ಅಧ್ಯಾಯ 51
ನಿಷ್ಕೃಷ್ಟವಾದ ಸಮಯ ಸಾಂಗತ್ಯ, ಉಚಿತ ಪ್ರಮಾಣದಲ್ಲಿ
ಪ್ರಧಾನವಾದ ಒತ್ತನ್ನು ನಿಮ್ಮ ಬೋಧನೆಯ ಗುಣಮಟ್ಟಕ್ಕೆ ಕೊಡಬೇಕಾಗಿರುವುದಾದರೂ, ನಿಮ್ಮ ಭಾಷಣಗಳ ಸಮಯ ಸಾಂಗತ್ಯಕ್ಕೂ ಗಮನ ಕೊಡುವುದು ಸೂಕ್ತವಾದದ್ದಾಗಿದೆ. ನಮ್ಮ ಕೂಟಗಳು ನಿರ್ದಿಷ್ಟ ಸಮಯದಲ್ಲಿ ಆರಂಭಗೊಂಡು ನಿಗದಿತ ಸಮಯಕ್ಕೆ ಮುಗಿಯುವಂತೆ ಶೆಡ್ಯೂಲ್ ಮಾಡಲ್ಪಟ್ಟಿವೆ. ಇದನ್ನು ಸಾಧಿಸಬೇಕಾದರೆ, ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬನ ಸಹಕಾರವು ಅಗತ್ಯ.
ಬೈಬಲ್ ಸಮಯಗಳಲ್ಲಿ, ಜೀವಿತದ ಕುರಿತಾದ ಜನರ ದೃಷ್ಟಿಕೋನವು ಇಂದು ಅನೇಕ ಕಡೆಗಳಲ್ಲಿರುವ ಜನರ ದೃಷ್ಟಿಕೋನಕ್ಕಿಂತಲೂ ಭಿನ್ನವಾಗಿತ್ತು. ಆಗ ಸಮಯವನ್ನು ಸರಿಸುಮಾರಾಗಿ, ಅಂದರೆ “ಹೆಚ್ಚುಕಡಿಮೆ ಮೂರು ತಾಸಿಗೆ” ಅಥವಾ ‘ಹೆಚ್ಚುಕಡಿಮೆ ಹತ್ತು ತಾಸಿಗೆ’ ಎಂಬ ಮಾತುಗಳಲ್ಲಿ ವ್ಯಕ್ತಪಡಿಸಲಾಗುತ್ತಿತ್ತು. (ಮತ್ತಾ. 20:3-6, ಪಾದಟಿಪ್ಪಣಿ; ಯೋಹಾ. 1:39, ಪಾದಟಿಪ್ಪಣಿ) ದಿನನಿತ್ಯದ ಚಟುವಟಿಕೆಗಳ ವಿಷಯದಲ್ಲಿ ನಿಷ್ಕೃಷ್ಟವಾದ ಸಮಯ ಸಾಂಗತ್ಯವು ಚಿಂತೆಗೆ ಕಾರಣವಾಗಿದ್ದುದು ತುಂಬ ವಿರಳ. ಇಂದು ಜಗತ್ತಿನ ಕೆಲವು ಭಾಗಗಳಲ್ಲಿ, ಸಮಯದ ವಿಷಯದಲ್ಲಿ ಅದೇ ರೀತಿಯ ದೃಷ್ಟಿಕೋನವಿದೆ.
ಆದರೆ, ಸಮಯದ ವಿಷಯದಲ್ಲಿ ಸ್ಥಳಿಕ ಪದ್ಧತಿ ಅಥವಾ ವೈಯಕ್ತಿಕ ಆದ್ಯತೆಗಳು ಜನರನ್ನು ಅಷ್ಟು ಚಿಂತಿಸದಂತೆ ಮಾಡಬಹುದಾದರೂ, ಇದಕ್ಕೆ ತಕ್ಕದಾದ ಗಮನವನ್ನು ಕೊಡಲು ಕಲಿಯುವುದರಿಂದ ನಮಗೆ ಪ್ರಯೋಜನ ದೊರೆಯಬಲ್ಲದು. ಒಂದು ಕಾರ್ಯಕ್ರಮದಲ್ಲಿ ಅನೇಕರಿಗೆ ಭಾಗವಿರುವಾಗ, ಪ್ರತಿಯೊಂದು ಭಾಗಕ್ಕೆ ಕೊಡಲ್ಪಟ್ಟಿರುವ ಸಮಯದ ವಿಷಯದಲ್ಲಿ ಜಾಗ್ರತೆ ವಹಿಸುವ ಅಗತ್ಯವಿದೆ. “ಆದರೆ ಎಲ್ಲವೂ ಮರ್ಯಾದೆಯಿಂದಲೂ ಕ್ರಮದಿಂದಲೂ ನಡೆಯಲಿ” ಎಂಬ ಮೂಲತತ್ತ್ವವನ್ನು ನಮ್ಮ ಕೂಟದ ನೇಮಕಗಳ ಸಮಯ ಸಾಂಗತ್ಯಕ್ಕೆ ಸೂಕ್ತವಾಗಿ ಅನ್ವಯಿಸಸಾಧ್ಯವಿದೆ.—1 ಕೊರಿಂ. 14:40.
