ಅಧ್ಯಾಯ 79
ಸಿಂಹಗಳ ಗವಿಯಲ್ಲಿ ದಾನಿಯೇಲ
ಅಯ್ಯೋ! ದಾನಿಯೇಲನು ಬಹಳಷ್ಟು ಆಪತ್ತಿನಲ್ಲಿದ್ದಾನೆಂದು ಕಾಣಿಸುತ್ತದೆ. ಆದರೆ ಸಿಂಹಗಳು ಅವನಿಗೇನೂ ಹಾನಿಮಾಡುತ್ತಿಲ್ಲ! ಏಕೆಂದು ನಿಮಗೆ ಗೊತ್ತೋ? ಇಲ್ಲಿ ಈ ಸಿಂಹಗಳೊಂದಿಗೆ ದಾನಿಯೇಲನನ್ನು ಹಾಕಿದವರು ಯಾರು? ನಾವು ನೋಡೊಣ.
ದಾರ್ಯಾವೆಷ ಎಂಬವನು ಈಗ ಬಾಬೆಲಿನ ಅರಸನಾಗಿರುತ್ತಾನೆ. ಅವನಿಗೆ ದಾನಿಯೇಲನೆಂದರೆ ಬಹಳ ಇಷ್ಟ. ಯಾಕೆಂದರೆ ದಾನಿಯೇಲನು ಬಹು ದಯಾಳು ಮತ್ತು ವಿವೇಕಿ. ದಾರ್ಯಾವೆಷನು ದಾನಿಯೇಲನನ್ನು ತನ್ನ ರಾಜ್ಯದಲ್ಲಿ ಒಬ್ಬ ಮುಖ್ಯಾಧಿಕಾರಿಯಾಗಿ ನೇಮಿಸುತ್ತಾನೆ. ಇದರಿಂದ ಕೆಲವರು ದಾನಿಯೇಲನ ಮೇಲೆ ಹೊಟ್ಟೆಕಿಚ್ಚು ಪಡುತ್ತಾರೆ. ಅವರು ಏನು ಮಾಡುತ್ತಾರೆ ಗೊತ್ತೇ?
ಅವರು ದಾರ್ಯಾವೆಷನ ಬಳಿಗೆ ಹೋಗಿ, ‘ಓ ಅರಸನೇ, ಮೂವತ್ತು ದಿನಗಳ ತನಕ ಯಾರೂ ರಾಜನಾದ ನಿನ್ನನ್ನು ಬಿಟ್ಟು ಬೇರೆ ಯಾವ ದೇವರಿಗಾಗಲಿ ಮನುಷ್ಯನಿಗಾಗಲಿ ಪ್ರಾರ್ಥನೆ ಮಾಡಬಾರದೆಂಬ ನಿಯಮವನ್ನು ನೀನು ಜಾರಿಗೆ ತರಬೇಕೆಂದು ನಾವು ಆಲೋಚನೆಮಾಡಿಕೊಂಡಿದ್ದೇವೆ. ಯಾವನಾದರೂ ಆ ನಿಯಮವನ್ನು ಮೀರಿ ನಡೆಯುವಲ್ಲಿ ಅವನನ್ನು ಸಿಂಹಗಳ ಗವಿಯಲ್ಲಿ ಹಾಕಬೇಕು’ ಎಂದು ಹೇಳುತ್ತಾರೆ. ಈ ಜನರು ಈ ನಿಯಮವನ್ನು ಜಾರಿಗೆ ತರಲು ಏಕೆ ಹೇಳುತ್ತಿದ್ದಾರೆಂದು ದಾರ್ಯಾವೆಷನಿಗೆ ಗೊತ್ತಿಲ್ಲ. ಆದರೆ ಅದೊಂದು ಒಳ್ಳೆಯ ಆಲೋಚನೆಯೆಂದು ಅವನೆಣಿಸುವುದರಿಂದ ಆ ನಿಯಮವನ್ನು ಜಾರಿಗೆ ತರುತ್ತಾನೆ. ಈಗ ಈ ನಿಯಮವನ್ನು ಯಾರಿಂದಲೂ ಬದಲಾಯಿಸಸಾಧ್ಯವಿಲ್ಲ.
ಈ ನಿಯಮದ ಕುರಿತು ದಾನಿಯೇಲನಿಗೆ ತಿಳಿದಾಗ ಸಹ ಅವನು ಯಾವಾಗಲೂ ಮಾಡುತ್ತಿದ್ದಂತೆ ಮನೆಗೆ ಹೋಗಿ ಪ್ರಾರ್ಥನೆ ಮಾಡುತ್ತಾನೆ. ದಾನಿಯೇಲನು ಯೆಹೋವನಿಗೆ ಪ್ರಾರ್ಥನೆ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಆ ದುರ್ಜನರಿಗೆ ತಿಳಿದಿತ್ತು. ಅವರಿಗೆ ಸಂತೋಷವಾಗುತ್ತದೆ ಯಾಕೆಂದರೆ ದಾನಿಯೇಲನನ್ನು ಮುಗಿಸಿಬಿಡುವ ಅವರ ಯೋಜನೆಯು ಸಫಲವಾಗುವಂತೆ ಕಾಣಿಸುತ್ತದೆ.
