ಅಧ್ಯಾಯ 49
ಗಲಿಲಾಯಕ್ಕೆ ಇನ್ನೊಮ್ಮೆ ಸಾರುವ ಸಂಚಾರ
ಸುಮಾರು ಎರಡು ವರ್ಷಗಳ ತೀವ್ರ ಸಾರುವಿಕೆಯ ಅನಂತರ, ಯೇಸುವೀಗ ಕಾರ್ಯವನ್ನು ನಿಧಾನಿಸಿ, ಸುಲಭವಾಗಿ ತಕ್ಕೊಳ್ಳಲಿದ್ದನೋ? ಬದಲಿಗೆ ಅವನು ಇನ್ನೂ ಒಂದು ಸಂಚಾರವನ್ನು, ಗಲಿಲಾಯಕ್ಕೆ ಮೂರನೇ ಸಂಚಾರವನ್ನು ಕೈಕೊಳ್ಳುವ ಮೂಲಕ ತನ್ನ ಸಾರುವ ಚಟುವಟಿಕೆಯನ್ನು ವಿಸ್ತರಿಸುತ್ತಾನೆ. ಅವನು ಕ್ಷೇತ್ರದ ಎಲ್ಲಾ ನಗರಗಳನ್ನು ಮತ್ತು ಹಳ್ಳಿಗಳನ್ನು ಸಂದರ್ಶಿಸುತ್ತಾ, ಸಭಾ ಮಂದಿರಗಳಲ್ಲಿ ಕಲಿಸುತ್ತಾ, ರಾಜ್ಯದ ಸುವಾರ್ತೆಯನ್ನು ಸಾರುತ್ತಿದ್ದನು. ಈ ಸಂಚಾರದಲ್ಲಿ ಅವನೇನನ್ನು ಕಾಣುತ್ತಾನೋ ಅದರಿಂದ ಸಾರುವ ಕಾರ್ಯವನ್ನು ಇನ್ನೂ ತೀವ್ರಗೊಳಿಸುವ ಅಗತ್ಯವಿದೆಂಬದು ಅವನಿಗೆ ಎಂದಿಗಿಂತಲೂ ಹೆಚ್ಚು ಖಾತ್ರಿಯಾಗುತ್ತದೆ.
ಯೇಸು ಹೋದಲ್ಲಿಲ್ಲಾ, ಜನರ ಗುಂಪುಗಳಿಗೆ ಆತ್ಮಿಕ ವಾಸಿ ಮತ್ತು ಆದರಣೆಯು ಅಗತ್ಯವಿರುವದನ್ನು ಕಂಡನು. ಅವರು ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದರು ಮತ್ತು ಅವನು ಅವರ ಮೇಲೆ ಕನಿಕರ ಪಟ್ಟನು. ಅವನು ತನ್ನ ಶಿಷ್ಯರಿಗೆ ಅಂದದ್ದು: “ಬೆಳೆಯು ಬಹಳ, ಕೆಲಸದವರು ಸ್ವಲ್ಪ; ಆದ್ದರಿಂದ ಬೆಳೆಯ ಯಜಮಾನನನ್ನು—ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿ ಕೊಳ್ಳಿರಿ.”
ಕಾರ್ಯತತ್ಪರತೆಯ ಯೋಜನೆ ಯೇಸುವಿಗಿತ್ತು. ಸುಮಾರು ಒಂದು ವರ್ಷದ ಹಿಂದೆ ತಾನು ಆರಿಸಿಕೊಂಡ ಹನ್ನೆರಡು ಅಪೊಸ್ತಲರನ್ನು ಅವನು ಕರೆದು, ಅವರನ್ನು ಇಬ್ಬಿಬ್ಬರಾಗಿ ವಿಂಗಡಿಸಿ ಸುವಾರ್ತಾ ಸಾರುವವರ ಆರು ತಂಡಗಳಾಗಿ ಮಾಡಿ, ಹೀಗೆ ಸೂಚನೆಯಿತ್ತನು: “ಅನ್ಯ ಜನಗಳ ಕಡೆಗೆ ಹೋಗಬೇಡಿರಿ. ಸಮಾರ್ಯರ ಊರೊಳಗೆ ಕಾಲಿಡಬೇಡಿರಿ. ಇವರನ್ನು ಬಿಟ್ಟು ತಪ್ಪಿಸಿಕೊಂಡಿರುವ ಕುರಿಗಳಂತಿರುವ ಇಸ್ರಾಯೇಲನ ಮನೆತನದವರ ಬಳಿಗೆ ಹೋಗಿರಿ. ಪರಲೋಕ ರಾಜ್ಯವು ಸಮೀಪವಾಯಿತೆಂದು ಸಾರಿ ಹೇಳುತ್ತಾ ಹೋಗಿರಿ.”
