ಅಧ್ಯಾಯ 12
ಪ್ರಾರ್ಥನೆ ಮಾಡುವುದು ಹೇಗೆಂದು ಯೇಸು ಕಲಿಸುತ್ತಾನೆ
ನೀನು ಯೆಹೋವ ದೇವರೊಂದಿಗೆ ಮಾತಾಡುತ್ತೀಯಾ?— ನೀನು ದೇವರೊಂದಿಗೆ ಮಾತಾಡಬೇಕೆಂದು ಆತನು ಬಯಸುತ್ತಾನೆ. ನೀನು ದೇವರೊಂದಿಗೆ ಮಾತಾಡುವುದೇ ಪ್ರಾರ್ಥನೆಯಾಗಿದೆ. ಯೇಸು ಕೂಡ ತನ್ನ ತಂದೆಯೊಂದಿಗೆ ಮಾತಾಡುತ್ತಿದ್ದನು. ಅದಕ್ಕಾಗಿ ಕೆಲವೊಮ್ಮೆ ಅವನು ಯಾರೂ ಇಲ್ಲದ ಏಕಾಂತ ಸ್ಥಳಕ್ಕೆ ಹೋಗಲು ಬಯಸಿದನು. ಒಂದು ದಿನ ‘ಅವನು ಪ್ರಾರ್ಥಿಸಲಿಕ್ಕಾಗಿ ಏಕಾಂತವಾಗಿ ಬೆಟ್ಟಕ್ಕೆ ಹೋದನು. ಬಹಳ ಹೊತ್ತಿನ ತನಕ ಅವನು ಅಲ್ಲಿ ಒಬ್ಬನೇ ಇದ್ದನು’ ಎಂದು ಬೈಬಲು ಹೇಳುತ್ತದೆ.—ಮತ್ತಾಯ 14:23.
ಯೆಹೋವನೊಂದಿಗೆ ಏಕಾಂತವಾಗಿ ಮಾತಾಡಲು ನೀನು ಎಲ್ಲಿ ಹೋಗುತ್ತಿಯಾ?— ನೀನು ರಾತ್ರಿ ಮಲಗುವ ಮುಂಚೆ ಯೆಹೋವನೊಂದಿಗೆ ಮಾತಾಡಬಹುದು. ಆಗ ನಿನಗೆ ಏಕಾಂತವಾಗಿ ಪ್ರಾರ್ಥಿಸಲು ಆಗುತ್ತದೆ. ಈ ವಿಷಯದಲ್ಲಿ ಯೇಸು, ‘ನೀನು ಪ್ರಾರ್ಥನೆಮಾಡುವಾಗ ನಿನ್ನ ಕೋಣೆಯೊಳಗೆ ಹೋಗಿ ಬಾಗಿಲು ಮುಚ್ಚಿ ದೇವರಿಗೆ ಪ್ರಾರ್ಥನೆಮಾಡು’ ಎಂದು ಹೇಳಿದನು. (ಮತ್ತಾಯ 6:6) ನೀನು ದಿನಾಲೂ ರಾತ್ರಿ ಮಲಗುವ ಮುಂಚೆ ಯೆಹೋವನಿಗೆ ಪ್ರಾರ್ಥನೆ ಮಾಡುತ್ತೀಯಾ?— ಪ್ರಾರ್ಥನೆ ಮಾಡಲು ಮರಿಬಾರ್ದು, ಆಯ್ತಾ.
