ಧರ್ಮಾಧಿಕಾರ ವ್ಯಾಪಾರದ ವಿಷಯದಲ್ಲಿ ಎಚ್ಚರಿಕೆ!
ಸಮಾರ್ಯದ ಸೀಮೋನನು ತನ್ನ ಸಮುದಾಯದಲ್ಲಿ ಗಣ್ಯ ವ್ಯಕ್ತಿಯಾಗಿ ಎಣಿಸಲ್ಪಟ್ಟಿದ್ದನು. ಅವನು ಸಾ.ಶ. ಮೊದಲನೆಯ ಶತಮಾನದಲ್ಲಿ ಜೀವಿಸುತ್ತಿದ್ದು, ತನ್ನ ಮಂತ್ರತಂತ್ರಗಳಿಂದ ಜನರನ್ನು ಬೆರಗುಗೊಳಿಸುತ್ತಿದ್ದನು. ಆದಕಾರಣ, “ಇವನು ಮಹಾಶಕ್ತಿ ಎನಿಸಿಕೊಂಡಿರುವ ದೇವರ ಶಕ್ತಿಯೇ” ಎಂದು ಜನರು ಅವನ ಕುರಿತು ಹೇಳುತ್ತಿದ್ದರು.—ಅ. ಕೃತ್ಯಗಳು 8:9-11.
ಸೀಮೋನನು ಸ್ನಾತ ಕ್ರೈಸ್ತನಾದ ಮೇಲೆ, ತಾನು ಈ ಮೊದಲು ಪ್ರದರ್ಶಿಸುತ್ತಿದ್ದ ಶಕ್ತಿಗಿಂತಲೂ ಬಹಳ ಶ್ರೇಷ್ಠವಾದ ಶಕ್ತಿಯಿರುವುದನ್ನು ಗ್ರಹಿಸಿದನು. ಅದು ಯೇಸುವಿನ ಅಪೊಸ್ತಲರ ಮೇಲೆ ದಯಪಾಲಿಸಲ್ಪಟ್ಟಿದ್ದ ಶಕ್ತಿಯಾಗಿದ್ದು, ಅವರು ಇತರರಿಗೆ ಪವಿತ್ರಾತ್ಮದ ಅದ್ಭುತಕರ ಕೊಡುಗೆಗಳನ್ನು ನೀಡುವಂತೆ ಅವರನ್ನು ಶಕ್ತಗೊಳಿಸಿತು. ಸೀಮೋನನು ಎಷ್ಟೊಂದು ಪ್ರಭಾವಿತನಾದನೆಂದರೆ, ಅವನು ಅಪೊಸ್ತಲರಿಗೆ ಹಣವನ್ನು ನೀಡಿ, ವಿನಂತಿಸಿಕೊಂಡದ್ದು: “ನಾನು ಯಾರ ಮೇಲೆ ಕೈಗಳನ್ನಿಡುತ್ತೇನೋ ಅವರು ಪವಿತ್ರಾತ್ಮವರವನ್ನು ಹೊಂದುವಂತೆ ಈ ಅಧಿಕಾರವನ್ನು ನನಗೂ ಕೊಡಿರಿ.”—ಅ. ಕೃತ್ಯಗಳು 8:13-19.
ಅಪೊಸ್ತಲ ಪೇತ್ರನು ಸೀಮೋನನನ್ನು ಗದರಿಸಿ ಹೇಳಿದ್ದು: “ನಿನ್ನ ಬೆಳ್ಳಿಯು ನಿನ್ನ ಕೂಡ ಹಾಳಾಗಿಹೋಗಲಿ. ದೇವರ ವರವನ್ನು ಹಣಕ್ಕೆ ಕೊಂಡುಕೊಳ್ಳಬಹುದೆಂದು ಭಾವಿಸುತ್ತೀಯೋ? ಈ ಕಾರ್ಯದಲ್ಲಿ ನಿನಗೆ ಭಾಗವೂ ಇಲ್ಲ, ಪಾಲೂ ಇಲ್ಲ; ನಿನ್ನ ಹೃದಯವು ದೇವರ ಮುಂದೆ ಸರಿಯಲ್ಲ.”—ಅ. ಕೃತ್ಯಗಳು 8:20, 21.