ಯಾವುದರ ಕುರಿತು ಅವರು ಸಾರಬೇಕಾಗಿತ್ತೋ ಅದು, ಮಾದರಿ ಪ್ರಾರ್ಥನೆಯಲ್ಲಿ ಯಾವುದಕ್ಕಾಗಿ ಪ್ರಾರ್ಥಿಸುವಂತೆ ಆತನು ಅವರಿಗೆ ಕಲಿಸಿದ್ದನೋ ಆ ರಾಜ್ಯವಾಗಿತ್ತು. ದೇವರ ರಾಜ್ಯವು ಸಮೀಪವಾಗಿದ್ದದ್ದು ದೇವರ ನಿಯುಕ್ತ ರಾಜನಾದ ಯೇಸು ಕ್ರಿಸ್ತನು ಅಲ್ಲಿ ಹಾಜರಿದ್ದ ಅರ್ಥದಲ್ಲಯೇ. ಆ ಅತಿಮಾನುಷ ಸರಕಾರದ ಪ್ರತಿನಿಧಿಗಳಾಗಿ ತನ್ನ ಶಿಷ್ಯರ ವಿಶ್ವಾಸಾರ್ಹತೆಯನ್ನು ರುಜುಪಡಿಸಲು ಯೇಸು ಅವರಿಗೆ ರೋಗಿಗಳನ್ನು ವಾಸಿಮಾಡಲು ಮತ್ತು ಸತ್ತವರನ್ನು ಎಬ್ಬಿಸಲೂ ಅಧಿಕಾರವನ್ನು ಕೊಟ್ಟನು. ಈ ಸೇವೆಯನ್ನು ಉಚಿತವಾಗಿ ನಡಿಸುವಂತೆ ಅವನು ಅವರಿಗೆ ಸೂಚಿಸುತ್ತಾನೆ.
ಅವರ ಸಾರುವ ಸಂಚಾರಕ್ಕಾಗಿ ಯಾವುದೇ ಐಹಿಕ ಸಿದ್ಧತೆಗಳನ್ನು ಮಾಡದಿರುವಂತೆ ಅವನು ಅನಂತರ ಸೂಚಿಸುತ್ತಾನೆ. “ನಿಮ್ಮ ಹಮ್ಮೀಣಿಗಳಲ್ಲಿ ಹೊನ್ನು ಹಣ ದುಡ್ಡುಗಳನ್ನೂ ದಾರಿಗೆ ಹಸಿಬೆಯನ್ನೂ ಎರಡು ಅಂಗಿ ಕೆರ ಕೋಲು ಮೊದಲಾದವನ್ನು ಸೌರಿಸಿಕೊಳ್ಳಬೇಡಿರಿ. ಆಳು ಅಂಬಲಿಗೆ ಯೋಗ್ಯನಷ್ಟೆ.” ಯಾರು ಸಂದೇಶವನ್ನು ಗಣ್ಯಮಾಡುತ್ತಾರೋ ಅವರು ಪ್ರತಿಕ್ರಿಯೆ ತೋರಿಸಿ, ಆಹಾರವನ್ನೂ ಆಶ್ರಯವನ್ನೂ ಒದಗಿಸುವರು. ಮತ್ತು ಯೇಸು ಅಂದದ್ದು: “ನೀವು ಯಾವೊಂದು ಊರಿಗೆ ಅಥವಾ ಹಳ್ಳಿಗೆ ಸೇರಿದಾಗ ಅಲ್ಲಿ ಯೋಗ್ಯರು ಯಾರೆಂದು ವಿಚಾರಣೆ ಮಾಡಿ ಮುಂದಕ್ಕೆ ಹೊರಡುವ ತನಕ ಅವರಲ್ಲಯೇ ಇರ್ರಿ.”