ಏಕಾಂತದಲ್ಲಿ ಮಾತ್ರವಲ್ಲ ಜನರು ತನ್ನೊಂದಿಗೆ ಇದ್ದಾಗಲೂ ಯೇಸು ಪ್ರಾರ್ಥಿಸಿದನು. ಯೇಸುವಿನ ಮಿತ್ರನಾದ ಲಾಜರನು ಸತ್ತುಹೋದಾಗ ಅವನ ಸಮಾಧಿ ಬಳಿ ನಿಂತಿದ್ದ ಜನರೆಲ್ಲರ ಎದುರೇ ಯೇಸು ದೇವರಿಗೆ ಪ್ರಾರ್ಥಿಸಿದನು. (ಯೋಹಾನ 11:41, 42) ತನ್ನ ಶಿಷ್ಯರೊಂದಿಗೆ ಯೇಸು ಕೂಟಗಳನ್ನು ನಡೆಸುತ್ತಿದ್ದನು. ಆಗಲೂ ಪ್ರಾರ್ಥಿಸುತ್ತಿದ್ದನು. ಇಂದೂ ಕೂಟಗಳಲ್ಲಿ ಪ್ರಾರ್ಥನೆ ಮಾಡಲಾಗುತ್ತದೆ. ನೀನು ಅಂಥ ಕೂಟಗಳಿಗೆ ಹೋಗಿದ್ದೀಯಾ?— ಅಲ್ಲಿ ಸಾಮಾನ್ಯವಾಗಿ ಒಬ್ಬ ಹಿರಿಯ ವ್ಯಕ್ತಿ ಪ್ರಾರ್ಥನೆ ಮಾಡುತ್ತಾರೆ. ಅವರು ಹೇಳುವುದನ್ನು ನೀನು ಗಮನಕೊಟ್ಟು ಕೇಳಬೇಕು. ಏಕೆಂದರೆ ಅವರು ನಿನ್ನ ಪರವಾಗಿ ಹಾಗೂ ಅಲ್ಲಿರುವ ಎಲ್ಲರ ಪರವಾಗಿ ದೇವರೊಂದಿಗೆ ಪ್ರಾರ್ಥಿಸುತ್ತಿದ್ದಾರೆ. ಈ ಪ್ರಾರ್ಥನೆಯನ್ನು ಗಮನಕೊಟ್ಟು ಕೇಳುವಾಗಲೇ ನಾವೆಲ್ಲರು ಮನಸ್ಸಾರೆ “ಆಮೇನ್” ಅಂತ ಹೇಳಬಲ್ಲೆವು. ಅದ್ಸರಿ, ಆಮೇನ್ ಎಂದರೇನು?— ಪ್ರಾರ್ಥನೆಯ ಕೊನೆಯಲ್ಲಿ ನೀನು ಆಮೇನ್ ಅಂತ ಹೇಳೋದರ ಅರ್ಥ ಆ ಪ್ರಾರ್ಥನೆ ನಿನಗೆ ಇಷ್ಟವಾಯಿತು ಅಂತ. ಅಷ್ಟೇ ಅಲ್ಲ, ಆ ಪ್ರಾರ್ಥನೆಯಲ್ಲಿ ಹೇಳಿದ ವಿಷಯಗಳನ್ನು ನೀನು ಒಪ್ಪುತ್ತಿ ಮತ್ತು ನೀನು ಅದನ್ನೇ ಹೇಳಲು ಬಯಸುತ್ತಿ ಅಂತ.
ಯೇಸು ಊಟದ ಸಮಯದಲ್ಲೂ ಪ್ರಾರ್ಥಿಸುತ್ತಿದ್ದನು. ತನಗೆ ಆಹಾರ ಕೊಟ್ಟದ್ದಕ್ಕಾಗಿ ಅವನು ಯೆಹೋವನಿಗೆ ಧನ್ಯವಾದ ಹೇಳುತ್ತಿದ್ದನು. ನೀನು ಊಟದ ಮುಂಚೆ ಪ್ರಾರ್ಥನೆ ಮಾಡುತ್ತೀಯಾ?— ಊಟ ಮಾಡುವುದಕ್ಕೆ ಮುಂಚೆ ಯೆಹೋವನಿಗೆ ಧನ್ಯವಾದ ಹೇಳುವುದನ್ನು ಮರೆಯಬಾರದು ಕಂದಾ. ಎಲ್ಲರೊಟ್ಟಿಗೆ ಕೂತು ಊಟ ಮಾಡುವಾಗ ಯಾರಾದರೊಬ್ಬರು ಪ್ರಾರ್ಥನೆ ಮಾಡಬಹುದು. ಆದರೆ ನೀನು ಒಬ್ಬನೇ ಊಟ ಮಾಡುವಾಗ ಏನು ಮಾಡುತ್ತೀ? ನಿನ್ನೊಟ್ಟಿಗೆ ಇರುವವರು ಯೆಹೋವನಿಗೆ ಪ್ರಾರ್ಥನೆ ಮಾಡದಿದ್ದರೆ ಆಗೇನು?— ಆಗ ನೀನೇ ಒಂದು ಪುಟ್ಟ ಪ್ರಾರ್ಥನೆ ಮಾಡಬಹುದು.