ಈ ಬೈಬಲ್ ವೃತ್ತಾಂತದಿಂದ “ಧರ್ಮಾಧಿಕಾರ ವ್ಯಾಪಾರ” (“ಸೈಮನಿ”) ಎಂಬ ಪದವು ಬರುತ್ತದೆ. ಇದು, “ಚರ್ಚಿನಲ್ಲಿ ಧರ್ಮಾಧಿಕಾರಗಳನ್ನು ಇಲ್ಲವೆ ಧರ್ಮವೃತ್ತಿಗಳನ್ನು ಖರೀದಿಸುವ ಅಥವಾ ಮಾರಾಟಮಾಡುವ ಪಾಪ”ದೋಪಾದಿ ವ್ಯಾಖ್ಯಾನಿಸಲ್ಪಟ್ಟಿದೆ. ನ್ಯೂ ಕ್ಯಾತೊಲಿಕ್ ಎನ್ಸೈಕ್ಲೊಪೀಡಿಯ ಒಪ್ಪಿಕೊಳ್ಳುವುದೇನೆಂದರೆ, ವಿಶೇಷವಾಗಿ 9ನೆಯ ಶತಮಾನದಿಂದ 11ನೆಯ ಶತಮಾನದ ವರೆಗೆ, “ಧರ್ಮಾಧಿಕಾರ ವ್ಯಾಪಾರವು ಮಠಗಳನ್ನು, ಪಾದ್ರಿಗಳ, ಬಿಷಪರ, ಮತ್ತು ಪೋಪರ ವರ್ಗವನ್ನೂ ವ್ಯಾಪಿಸಿತು.” ಎನ್ಸೈಕ್ಲೊಪೀಡಿಯ ಬ್ರಿಟಾನಿಕ (1878)ದ ಒಂಬತ್ತನೆಯ ಮುದ್ರಣವು ಗಮನಿಸುವುದು: “ಧರ್ಮಾಧಿಕಾರ ವ್ಯಾಪಾರವಿಲ್ಲದೆ ಚರ್ಚಿನ ಚುನಾವಣೆಯು ಎಂದಿಗೂ ನಡೆದಿರುವುದಿಲ್ಲ ಎಂಬುದನ್ನು, ಪೋಪರ ಗೂಢ ಸಭೆಗಳ ಐತಿಹಾಸಿಕ ಅಧ್ಯಯನವು ಒಬ್ಬ ವಿದ್ಯಾರ್ಥಿಗೆ ಮನವರಿಕೆ ಮಾಡುತ್ತದೆ. ಹೆಚ್ಚಿನ ವಿದ್ಯಮಾನಗಳಲ್ಲಿ, ಇಂತಹ ಗೂಢ ಸಭೆಗಳಲ್ಲಿ ನಡೆಸಲ್ಪಟ್ಟ ಧರ್ಮಾಧಿಕಾರ ವ್ಯಾಪಾರವು ಅತ್ಯಂತ ಘೋರವೂ ಅತ್ಯಂತ ಲಜ್ಜಾಸ್ಪದವೂ ಮುಚ್ಚುಮರೆಯಿಲ್ಲದಂತಹದ್ದೂ ಆಗಿದೆ.”
