ಅಧ್ಯಾಯ 23
ಫರೋಹನ ಕನಸುಗಳು
ಎರಡು ವರ್ಷಗಳು ದಾಟುತ್ತವೆ. ಯೋಸೇಫನು ಇನ್ನೂ ಸೆರೆಮನೆಯಲ್ಲಿದ್ದಾನೆ. ಪಾನದಾಯಕನಿಗೆ ಅವನ ನೆನಪೇ ಬರಲಿಲ್ಲ. ಒಂದು ರಾತ್ರಿ ಫರೋಹನಿಗೆ ಎರಡು ವಿಶೇಷ ಕನಸುಗಳು ಬೀಳುತ್ತವೆ. ಅವುಗಳ ಅರ್ಥವೇನೆಂದು ಅವನು ಯೋಚಿಸುತ್ತಾನೆ. ಅವನು ಮಲಗಿರುವುದನ್ನು ನೀವು ಈ ಚಿತ್ರದಲ್ಲಿ ಗಮನಿಸಿದ್ದಿರೋ? ಮರುದಿನ ಬೆಳಗ್ಗೆ ಫರೋಹನು ತನ್ನ ವಿದ್ವಾಂಸರನ್ನು ಕರೆದು ತಾನು ಕಂಡ ಕನಸನ್ನು ತಿಳಿಸುತ್ತಾನೆ. ಆದರೆ ಅವನ ಕನಸುಗಳ ಅರ್ಥವನ್ನು ತಿಳಿಸಲು ಅವರಿಗೆ ಸಾಧ್ಯವಾಗುವುದಿಲ್ಲ.
ಈಗ ಆ ಪಾನದಾಯಕನಿಗೆ ಯೋಸೇಫನ ನೆನಪಾಗುತ್ತದೆ. ಅವನು ಫರೋಹನಿಗೆ ‘ನಾನು ಸೆರೆಮನೆಯಲ್ಲಿದ್ದಾಗ ಕನಸುಗಳ ಅರ್ಥವನ್ನು ವಿವರಿಸುವ ಒಬ್ಬ ಮನುಷ್ಯನು ಅಲ್ಲಿದ್ದನು’ ಎಂದು ಹೇಳುತ್ತಾನೆ. ಫರೋಹನು ಆ ಕೂಡಲೆ ಯೋಸೇಫನನ್ನು ಸೆರೆಮನೆಯಿಂದ ಕರೆಸುತ್ತಾನೆ.
ಫರೋಹನು ಯೋಸೇಫನಿಗೆ ತನ್ನ ಕನಸುಗಳನ್ನು ತಿಳಿಸುತ್ತಾನೆ: ‘ಏಳು ಕೊಬ್ಬಿದ ಸುಂದರವಾದ ಆಕಳುಗಳನ್ನು ನಾನು ಕಂಡೆನು. ಆಮೇಲೆ ಏಳು ಅತಿ ಬಡಕಲು ಆಕಳುಗಳು ನನ್ನ ಕಣ್ಣಿಗೆ ಬಿದ್ದವು. ಆ ಬಡಕಲು ಆಕಳುಗಳು ಕೊಬ್ಬಿದ ಆಕಳುಗಳನ್ನು ತಿಂದುಬಿಟ್ಟವು.’
‘ನನ್ನ ಎರಡನೆಯ ಕನಸಿನಲ್ಲಿ ಏಳು ಪುಷ್ಟವಾದ ಮಾಗಿದ ತೆನೆಗಳು ಒಂದೇ ದಂಟಿನಲ್ಲಿ ಬೆಳೆಯುವುದನ್ನು ನಾನು ಕಂಡೆನು. ಅನಂತರ ಏಳು ಒಣಗಿ ಬತ್ತಿಹೋಗಿದ್ದ ತೆನೆಗಳನ್ನು ಕಂಡೆನು. ಈ ಬತ್ತಿಹೋಗಿದ್ದ ತೆನೆಗಳು ಆ ಏಳು ಒಳ್ಳೇ ತೆನೆಗಳನ್ನು ನುಂಗಿಬಿಡಲಾರಂಭಿಸಿದವು.’
ಆಗ ಯೋಸೇಫನು ಫರೋಹನಿಗೆ ಹೇಳುವುದು: ‘ಎರಡೂ ಕನಸುಗಳ ಅರ್ಥವು ಒಂದೇ ಆಗಿದೆ. ಏಳು ಕೊಬ್ಬಿದ ಆಕಳುಗಳು ಮತ್ತು ಏಳು ಪುಷ್ಟ ತೆನೆಗಳು ಅಂದರೆ ಏಳು ವರ್ಷಗಳು. ಏಳು ಬಡಕಲು ಆಕಳುಗಳು ಮತ್ತು ಏಳು ಬತ್ತಿಹೋದ ತೆನೆಗಳು ಅಂದರೆ ತದನಂತರ ಬರುವ ಏಳು ವರ್ಷಗಳು. ಐಗುಪ್ತದಲ್ಲಿ ಏಳು ವರ್ಷ ಬೆಳೆಯು ಬಹಳ ಸಮೃದ್ಧವಾಗಿ ಬೆಳೆಯುತ್ತದೆ. ಅದರ ನಂತರ ಬರುವ ಏಳು ವರ್ಷಗಳಲ್ಲಿ ಬರಗಾಲ ಇರುವುದು.’