ನೀನು ಯಾವಾಗಲೂ ಗಟ್ಟಿಯಾದ ಧ್ವನಿಯಲ್ಲಿ ಪ್ರಾರ್ಥಿಸಬೇಕಾ? ಅಥವಾ ಮನಸ್ಸಿನಲ್ಲೇ ಪ್ರಾರ್ಥಿಸಿದರೆ ಯೆಹೋವನಿಗೆ ಕೇಳಿಸುತ್ತಾ?— ಉತ್ತರ ತಿಳಿಯಲು ನಾವು ನೆಹೆಮೀಯ ಎಂಬ ವ್ಯಕ್ತಿಯ ಕಥೆಯನ್ನು ಕೇಳೋಣ. ನೆಹೆಮೀಯನು ಯೆಹೋವನ ಒಬ್ಬ ಭಕ್ತ. ಅವನು ಯೆರೂಸಲೇಮ್ ಪಟ್ಟಣದವನು. ಆದರೆ ಅವನು ಪಾರಸಿಯ ಅರಸ ಅರ್ತಷಸ್ತನ ಅರಮನೆಯಲ್ಲಿ ಕೆಲಸಮಾಡುತ್ತಿದ್ದಾನೆ. ಒಂದು ದಿನ, ಯೆರೂಸಲೇಮಿನ ಗೋಡೆಗಳು ಮುರಿದುಬಿದ್ದಿವೆ ಎಂಬ ಸುದ್ದಿ ನೆಹೆಮೀಯನ ಕಿವಿಗೆ ಬಿತ್ತು. ಭದ್ರತೆ ಇಲ್ಲದೆ ತನ್ನ ಜನರು ಕಷ್ಟಪಡುತ್ತಿದ್ದಾರಲ್ಲಾ ಅಂತ ಅವನಿಗೆ ತುಂಬಾ ದುಃಖವಾಯಿತು.
ವ್ಯಸನದಿಂದ ಬಾಡಿಹೋದ ನೆಹೆಮೀಯನ ಮುಖವನ್ನು ನೋಡಿದ ರಾಜನು ಅವನ ದುಃಖಕ್ಕೆ ಕಾರಣವೇನು ಎಂದು ಕೇಳಿದನು. ನೆಹೆಮೀಯನು ಉತ್ತರ ಕೊಡುವ ಮುಂಚೆ ಮನಸ್ಸಿನಲ್ಲೇ ಒಂದು ಚಿಕ್ಕ ಪ್ರಾರ್ಥನೆ ಮಾಡಿದನು. ಆಮೇಲೆ ತನ್ನ ದುಃಖಕ್ಕೆ ಕಾರಣವೇನೆಂದು ರಾಜನಿಗೆ ತಿಳಿಸಿದನು. ಆ ಗೋಡೆಗಳನ್ನು ಪುನಃ ಕಟ್ಟುವುದಕ್ಕಾಗಿ ಯೆರೂಸಲೇಮಿಗೆ ಹೋಗಿಬರಲು ಅನುಮತಿಯನ್ನು ಸಹ ಕೇಳಿದನು. ಮುಂದೆ ಏನಾಯಿತು?—
ರಾಜನು ನೆಹೆಮೀಯನಿಗೆ ಯೆರೂಸಲೇಮಿಗೆ ಹೋಗಲು ಅನುಮತಿ ಕೊಟ್ಟನು. ನೋಡಿದ್ಯಾ, ದೇವರು ನೆಹೆಮೀಯನ ಪ್ರಾರ್ಥನೆಯನ್ನು ಕೇಳಿದನು! ರಾಜನು ಅವನಿಗೆ ಹೋಗಲು ಅನುಮತಿ ನೀಡಿದನು. ಮಾತ್ರವಲ್ಲ, ಗೋಡೆಗಳನ್ನು ಕಟ್ಟಲು ಬೇಕಾದ ಮರ ಸಾಮಾಗ್ರಿಗಳನ್ನು ಕೊಟ್ಟು ಕಳುಹಿಸಿದನು. ಈಗ ಗೊತ್ತಾಯ್ತಾ ಚಿನ್ನು, ನಾವು ಮನಸ್ಸಿನಲ್ಲಿ ಪ್ರಾರ್ಥಿಸಿದರೂ ದೇವರು ನಮ್ಮ ಪ್ರಾರ್ಥನೆಗಳನ್ನು ಕೇಳಿ ಅವುಗಳಿಗೆ ಉತ್ತರ ಕೊಡಬಲ್ಲನು.—ನೆಹೆಮೀಯ 1:2, 3; 2:4-8.