ನಿಜ ಕ್ರೈಸ್ತರು ಇಂದು ಧರ್ಮಾಧಿಕಾರ ವ್ಯಾಪಾರದ ವಿಷಯದಲ್ಲಿ ಜಾಗರೂಕರಾಗಿರಬೇಕು. ಉದಾಹರಣೆಗೆ, ತಮಗೆ ಹೆಚ್ಚಿನ ಸುಯೋಗಗಳನ್ನು ದಯಪಾಲಿಸಲು ಸಾಧ್ಯವಿರುವಂತಹವರನ್ನು ಜನರು ಅತಿಯಾಗಿ ಹೊಗಳಬಹುದು, ಇಲ್ಲವೆ ಉದಾರವಾದ ಕೊಡುಗೆಗಳನ್ನು ನೀಡಬಹುದು. ಇದಕ್ಕೆ ವ್ಯತಿರಿಕ್ತವಾಗಿ, ಅಂತಹ ಸುಯೋಗಗಳನ್ನು ದಯಪಾಲಿಸಲು ಶಕ್ತರಾಗಿರುವವರು, ತಮಗೆ ಕೊಡುಗೆಗಳನ್ನು ನೀಡಸಾಧ್ಯವಿರುವ ಮತ್ತು ಹಾಗೆ ನೀಡಲು ಆತುರರಾಗಿರುವವರ ಕಡೆಗೆ ಪಕ್ಷಪಾತವನ್ನು ತೋರಿಸಬಹುದು. ಎರಡೂ ಸನ್ನಿವೇಶಗಳು ಧರ್ಮಾಧಿಕಾರ ವ್ಯಾಪಾರವನ್ನು ಒಳಗೂಡುತ್ತವೆ ಮತ್ತು ಶಾಸ್ತ್ರಗಳು ಅಂತಹ ಮಾರ್ಗವನ್ನು ಸ್ಪಷ್ಟವಾಗಿ ಖಂಡಿಸುತ್ತವೆ. ಪೇತ್ರನು ಸೀಮೋನನನ್ನು ಉತ್ತೇಜಿಸಿದ್ದು: “ಆದದರಿಂದ ಈ ನಿನ್ನ ಕೆಟ್ಟತನವನ್ನು ಬಿಟ್ಟು ದೇವರ ಕಡೆಗೆ ತಿರುಗಿಕೊಂಡು ಕರ್ತನು ನಿನ್ನ ಮನಸ್ಸಿನ ಆಲೋಚನೆಯನ್ನು [“ನಿನ್ನ ಸಂಚನ್ನು,” ನ್ಯೂ ಜೆರೂಸಲೇಮ್ ಬೈಬಲ್] ಕ್ಷಮಿಸುವನೋ ಏನೋ ಆತನನ್ನು ಬೇಡಿಕೋ. ಯಾಕಂದರೆ ನೀನು ಹಾನಿಕರವಾದ ವಿಷವೂ ದುಷ್ಟತ್ವದಲ್ಲಿ ಬಿಗಿಯುವ ಬಂಧನವೂ ಆಗಿರುವವನೆಂದು ಕಾಣುತ್ತದೆ.”—ಅ. ಕೃತ್ಯಗಳು 8:22, 23.
ಸೀಮೋನನು ತನ್ನ ತಪ್ಪಾದ ಬಯಕೆಯ ಗಂಭೀರತೆಯನ್ನು ಮನಗಂಡನೆಂಬುದು ಸಂತೋಷದ ವಿಷಯವೇ ಸರಿ. ಅವನು ಅಪೊಸ್ತಲರಲ್ಲಿ ಬೇಡಿಕೊಂಡದ್ದು: “ನೀವು ಹೇಳಿರುವ ಸಂಗತಿಗಳಲ್ಲಿ ಯಾವದೂ ನನ್ನ ಮೇಲೆ ಬಾರದಂತೆ ನನಗೋಸ್ಕರ ನೀವೇ ಕರ್ತನನ್ನು ಬೇಡಿಕೊಳ್ಳಿರಿ.” (ಅ. ಕೃತ್ಯಗಳು 8:24) ಈ ವೃತ್ತಾಂತದಲ್ಲಿರುವ ಪ್ರಾಮುಖ್ಯ ಪಾಠಕ್ಕೆ ಕಿವಿಗೊಡುತ್ತಾ, ಯಥಾರ್ಥ ಕ್ರೈಸ್ತರು ಧರ್ಮಾಧಿಕಾರ ವ್ಯಾಪಾರದ ಯಾವುದೇ ಕಳಂಕದಿಂದ ದೂರವಿರಲು ಪ್ರಯಾಸಪಡುತ್ತಾರೆ.