ಭಾಗ 4
ಇಸ್ರಾಯೇಲಿನ ಮೊದಲನೆಯ ಅರಸನಿಂದ ಬಾಬೆಲಿನಲ್ಲಿ ಬಂದಿವಾಸದ ತನಕ
ಸೌಲನು ಇಸ್ರಾಯೇಲಿನ ಮೊದಲನೆಯ ಅರಸನಾದನು. ಆದರೆ ಯೆಹೋವನು ಅವನನ್ನು ತಿರಸ್ಕರಿಸಿ ಅವನಿಗೆ ಬದಲಾಗಿ ದಾವೀದನನ್ನು ಅರಸನಾಗಿ ಆರಿಸಿದನು. ದಾವೀದನ ಕುರಿತು ನಾವು ಅನೇಕ ವಿಷಯಗಳನ್ನು ತಿಳಿದುಕೊಳ್ಳುತ್ತೇವೆ. ಅವನು ಯುವಕನಾಗಿದ್ದಾಗ ದೈತ್ಯ ಗೊಲ್ಯಾತನೊಂದಿಗೆ ಹೋರಾಡಿದನು. ಅನಂತರ, ಅಸೂಯೆಪಟ್ಟ ಅರಸ ಸೌಲನಿಂದ ದೂರ ಪಲಾಯನಗೈದನು. ಆಮೇಲೆ ದಾವೀದನು ಅವಿವೇಕದ ಒಂದು ಕೃತ್ಯ ಮಾಡದಂತೆ ಸುಂದರಿ ಅಬೀಗೈಲಳು ಅವನನ್ನು ತಡೆದಳು.
ತದನಂತರ, ಇಸ್ರಾಯೇಲಿನ ಅರಸನಾಗಿ ದಾವೀದನ ಸ್ಥಾನವನ್ನು ಅಲಂಕರಿಸಿದ ದಾವೀದನ ಪುತ್ರ ಸೊಲೊಮೋನನ ಕುರಿತು ಅನೇಕ ವಿಷಯಗಳನ್ನು ನಾವು ಕಲಿಯುತ್ತೇವೆ. ಇಸ್ರಾಯೇಲಿನ ಆರಂಭದ ಮೂವರು ಅರಸರಲ್ಲಿ ಪ್ರತಿಯೊಬ್ಬರು 40 ವರ್ಷ ರಾಜ್ಯವಾಳಿದರು. ಸೊಲೊಮೋನನ ಮರಣಾನಂತರ ಇಸ್ರಾಯೇಲು ಉತ್ತರ ರಾಜ್ಯ ಮತ್ತು ದಕ್ಷಿಣ ರಾಜ್ಯವೆಂದು ಎರಡು ಭಾಗಗಳಾಗಿ ವಿಂಗಡಗೊಂಡಿತು.
ಉತ್ತರದ ಹತ್ತು ಕುಲಗಳ ರಾಜ್ಯವು 257 ವರ್ಷ ಆಳ್ವಿಕೆ ನಡೆಸಿತು. ಬಳಿಕ ಅಶ್ಶೂರ್ಯರಿಂದ ನಾಶವಾಯಿತು. 133 ವರ್ಷಗಳ ತರುವಾಯ ದಕ್ಷಿಣದ ಎರಡು ಕುಲಗಳ ರಾಜ್ಯವು ಸಹ ನಾಶಮಾಡಲ್ಪಟ್ಟಿತು. ಆಗ ಇಸ್ರಾಯೇಲ್ಯರು ಬಾಬೆಲಿಗೆ ಬಂದಿವಾಸಿಗಳಾಗಿ ಒಯ್ಯಲ್ಪಟ್ಟರು. ಹೀಗೆ ಭಾಗ ನಾಲ್ಕು ಇತಿಹಾಸದ 510 ವರ್ಷಗಳನ್ನು ಆವರಿಸುತ್ತದೆ. ಆ ಸಮಯದಲ್ಲಿ ನಡೆದ ಅನೇಕ ರೋಮಾಂಚಕ ಘಟನೆಗಳನ್ನು ನಾವೀಗ ನೋಡಲಿರುವೆವು.