ಸಮಯ ಸಾಂಗತ್ಯಕ್ಕೆ ಅಂಟಿಕೊಳ್ಳುವ ವಿಧ. ತಯಾರಿಕೆಯೇ ಇದಕ್ಕಿರುವ ಕೀಲಿ ಕೈ. ಸಾಮಾನ್ಯವಾಗಿ, ಸಮಯ ಸಾಂಗತ್ಯದ ವಿಷಯದಲ್ಲಿ ಯಾರಿಗೆ ಕಷ್ಟವಾಗುತ್ತದೊ ಅಂಥ ಭಾಷಣಕಾರರು ಸಾಕಷ್ಟು ತಯಾರಿಯನ್ನು ಮಾಡಿರುವುದಿಲ್ಲ. ಅವರು ಮಿತಿಮೀರಿದ ಆತ್ಮವಿಶ್ವಾಸವುಳ್ಳವರಾಗಿರಬಹುದು. ಇಲ್ಲವೆ ಅವರು ತಯಾರಿಯನ್ನು ಮುಂದೂಡುತ್ತಾ, ಕೊನೆ ನಿಮಿಷದಲ್ಲಿ ಮಾಡಿರಬಹುದು. ಉತ್ತಮ ಸಮಯ ಸಾಂಗತ್ಯಕ್ಕಾಗಿರುವ ಮೂಲಭೂತ ಆಧಾರವು, ನಿಮ್ಮ ನೇಮಕದ ವಿಷಯದಲ್ಲಿ ನಿಮಗಿರುವ ಗಣ್ಯತೆ ಮತ್ತು ಚೆನ್ನಾಗಿ ತಯಾರಿಸಲು ನಿಮಗಿರುವ ಸಿದ್ಧಮನಸ್ಸೇ ಆಗಿದೆ.
ನಿಮಗೆ ವಾಚನದ ನೇಮಕವಿದೆಯೆ? ಪ್ರಥಮವಾಗಿ, 4ರಿಂದ 7ರ ವರೆಗಿನ ಪಾಠಗಳನ್ನು ಪುನರ್ವಿಮರ್ಶಿಸಿರಿ. ಇವುಗಳಲ್ಲಿ ನಿರರ್ಗಳತೆ, ಸೂಕ್ತವಾದ ನಿಲ್ಲಿಸುವಿಕೆ, ಅರ್ಥಒತ್ತು ಮತ್ತು ಪ್ರಧಾನ ವಿಚಾರಗಳನ್ನು ಒತ್ತಿಹೇಳುವುದರಂಥ ವಿಷಯಗಳಿವೆ. ಬಳಿಕ, ನಿಮಗೆ ನೇಮಿಸಲ್ಪಟ್ಟಿರುವ ವಿಷಯಭಾಗವನ್ನು ಗಟ್ಟಿಯಾಗಿ ಓದುವಾಗ ಆ ಸಲಹೆಯನ್ನು ಅನ್ವಯಿಸಿಕೊಳ್ಳಿರಿ. ಎಷ್ಟು ಸಮಯ ತೆಗೆದುಕೊಳ್ಳುತ್ತೀರೆಂದು ನೋಡಿರಿ. ನಿಯಮಿತ ಸಮಯದಲ್ಲಿ ಮುಗಿಸಲಿಕ್ಕಾಗಿ ನೀವು ಹೆಚ್ಚು ವೇಗವಾಗಿ ಓದಬೇಕಾಗಿದೆಯೊ? ಕಡಿಮೆ ಪ್ರಾಮುಖ್ಯವಾಗಿರುವ ಭಾಗಗಳಲ್ಲಿ ವೇಗವನ್ನು ಹೆಚ್ಚಿಸಿರಿ, ಆದರೆ ಪ್ರಮುಖ ವಿಚಾರಗಳನ್ನು ಒತ್ತಿಹೇಳಲಿಕ್ಕಾಗಿ ನಿಲ್ಲಿಸುವಿಕೆಯನ್ನೂ ನಿಧಾನವಾದ ಧಾಟಿಯಲ್ಲಿ ಮಾತಾಡುವುದನ್ನೂ ಮುಂದುವರಿಸಿರಿ. ಪುನಃ ಪುನಃ ಪ್ರ್ಯಾಕ್ಟಿಸ್ ಮಾಡಿರಿ. ನಿಮ್ಮ ನಿರರ್ಗಳ ಶೈಲಿಯು ಉತ್ತಮಗೊಂಡಂತೆ, ನಿಮ್ಮ ಸಮಯವನ್ನು ಹೊಂದಿಸಿಕೊಳ್ಳುವುದು ಹೆಚ್ಚು ಸುಲಭವಾಗುವುದು.