ಸರಿ ಈಗ ಒಂದು ಪ್ರಶ್ನೆ ಕೇಳ್ತೀನಿ. ಹೇಗೆ ಪ್ರಾರ್ಥನೆ ಮಾಡಬೇಕು? ತಲೆ ಬಾಗಿಸಬೇಕಾ? ಮೊಣಕಾಲೂರಬೇಕಾ? ಹೇಗೆ ಮಾಡಬೇಕು ಅಂತಿಯಾ?— ಯೇಸು ಹೇಗೆ ಮಾಡಿದನು ಗೊತ್ತಾ? ಅವನು ಕೆಲವೊಮ್ಮೆ ಮೊಣಕಾಲೂರಿ ಪ್ರಾರ್ಥಿಸಿದನು. ಕೆಲವು ಸಂದರ್ಭಗಳಲ್ಲಿ ನಿಂತುಕೊಂಡು ಪ್ರಾರ್ಥಿಸಿದನು. ಇನ್ನೂ ಕೆಲವೊಮ್ಮೆ ಆಕಾಶದತ್ತ ನೋಡಿ ಪ್ರಾರ್ಥಿಸಿದನು. ಲಾಜರನು ಸತ್ತಾಗ ಯೇಸು ಪ್ರಾರ್ಥಿಸಿದನಲ್ವಾ, ಆಗ ಅವನು ಆಕಾಶದತ್ತ ನೋಡಿ ಪ್ರಾರ್ಥಿಸಿದ್ದನು.
ಇದರಿಂದ ಏನು ಅರ್ಥ ಆಯಿತು?— ಪ್ರಾರ್ಥನೆ ಮಾಡುವಾಗ ನಾವು ನಿಲುತ್ತೇವಾ, ಕೂರುತ್ತೇವಾ ಅದೆಲ್ಲ ಪ್ರಾಮುಖ್ಯವಲ್ಲ. ನಂಬಿಕೆಯಿಂದ ಪ್ರಾರ್ಥಿಸುವುದೇ ಪ್ರಾಮುಖ್ಯ. ಆದ್ದರಿಂದ ಕೆಲವೊಮ್ಮೆ ನಿನಗೆ ತಲೆ ಬಗ್ಗಿಸಿ, ಕಣ್ಣುಮುಚ್ಚಿ ಪ್ರಾರ್ಥಿಸಬೇಕು ಅಂತ ಅನಿಸಿದರೆ ಅದೂ ಒಳ್ಳೇದು. ಅಥವಾ ಯೇಸುವಿನಂತೆ ಮೊಣಕಾಲೂರಿ ಪ್ರಾರ್ಥಿಸಲು ಅವಕಾಶ ಸಿಕ್ಕಿದರೆ ನೀನು ಹಾಗೂ ಮಾಡಬಹುದು. ಪ್ರಾರ್ಥನೆಯ ವಿಶೇಷತೆ ಏನೆಂದರೆ ಅದನ್ನು ಯಾವುದೇ ಸಮಯದಲ್ಲಿ ಮಾಡಬಹುದು. ಹಗಲಾಗಲಿ ಇರುಳಾಗಲಿ ದೇವರು ನಮ್ಮ ಪ್ರಾರ್ಥನೆಗಳಿಗೆ ಕಿವಿಗೊಡುತ್ತಾನೆ. ಯೆಹೋವನು ನಿನ್ನ ಪ್ರಾರ್ಥನೆಗಳಿಗೆ ಕಿವಿಗೊಡುತ್ತಾನೆ ಎಂದು ನೀನು ನಂಬುತ್ತೀಯಾ?—
ಪ್ರಾರ್ಥನೆಯಲ್ಲಿ ಯೆಹೋವನ ಹತ್ತಿರ ನಾವು ಏನೆಲ್ಲಾ ಹೇಳಬಹುದು?— ನೀನು ದೇವರ ಹತ್ತಿರ ಯಾವುದರ ಬಗ್ಗೆ ಮಾತಾಡುತ್ತೀ?— ಯೆಹೋವನು ನಮಗೆ ಎಷ್ಟೊಂದು ವಿಷಯಗಳನ್ನು ಕೊಟ್ಟಿದ್ದಾನೆ ಅಲ್ವಾ. ಅದಕ್ಕೆಲ್ಲಾ ನಾವು ಧನ್ಯವಾದ ಹೇಳಬೇಕು ತಾನೆ?— ಉದಾಹರಣೆಗೆ, ದಿನಾಲು ತಿನ್ನುವ ಆಹಾರಕ್ಕಾಗಿ ನಾವು ಧನ್ಯವಾದ ಹೇಳಬಹುದು. ಆದರೆ ಸುಂದರವಾದ ನೀಲಿ ಆಕಾಶ, ಗಿಡಮರಗಳು, ಬಣ್ಣಬಣ್ಣದ ಹೂವುಗಳಿಗಾಗಿ ಧನ್ಯವಾದ ಹೇಳಬೇಕಾ?— ಜಾಣ ಮರಿ, ಇವೆಲ್ಲವನ್ನೂ ಉಂಟುಮಾಡಿದ್ದು ಯೆಹೋವನೇ. ಆದ್ದರಿಂದ ಇವುಗಳಿಗೂ ಧನ್ಯವಾದ ಹೇಳಲೇ ಬೇಕು.