ರಾಜ್ಯದ ಸಂದೇಶದೊಂದಿಗೆ ಮನೆಯವರನ್ನು ಗೋಚರಿಸುವ ವಿಧಾನವನ್ನು ಯೇಸು ಅನಂತರ ಹೇಳಿಕೊಟ್ಟನು. “ಮನೆಯೊಳಗೆ ಹೋಗುವಾಗ ಶುಭವಾಗಲಿ ಅನ್ನಿರಿ. ಆ ಮನೆಯವರು ಯೋಗ್ಯರಾಗಿದ್ದರೆ ನಿಮ್ಮ ಆಶೀರ್ವಾದವು ಅವರಿಗೆ ಆಗಲಿ. ಅಯೋಗ್ಯರಾಗಿದ್ದರೆ ನಿಮ್ಮ ಆಶೀರ್ವಾದವು ನಿಮಗೆ ಹಿಂದೆ ಬರಲಿ. ಯಾರಾದರೂ ನಿಮ್ಮನ್ನು ಸೇರಿಸಿಕೊಳ್ಳದೆಯೂ ನಿಮ್ಮ ವಾಕ್ಯಗಳನ್ನು ಕೇಳದೆಯೂ ಹೋದರೆ ನೀವು ಆ ಮನೆಯನ್ನಾಗಲಿ ಊರನ್ನಾಗಲಿ ಬಿಟ್ಟು ಹೋಗುವಾಗ ನಿಮ್ಮ ಕಾಲಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ.”
ಅವರ ಸಂದೇಶವನ್ನು ತಿರಸ್ಕರಿಸುವ ಊರಿನ ವಿಷಯದಲ್ಲಿ, ಅವರ ಮೇಲೆ ಬರುವ ನ್ಯಾಯತೀರ್ಪು ಕಠಿಣವಾಗಿರುವದೆಂದು ಯೇಸು ಪ್ರಕಟಿಸುತ್ತಾ ಅಂದದ್ದು: “ನ್ಯಾಯವಿಚಾರಣೆಯ ದಿನದಲ್ಲಿ ಅಂಥ ಊರಿನ ಗತಿಯು ಸೊದೋಮ್ ಗಮೋರಗಳ ಸೀಮೆಯ ಗತಿಗಿಂತಲೂ ಕಠಿಣವಾಗಿರುವುದು.” ಮತ್ತಾಯ 9:35–10:15; ಮಾರ್ಕ 6:6-12; ಲೂಕ 9:1-5.
▪ ಯೇಸು ಗಲಿಲಾಯಕ್ಕೆ ತನ್ನ ಮೂರನೇ ಸಾರುವ ಸಂಚಾರವನ್ನು ಯಾವಾಗ ಕೈಕೊಂಡನು, ಅದು ಅವನಿಗೆ ಯಾವ ಖಾತ್ರಿಯನ್ನು ಕೊಟ್ಟಿತು?
▪ ತನ್ನ 12 ಮಂದಿ ಅಪೊಸ್ತಲರನ್ನು ಹೊರಗೆ ಸಾರಲು ಕಳುಹಿಸಿದಾಗ, ಯಾವ ಸೂಚನೆಗಳನ್ನು ಅವರಿಗೆ ಕೊಟ್ಟನು?
▪ ದೇವರ ರಾಜ್ಯ ಸಮೀಪವಾಗಿದೆ ಎಂದು ಶಿಷ್ಯರು ಕಲಿಸುವದು ಸರಿಯಾಗಿತ್ತು ಏಕೆ?