ಅಧ್ಯಾಯ 40
ಮೋಶೆ ಬಂಡೆಯನ್ನು ಹೊಡೆಯುತ್ತಾನೆ
ರ್ಷಗಳು ಉರುಳಿದವು. ಹತ್ತು, ಇಪ್ಪತ್ತು, ಮೂವತ್ತು ಹೀಗೆ ಮೂವತ್ತೊಂಬತ್ತು ವರ್ಷಗಳು ದಾಟಿಹೋಗುತ್ತವೆ! ಇಸ್ರಾಯೇಲ್ಯರು ಇನ್ನೂ ಅರಣ್ಯದಲ್ಲಿದ್ದಾರೆ. ಆದರೆ ಈ ಎಲ್ಲಾ ವರ್ಷಗಳಲ್ಲಿ ಯೆಹೋವನು ತನ್ನ ಜನರನ್ನು ಪೋಷಿಸುತ್ತಾನೆ. ಹೇಗೆ? ಅವರಿಗೆ ಮನ್ನವನ್ನು ಒದಗಿಸುವ ಮೂಲಕ. ಹಗಲಲ್ಲಿ ಮೇಘಸ್ತಂಭದಿಂದಲೂ ಇರುಳಲ್ಲಿ ಅಗ್ನಿಸ್ತಂಭದಿಂದಲೂ ಅವರನ್ನು ನಡೆಸುವ ಮೂಲಕ. ಮಾತ್ರವಲ್ಲ ಈ ಎಲ್ಲಾ ವರ್ಷಗಳಲ್ಲಿ ಅವರು ಹಾಕಿದ ಬಟ್ಟೆಗಳು ಸವೆದು ಹರಿದು ಹೋಗಲಿಲ್ಲ ಮತ್ತು ಕಾಲುಗಳು ಬಾತುಹೋಗಲಿಲ್ಲ.
ಐಗುಪ್ತವನ್ನು ಬಿಟ್ಟಂದಿನಿಂದ ಲೆಕ್ಕ ಹಾಕುವುದಾದರೆ ಇದು 40ನೆಯ ವರ್ಷದ ಮೊದಲನೆಯ ತಿಂಗಳು. ಇಸ್ರಾಯೇಲ್ಯರು ಪುನಃ ಕಾದೇಶ್ನಲ್ಲಿ ಪಾಳೆಯ ಹಾಕುತ್ತಾರೆ. ಸುಮಾರು 40 ವರ್ಷಗಳಿಗೆ ಮುಂಚೆ ಕಾನಾನ್ ದೇಶವನ್ನು ಸಂಚರಿಸಿ ನೋಡಲು 12 ಮಂದಿ ಗೂಢಚಾರರನ್ನು ಕಳುಹಿಸಿದಾಗ ಇಸ್ರಾಯೇಲ್ಯರು ತಂಗಿದ್ದ ಸ್ಥಳ ಇದೇ ಆಗಿತ್ತು. ಇಲ್ಲಿ ಮೋಶೆಯ ಅಕ್ಕ ಮಿರ್ಯಾಮಳು ಸಾಯುತ್ತಾಳೆ. ಹಿಂದಿನಂತೆ ಇಲ್ಲಿ ಮತ್ತೆ ಇನ್ನೊಂದು ತೊಂದರೆ ಏಳುತ್ತದೆ.
ಜನರಿಗೆ ನೀರೇ ಸಿಕ್ಕುವುದಿಲ್ಲ. ಆದುದರಿಂದ ಅವರು ಮೋಶೆಯ ಹತ್ತಿರ ಬಂದು ‘ನಾವು ಸತ್ತಿದ್ದರೆ ಎಷ್ಟೋ ಒಳ್ಳೇದಿತ್ತು. ನಮ್ಮನ್ನು ಐಗುಪ್ತ ದೇಶದಿಂದ ಏನೂ ಬೆಳೆಯದ ಈ ಮರಳುಕಾಡಿಗೆ ಯಾಕೆ ಕರಕೊಂಡು ಬಂದಿ? ಇಲ್ಲಿ ಧಾನ್ಯವಿಲ್ಲ. ಅಂಜೂರ, ದ್ರಾಕ್ಷೆ, ದಾಳಿಂಬಗಳೂ ಇಲ್ಲ. ಕುಡಿಯುವುದಕ್ಕೆ ನೀರು ಸಹ ಇಲ್ಲ’ ಎಂದು ದೂರುತ್ತಾರೆ.