ನೀವು ಟಿಪ್ಪಣಿಯನ್ನು ಉಪಯೋಗಿಸುತ್ತಾ ಮಾತಾಡಲಿರುವಿರೊ? ನಿಮ್ಮ ಟಿಪ್ಪಣಿಯನ್ನು ಸವಿವರವಾಗಿ, ಅಂದರೆ ಸರಿಯಾದ ಸಮಯ ಸಾಂಗತ್ಯಕ್ಕಾಗಿ ಹೆಚ್ಚುಕಡಿಮೆ ಒಂದು ಹಸ್ತಪ್ರತಿಯಂತೆ ಬರೆದಿಡಬೇಕೆಂದಿಲ್ಲ. 25ನೆಯ ಪಾಠದಲ್ಲಿ ನೀವು ಹೆಚ್ಚು ಉತ್ತಮವಾದ ವಿಧವನ್ನು ಕಲಿತಿದ್ದೀರಿ. ಈ ಐದು ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿರಿ: (1) ಉತ್ತಮವಾದ ಮಾಹಿತಿಯನ್ನು ತಯಾರಿಸಿರಿ, ಆದರೆ ತೀರ ಹೆಚ್ಚು ವಿಷಯಗಳನ್ನಲ್ಲ. (2) ಮುಖ್ಯ ವಿಚಾರಗಳನ್ನು ಸ್ಪಷ್ಟವಾಗಿ ಮನಸ್ಸಿನಲ್ಲಿಟ್ಟುಕೊಳ್ಳಿರಿ, ಆದರೆ ಇಡೀ ವಾಕ್ಯಗಳನ್ನು ಬಾಯಿಪಾಠ ಮಾಡಿಕೊಳ್ಳಬೇಡಿರಿ. (3) ನಿಮ್ಮ ಭಾಷಣದ ಪ್ರತಿಯೊಂದು ಭಾಗಕ್ಕೆ ಎಷ್ಟು ಸಮಯವನ್ನು ಉಪಯೋಗಿಸಲಿದ್ದೀರಿ ಎಂಬುದನ್ನು ನಿಮ್ಮ ಹೊರಮೇರೆಯಲ್ಲಿ ಬರೆದಿಡಿರಿ ಅಥವಾ ನಿರ್ದಿಷ್ಟ ಅಂಶಗಳನ್ನು ತಲಪುವಾಗ ಎಷ್ಟು ಸಮಯ ದಾಟಿರಬೇಕು ಎಂಬುದನ್ನು ಗುರುತಿಸಿಡಿರಿ. (4) ತಯಾರಿಸುತ್ತಿರುವಾಗ ಸಮಯವು ಮೀರಿಹೋಗುತ್ತಿರುವುದನ್ನು ನೀವು ಕಂಡುಕೊಳ್ಳುವಲ್ಲಿ ಯಾವ ವಿವರಗಳನ್ನು ಬಿಟ್ಟುಬಿಡಬಹುದೆಂಬುದನ್ನು ಪರಿಗಣಿಸಿರಿ. (5) ನಿಮ್ಮ ಭಾಷಣ ನೀಡುವಿಕೆಯನ್ನು ಪ್ರ್ಯಾಕ್ಟಿಸ್ ಮಾಡಿರಿ.
