24 ಈ ಸಮಯದಲ್ಲಿ 12 ಶಿಷ್ಯರಲ್ಲಿ ಒಬ್ಬನಾಗಿದ್ದ ತೋಮ+ ಅವ್ರ ಜೊತೆ ಇರಲಿಲ್ಲ. ಇವನಿಗೆ ಅವಳಿ ಅನ್ನೋ ಹೆಸ್ರೂ ಇತ್ತು. 25 ಇವನಿಗೆ ಬೇರೆ ಶಿಷ್ಯರು “ನಾವು ಪ್ರಭುವನ್ನ ನೋಡಿದ್ವಿ” ಅಂದ್ರು. ಅದಕ್ಕೆ “ನಾನು ಆತನ ಕೈಯಲ್ಲಿರೋ ಮೊಳೆಗಳ ಗಾಯ ನೋಡಿ, ಆ ಗಾಯದಲ್ಲಿ ನನ್ನ ಬೆರಳನ್ನ ಹಾಕೋ ತನಕ, ಆತನ ಪಕ್ಕೆಲುಬಿನ+ ಮೇಲೆ ನನ್ನ ಕೈ ಇಡೋ ತನಕ ನಾನು ನಂಬೋದೇ ಇಲ್ಲ” ಅಂದನು.
26 ಎಂಟು ದಿನ ಆದಮೇಲೆ ಶಿಷ್ಯರು ಮತ್ತೆ ಸೇರಿಬಂದು ಬಾಗಿಲು ಹಾಕೊಂಡಿದ್ರು. ಈ ಸಾರಿ ತೋಮನೂ ಇದ್ದ. ಬಾಗಿಲು ಮುಚ್ಚಿದ್ರೂ ಯೇಸು ಬಂದು ಮಧ್ಯ ನಿಂತು “ದೇವರು ನಿಮಗೆ ಶಾಂತಿ ಕೊಡಲಿ”+ ಅಂದನು. 27 ಆಮೇಲೆ ಯೇಸು ತೋಮನಿಗೆ “ನಿನ್ನ ಬೆರಳಿಂದ ನನ್ನ ಕೈಗಳನ್ನ, ನನ್ನ ಪಕ್ಕೆಲುಬನ್ನ ಮುಟ್ಟಿ ನೋಡು. ಸಂಶಯ ಪಡೋದನ್ನ ನಿಲ್ಲಿಸು, ನಂಬೋದನ್ನ ಕಲಿ” ಅಂದನು. 28 ಅದಕ್ಕೆ ತೋಮ “ನನ್ನ ಪ್ರಭು, ನನ್ನ ದೇವರೇ!” ಅಂದ. 29 ಆಗ ಯೇಸು “ನನ್ನನ್ನ ನೋಡಿದ ಮೇಲೆ ನಂಬ್ತೀಯಾ? ನೋಡದೆ ನಂಬೋರು ಖುಷಿಯಾಗಿ ಇರ್ತಾರೆ” ಅಂದನು.
30 ಯೇಸು ಇನ್ನೂ ತುಂಬ ಅದ್ಭುತ ಮಾಡಿದನು. ಆದ್ರೆ ಅದೆಲ್ಲದ್ರ ಬಗ್ಗೆ ಈ ಸುರುಳಿಯಲ್ಲಿ ಬರಿಲಿಲ್ಲ.+ 31 ಆದ್ರೆ ಯೇಸುನೇ ದೇವರ ಮಗನಾದ ಕ್ರಿಸ್ತ ಅಂತ ನೀವು ನಂಬಬೇಕು, ನಂಬಿ ಆತನ ಹೆಸ್ರಿನ ಮೂಲಕ ಜೀವ ಪಡಿಬೇಕು ಅಂತ ಈ ವಿಷ್ಯಗಳು ಬರೆದಿವೆ.+