ಭಾಗ 6
ಯೇಸುವಿನ ಜನನದಿಂದ ಮರಣದ ತನಕ
ದೇವರು ಗಬ್ರಿಯೇಲನೆಂಬ ದೇವದೂತನನ್ನು ಮರಿಯಳೆಂಬ ಒಳ್ಳೆಯ ಯುವತಿಯ ಬಳಿಗೆ ಕಳುಹಿಸಿದನು. ಆಕೆ ಒಂದು ಮಗುವನ್ನು ಹೆರುವಳೆಂದು ಮತ್ತು ಅವನು ರಾಜನಾಗಿ ಸದಾಕಾಲ ಆಳುವನೆಂದು ಆ ದೂತನು ಅವಳಿಗೆ ತಿಳಿಸಿದನು. ಆ ಕೂಸು ಅಂದರೆ ಯೇಸು ಒಂದು ಹಟ್ಟಿಯಲ್ಲಿ ಜನಿಸಿದನು. ಕುರುಬರು ಅಲ್ಲಿ ಹೋಗಿ ಅವನನ್ನು ನೋಡಿದರು. ತದನಂತರ, ಒಂದು ನಕ್ಷತ್ರವು ಪೂರ್ವ ದೇಶದ ಜನರನ್ನು ಈ ಎಳೆಯ ಕೂಸಿನ ಬಳಿಗೆ ನಡೆಸಿತು. ಆ ನಕ್ಷತ್ರವನ್ನು ಅವರು ಕಾಣುವಂತೆ ಮಾಡಿದವನು ಯಾರೆಂದು ನಾವು ಕಲಿಯಲಿದ್ದೇವೆ. ಅಲ್ಲದೆ ಯೇಸುವನ್ನು ಕೊಲ್ಲಲು ಮಾಡಲಾದ ಪ್ರಯತ್ನಗಳಿಂದ ಅವನು ಹೇಗೆ ಸಂರಕ್ಷಿಸಲ್ಪಟ್ಟನೆಂದೂ ಕಲಿಯುತ್ತೇವೆ.
ಆಮೇಲೆ, ಯೇಸು 12 ವರ್ಷ ಪ್ರಾಯದಲ್ಲಿ ದೇವಾಲಯದಲ್ಲಿ ಬೋಧಕರೊಂದಿಗೆ ಮಾತಾಡಿದ್ದನ್ನು ನಾವು ಕಾಣುತ್ತೇವೆ. ಇದಾಗಿ ಹದಿನೆಂಟು ವರ್ಷಗಳ ಅನಂತರ ಯೇಸುವಿಗೆ ದೀಕ್ಷಾಸ್ನಾನವಾಯಿತು. ಅನಂತರ, ದೇವರು ಅವನನ್ನು ಭೂಮಿಗೆ ಯಾಕಾಗಿ ಕಳುಹಿಸಿದನೋ ಆ ಕೆಲಸವನ್ನು ಮಾಡಲು ಅಂದರೆ ದೇವರ ರಾಜ್ಯದ ಕುರಿತು ಸಾರಲು ಮತ್ತು ಕಲಿಸಲು ಅವನು ಪ್ರಾರಂಭಿಸಿದನು. ಈ ಕಾರ್ಯದಲ್ಲಿ ನೆರವಾಗಲು ಯೇಸು 12 ಮಂದಿ ಪುರುಷರನ್ನು ಆರಿಸಿಕೊಂಡು, ಅವರನ್ನು ತನ್ನ ಅಪೊಸ್ತಲರನ್ನಾಗಿ ಮಾಡಿದನು.
ಯೇಸು ಅನೇಕ ಅದ್ಭುತಗಳನ್ನೂ ಮಾಡಿದನು. ಕೆಲವೇ ಮೀನುಗಳಿಂದ ಮತ್ತು ರೊಟ್ಟಿಗಳಿಂದ ಅವನು ಸಾವಿರಾರು ಜನರಿಗೆ ಉಣಿಸಿದನು. ರೋಗಿಗಳನ್ನು ವಾಸಿಮಾಡಿದನು. ಸತ್ತವರನ್ನು ಕೂಡ ಎಬ್ಬಿಸಿದನು. ಯೇಸುವಿನ ಜೀವನದ ಕೊನೆಯಲ್ಲಿ ಸಂಭವಿಸಿದ ಅನೇಕ ಸಂಗತಿಗಳ ಕುರಿತು ಮತ್ತು ಅವನು ಹೇಗೆ ಕೊಲ್ಲಲ್ಪಟ್ಟನೆಂಬದರ ಕುರಿತು ನಾವು ಕೊನೆಯಲ್ಲಿ ಕಲಿಯುತ್ತೇವೆ. ಯೇಸು ಸುಮಾರು ಮೂರೂವರೆ ವರ್ಷ ಸಾರಿದನು. ಹೀಗೆ ಭಾಗ ಆರು ಮೂವತ್ತನಾಲ್ಕು ವರ್ಷಗಳಿಗಿಂತ ತುಸು ಹೆಚ್ಚಿನ ಸಮಯಾವಧಿಯನ್ನು ಆವರಿಸುತ್ತದೆ.