ಪೂರ್ವಾಭ್ಯಾಸವು ಪ್ರಾಮುಖ್ಯವಾಗಿದೆ. ನೀವು ಪೂರ್ವಾಭ್ಯಾಸ ಮಾಡುವಾಗ, ನಿಮ್ಮ ಭಾಷಣದ ಪ್ರತಿ ಭಾಗದ ಸಮಯ ಸಾಂಗತ್ಯಕ್ಕೆ ಗಮನ ಕೊಡಿರಿ. ಇಡೀ ಭಾಷಣವು ನಿಗದಿತ ಸಮಯದೊಳಗೆ ಮುಗಿಯುವ ತನಕ ನಿಮ್ಮ ಭಾಷಣವನ್ನು ಪದೇ ಪದೇ ಪೂರ್ವಾಭ್ಯಾಸ ಮಾಡಿರಿ. ತೀರ ಹೆಚ್ಚು ವಿಷಯಗಳನ್ನು ಆ ಸಮಯಾವಧಿಯೊಳಕ್ಕೆ ತುರುಕಿಸಲು ಪ್ರಯತ್ನಿಸಬೇಡಿರಿ. ಸ್ವಲ್ಪ ಸಮಯವನ್ನು ಬದಿಗಿಡಿರಿ. ಏಕೆಂದರೆ ಸಭೆಯ ಮುಂದೆ ನೀವು ಕೊಡುವ ಭಾಷಣವು, ಖಾಸಗಿಯಾಗಿ ಪ್ರ್ಯಾಕ್ಟಿಸ್ ಮಾಡುವ ಭಾಷಣಕ್ಕಿಂತ ಸ್ವಲ್ಪ ಹೆಚ್ಚು ಸಮಯವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.
ಭಾಗಗಳಿಗೆ ಸಮಯವನ್ನು ತಕ್ಕದಾದ ಪ್ರಮಾಣದಲ್ಲಿ ಹಂಚುವುದು. ಒಳ್ಳೆಯ ಸಮಯ ಸಾಂಗತ್ಯವು, ಒಂದು ಭಾಷಣದ ಭಾಗಗಳಿಗೆ ಸಮಯವನ್ನು ತಕ್ಕದಾದ ಪ್ರಮಾಣದಲ್ಲಿ ಹಂಚುವುದಕ್ಕೆ ನಿಕಟವಾಗಿ ಸಂಬಂಧಿಸಿದೆ. ಹೆಚ್ಚಿನ ಸಮಯವನ್ನು ಭಾಷಣದ ಪ್ರಧಾನ ಭಾಗವನ್ನು ನೀಡುವುದರಲ್ಲಿ ವ್ಯಯಿಸಬೇಕು. ಏಕೆಂದರೆ ಬೋಧನೆಯ ಮುಖ್ಯಾಂಶಗಳು ಇರುವುದು ಅಲ್ಲಿಯೇ. ಪೀಠಿಕೆಯು, 38ನೆಯ ಪಾಠದಲ್ಲಿ ಚರ್ಚಿಸಲ್ಪಟ್ಟಿರುವ ಮೂರು ಉದ್ದೇಶಗಳನ್ನು ಪೂರೈಸುವಷ್ಟು ಉದ್ದವಾಗಿರಬೇಕಷ್ಟೇ. ಆದರೆ 39ನೆಯ ಪಾಠಕ್ಕೆ ಹೊಂದಿಕೆಯಲ್ಲಿ, ಪ್ರಧಾನ ಭಾಗವು ಪರಿಣಾಮಕಾರಿಯಾದ ಸಮಾಪ್ತಿಗೆ ಸಾಕಷ್ಟು ಸಮಯವಿಲ್ಲದಿರುವಷ್ಟು ದೀರ್ಘವಾಗಿರಬಾರದು.
ಉತ್ತಮ ಸಮಯ ಸಾಂಗತ್ಯವನ್ನು ಸಾಧಿಸಲು ನೀವು ಮಾಡುವ ಪ್ರಯತ್ನವು ಹೆಚ್ಚು ಉತ್ತಮವಾದ ಭಾಷಣದಲ್ಲಿ ಫಲಿಸಿ, ಕಾರ್ಯಕ್ರಮದಲ್ಲಿ ಭಾಗಗಳನ್ನು ಹೊಂದಿರುವವರಿಗೂ ಇಡೀ ಸಭೆಗೂ ನಿಮಗಿರುವ ಗೌರವವನ್ನು ತೋರಿಸುವುದು.