ವಿದ್ವಾಂಸನು ಬೈಬಲ್ ಹಸ್ತಪ್ರತಿಯ ತಾರೀಖನ್ನು ಬದಲಾಯಿಸುತ್ತಾನೆ
ಜರ್ಮನಿಯ ಪಾಪಿರಾಲಜಿಯ ಪರಿಣತರಾದ ಕಾರ್ಸ್ಟನ್ ಪೀಟರ್ ಟೀಡೆಯವರಿಗನುಸಾರ, ಮತ್ತಾಯನ ಸುವಾರ್ತೆಯ ಮೂರು ಪಪೈರಸ್ ಅವಶೇಷಗಳು (ಮ್ಯಾಗ್ದಲೇನ್ ಪಪೈರಸ್ ಎಂದು ಜ್ಞಾತವಾಗಿದೆ), ಪ್ರಥಮ ಶತಮಾನದಲ್ಲಿ ಬರೆಯಲ್ಪಟ್ಟವು ಎಂಬುದಕ್ಕೆ ಬಲವಾದ ರುಜುವಾತಿದೆ.
(ಮತ್ತಾಯ ಅಧ್ಯಾಯ 26ರ ಭಾಗಗಳನ್ನು ಒಳಗೊಂಡಿರುವ) ಆ ಅವಶೇಷಗಳನ್ನು, ಐಗುಪ್ತದಲ್ಲಿ ಸಿಕ್ಕಿದ ಒಂದು ಪ್ರಾಚೀನ ವ್ಯವಹಾರ ಪತ್ರದೊಂದಿಗೆ ಹೋಲಿಸಿನೋಡಿದ ನಂತರ, ಟೀಡೆ ಗಮನಿಸಿದ್ದೇನೆಂದರೆ, ಆ ಐಗುಪ್ತದ ಪತ್ರವು, “ಅದರ ಸಾಮಾನ್ಯ ರೂಪ, ಅದರ ಒಂದೊಂದು ಅಕ್ಷರದ ಆಕಾರ ಮತ್ತು ಜೋಡಣೆಯಲ್ಲಿ ಬಹುಮಟ್ಟಿಗೆ ಮ್ಯಾಗ್ದಲೇನ್ ಪಪೈರಸ್ನಂತೆಯೇ ಇದೆ.” ಟೀಡೆ ಮತ್ತು ಜೊತೆಲೇಖಕನಾದ ಮ್ಯಾಥ್ಯೂ ಡ ಆನ್ಕೊನಾ, ಯೇಸುವಿನ ಪ್ರತ್ಯಕ್ಷದರ್ಶಿ ಸಾಕ್ಷಿ—ಸುವಾರ್ತೆ ಪುಸ್ತಕಗಳ ಮೂಲದ ಕುರಿತಾಗಿ ಅದ್ಭುತಕರವಾದ ಹೊಸ ಹಸ್ತಪ್ರತಿ ರುಜುವಾತು (ಇಂಗ್ಲಿಷ್) ಎಂಬ ಪುಸ್ತಕದಲ್ಲಿ, ಈ ಎರಡು ದಸ್ತಾವೇಜುಗಳ ನಡುವಿನ ಹೋಲಿಕೆಗಳು ಅವು ಸರಿಸುಮಾರು ಒಂದೇ ಸಮಯದಲ್ಲಿ ಬರೆಯಲ್ಪಟ್ಟವು ಎಂಬ ತೀರ್ಮಾನಕ್ಕೆ ಬರುತ್ತಾರೆ. ಯಾವ ಸಮಯದಲ್ಲಿ? ಆ ವ್ಯಾಪಾರೀ ದಸ್ತಾವೇಜಿನ ತಾರೀಖು, “‘ಪ್ರಭು ನೀರೊವಿನ 12ನೆಯ ವರ್ಷದಲ್ಲಿ, ಇಫೀ 30’ ಆಗಿದೆ—ಇದು ನಮ್ಮ ಕ್ಯಾಲೆಂಡರಿಗನುಸಾರ ಸಾ.ಶ. 66ರ ಜುಲೈ 24 ಆಗಿರುತ್ತದೆ.”
“ಈ ತಾರೀಖು ನಿಷ್ಕೃಷ್ಟವಾಗಿರುವಲ್ಲಿ, ಅದು ತುಂಬ ಗಮನಾರ್ಹವಾಗಿದೆ. ಯಾಕಂದರೆ ಮತ್ತಾಯನ ಸುವಾರ್ತೆಯ ಒಂದು ಹಸ್ತಪ್ರತಿಯು, ಆ ಪುಸ್ತಕವು ಬರೆಯಲ್ಪಟ್ಟ ಶತಮಾನದಲ್ಲೇ ಬರೆಯಲ್ಪಟ್ಟಿತೆಂಬುದನ್ನು ಅದು ತೋರಿಸುತ್ತದೆ” ಎಂದು ಪ್ರೊಫೆಸರ್ ಫಿಲಿಪ್ ಡಬ್ಲ್ಯೂ. ಕಂಫರ್ಟ್, ಟಿಂಡೇಲ್ ಬುಲೆಟಿನ್ ಎಂಬ ಪತ್ರಿಕೆಯಲ್ಲಿ ಪ್ರಕಾಶಿಸಲ್ಪಟ್ಟ ಒಂದು ಲೇಖನದಲ್ಲಿ ಹೇಳುತ್ತಾರೆ. ಇದು, ಮ್ಯಾಗ್ದಲೇನ್ ಪಪೈರಸ್ ಅನ್ನು, ಅಸ್ತಿತ್ವದಲ್ಲಿರುವ ಅತಿ ಹಳೆಯ ಸುವಾರ್ತಾ ಅವಶೇಷಗಳಲ್ಲಿ ಒಂದನ್ನಾಗಿಯೂ ಮಾಡುತ್ತದೆ.
[ಪುಟ 29 ರಲ್ಲಿರುವ ಚಿತ್ರ]
ಮ್ಯಾಗ್ದಲೇನ್ ಪಪೈರಸ್, ವಾಸ್ತವ ಗಾತ್ರವನ್ನು ತೋರಿಸಲಾಗಿದೆ
[ಕೃಪೆ]
By permission of the President and Fellows of Magdalen College, Oxford