ಮರಣವು ಪ್ರಿಯ ವ್ಯಕ್ತಿಯನ್ನು ಕೊಂಡೊಯ್ಯುವಾಗ
“ನನ್ನ ತಾಯಿ 1981ರಲ್ಲಿ ಕ್ಯಾನ್ಸರಿನಿಂದ ಸತ್ತರು. ಅದು ನನ್ನ ದತ್ತು ತಾಯಿ. ಅವರ ಮರಣ ನನ್ನ ಮತ್ತು ನನ್ನ ದತ್ತು ತಮ್ಮನ ಮೇಲೆ ಕಠಿಣ ಪರಿಣಾಮ ಮಾಡಿತು. ನಾನು ಆಗ 17 ಮತ್ತು ನನ್ನ ತಮ್ಮ 11 ವಯಸ್ಸಿನವರು. ನನ್ನ ತಾಯಿ ಇಲ್ಲವೆಂದು ಹೇಳಿ ನಾನು ತುಂಬ ನೊಂದೆ. ನಾನು ಕ್ಯಾಥಲಿಕಳಾಗಿ ಬೆಳೆದಿದ್ದೆ. ನನ್ನ ತಾಯಿ ಸ್ವರ್ಗದಲ್ಲಿದ್ದಾರೆಂದು ಕಲಿಸಲ್ಪಟ್ಟಿದ್ದುದರಿಂದ ನನ್ನ ಜೀವವನ್ನೆ ತಕ್ಕೊಂಡು ತಾಯಿಯೊಂದಿಗೆ ಇರಬಯಸಿದೆ. ತಾಯಿ ನನ್ನ ಅತ್ಯುತ್ತಮ ಸ್ನೇಹಿತೆಯಾಗಿದ್ದರು.”—ರೊಬೆರ್ಟ, 25 ವಯಸ್ಸು.
ನಿಮಗೂ ಈ ರೀತಿಯ ಅನುಭವವಾಗಿದೆಯೆ? ಆಗಿರುವಲ್ಲಿ ಪ್ರಿಯರ ನಷ್ಟದಿಂದಾಗಿ ಬರುವ ವೇದನೆಯ ಅರಿವು ನಿಮಗಿದೆ. ನೀವು ಪ್ರೀತಿಸುವ ಒಬ್ಬರನ್ನು ಕರೆದೊಯ್ಯಲು ಮರಣಕ್ಕಿರುವ ಶಕ್ತಿ ಅನ್ಯಾಯವೇ ಸರಿ ಎಂಬಂತೆ ಕಾಣುತ್ತದೆ. ಮರಣ ಸಂಭವಿಸುವಾಗ, ಇನ್ನು ಮೇಲೆ ಮಾತನಾಡಲು, ನಗಾಡಲು ಮತ್ತು ನಿಮ್ಮ ಪ್ರಿಯರನ್ನು ಸ್ಪರ್ಶಿಸಲು ಸಾಧ್ಯವಾಗದೆ ಇರುವ ಯೋಚನೆಯನ್ನು ತಾಳುವುದು ಅತಿ ಕಷ್ಟಕರ. ಮತ್ತು ರೊಬೆರ್ಟಳ ಮಾತು ತಿಳಿಸುವಂತೆ, ನಿಮ್ಮ ಪ್ರಿಯರು ಸ್ವರ್ಗದಲ್ಲಿದ್ದಾರೆಂದು ಹೇಳಲ್ಪಡುವುದರಿಂದ ಆ ವೇದನೆ ನಿವಾರಣೆಯಾಗುವುದಿಲ್ಲ.
ಆದರೆ, ಮೃತರಾಗಿರುವ ನಿಮ್ಮ ಪ್ರಿಯರೊಂದಿಗೆ ಸಮೀಪ ಭವಿಷ್ಯತ್ತಿನಲ್ಲಿ ಪುನರ್ಮಿಲನವಾಗುವುದು ಸಾಧ್ಯವೆಂದು ತಿಳಿಯುವಲ್ಲಿ ನಿಮಗೆ ಹೇಗನಿಸೀತು? ಇದು ಸ್ವರ್ಗದಲ್ಲಲ್ಲ, ಇದೇ ಭೂಮಿಯಲ್ಲಿ, ಶಾಂತಿ ಮತ್ತು ನೀತಿಭರಿತ ಪರಿಸ್ಥಿತಿಗಳಲ್ಲಿ. ಮತ್ತು ಆ ಸಮಯದಲ್ಲಿ ಮಾನವರು ಪರಿಪೂರ್ಣ ಆರೋಗ್ಯವನ್ನು ಅನುಭವಿಸುವರೆಂದೂ ಅವರು ಇನ್ನೆಂದಿಗೂ ಸಾಯಬೇಕೆಂದಿರುವುದಿಲ್ಲವೆಂದೂ ತಿಳಿಯುವಲ್ಲಿ ನಿಮಗೆ ಹೇಗನಿಸೀತು? ಆದರೆ, ಇದು ‘ನಿಶ್ಚಯವಾಗಿಯೂ ಗಾಳಿ ಗೋಪುರ’ ಎಂದು ನೀವು ಹೇಳೀರಿ.
ಆದರೂ ಸಾ.ಶ. ಒಂದನೆಯ ಶತಮಾನದಲ್ಲಿ ಯೇಸು ಕ್ರಿಸ್ತನು ಧೈರ್ಯದಿಂದ “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು” ಎಂದು ಹೇಳಿದನು. (ಯೋಹಾನ 11:25) ಇದು ಮೃತರು ಪುನಃ ಬದುಕುವರು ಎಂಬ ವಾಗ್ದಾನವಾಗಿತ್ತು ಮತ್ತು ಇದು ರೋಮಾಂಚಕ ಪ್ರತೀಕ್ಷೆಯೆ ಸರಿ!
ಆದರೂ ನೀವು ಹೀಗೆ ಪ್ರಶ್ನಿಸಬಹುದು: ‘ಇಂಥ ವಾಗ್ದಾನವನ್ನು ನಂಬಲು ಸ್ವಸ್ಥವಾದ ಆಧಾರವಿದೆಯೆ? ಇದು ಕೇವಲ ಗಾಳಿಗೋಪುರವಲ್ಲವೆಂದು ನನಗೆ ಹೇಗೆ ಖಾತ್ರಿಯಾದೀತು? ಮತ್ತು ಇದನ್ನು ನಂಬಲು ಆಧಾರವಿರುವಲ್ಲಿ, ಈ ವಾಗ್ದಾನದ ನೆರವೇರಿಕೆ ನನಗೂ ನನ್ನ ಪ್ರಿಯರಿಗೂ ಯಾವ ಅರ್ಥದಲಿದ್ಲೀತ್ದು? (w90 5/1)