ಆದುದರಿಂದ ಯೋಸೇಫನು ಫರೋಹನಿಗೆ ಹೇಳುವುದು: ‘ಒಬ್ಬ ಬುದ್ಧಿಶಾಲಿ ಪುರುಷನನ್ನು ಆರಿಸಿಕೋ. ಏಳು ಒಳ್ಳೇ ವರ್ಷಗಳಲ್ಲಿ ಆಹಾರವನ್ನು ಒಟ್ಟುಗೂಡಿಸುವ ಜವಾಬ್ದಾರಿಯನ್ನು ಅವನಿಗೆ ವಹಿಸಿಕೊಡು. ಹೀಗೆ ಮಾಡಿದರೆ, ಮುಂದೆ ಬರುವ ಬರಗಾಲದ ಏಳು ಕೆಟ್ಟ ವರ್ಷಗಳಲ್ಲಿ ಜನರು ಹೊಟ್ಟೆಗಿಲ್ಲದೆ ಸಾಯುವುದಿಲ್ಲ.’
ಯೋಸೇಫನ ಈ ಸಲಹೆಯು ಫರೋಹನಿಗೆ ಇಷ್ಟವಾಗುತ್ತದೆ. ಮತ್ತು ಆಹಾರವನ್ನು ಒಟ್ಟುಗೂಡಿಸಿ ಶೇಖರಿಸಿ ಇಡಲು ಅವನು ಯೋಸೇಫನನ್ನು ಆರಿಸಿಕೊಳ್ಳುತ್ತಾನೆ. ಈಗ ಫರೋಹನ ನಂತರದ ಮುಖ್ಯಸ್ಥಾನ ಯೋಸೇಫನಿಗೆ ಸಿಗುತ್ತದೆ.
ಇದಾಗಿ ಎಂಟು ವರ್ಷ ಕಳೆಯುತ್ತವೆ. ಇದು ಬರಗಾಲದ ಸಮಯ. ಕೆಲವು ಮನುಷ್ಯರು ಬರುತ್ತಿರುವುದನ್ನು ಯೋಸೇಫನು ಕಾಣುತ್ತಾನೆ. ಅವರು ಯಾರೆಂದು ನಿಮಗೆ ಗೊತ್ತೋ? ಅವರು ಬೇರೆ ಯಾರು ಅಲ್ಲ. ಅವನ ಹತ್ತು ಮಂದಿ ಅಣ್ಣಂದಿರೇ! ಅವರ ತಂದೆಯಾದ ಯಾಕೋಬನು ಅವರನ್ನು ಐಗುಪ್ತಕ್ಕೆ ಕಳುಹಿಸಿದ್ದಾನೆ. ಏಕೆಂದರೆ, ತಮ್ಮ ಊರಾದ ಕಾನಾನಿನಲ್ಲಿ ದವಸಧಾನ್ಯ ಖಾಲಿಯಾಗುತ್ತಿತ್ತು. ಯೋಸೇಫನಿಗೆ ತನ್ನ ಅಣ್ಣಂದಿರ ಗುರುತು ಸಿಗುತ್ತದೆ. ಆದರೆ ಅವರಿಗೆ ಅವನ ಗುರುತು ಸಿಗುವುದಿಲ್ಲ. ಯಾಕೆಂದು ನಿಮಗೆ ಗೊತ್ತೋ? ಯಾಕೆಂದರೆ ಯೋಸೇಫನು ಈಗ ದೊಡ್ಡವನಾಗಿ ಬೆಳೆದಿದ್ದಾನೆ. ಅಷ್ಟೇ ಅಲ್ಲ, ಅವನು ಹಾಕಿಕೊಂಡಿದ್ದ ಬಟ್ಟೆ ಸಹ ಭಿನ್ನವಾಗಿತ್ತು.
ಈಗ ಯೋಸೇಫನಿಗೆ ತಾನು ಸಣ್ಣ ಹುಡುಗನಾಗಿದ್ದಾಗ ಕಂಡ ಕನಸು ನೆನಪಾಗುತ್ತದೆ. ಆ ಕನಸಿನಲ್ಲಿ ಅವನ ಅಣ್ಣಂದಿರು ತನಗೆ ಬಗ್ಗಿ ನಮಸ್ಕಾರ ಮಾಡಿದ್ದು ನೆನಪಿಗೆ ಬರುತ್ತದೆ. ಅದರ ಕುರಿತು ಓದಿದ್ದು ನಿಮಗೆ ನೆನಪಿದೆಯೇ? ತನ್ನನ್ನು ಐಗುಪ್ತಕ್ಕೆ ಕಳುಹಿಸಿದಾತನು ದೇವರೇ ಎಂದು ಯೋಸೇಫನಿಗೆ ತಿಳಿದುಬರುತ್ತದೆ. ಮತ್ತು ಅದು ಒಂದು ಒಳ್ಳೆಯ ಉದ್ದೇಶಕ್ಕಾಗಿಯೇ ಆಗಿತ್ತು. ಯೋಸೇಫನು ಈಗ ಏನು ಮಾಡುತ್ತಾನೆಂದು ನೀವೆಣಿಸುತ್ತೀರಿ? ಅದನ್ನು ನಾವು ನೋಡೋಣ.