ಈ ನಿಯಮವನ್ನು ಈ ಪುರುಷರು ಜಾರಿಗೆ ತರಲು ಬಯಸಿದ್ದೇಕೆಂದು ಅರಸ ದಾರ್ಯಾವೆಷನಿಗೆ ತಿಳಿದಾಗ ಅವನಿಗೆ ತುಂಬಾ ವ್ಯಸನವಾಗುತ್ತದೆ. ಆದರೆ ನಿಯಮವನ್ನು ಬದಲಾಯಿಸಲು ಅವನಿಂದಲೂ ಸಾಧ್ಯವಿಲ್ಲ. ಹೀಗೆ ದಾನಿಯೇಲನನ್ನು ಸಿಂಹಗಳ ಗವಿಗೆ ಎಸೆಯುವ ಆಜ್ಞೆಯನ್ನು ಅವನು ಕೊಡಲೇಬೇಕಾಗುತ್ತದೆ. ಆದರೆ ಅರಸನು ದಾನಿಯೇಲನಿಗೆ ಹೇಳುವುದು: ‘ನೀನು ಸೇವಿಸುವ ನಿನ್ನ ದೇವರು ನಿನ್ನನ್ನು ರಕ್ಷಿಸುವನೆಂದು ನಾನು ನಂಬುತ್ತೇನೆ.’
ದಾರ್ಯಾವೆಷನು ಎಷ್ಟು ಕಳವಳಗೊಂಡನೆಂದರೆ ಅವನಿಗೆ ಆ ರಾತ್ರಿ ನಿದ್ದೆಯೇ ಬರುವುದಿಲ್ಲ. ಮಾರಣೆಯ ದಿನ ಬೆಳಗ್ಗೆ ಅವನು ಸಿಂಹಗಳ ಗವಿಯ ಬಳಿ ಓಡಿ ಹೋಗುತ್ತಾನೆ. ಅವನು ಮೇಲಿಂದ ಬಗ್ಗಿ ನೋಡುತ್ತಿರುವುದು ನಿಮಗೆ ಕಾಣಿಸುತ್ತದೋ? ಅವನು ಕೂಗಿಕೇಳುವುದು: ‘ದಾನಿಯೇಲನೇ, ಜೀವಸ್ವರೂಪನಾದ ದೇವರ ಸೇವಕನೇ! ನೀನು ಸೇವಿಸುವ ನಿನ್ನ ದೇವರು ನಿನ್ನನ್ನು ಸಿಂಹಗಳಿಂದ ರಕ್ಷಿಸಿದನೋ?’
ಅದಕ್ಕೆ ದಾನಿಯೇಲನು, ‘ದೇವರು ತನ್ನ ದೂತನನ್ನು ಕಳುಹಿಸಿ ಸಿಂಹಗಳ ಬಾಯಿಗಳನ್ನು ಬಂಧಿಸಿದನು. ಅವುಗಳಿಂದ ನನಗೆ ಯಾವ ಹಾನಿಯೂ ಆಗಲಿಲ್ಲ.’ ಎಂದುತ್ತರಿಸುತ್ತಾನೆ.
ಅರಸನಿಗೆ ಬಹು ಸಂತೋಷವಾಗುತ್ತದೆ. ದಾನಿಯೇಲನನ್ನು ಗವಿಯೊಳಗಿಂದ ಮೇಲಕ್ಕೆತ್ತುವಂತೆ ಅವನು ಅಪ್ಪಣೆಕೊಡುತ್ತಾನೆ. ಅನಂತರ ದಾನಿಯೇಲನನ್ನು ಸಾಯಿಸಲು ಪ್ರಯತ್ನಿಸಿದ ಆ ದುರ್ಜನರನ್ನು ಆ ಸಿಂಹಗಳ ಗವಿಗೆ ಹಾಕಿಸುತ್ತಾನೆ. ಅವರು ಗವಿಯ ತಳವನ್ನು ಮುಟ್ಟುವುದಕ್ಕೆ ಮುಂಚೆಯೇ ಸಿಂಹಗಳು ಅವರ ಮೇಲೆ ಹಾರಿ ಅವರನ್ನು ಹಿಡಿದು ಎಲುಬುಗಳನ್ನೆಲ್ಲಾ ಚೂರುಚೂರು ಮಾಡುತ್ತವೆ.
ಆಗ ಅರಸ ದಾರ್ಯಾವೆಷನು ತನ್ನ ರಾಜ್ಯದ ಜನರೆಲ್ಲರಿಗೆ ಹೀಗೆ ಬರೆಯುತ್ತಾನೆ: ‘ದಾನಿಯೇಲನ ದೇವರಿಗೆ ಪ್ರತಿಯೊಬ್ಬನು ಗೌರವ ತೋರಿಸಬೇಕೆಂಬುದು ನನ್ನ ಆಜ್ಞೆ. ಆತನು ಮಹಾ ಅದ್ಭುತಗಳನ್ನು ನಡಿಸುತ್ತಾನೆ. ಸಿಂಹಗಳ ಬಾಯಿಂದ ದಾನಿಯೇಲನನ್ನು ರಕ್ಷಿಸಿದವನು ಆತನೇ.’