ಅಧ್ಯಾಯ 36
ಚಿನ್ನದ ಬಸವ
ಓ, ಓ! ಜನರು ಇದೇನು ಮಾಡುತ್ತಿದ್ದಾರೆ? ಅವರು ಒಂದು ಬಸವನ ಸುತ್ತ ಹಾಡುತ್ತಾ ಕುಣಿಯುತ್ತಾ ಅದನ್ನು ಪೂಜಿಸುತ್ತಿದ್ದಾರೆ! ಅವರು ಹೀಗೇಕೆ ಮಾಡುತ್ತಿದ್ದಾರೆ?
ಮೋಶೆ ಬೆಟ್ಟದ ಮೇಲೆ ಏರಿಹೋಗಿ ತುಂಬಾ ದಿನಗಳಾಗಿಬಿಟ್ಟವು. ಆದುದರಿಂದ ಜನರು ಹೇಳುವುದು: ‘ಮೋಶೆಗೆ ಏನಾಗಿದೆಯೋ ನಮಗೆ ಗೊತ್ತಿಲ್ಲ. ಹಾಗಾಗಿ ಈ ದೇಶದಿಂದ ನಮ್ಮನ್ನು ಹೊರಗೆ ನಡೆಸುವುದಕ್ಕಾಗಿ ನಾವು ಒಂದು ದೇವರನ್ನು ಮಾಡೋಣ.’
‘ಸರಿ,’ ಎನ್ನುತ್ತಾನೆ ಮೋಶೆಯ ಅಣ್ಣ ಆರೋನನು. ಅಲ್ಲದೆ, ‘ನಿಮ್ಮ ಚಿನ್ನದ ಕಿವಿಯೋಲೆಗಳನ್ನು ತೆಗೆದು ನನ್ನ ಬಳಿಗೆ ತನ್ನಿರಿ’ ಎಂದು ಅವನು ಹೇಳುತ್ತಾನೆ. ಜನರು ತಂದುಕೊಡುತ್ತಾರೆ. ಆರೋನನು ಅವನ್ನು ಕರಗಿಸಿ, ಒಂದು ಚಿನ್ನದ ಬಸವನನ್ನು ಮಾಡುತ್ತಾನೆ. ಮತ್ತು ಜನರು, ‘ಇದೇ ನಮ್ಮನ್ನು ಐಗುಪ್ತದೇಶದಿಂದ ಕರಕೊಂಡು ಬಂದ ದೇವರು!’ ಎಂದು ಹೇಳುತ್ತಾರೆ. ಆಗ ಇಸ್ರಾಯೇಲ್ಯರು ಒಂದು ದೊಡ್ಡ ಉತ್ಸವ ಮಾಡಿ, ಚಿನ್ನದ ಬಸವನನ್ನು ಪೂಜಿಸುತ್ತಾರೆ.
ಯೆಹೋವನು ಇದನ್ನು ನೋಡಿ ಬಹಳ ಕೋಪಗೊಳ್ಳುತ್ತಾನೆ. ಆದುದರಿಂದ ಅವನು ಮೋಶೆಗೆ, ‘ನೀನು ಬೇಗನೆ ಬೆಟ್ಟದಿಂದ ಕೆಳಗೆ ಇಳಿದುಹೋಗು. ಜನರು ತುಂಬಾ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆ. ಅವರು ನನ್ನ ನಿಯಮಗಳನ್ನು ಮರೆತುಬಿಟ್ಟು, ಚಿನ್ನದ ಬಸವನಿಗೆ ಅಡ್ಡಬೀಳುತ್ತಿದ್ದಾರೆ’ ಎಂದು ತಿಳಿಸುತ್ತಾನೆ.
ಮೋಶೆಯು ಅವಸರ ಅವಸರವಾಗಿ ಬೆಟ್ಟದಿಂದ ಇಳಿದುಬರುತ್ತಾನೆ. ಅವನು ಹತ್ತಿರ ಬಂದಾಗ ಜನರು ಹಾಡುತ್ತಾ ಚಿನ್ನದ ಬಸವನ ಸುತ್ತಲೂ ಕುಣಿದಾಡುತ್ತಾ ಇರುವುದನ್ನು ಕಾಣುತ್ತಾನೆ! ಮೋಶೆ ಎಷ್ಟು ಕೋಪಗೊಳ್ಳುತ್ತಾನೆಂದರೆ ನಿಯಮಗಳಿದ್ದ ಆ ಎರಡು ಕಲ್ಲಿನ ಹಲಗೆಗಳನ್ನು ನೆಲಕ್ಕೆ ಎಸೆದುಬಿಡುತ್ತಾನೆ. ಅವು ಒಡೆದು ಚೂರು ಚೂರಾಗುತ್ತವೆ. ಅನಂತರ ಅವನು ಬಂಗಾರದ ಬಸವನನ್ನು ತೆಗೆದು ಅದನ್ನು ಬೆಂಕಿಯಿಂದ ಕರಗಿಸಿ ಪುಡಿಪುಡಿಮಾಡುತ್ತಾನೆ.
ಜನರು ತುಂಬಾ ಕೆಟ್ಟ ವಿಷಯವನ್ನು ಮಾಡಿದ್ದಾರೆ. ಆದುದರಿಂದ ಮೋಶೆ ಕೆಲವು ಪುರುಷರಿಗೆ ತಮ್ಮ ಕತ್ತಿಗಳನ್ನು ಹಿಡಿದುಕೊಳ್ಳುವಂತೆ ಹೇಳುತ್ತಾನೆ. ‘ಚಿನ್ನದ ಬಸವನನ್ನು ಪೂಜಿಸಿದ ಆ ಕೆಟ್ಟ ಜನರು ಸಾಯಲೇಬೇಕು’ ಅನ್ನುತ್ತಾನೆ ಮೋಶೆ. ಹೀಗೆ ಆ ಪುರುಷರು 3,000 ಜನರನ್ನು ಕೊಲ್ಲುತ್ತಾರೆ! ನಾವು ಯಾವುದೇ ಸುಳ್ಳು ದೇವರುಗಳನ್ನು ಆರಾಧಿಸದೆ, ಯೆಹೋವನನ್ನು ಮಾತ್ರ ಆರಾಧಿಸಬೇಕು ಎಂಬುದನ್ನು ಇದು ತೋರಿಸುವುದಿಲ್ಲವೇ?