ಆಗ ಮೋಶೆ ಮತ್ತು ಆರೋನನು ಪ್ರಾರ್ಥನೆ ಮಾಡಲು ಗುಡಾರಕ್ಕೆ ಹೋದಾಗ, ಯೆಹೋವನು ಮೋಶೆಗೆ ಹೇಳುವುದು: ‘ಜನರನ್ನು ಒಟ್ಟುಗೂಡಿಸು. ಅನಂತರ ಅವರೆಲ್ಲರ ಮುಂದೆಯೇ ಆ ಬಂಡೆಗೆ ನೀರು ಕೊಡಬೇಕೆಂದು ಆಜ್ಞಾಪಿಸು. ಜನರಿಗಾಗಿ ಮತ್ತು ಅವರ ಪಶುಗಳಿಗಾಗಿ ಬೇಕಾದಷ್ಟು ನೀರು ಅದರೊಳಗಿಂದ ಬರುವುದು.’
ಆದುದರಿಂದ ಮೋಶೆಯು ಜನರನ್ನು ಒಟ್ಟುಗೂಡಿಸಿ, ‘ದೇವರಲ್ಲಿ ಭರವಸೆಯಿಲ್ಲದವರೇ, ಕೇಳಿರಿ! ನಾನು ಮತ್ತು ಆರೋನನು ಈ ಬಂಡೆಯೊಳಗಿಂದ ನಿಮಗಾಗಿ ನೀರನ್ನು ಬರಮಾಡಬೇಕೋ?’ ಎಂದು ಕೇಳುತ್ತಾನೆ. ಅನಂತರ ಮೋಶೆ ಕೋಲಿನಿಂದ ಬಂಡೆಯನ್ನು ಎರಡು ಸಾರಿ ಹೊಡೆಯುತ್ತಾನೆ. ಆಗ ಬಂಡೆಯೊಳಗಿಂದ ನೀರು ದೊಡ್ಡ ಪ್ರವಾಹದಂತೆ ಹೊರಹರಿಯುತ್ತದೆ. ಎಲ್ಲಾ ಜನರಿಗೆ ಮತ್ತು ಪಶುಗಳಿಗೆ ಕುಡಿಯಲು ಬೇಕಾದಷ್ಟು ನೀರು ಸಿಗುತ್ತದೆ.
ಆದರೆ ಯೆಹೋವನು ಮೋಶೆ ಆರೋನನ ಮೇಲೆ ಸಿಟ್ಟುಗೊಳ್ಳುತ್ತಾನೆ. ಯಾಕೆಂದು ನಿಮಗೆ ಗೊತ್ತೋ? ಯಾಕೆಂದರೆ ತಾವೇ ಬಂಡೆಯೊಳಗಿಂದ ನೀರನ್ನು ಬರಮಾಡಲಿದ್ದೇವೆಂದು ಮೋಶೆಆರೋನರು ಹೇಳಿದರು. ಆದರೆ ನಿಜವಾಗಿ ಹಾಗೆ ಮಾಡಿದ್ದು ಯೆಹೋವನೇ. ಈ ಸತ್ಯವನ್ನು ಮೋಶೆಆರೋನರು ಜನರಿಗೆ ತಿಳಿಸದಿದ್ದ ಕಾರಣ, ಅವರನ್ನು ತಾನು ಶಿಕ್ಷಿಸುವೆನೆಂದು ಯೆಹೋವನು ಹೇಳುತ್ತಾನೆ. ‘ನನ್ನ ಜನರನ್ನು ಕಾನಾನ್ ದೇಶದೊಳಗೆ ನೀವು ನಡೆಸುವುದಿಲ್ಲ’ ಎಂದು ಆತನು ಹೇಳುತ್ತಾನೆ.
ಬೇಗನೆ ಇಸ್ರಾಯೇಲ್ಯರು ಕಾದೇಶನ್ನು ಬಿಟ್ಟು ಹೊರಡುತ್ತಾರೆ. ಸ್ವಲ್ಪ ಸಮಯದ ತರುವಾಯ ಅವರು ಹೋರ್ ಬೆಟ್ಟಕ್ಕೆ ತಲುಪುತ್ತಾರೆ. ಇಲ್ಲಿ, ಬೆಟ್ಟದ ಮೇಲೆ ಆರೋನನು ಸಾಯುತ್ತಾನೆ. ಆಗ ಅವನಿಗೆ 123 ವರ್ಷ ಪ್ರಾಯವಾಗಿತ್ತು. ಇಸ್ರಾಯೇಲ್ಯರಿಗೆ ತುಂಬಾ ದುಃಖವಾಗುತ್ತದೆ, ಮತ್ತು 30 ದಿನಗಳ ತನಕ ಅವರು ಆರೋನನಿಗಾಗಿ ಶೋಕಿಸುತ್ತಾರೆ. ಈಗ ಅವನ ಮಗನಾದ ಎಲ್ಲಾಜಾರನು ಇಸ್ರಾಯೇಲ್ ಜನಾಂಗದ ಮಹಾ ಯಾಜಕನಾಗುತ್ತಾನೆ.