ಫ್ರಾನ್ಸ್ನಲ್ಲಿ ಸುಳ್ಳು ಆಪಾದನೆಗಳನ್ನು ಪ್ರತಿರೋಧಿಸುವುದು
ಫ್ರಾನ್ಸ್ನಲ್ಲಿರುವ ಯೆಹೋವನ ಸಾಕ್ಷಿಗಳು, ಇತ್ತೀಚೆಗೆ ಸುಳ್ಳು ಆಪಾದನೆಗಳ ಒಂದು ಸುರಿಮಳೆಗೆ ಗುರಿಯಾಗಿದ್ದರು. ಯೂರೋಪ್ ಹಾಗೂ ಜಪಾನಿನಲ್ಲಿರುವ ಧಾರ್ಮಿಕ ಕುಪಂಥಗಳನ್ನೊಳಗೊಂಡ ದುರಂತ ಘಟನೆಗಳನ್ನು ಉಪಯೋಗಿಸಿಕೊಂಡು, ವಾರ್ತಾಮಾಧ್ಯಮವು ಸಾಕ್ಷಿಗಳ ಕುರಿತಾಗಿ ವಿಕೃತ ಮಾಹಿತಿಯನ್ನು ಹಬ್ಬಿಸಿತು. ಯೆಹೋವನ ಸಾಕ್ಷಿಗಳು, ಅತ್ಯಂತ ದೊಡ್ಡದೂ ಅತ್ಯಂತ ಅಪಾಯಕಾರಿಯೂ ಆದ ಕುಪಂಥಗಳಲ್ಲಿ ಒಂದು ಕುಪಂಥವಾಗಿದ್ದಾರೆಂದು ತಪ್ಪಾಗಿ ಚಿತ್ರಿಸಲ್ಪಟ್ಟರು.
ವಿಷಯಗಳನ್ನು ಸರಿಪಡಿಸುವ ಒಂದು ಪ್ರಯತ್ನದಲ್ಲಿ, ಯೆಹೋವನ ಸಾಕ್ಷಿಗಳು ಒಂದು ಕಿರುಹೊತ್ತಗೆಯನ್ನು ಪ್ರಕಾಶಿಸಿದರು. ಅದು ಈ ಪ್ರಶ್ನೆಗಳನ್ನು ಉತ್ತರಿಸಿತು: ಯೆಹೋವನ ಸಾಕ್ಷಿಗಳು ಯಾರು? ಅವರು ಕ್ರೈಸ್ತರೋ? ಅವರು ವೈದ್ಯಕೀಯ ಆರೈಕೆಯನ್ನು ಸ್ವೀಕರಿಸುತ್ತಾರೋ? ಅವರು ಮನೆಯಿಂದ ಮನೆಗೆ ಏಕೆ ಹೋಗುತ್ತಾರೆ? ಅವರ ಕೆಲಸಕ್ಕೆ ಹಣಕಾಸು ಹೇಗೆ ಒದಗಿಸಲ್ಪಡುತ್ತದೆ? ಯೆಹೋವನ ಸಾಕ್ಷಿಗಳು ಸಮುದಾಯಕ್ಕೆ ಹೇಗೆ ಒಳಿತನ್ನು ಮಾಡುತ್ತಾರೆ?
ಫ್ರೆಂಚ್ ಭಾಷೆಯಲ್ಲಿನ ಈ ಬೋಧಪ್ರದ ಕಿರುಹೊತ್ತಗೆಯ ಶೀರ್ಷಿಕೆಯು, ಯೆಹೋವನ ಸಾಕ್ಷಿಗಳು—ನೀವು ತಿಳಿದುಕೊಳ್ಳಬೇಕಾಗಿರುವ ವಿಷಯ ಎಂಬುದಾಗಿತ್ತು. ಈ ಕಿರುಹೊತ್ತಗೆಯನ್ನು ಸಾಧ್ಯವಾದಷ್ಟು ಹೆಚ್ಚು ಜನರಿಗೆ ನೀಡುವ ಸಲುವಾಗಿ, ಒಂದು ಕಾರ್ಯಾಚರಣೆಯು ಸಂಘಟಿಸಲ್ಪಟ್ಟಿತು. 1996ರ ಮೇ 13ರಿಂದ ಜೂನ್ 9ರ ತನಕ, 90 ಲಕ್ಷಕ್ಕಿಂತಲೂ ಹೆಚ್ಚು ಪ್ರತಿಗಳು ವಿತರಿಸಲ್ಪಟ್ಟವು.