ಒಮ್ಮೆ ಶಿಷ್ಯರು ಯೇಸುವಿನ ಬಳಿ ಬಂದು, ಪ್ರಾರ್ಥನೆ ಮಾಡುವುದು ಹೇಗೆಂದು ಕಲಿಸುವಂತೆ ಕೇಳಿಕೊಂಡರು. ಮಹಾ ಬೋಧಕನು ಅವರಿಗೆ ಅದನ್ನು ಕಲಿಸಿದನು. ಯಾವ ಮುಖ್ಯ ವಿಷಯಗಳಿಗಾಗಿ ಪ್ರಾರ್ಥಿಸಬೇಕು ಅಂತಾನೂ ಹೇಳಿಕೊಟ್ಟನು. ಆ ಮುಖ್ಯ ವಿಷಯಗಳು ಯಾವುದು ಅಂತ ನಿನಗೆ ಗೊತ್ತಿದೆಯಾ?— ಉತ್ತರವನ್ನು ನಾವು ಬೈಬಲಿನಲ್ಲಿ ಓದೋಣ. ಮತ್ತಾಯ 6ನೇ ಅಧ್ಯಾಯವನ್ನು ತೆರಿ. ಅದರಲ್ಲಿ 9ರಿಂದ 13ನೇ ವಚನಗಳಲ್ಲಿ ಯೇಸು ಕಲಿಸಿದ ಪ್ರಾರ್ಥನೆ ಇದೆ. ಅನೇಕರು ಇದನ್ನು ‘ಕರ್ತನ ಪ್ರಾರ್ಥನೆ’ ಎಂದು ಕರೆಯುತ್ತಾರೆ. ಓದೋಣ್ವಾ?
ಯಾವೆಲ್ಲಾ ವಿಷಯಗಳಿಗಾಗಿ ಪ್ರಾರ್ಥಿಸಬಹುದು? ಮೊದಲನೆಯದಾಗಿ, ದೇವರ ಹೆಸರಿನ ಕುರಿತು ಪ್ರಾರ್ಥಿಸಬೇಕೆಂದು ಯೇಸು ಕಲಿಸಿದನು. ದೇವರ ಹೆಸರು ಪವಿತ್ರೀಕರಿಸಲ್ಪಡುವಂತೆ ಅಂದರೆ ಆ ಹೆಸರ ಪರಿಶುದ್ಧತೆಗಾಗಿ ಪ್ರಾರ್ಥಿಸಲು ಹೇಳಿದನು. ದೇವರ ಹೆಸರೇನು ಹೇಳು?— ಶಹಬ್ಬಾಸ್! ಯೆಹೋವನ ಈ ಹೆಸರನ್ನು ನಾವು ಪ್ರೀತಿಸಬೇಕು.
ಎರಡನೇ ವಿಷಯ, ದೇವರ ರಾಜ್ಯವು ಬರಲಿ ಅಂತ ಪ್ರಾರ್ಥಿಸಲು ಯೇಸು ಕಲಿಸಿದನು. ದೇವರ ರಾಜ್ಯ ಯಾಕೆ ಬೇಕು? ಯಾಕೆಂದರೆ ಈ ರಾಜ್ಯವು ಭೂಮಿಯಲ್ಲಿ ಶಾಂತಿ ಸಮಾಧಾನ ತರುತ್ತದೆ ಮತ್ತು ಈ ಭೂಮಿಯನ್ನು ಪರದೈಸಾಗಿ ಮಾಡುತ್ತದೆ.