ಈ ಕಿರುಹೊತ್ತಗೆಯು, ಸಾರ್ವಜನಿಕ ಅಧಿಕಾರಿಗಳನ್ನು ಸೇರಿಸಿ, ಅನೇಕ ಜನರ ಮೇಲೆ ಪ್ರಭಾವಬೀರಿತು. “ಯೆಹೋವನ ಸಾಕ್ಷಿಗಳ ವಿಷಯದಲ್ಲಿ ಮಾಡಲ್ಪಟ್ಟ ಟೀಕೆಯು ನನ್ನನ್ನು ರೇಗಿಸುತ್ತದೆ” ಎಂದು, ಈ ಕಿರುಹೊತ್ತಗೆಯನ್ನು ಓದಿದ ಬಳಿಕ ಒಬ್ಬ ಪ್ರಾದೇಶಿಕ ಪುರಸಭಾ ಸದಸ್ಯರು ಬರೆದರು. “ನಿಮ್ಮ ಕೆಲಸದ ಸಹಾಯಾರ್ಥವನ್ನು ಹಾಗೂ ನಿಸ್ವಾರ್ಥ ಭಾವವನ್ನು ನಾನು ಹಲವು ಬಾರಿ ಗಣ್ಯಮಾಡಿದ್ದೇನೆ.” ಕಿರುಹೊತ್ತಗೆಗೆ ಪ್ರತಿಕ್ರಿಯೆಯಲ್ಲಿ, ಯೂರೋಪಿಯನ್ ಸಂಸತ್ತಿನ ಸದಸ್ಯನೊಬ್ಬನು ಬರೆದುದು: “ನೀವು ಜೊತೆಗೂಡಿರುವ ಕ್ರೈಸ್ತರ ಗುಂಪು ಹಾಗೂ ಕುಪಂಥಗಳ ನಡುವೆ ಇರುವ ವ್ಯತ್ಯಾಸವನ್ನು ಅಧಿಕಾಂಶ ಜನರು ಚೆನ್ನಾಗಿ ತಿಳಿದಿದ್ದಾರೆ.”
ಬ್ರಿಟ್ಯಾನಿಯಲ್ಲಿರುವ ಒಬ್ಬ ಸಾಕ್ಷಿಯು, ಒಬ್ಬ ಪಾದ್ರಿಗೆ ಕಿರುಹೊತ್ತಗೆಯನ್ನು ನೀಡಿದನು. ಅವನು ಅದನ್ನು ಸಿದ್ಧಮನಸ್ಸಿನಿಂದ ಸ್ವೀಕರಿಸಿದನು. “ನೀವು ಮಾಡುತ್ತಿರುವ ಕೆಲಸಕ್ಕಾಗಿ ನಾನು ನಿಮ್ಮನ್ನು ಪ್ರಶಂಸಿಸುತ್ತೇನೆ” ಎಂದು ಆ ಪಾದ್ರಿಯು ಹೇಳಿದನು. ಅನಂತರ ಅವನು ಕೂಡಿಸಿದ್ದು: “ನಿಮ್ಮನ್ನು ತಮ್ಮ ಮನೆಗಳೊಳಗೆ ಆಮಂತ್ರಿಸುವಂತೆ ಹಾಗೂ ಒಂದು ಕಪ್ ಕಾಫಿಯನ್ನು ನೀಡುವಂತೆ ನಾನು ನನ್ನ ಪ್ಯಾರಿಷ್ ಸಭಾಕ್ಷೇತ್ರದವರಿಗೆ ಉತ್ತೇಜಿಸುತ್ತೇನೆ. ನೀವು ನನ್ನ ಮನೆಗೂ ಬಂದಿದ್ದಿರಿ ಎಂಬುದನ್ನು ನೀವು ಭೇಟಿಮಾಡುವವರೊಡನೆ ಹೇಳಸಾಧ್ಯವಿದೆ. ನಿಮ್ಮ ಪ್ರಕಾಶನಗಳನ್ನು ಓದುವುದನ್ನು ನಾನು ಗಣ್ಯಮಾಡುತ್ತೇನೆ ಎಂದು ಹೇಳಲೂ ನಾನು ಬಯಸುತ್ತೇನೆ.”
ಕಿರುಹೊತ್ತಗೆಯನ್ನು ಸ್ವೀಕರಿಸಿದ ಬಳಿಕ, ಒಂದು ಬೈಬಲ್ ಅಭ್ಯಾಸವನ್ನು ಕೇಳಿಕೊಳ್ಳುತ್ತಾ, ಆ್ಯಲ್ಸೇಸ್ನಲ್ಲಿರುವ ಒಬ್ಬ ಪ್ರಾಟೆಸ್ಟಂಟ್ ವ್ಯಕ್ತಿಯು ವಾಚ್ ಟವರ್ ಸೊಸೈಟಿಗೆ ಪತ್ರವನ್ನು ಬರೆದನು. “ನನ್ನ ಚರ್ಚಿನಲ್ಲಿ ಸಂಪೂರ್ಣ ಭರವಸೆಯನ್ನು ಕಳೆದುಕೊಂಡವನಾಗಿದ್ದು, ಆತ್ಮಿಕವಾಗಿ ಒಂದು ಹೊಸ ಆರಂಭಕ್ಕಾಗಿ ನಾನು ಮುನ್ನೋಡುತ್ತಿದ್ದೇನೆ” ಎಂದು ಅವನು ಬರೆದನು. ಕೆಲವೊಮ್ಮೆ ತಮ್ಮ ವಿರುದ್ಧ ಹೊರಿಸಲ್ಪಡುವ ಸುಳ್ಳು ಆರೋಪಗಳ ಹೊರತಾಗಿಯೂ, ಬೈಬಲಿನಲ್ಲಿ ತಿಳಿಸಲ್ಪಟ್ಟಿರುವಂತೆ, ಫ್ರಾನ್ಸ್ನಲ್ಲಿರುವ—ನಿಶ್ಚಯವಾಗಿ ಲೋಕದ ಎಲ್ಲ ಭಾಗಗಳಲ್ಲಿರುವ—ಯೆಹೋವನ ಸಾಕ್ಷಿಗಳು, ದೇವರ ಉದ್ದೇಶಗಳ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವಂತೆ ಜನರಿಗೆ ಸಹಾಯಮಾಡುತ್ತಾ ಇದ್ದಾರೆ.—2 ತಿಮೊಥೆಯ 3:16, 17.