ಮೂರನೆಯದಾಗಿ, ದೇವರ ಚಿತ್ತ ಹೇಗೆ ಸ್ವರ್ಗದಲ್ಲಿ ನೆರವೇರುತ್ತಿದೆಯೋ ಹಾಗೆಯೇ ಭೂಮಿಯಲ್ಲಿಯೂ ನೆರವೇರಲಿ ಅಂತ ಪ್ರಾರ್ಥಿಸಲು ಮಹಾ ಬೋಧಕನು ಹೇಳಿದನು. ನೆರವೇರಲಿ ಅಂತ ಬರೀ ಪ್ರಾರ್ಥನೆ ಮಾಡಿದರೆ ಸಾಕಾ? ಇಲ್ಲ. ದೇವರು ಏನು ಬಯಸುತ್ತಾನೋ ಅದನ್ನು ನಾವು ಮಾಡಬೇಕು.
ನಾಲ್ಕನೆಯದಾಗಿ, ಯೇಸು ಪ್ರತಿ ದಿನದ ಆಹಾರಕ್ಕಾಗಿ ಪ್ರಾರ್ಥಿಸುವಂತೆ ಕಲಿಸಿದನು. ಐದನೇ ವಿಷಯ, ನಾವು ಮಾಡಿದ ತಪ್ಪು ಕೆಲಸಗಳಿಗಾಗಿ ದೇವರಿಂದ ಕ್ಷಮೆ ಕೇಳಬೇಕು. ನಮ್ಮಿಂದ ತಪ್ಪಾಯಿತು ಅಂತ ಒಪ್ಪಿಕೊಳ್ಳಬೇಕು. ದೇವರು ನಮ್ಮನ್ನು ಕ್ಷಮಿಸಬೇಕಾದರೆ ನಾವು ಏನು ಮಾಡಬೇಕು? ಬೇರೆಯವರು ತಪ್ಪು ಮಾಡಿ ನಮ್ಮನ್ನು ನೋಯಿಸಿದರೆ ನಾವೂ ಅವರ ತಪ್ಪುಗಳನ್ನು ಕ್ಷಮಿಸಬೇಕು. ಬೇರೆಯವರ ತಪ್ಪು ಕ್ಷಮಿಸುವುದು ಅಷ್ಟು ಸುಲಭನಾ?—
ಕೊನೆಯದಾಗಿ, ನಮ್ಮನ್ನು ಕೆಡುಕನಿಂದ ಅಂದರೆ ಪಿಶಾಚನಾದ ಸೈತಾನನಿಂದ ಕಾಪಾಡುವಂತೆ ಯೆಹೋವನಿಗೆ ಪ್ರಾರ್ಥಿಸಬೇಕು ಅಂತ ಯೇಸು ಕಲಿಸಿದನು. ಎಷ್ಟೆಲ್ಲ ಒಳ್ಳೇ ವಿಷಯಗಳು! ಇವೆಲ್ಲದರ ಕುರಿತು ನಾವು ಪ್ರಾರ್ಥಿಸಬಹುದು.
ಯೆಹೋವನು ನಮ್ಮ ಪ್ರಾರ್ಥನೆಗಳನ್ನು ಕೇಳುತ್ತಾನೆ ಎಂಬ ಭರವಸೆ ನಮಗೆ ಇರಬೇಕು. ಪ್ರಾರ್ಥಿಸುವಾಗ ದೇವರ ಹತ್ತಿರ ಸಹಾಯಕ್ಕಾಗಿ ಬೇಡುವ ಜೊತೆಗೆ ನಾವು ಆತನಿಗೆ ಧನ್ಯವಾದ ಹೇಳಲು ಮರೆಯಬಾರದು. ನಾವು ಶುದ್ಧ ಮನಸ್ಸಿನಿಂದ ಪ್ರಾರ್ಥಿಸಬೇಕು ಮತ್ತು ಯೋಗ್ಯವಾದ ವಿಷಯಗಳಿಗಾಗಿ ಬೇಡಿಕೊಳ್ಳಬೇಕು. ಆಗ ಯೆಹೋವನು ನಮ್ಮ ಪ್ರಾರ್ಥನೆಯನ್ನು ಮೆಚ್ಚಿ ಆಶೀರ್ವದಿಸುತ್ತಾನೆ. ಇದನ್ನು ನೀನು ನಂಬುತ್ತೀಯ ತಾನೆ?—
ಪ್ರಾರ್ಥನೆಯ ವಿಷಯದಲ್ಲಿ ಹೆಚ್ಚನ್ನು ತಿಳಿಯಲು ರೋಮನ್ನರಿಗೆ 12:12; 1 ಪೇತ್ರ 3:12 ಮತ್ತು 1 ಯೋಹಾನ 5:14 ನ್ನು ಓದೋಣ.